More

    ರಕ್ಷಾ ಪ್ರಕರಣ ತನಿಖೆ ಆಮೆಗತಿ

    ಉಡುಪಿ: ವೈದ್ಯಕೀಯ ನಿರ್ಲಕ್ಷೃದಿಂದಾಗಿ ಮೃತಪಟ್ಟ ಆರೋಪವಿರುವ ಇಂದಿರಾ ನಗರ, ಕುಕ್ಕಿಕಟ್ಟೆ ನಿವಾಸಿ ರಕ್ಷಾ(26) ಪ್ರಕರಣ ತನಿಖೆ ಆಮೆಗತಿಯಲ್ಲಿದೆ. ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ವರದಿ ಇನ್ನೂ ಕೈಸೇರದ ಹಿನ್ನೆಲೆಯಲ್ಲಿ ಸಿಐಡಿ ತನಿಖೆಯಲ್ಲಿ ಪ್ರಗತಿ ಕಂಡು ಬಂದಿಲ್ಲ. ಸಾವಿನ ಕುರಿತ ತಜ್ಞ ವೈದ್ಯರ ತನಿಖಾ ವರದಿಯನ್ನು ಬಹಿರಂಗಪಡಿಸಲು ಜಿಲ್ಲಾಡಳಿತ ನಿರಾಕರಿಸಿದೆ.

    ಮೈಗ್ರೇನ್‌ನಿಂದ ಬಳಲುತ್ತಿದ್ದ ರಕ್ಷಾ ಆ.21ರಂದು ಸಮೀಪದ ಖಾಸಗಿ ಆಸ್ಪತ್ರೆಯಿಂದ ಔಷಧ ಪಡೆದ ಗಂಟೆಯೊಳಗೆ ಅಸ್ವಸ್ಥರಾಗಿ ಮೃತಪಟ್ಟಿದ್ದರು. ಕೂಡಲೇ ಚಿಕಿತ್ಸೆ ನೀಡಿದ್ದ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಇನ್ನೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಮೃತದೇಹವನ್ನು ಅಜ್ಜರಕಾಡು ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿತ್ತು.

    ಸಿಐಡಿಗೆ ತಜ್ಞ ವೈದ್ಯರ ವರದಿ: ವೈದ್ಯಕೀಯ ನಿರ್ಲಕ್ಷೃ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಾರ 7 ತಜ್ಞ ವೈದ್ಯರ ತನಿಖೆ ನಡೆಸಿ 5 ದಿನದೊಳಗೆ ಪ್ರಾಥಮಿಕ ತನಿಖಾ ವರದಿ ಪಡೆದು ಸಂಬಂಧಪಟ್ಟ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕು. ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆಯಂತೆ ಜಿಲ್ಲಾಸ್ಪತ್ರೆ ವೈದ್ಯ ಡಾ.ಚಂದ್ರಶೇಖರ ಅಡಿಗ ನೇತೃತ್ವದಲ್ಲಿ 7 ತಜ್ಞರನ್ನೊಳಗೊಂಡ ವೈದ್ಯಕೀಯ ತಂಡ ರಚಿಸಲಾಗಿತ್ತು. ಸದ್ಯ ಈ ವರದಿ ಜಿಲ್ಲಾಡಳಿತ ಕೈಸೇರಿದ್ದು, ಇದನ್ನು ಸಿಐಡಿ ತನಿಖಾ ತಂಡಕ್ಕೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಎಫ್‌ಎಸ್‌ಎಲ್ ವರದಿ ವಿಳಂಬ: ಸಿಐಡಿ ತಂಡ ಉಡುಪಿಗೆ ಮೂರ್ನಾಲ್ಕು ಬಾರಿ ಆಗಮಿಸಿ ರಕ್ಷಾ ಪತಿ ಶಿವಪ್ರಸಾದ್, ಇಬ್ಬರು ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ರಕ್ಷಾ ಅವರ ಕಾಪು ಮನೆಗೆ ತೆರಳಿ ಅಣ್ಣ ಮತ್ತು ಅತ್ತಿಗೆಯನ್ನು ವಿಚಾರಣೆ ನಡೆಸಿದೆ. ಆಸ್ಪತ್ರೆ ಆಡಳಿತ ಮಂಡಳಿ, ಸಂಬಂಧಪಟ್ಟ ವೈದ್ಯರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

    ರಕ್ಷಾ ಪ್ರಕರಣಕ್ಕೆ ಸಂಬಂಧಿಸಿ ತಜ್ಞ ವೈದ್ಯರ ತಂಡದಿಂದ ತನಿಖೆ ನಡೆದು ವರದಿ ಒಪ್ಪಿಸಿದ್ದು, ಅದನ್ನು ಸಿಐಡಿಗೆ ನೀಡಲಾಗಿದೆ. ಸಿಐಡಿ ತನಿಖೆ ಪ್ರಗತಿಯಲ್ಲಿರುವುದರಿಂದ ಜಿಲ್ಲಾಡಳಿತ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
    -ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಘಟನೆ ನಡೆದು ನಾಲ್ಕೈದು ತಿಂಗಳಾದರೂ ನ್ಯಾಯ ಸಿಕ್ಕಿಲ್ಲ. ಎರಡು ತಿಂಗಳಿನಿಂದ ಮರಣೋತ್ತರ ವರದಿ ಏನಾಯ್ತು ಎಂದು ಕೇಳಿದರೆ 15 ದಿನ, ವಾರದೊಳಗೆ ವರದಿ ಬರಲಿದೆ ಎಂದು ಸಿಐಡಿ ಹೇಳುತ್ತಿದೆ.
    -ಶಿವಪ್ರಸಾದ್, ರಕ್ಷಾ ಅವರ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts