More

    ದ್ವೇಷ-ಪ್ರೀತಿಯ ಹದವಾದ ಮಿಶ್ರಣ; ‘ರಕ್ತ ಗುಲಾಬಿ’ ಸಿನಿಮಾ ವಿಮರ್ಶೆ

    | ಮಂಜು ಕೊಟಗುಣಸಿ ಬೆಂಗಳೂರು

    • ಚಿತ್ರ: ರಕ್ತಗುಲಾಬಿ
    • ನಿರ್ಮಾಣ : ಮಾಚಿನ್ ಕಾಡ್ ಫಿಲಂಸ್
    • ನಿರ್ದೇಶನ : ರಾಬಿ
    • ತಾರಾಗಣ : ವಿಕ್ರಮಾದಿತ್ಯ, ಶಿವಾನಿ, ಮಾಣಿಕ್ಯ, ಭರತ್, ರಾಮು, ವಿನೋದ್, ಸಿದ್ದರಾಮ ಇತರರು

    ರಕ್ತವನ್ನು ಸಂಬೋಧಿಸುವ ದ್ವೇಷ, ಸೇಡು ಮತ್ತು ಗುಲಾಬಿಯನ್ನು ಹೋಲುವ ಪ್ರೀತಿಯೂ ಇಲ್ಲಿರುವುದರಿಂದ ಇವೆರಡರ ಮಿಳಿತವಾಗಿ ‘ರಕ್ತಗುಲಾಬಿ’ ಹೊರಬಂದಿದೆ. ಹೊಸಬರ ಈ ಹೊಸ ಪ್ರಯತ್ನ ಒಂದಷ್ಟು ಕುತೂಹಲದ ಜತೆಗೆ ರೋಚಕತೆಯನ್ನೂ ಜತೆಗಿರಿಸಿಕೊಂಡು ನೋಡಿಸಿಕೊಂಡು ಹೋಗುತ್ತದೆ. ನಕ್ಸಲ್ ನಂಟಿಗೆ ಅಂಟಿಕೊಂಡೇ ಸಾಗುವ 2 ಗಂಟೆ 12 ನಿಮಿಷದ ಈ ‘ರಕ್ತ ಗುಲಾಬಿ’ ಒನ್ ಟೇಕ್ ಚಿತ್ರ ಎಂಬುದು ಮತ್ತೊಂದು ವಿಶೇಷ!

    ಗುಂಡಿನ ಮೊರೆತ ಇದರ ನಡುವೆ ಒಂದು ಪ್ರೇಮಕಥೆ. ಇದು ‘ರಕ್ತಗುಲಾಬಿ’ ಸಿನಿಮಾದ ಒಂದೆಳೆ. ನಕ್ಸಲ್ ಅನ್ನೋ ಹಣೆಪಟ್ಟಿಕಟ್ಟಿ ಅಂಟಿಸಿಕೊಂಡು ಭಯದಲ್ಲಿಯೇ ಕಾಡಲ್ಲಿ ಕಾಲ ಕಳೆಯೋ ಒಂದು ಗುಂಪಿನ ಕಥೆ ಇದು. ಇದೆಲ್ಲವನ್ನೂ ಬಿಟ್ಟು, ಎಲ್ಲಾದರೂ ಪುಟ್ಟ ಬದುಕು ಕಟ್ಟಿಕೊಂಡರಾಯ್ತು ಎಂದು ನಿರ್ಧರಿಸುವ ಒಂದು ಜೋಡಿಯ ಹೋರಾಟವೂ ಇಲ್ಲಿ ಕಾಣಿಸುತ್ತದೆ. ಸೇಡಿನ ಜೀವನ ಬದಿಗಿಟ್ಟು, ಭವಿಷ್ಯದ ಬಣ್ಣಬಣ್ಣದ ಕನಸು ಕಾಣುವ ಆ ಜೋಡಿ ಕೊನೆಗೇನಾಗುತ್ತದೆ ಎಂಬುದೇ ‘ರಕ್ತಗುಲಾಬಿ’ಯ ಸಸ್ಪೆನ್ಸ್.

    ಇಡೀ ಸಿನಿಮಾ ಕಮರ್ಷಿಯಲ್ ದೃಷ್ಟಿಕೋನದಿಂದ ಆಚೆಗೆ ಸಾಗುವುದರಿಂದ ಇಲ್ಲಿ ಅಬ್ಬರದ ಡೈಲಾಗ್​ಗಳಿಗೆ ಜಾಗವಿಲ್ಲ. ಕಲರ್​ಫುಲ್ ಸೆಟ್​ನಲ್ಲಿ ಯಾವ ಹಾಡೂ ಕಾಣಿಸುವುದಿಲ್ಲ. ಮಾಸ್ ಆಕ್ಷನ್ ದೃಶ್ಯಗಳು ನಿಮ್ಮನ್ನು ಹೌಹಾರಿಸುವುದಿಲ್ಲ. ಬದಲಿಗೆ ಇದೆಲ್ಲದರ ಹೊರತಾಗಿ ಹೀಗೂ ಒಂದು ಸಿನಿಮಾ ಮಾಡಬಹುದು ಎಂದು ‘ರಕ್ತಗುಲಾಬಿ’ ತೋರಿಸಿದೆ.

    ನಕ್ಸಲೈಟ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಪಾಡು ಎಂಥದ್ದು? ಅವರ ಉದ್ದೇಶವೇನು? ಅದನ್ನು ಸ್ಪಷ್ಟವಾಗಿಸಿ ತೋರಿಸಿರುವ ನಿರ್ದೇಶಕ ರಾಬಿ, ಬಲೆಗೆ ಬಿದ್ದ ನಕ್ಸಲೈಟ್​ಗಳನ್ನು ಪೊಲೀಸ್ ಇಲಾಖೆ ಹೇಗೆ ಟ್ರೀಟ್ ಮಾಡುತ್ತದೆ ಎಂಬುದನ್ನೂ ಅಷ್ಟೇ ಮಾರ್ವಿುಕವಾಗಿ ತೆರೆಮೇಲೆ ತಂದಿದ್ದಾರೆ.

    ಒನ್ ಟೇಕ್ ಸಿನಿಮಾ ಆಗಿರುವುದರಿಂದ ಒಮ್ಮೆ ಕ್ಯಾಮರಾ ಆನ್ ಆದರೆ ಅಲ್ಲಿ ಪಾತ್ರಧಾರಿಗಳ ಮತ್ತು ಲೊಕೇಷನ್​ಗಳ ಬದಲಾವಣೆ ಆಗುತ್ತಲೇ ಇರಬೇಕಾಗುತ್ತದೆ. ಮೈಯಲ್ಲ ಕಣ್ಣಾಗಿಸಿಕೊಂಡೇ ಕ್ಯಾಮರಾದ ಜತೆಗೆ ಕಲಾವಿದರೂ ಸಹಕರಿಸಬೇಕಾಗುತ್ತದೆ. ಆ ಎರಡೂ ವಿಭಾಗ ಇಲ್ಲಿ ಅಚ್ಚುಕಟ್ಟು ಪ್ರದರ್ಶನ ನೀಡಿವೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ‘ರಕ್ತಗುಲಾಬಿ’ಗೆ ಪ್ರಜೋತ್ ಅವರ ಹಿನ್ನೆಲೆ ಸಂಗೀತವೂ ಪೂರಕವಾಗಿದೆ. ಚಿತ್ರದಲ್ಲಿನ ಬಹುತೇಕರು ಹೊಸಬರಾದರೂ, ನೈಜವಾಗಿ ಅಭಿನಯಿಸಿದ್ದಾರೆ. ಇದನ್ನು ಹೊರತುಪಡಿಸಿ ಆರಂಭದಿಂದ ವೇಗವಾಗಿಯೇ ಸಾಗುವ ಸಿನಿಮಾ, ಮಧ್ಯಂತರದ ನಂತರ ಟ್ವಿಸ್ಟ್ ಸಿಕ್ಕರೂ, ನೋಡುಗನ ತಾಳ್ಮೆ ಪರೀಕ್ಷಿಸುತ್ತದೆ. ಒಂದಷ್ಟು ದೃಶ್ಯಗಳು ಲ್ಯಾಗ್ ಅನಿಸುವುದೂ ಉಂಟು. ಇದೆಲ್ಲವನ್ನು ಬದಿಗಿಟ್ಟು ನೋಡುವುದಾದರೆ ‘ರಕ್ತಗುಲಾಬಿ’ ಹೊಸಬರ ಹೊಸ ಪ್ರಯತ್ನ ಎಂದೇ ಹೇಳಬಹುದು.

    ಕೆಲಸಕ್ಕೆ ಹೋಗಿದ್ದ ಹೆಂಡತಿ ತಡವಾಗಿ ಮನೆಗೆ ಬಂದಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ಕೊಂದ ಗಂಡ!; ಪತ್ನಿಯ ಶೀಲದ ಕುರಿತು ಅನುಮಾನ?

    ಕಳಸದ ಯುವತಿ ದುಬೈನಲ್ಲಿ ಸಾವು; ಒಂದು ವರ್ಷದ ಹಿಂದಷ್ಟೇ ಆಗಿತ್ತು ವಿವಾಹ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts