More

    ಜಲಕ್ರಾಂತಿಯ ಊರು ಚನ್ನಪಟ್ಟಣದಲ್ಲಿ ಬರದ ಛಾಯೆ ಮಳೆ ಕೊರತೆ, ಬಿತ್ತನೆ ಹಿನ್ನಡೆ

    ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
    ಜಲಕ್ರಾಂತಿಯ ತವರೂರು ಎಂಬ ಕೀರ್ತಿಯನ್ನು ತನ್ನದಾಗಿಸಿಕೊಂಡಿದ್ದ ಚನ್ನಪಟ್ಟಣ ತಾಲೂಕು ಬರಪೀಡಿತ ತಾಲೂಕು ಎಂಬ ಘೋಷಣೆಯ ಹೊಸ್ತಿಲಲ್ಲಿದೆ. ಬರ ಪರಿಶೀಲನೆಯ ಎರಡನೇ ಪಟ್ಟಿಯಲ್ಲಿ ತಾಲೂಕಿನ ಹೆಸರು ಇರುವುದು ಇದಕ್ಕೆ ಪುಷ್ಟಿ ನೀಡಿದೆ. ತಾಲೂಕಿನ ಜತೆಗೆ, ನೆರೆಯ ಮಾಗಡಿ ತಾಲೂಕು ಸಹ ಎರಡನೇ ಪಟ್ಟಿಯಲ್ಲಿದೆ.

    ಸರ್ಕಾರ ಮೊದಲ ಹಂತದಲ್ಲಿ 113 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಗುರುತಿಸಿ ಪರಿಶೀಲನೆಗೆ ಸೂಚಿಸಿತ್ತು. ಅದರಂತೆ ವರದಿಯನ್ನು ಸಹ ತರಿಸಿಕೊಂಡಿತ್ತು. ಮೊದಲ ಪಟ್ಟಿಯಲ್ಲಿ ಜಿಲ್ಲೆಯ ರಾಮನಗರ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳು ಬರಪೀಡಿತ ತಾಲೂಕು ಎಂದು ಗುರುತಿಸಿದ್ದವು. ಇದೀಗ, ಸರ್ಕಾರ ಹೊರಡಿಸಿರುವ 83 ತಾಲೂಕುಗಳ ಎರಡನೇ ಪಟ್ಟಿಯಲ್ಲಿ ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕುಗಳಿದ್ದು, ಈ ಬಗ್ಗೆ ಪರಿಶೀಲನೆ ನಂತರ, ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಎಂದು ಘೋಷಣೆಯಾಗುವ ಸಾಧ್ಯತೆಗಳಿವೆ.
    ಇಂದಿನಿಂದ ಜಂಟಿ ಸರ್ವೇ

    ಮಳೆ ಆಧಾರ ಹಾಗೂ ಮಣ್ಣಿನ ತೇವಾಂಶದ ಪರಿಶೀಲನೆ ಮೇರೆಗೆ ತೀವ್ರ ಬರದ ಲಕ್ಷಣವಿರುವ ತಾಲೂಕುಗಳೆಂದು ಸರ್ಕಾರ ಪಟ್ಟಿ ಮಾಡಿದ್ದು, ಈ ತಾಲೂಕುಗಳಲ್ಲಿ ಜಂಟಿ ಸರ್ವೇ ಮಾಡಿ ವರದಿ ನೀಡುವಂತೆ ಸರ್ಕಾರ ಸೆ.4ರಂದು ಎರಡನೇ ಪಟ್ಟಿಯನ್ನು ಘೋಷಣೆ ಮಾಡಿದೆ. ಅದರಂತೆ ಸೆ.6ರ ಬುಧವಾರದಿಂದ ತಾಲೂಕಿನಲ್ಲಿ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿ ಸರ್ವೇ ಆರಂಭಿಸಲಿವೆ. ಈಗಾಗಲೇ ಸರ್ವೇ ಮಾಡುವ ಸ್ಥಳಗಳನ್ನು ಗುರುತಿಸಲಾಗಿದ್ದು, ಮಳೆ, ಬೆಳೆ ಹಾಗೂ ಮಣ್ಣಿನ ತೇವಾಂಶ ಹೀಗೆ ನಾನಾ ವಿಧದಲ್ಲಿ ಪರಿಶೀಲನೆ ನಡೆಯಲಿದೆ. ಪರಿಶೀಲನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದು, ತದನಂತರ, ಬರಪೀಡಿತ ತಾಲೂಕು ಎಂದು ಘೋಷಣೆಯಾಗಲಿದೆ.

    ವಾಡಿಕೆ ಮಳೆ ಇಲ್ಲ!
    ಚನ್ನಪಟ್ಟಣ ತಾಲೂಕಿನಲ್ಲಿ ಜೂ.1ರಿಂದ ಸೆ.4ರವರೆಗೆ 280 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಬದಲಾಗಿ 192.6 ಮಿಮೀ ಮಳೆಯಾಗಿದೆ. ಅಂದರೆ ಶೇ.31ರಷ್ಟು ಮಳೆ ಕೊರತೆಯಾಗಿದೆ. ಈ ಅಂಕಿಅಂಶದ ಪ್ರಕಾರ ತಾಲೂಕಿನಲ್ಲಿ ಮಳೆ ಕೊರತೆ ಕಂಡುಬಂದಿದ್ದು, ತಾಲೂಕಿನ ಸಾಕಷ್ಟು ಭಾಗದಲ್ಲಿ ಇದುವರೆಗೂ ಬಿತ್ತನೆ ಕಾರ್ಯವೇ ಆರಂಭವಾಗಿಲ್ಲ. ಇನ್ನು ಹಲವು ಕಡೆ ಬಿತ್ತನೆ ಮೊಳಕೆಯೊಡೆಯದ ಸ್ಥಿತಿಯಿದೆ. ಇವೆಲ್ಲವೂ ತಾಲೂಕು ಬರಪೀಡಿತ ಎಂಬುದನ್ನು ಸಾಕ್ಷೀಕರಿಸುವ ಸಾಧ್ಯತೆ ಇದೆ. ಸಮೀಕ್ಷಾ ತಂಡ ನೀಡುವ ವರದಿ ಆಧಾರದಲ್ಲಿ ತಾಲೂಕಿನಲ್ಲಿ ಬರ ಇದೆಯೋ, ಇಲ್ಲವೋ ಎಂಬುದು ತಿಳಿಯಲಿದೆ.

    ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಸಾಕಾರವಾಗುವ ಮೊದಲು ತಾಲೂಕನ್ನು ಒಮ್ಮೆ ಬರಪೀಡಿತ ಎಂದು ಘೋಷಿಸಲಾಗಿತ್ತು. ಆದರೆ, ಭರಪೂರ ನೀರಾವರಿ ಯೋಜನೆಗಳನ್ನು ಕಂಡ ನಂತರ ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದೆ. ಅಂತರ್ಜಲ ಮಟ್ಟ ಕುಸಿದಿದ್ದು, ಮಳೆಯಾಶ್ರಿತ ಬೆಳೆಯನ್ನು ನಂಬಿರುವ ತಾಲೂಕಿನ ಕೆಲಭಾಗದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಹೈನುಗಾರಿಕೆಯಲ್ಲಿ ತಾಲೂಕು ಇಡೀ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದು, ಇತ್ತೀಚೆಗೆ ಮೇವಿನ ಕೊರತೆಯೂ ಕಾಡುತ್ತಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

    ತಾಲೂಕಿನಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸುವಂತೆ ಸರ್ಕಾರದಿಂದ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸುತ್ತಾರೆ. ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬಿತ್ತನೆ ಸೇರಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು.
    ಪೂರ್ಣಿಮ, ಪ್ರಭಾರ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಚನ್ನಪಟ್ಟಣ

    ತಾಲೂಕಿನಲ್ಲಿ ಬರದ ಛಾಯೆ ಆವರಿಸಿರುವುದು ಸತ್ಯ. ಅಧಿಕಾರಿಗಳು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿದರೆ ನೈಜತೆ ಬೆಳಕಿಗೆ ಬರಲಿದೆ. ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಬಿತ್ತನೆ ಆರಂಭವಾಗಿಲ್ಲ. ವಾಡಿಕೆಯಂತೆ ಮಳೆಯಾಗಿಲ್ಲ. ಈ ಎಲ್ಲ ಅಂಶಗಳನ್ನು ಬರ ಅಧ್ಯಯನ ತಂಡ ಸೂಕ್ಷ್ಮವಾಗಿ ಪರಿಶೀಲನೆ ನಡೆಸಬೇಕು.
    ಸಿ. ಪುಟ್ಟಸ್ವಾಮಿ, ರೈತ ಹೋರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts