More

    ಜಿಲ್ಲೆಯತ್ತ ಕೂಲಿ ಕಾರ್ಮಿಕರ ವಲಸೆ

    *ಕೈಗಾರಿಕಾ ಪ್ರದೇಶಗಳಲ್ಲಿ ಉತ್ತರ ಕರ್ನಾಟಕದ ಮಂದಿ ಮೊಕ್ಕಾಂ
    *ಬರ, ಬಿಸಿಲ ತಾಪದ ಎೆಕ್ಟ್

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಉತ್ತರ ಕರ್ನಾಟಕ ಭಾಗದಲ್ಲಿ ಸುಡುತ್ತಿರುವ ಬರ ಹಾಗೂ ಬಿಸಿಲ ತಾಪ ತಡೆಯಲಾರದೆ ಆ ಭಾಗದ ಬಹುತೇಕ ಕೂಲಿಕಾರ್ಮಿಕರು ಜಿಲ್ಲೆಯ ಹಲವು ಕಡೆಗಳಿಗೆ ವಲಸೆ ಬಂದಿರುವ ದೃಶ್ಯ ಕಂಡುಬರುತ್ತಿದೆ.
    ತಿಂಗಳಿಂದ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ, ನೆಲಮಂಗಲ ತಾಲೂಕು ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ, ಹೊಸಕೋಟೆ ಹೊರವಲಯದ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಯಚೂರು, ಕಲಬುರಗಿ, ಬಳ್ಳಾರಿ, ಯಾದಗಿರಿ, ಬೀದರ್ ಸೇರಿ ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ವಲಸೆ ಬರುತ್ತಿದ್ದಾರೆ.
    ಕಟ್ಟಡ ಕಾರ್ಮಿಕರು: ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣಹವೆ ತಾರಕಕ್ಕೇರಿದ್ದು, ಜನ ಮನೆಯಿಂದ ಹೊರಗೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಕೂಲಿ ಕಾರ್ಮಿಕರು ಮುಖ್ಯವಾಗಿ ಕಟ್ಟಡ ಕಾರ್ಮಿಕರು ಬಿಸಿಲಿನಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಅನಿವಾರ್ಯವಾಗಿ ಕುಟುಂಬ ಸಮೇತ ಕೂಲಿ ಕಾರ್ಮಿಕರು ಗ್ರಾಮಾಂತರ ಜಿಲ್ಲೆಯತ್ತ ವಲಸೆ ಬರುತ್ತಿದ್ದಾರೆ. ಈ ಪರಿಣಾಮ ಜಿಲ್ಲೆಯ ಹಲವೆಡೆ ನಡೆಯುತ್ತಿರುವ ಕಟ್ಟಡ ಕೆಲಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಭಾಗದ ಕೂಲಿ ಕಾರ್ಮಿಕರೇ ಕಂಡುಬರುತ್ತಿದ್ದಾರೆ.
    ಮಳೆ – ಬೆಳೆ ಇಲ್ಲ: ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತರ ಕರ್ನಾಟಕ ಭಾಗದಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ಕೂಲಿ ಅರಸಿಕೊಂಡು ಆ ಭಾಗದಿಂದ ಕೂಲಿ ಕಾರ್ಮಿಕರು ಇತ್ತ ಕಡೆ ಬರುವುದು ಸಾಮಾನ್ಯ. ಆದರ ಈ ಬಾರಿ ಹೆಚ್ಚಿನ ಮಟ್ಟದಲ್ಲಿ ಕುಟುಂಬ ಸಮೇತ ಕಾರ್ಮಿಕರು ಜಿಲ್ಲೆಯತ್ತ ಮುಖಮಾಡಿದ್ದಾರೆ. ಎಕರೆಗಟ್ಟೆಲೆ ಜಮೀನಿದ್ದರೂ ಮಳೆಯ ತೀವ್ರ ಕೊರತೆಯಿಂದ ಯಾವುದೇ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಿಲ್ಲದೆ ಅನಿವಾರ್ಯವಾಗಿ ವಲಸೆ ಬರುವಂತಾಗಿದೆ. ಇದರಲ್ಲಿ ಹಲವು ಮಂದಿಗೆ ಕಟ್ಟಡ ಸೇರಿ ಇನ್ನಿತರ ಕಾಮಗಾರಿಗಳ ಅನುಭವವಿಲ್ಲ. ಆ ಭಾಗದಲ್ಲಿ ಕೃಷಿ ಚಟುವಟಿಕೆಯಲ್ಲಷ್ಟೇ ತೊಡಗಿದ್ದ ಜನ, ತುತ್ತಿನ ಚೀಲ ತುಂಬಿಸಿಕೊಳ್ಳಲು ಕಟ್ಟಡ ಕೂಲಿ ಕಾರ್ಮಿಕರಾಗಿ ದುಡಿಯುವಂತಾಗಿದೆ. ಒಂದೆಡೆ ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಬಂದ್ ಆಗಿದ್ದರೆ, ತಾರಕಕ್ಕೇರಿದ ತಾಪಮಾನದಿಂದ ಹೊರಗೆ ಕೂಲಿ ಕೆಲಸವೂ ಮಾಡದಂತಹ ಪರಿಸ್ಥಿತಿ ಎದುರಾಗಿದೆ ಎಂದು ವಲಸೆ ಕಾರ್ಮಿಕರು ಅಸಹಾಯತೆ ವ್ಯಕ್ತಪಡಿಸುತ್ತಿದ್ದಾರೆ.

    ಕೆಐಎಡಿಬಿ ಕೆಲಸದಲ್ಲಿ ಹೆಚ್ಚು

    ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯಕ್ಕಾಗಿ ಕೆಐಎಡಿಬಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಇದರಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಹಲವು ಕಂಪನಿ ಹಾಗೂ ಕಾರ್ಖಾನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದು ಉತ್ತರ ಕರ್ನಾಟಕ ಭಾಗದ ಕೂಲಿಕಾರ್ಮಿಕರಿಗೆ ವರದಾನವಾಗಿದ್ದು, ಈ ಭಾಗಗಳಲ್ಲಿ ಬಹುಪಾಲು ಉತ್ತರ ಕರ್ನಾಟಕ ಭಾಗದ ಕೂಲಿಕಾರ್ಮಿಕರೇ ತೊಡಗಿಸಿಕೊಂಡಿದ್ದಾರೆ.

    ನಮ್ಮ ಕಡೆಯೂ ನರೇಗಾ ಯೋಜನೆಯಡಿ ಸಾಕಷ್ಟು ಕೆಲಸ ಸಿಗುತ್ತದೆ. ಆದರೆ ಅಲ್ಲಿ ಬಿಸಿಲ ತಾಪ ಹೆಚ್ಚಿರುವುದರಿಂದ ಹೊರಗೆ ದುಡಿಯಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ. ಜತೆಗೆ ಈ ಭಾಗದಲ್ಲಿ ಕಟ್ಟಡ ಕಾಮಗಾರಿಗೆ ನೀಡುವ ಕೂಲಿ ದರ ಅಲ್ಲಿನ ನರೇಗಾ ಕೂಲಿಗೆ ಹೋಲಿಸಿದರೆ ಸಾಕಷ್ಟು ಹೆಚ್ಚಿದೆ. ಜತೆಗೆ ನಮ್ಮ ಭಾಗಕ್ಕೆ ಹೋಲಿಸಿದರೆ ಇಲ್ಲಿಯ ಬಿಸಿಲು ತಡೆದುಕೊಳ್ಳಬಹುದು, ಆದ್ದರಿಂದ ಕುಟುಂಬ ಸಮೇತ ವಲಸೆ ಬಂದಿದ್ದೇವೆ. ದೇವರ ಕೃಪೆಯಿಂದ ಉತ್ತಮ ಮಳೆಯಾದರೆ ತೆರಳುತ್ತೇವೆ.

    ಶಿವಮಲ್ಲಯ್ಯ, ಕೂಲಿ ಕಾರ್ಮಿಕ ರಾಯಚೂರು

    ಸಾಮಾನ್ಯವಾಗಿ ಉತ್ತರ ಕರ್ನಾಟಕದ ಮಂದಿ ನಮ್ಮ ಕಡೆ ಕೂಲಿಗಾಗಿ ವರ್ಷ ವರ್ಷ ಬಂದು ಹೋಗುತ್ತಾರೆ. ಆದರೆ ಈ ಬಾರಿ ಬಹಳ ಮಂದಿ ಕುಟುಂಬ ಸಮೇತ ವಲಸೆ ಬಂದಿದ್ದಾರೆ. ಈ ಭಾಗದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳಿಗೆ ಅವರನ್ನು ಬಳಸಿಕೊಳ್ಳುತ್ತಿದ್ದೇವೆ. ಅವರಿಗೆ ಉಳಿದುಕೊಳ್ಳಲು ತಾತ್ಕಾಲಿಕ ಸೂರು ಸಹ ಒದಗಿಸಿದ್ದು ಮೂಲಸೌಕರ್ಯ ಕಲ್ಪಿಸಲಾಗಿದೆ.
    ಮುನಿರಾಜು, ಗಾರೆಮೇಸಿ, ಚನ್ನರಾಯಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts