More

    ಜಿಲ್ಲಾಸ್ಪತ್ರೆ ಕಾಮಗಾರಿ 31ರೊಳಗೆ ಮುಗಿಸಿ: ಗುತ್ತಿಗೆದಾರರಿಗೆ ಡಾ. ಸಿಎನ್‌ಎ ಸೂಚನೆ

    ರಾಮನಗರ: ಜುಲೈ 31ರೊಳಗೆ ಜಿಲ್ಲಾಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡ ಹಸ್ತಾಂತರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.


    ನಗರದಲ್ಲಿ ನೂತನ ಜಿಲ್ಲಾಸ್ಪತ್ರೆ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನಾ ಮೊತ್ತ 65 ಕೋಟಿ ರೂ.ನಿಂದ 100 ಕೋಟಿ ರೂ.ಗೆ ಹೆಚ್ಚಳವಾದ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಗುತ್ತಿಗೆದಾರರು ಸೆಪ್ಟೆಂಬರ್ ಅಂತ್ಯಕ್ಕೆ ಹಸ್ತಾಂತರ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ ಸಣ್ಣ-ಪುಟ್ಟ ಕಾಮಗಾರಿಗಳನ್ನು ಹೊರತುಪಡಿಸಿ ಜು.31ರೊಳಗೆ ಹಸ್ತಾಂತರ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

    ಆರೋಗ್ಯ ವಿವಿಗೆ ಶೀಘ್ರ ಅಡಿಗಲ್ಲು: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ಆರೋಗ್ಯ ನಗರ ನಿರ್ಮಾಣ ಸಂಬಂಧ ಶೀಘ್ರವೇ ಅಡಿಪಾಯ ಹಾಕಲಾಗುವುದು. ಮುಖ್ಯಮಂತ್ರಿಗಳು ಭರವಸೆ ಕೊಟ್ಟಂತೆ ಕಾಮಗಾರಿ ನಡೆಯಲಿದೆ. ಸಣ್ಣ-ಪುಟ್ಟ ತೊಡಕುಗಳನ್ನು ನಿವಾರಣೆ ಮಾಡಲಾಗಿದ್ದು, ಆಡಳಿತ ಮಂಡಳಿಯಿಂದ ಅನುಮತಿ ಪಡೆದು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.


    50 ಕೋಟಿ ರೂ.ಮೊತ್ತಕ್ಕಿಂತ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಬೇಕಾದರೆ ಪರಿಶೀಲನಾ ಸಮಿತಿಯಿಂದ ಅನುಮತಿ ಪಡೆಯಬೇಕು, ಇದರಿಂದಾಗಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ವಿಳಂಬವಾಗಿದೆ. ಈಗಾಗಲೇ ಯೋಜನೆಗೆ ಸಂಪುಟ ಅನುಮತಿಯೂ ದೊರೆತಿದ್ದು, ಶೀಘ್ರವೇ ಇದಕ್ಕೂ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

    ಎರಡೇ ಕೋಟಿ ಕೊಟ್ಟಿರೋದು: ಚನ್ನಪಟ್ಟಣ ಕ್ಷೇತ್ರದ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ನೀಡಿದ್ದ 10 ಕೋಟಿ ರೂ. ಅನುದಾನ ತಡೆ ಹಿಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಎಲ್ಲ ವಿಧಾನಸಭಾ ಕ್ಷೇತ್ರಕ್ಕೆ 2 ಕೋಟಿ ರೂ. ಅನುದಾನ ಕೊಡಲಾಗಿದೆ. ದೇವಸ್ಥಾನದ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆಯಿಂದ ಎರಡು ಕೋಟಿ ಕೊಡಲಾಗಿದೆ. ಸಿಎಂ ಕ್ಷೇತ್ರಕ್ಕಾಗಲಿ, ಮಂತ್ರಿಗಳ ಕ್ಷೇತ್ರಕ್ಕಾಗಲಿ, ಶಾಸಕರ ಕ್ಷೇತ್ರಕ್ಕೇ ಆಗಲಿ ಎರಡು ಕೋಟಿ ರೂ. ಕೊಡಲಾಗಿದೆ. ಬೆಂಗಳೂರು ನಗರದಲ್ಲಿ ನಮ್ಮ ಕ್ಷೇತ್ರಕ್ಕೆ ಮುಜರಾಯಿ ಇಲಾಖೆಯಿಂದ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಒಬ್ಬರಿಗೆ ಹತ್ತು ಕೋಟಿ ಕೊಡಲು ಅದೇನು ವಿಶೇಷವಾ ಎಂದು ಪ್ರಶ್ನಿಸಿದ ಸಚಿವರು, ಪ್ರಭಾವ ಬೀರಿ ಹತ್ತು ಕೋಟಿ ರೂ. ಅನುದಾನ ತಂದಿರಬಹುದು ನನಗೆ ಗೊತ್ತಿಲ್ಲ ಎಂದರು.


    ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ಬೋಡ್ಕೆ, ಡಿಎಚ್‌ಒ ಕಾಂತರಾಜು, ಡಿಎಸ್ ಡಾ. ಜಿ.ಎಲ್.ಪದ್ಮಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜು ಮುಂತಾದವರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts