More

    ರಾಜ್ಯಸಭೆ ಚುನಾವಣೆ: ಮೂರೂ ಪ್ರಮುಖ ಪಕ್ಷಗಳಲ್ಲಿ ತಯಾರಾಗುತ್ತಿದೆ ರಣತಂತ್ರ

    ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ 2018ರಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸಿ 13 ತಿಂಗಳು ಆಡಳಿತ ಅನುಭವಿಸಿದ ಜೆಡಿಎಸ್ ಈಗ ರಾಜ್ಯಸಭೆ ಚುನಾವಣೆಯಲಿ ್ಲ ಮತ್ತೆ ಮೈತ್ರಿ ಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ.

    2019 ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಮೇಲ್ನೋಟಕ್ಕೆ ತಾವು ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಗೌಡರು ಹೇಳಿದರೂ ಒಳಗೊಳಗೆ ರಾಜ್ಯಸಭೆ ಪ್ರವೇಶಿಸಲು ಒಳದಾರಿ ಹುಡುಕುತ್ತಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಕುಸಿದು ಬಿದ್ದಿದ್ದ ಎಎಸ್‌ಐ ಸಾವು!

    ವಿಧಾನಸಭೆಯಲ್ಲಿ ಕಾಂಗ್ರೆಸ್ 68 ಸದಸ್ಯ ಬಲವಿದ್ದರೆ, ಜೆಡಿಎಸ್ 34 ಸದಸ್ಯ ಬಲ ಹೊಂದಿವೆ. ಕಾಂಗ್ರೆಸ್ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಹೆಚ್ಚುವರಿಯಾಗಿ 22 ಮತಗಳು ಉಳಿಯುತ್ತವೆ. ಈ ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಕೊಟ್ಟರೆ, ಪ್ರತಿಯಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವ ಷರತ್ತು ವಿಧಿಸಲಿದೆ.

    ಈ ಕೊಡುಕೊಳ್ಳುವಿಕೆ ನಡುವೆಯೂ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ‘ಕುದುರೆ ವ್ಯಾಪಾರ’ಕ್ಕಿಳಿದರೆ ಹೇಗೆ ಎಂಬ ದುಗುಡ ದೇವೇಗೌಡರನ್ನು ಕಾಡುತ್ತಿದೆ. ಪ್ರತಿಷ್ಠೆಯ ಸೆಣಸಾಟದಲ್ಲಿ ಮತ್ತೊಮ್ಮೆ ಅಡ್ಡ ಮತದಾನದ ಬಿಸಿ ತಟ್ಟಬಹುದೆ ಎಂಬ ಆತಂಕ ಜೆಡಿಎಸ್‌ನಲ್ಲಿ ಮನೆ ಮಾಡಿದೆ.

    ಇದನ್ನೂ ಓದಿ: ಬೆಳ್ಳಿಯಲ್ಲಿ ತಯಾರಾಯ್ತು ಅತಿ ಸಣ್ಣ ವಿಜಯ ರಥ!

    ರಾಜ್ಯಸಭೆಯಲ್ಲಿ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹಾಗಾಗಿ 3ನೇ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಗಂಭೀರವಾಗಿ ಚಿಂತಿಸುವಂತೆ ದೆಹಲಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿದೆ. ಕಾರಣ ರಾಜ್ಯಸಭೆ ಚುನಾವಣೆ ಜಿದ್ದಾಜಿದ್ದಿನ ಕದನಕ್ಕೆ ವೇದಿಕೆ ನಿರ್ಮಿಸಿದೆ. ಕಳೆದ ಬಾರಿಯೂ ಇದೇ ಬಗೆಯ ಅಂಕಗಣಿತದಲ್ಲಿ ಜೆಡಿಎಸ್‌ಗೆ ಮುಖಭಂಗ ಉಂಟಾಗಿತ್ತು. ಹಾಗಾಗಿ ಈ ಕದನ ತೀವ್ರ ಕುತೂಹಲ ಕೆರಳಿಸಿದೆ. ಜೆಡಿಎಸ್‌ನಿಂದ ಜಿಗಿಯಬಹುದಾದ ಶಾಸಕರಿಗೆ ಲಗಾಮು ಹಾಕಲು ದೇವೇಗೌಡರು ತಂತ್ರ ರೂಪಿಸಲೇಬೇಕಿದೆ.

    2016 ಜೂನ್ 10 ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಚೆಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಸೇರಿದಂತೆ 8 ಮಂದಿ ಶಾಸಕರು ಪಕ್ಷದ ವಿಪ್ ಉಲ್ಲಂಸಿ ಅಡ್ಡಮತದಾನ ಮಾಡಿ ಜೆಡಿಎಸ್‌ಗೆ ಚಳ್ಳೆಹಣ್ಣು ತಿನ್ನಿಸಿರುವ ಕಹಿ ಅನುಭವ ಜೆಡಿಎಸ್ ವರಿಷ್ಠರಿಗಿದೆ. ಹಾಗಾಗಿ ಎಚ್ಚರಿಕೆ ಹೆಜ್ಜೆ ಇಡಲು ಜೆಡಿಎಸ್ ನಿರ್ಧರಿಸಿದೆ. ಒಂದು ಕಡೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದರ ಜತೆಗೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಪ್ರಧಾನಿ ಮೋದಿ ಮನವೊಲಿಸಲು ದೇವೇಗೌಡರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

    ಇದನ್ನೂ ಓದಿ: ಜುಲೈ 1ರಿಂದಲೇ ಹಂತ ಹಂತವಾಗಿ ಶಾಲೆ ಶುರು? : ಸಂದೇಹ ಮೂಡಿಸಿದೆ ಶಿಕ್ಷಣ ಇಲಾಖೆ ಸುತ್ತೋಲೆ..

    ಸಿಎಂ ಕುಮಾರಸ್ವಾಮಿ ಮೇಲಿನ ಮುನಿಸಿನಿಂದ ಈಗಾಗಲೇ 10-15 ಮಂದಿ ಶಾಸಕರು ಜೆಡಿಎಸ್ ವರಿಷ್ಠರಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಶಾಸಕರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸೇರಿದಂತೆ ‘ಬೇಡಿಕೆ’ ಈಡೇರಿಸುವ ಭರವಸೆ ಸಿಕ್ಕರೆ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಲು ರೆಡಿ ಇದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಇದು ಈಗ ಜೆಡಿಎಸ್‌ಗೆ ಬಿಸಿ ತುಪ್ಪವಾಗಿದೆ.

    ತುಮಕೂರಿನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್ಸಿಗರಿಂದ ಒಳಪೆಟ್ಟು ತಿಂದಿರುವ ದೇವೇಗೌಡರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ತಮ್ಮ ಪರ ಮತ ಚಲಾಯಿಸುವ ಬಗ್ಗೆ ಸಣ್ಣ ಅನುಮಾನವಂತೂ ಇದ್ದೇ ಇದೆ. ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್‌ನಿಂದ 2ನೇ ಅಭ್ಯರ್ಥಿ ಕಣಕ್ಕಿಳಿಸಿ ಬೆಂಬಲ ನೀಡಿ ಪ್ರತಿಯಾಗಿ ಮೇಲ್ಮನೆ ಚುನಾವಣೆಯಲ್ಲಿ ಒಂದು ಸ್ಥಾನ ಹೆಚ್ಚವರಿಯಾಗಿ ಪಡೆದುಕೊಳ್ಳುವ ಆಲೋಚನೆಯನ್ನೂ ಜೆಡಿಎಸ್ ಮಾಡುತ್ತಿದೆ. ಈ ತಂತ್ರ ಲಿಸಿದರೆ ರಾಜ್ಯಸಭೆಯಲ್ಲಿ ಜೆಡಿಎಸ್ ಪ್ರತಿನಿಧಿಯೇ ಇಲ್ಲದಂತಾಗುತ್ತದೆ.

    ಇದನ್ನೂ ಓದಿ: ಕರೊನಾಘಾತದ ನಡುವೆಯೇ 100ಕಿ.ಮೀ ವೇಗದಲ್ಲಿ ನುಗ್ಗುತಿದೆ ‘ನಿಸರ್ಗ’: ಮುಂಬೈನಲ್ಲಿ ನಡುಕ

    ಈ ನಡುವೆ, ರಾಜ್ಯಸಭೆಗೆ ಯಾರನ್ನು ಕಳಿಸಬೇಕು ಎಂಬ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲವನ್ನು ತೊಡೆಯಲು ಜೂನ್ 5ರಂದು ಆ ಪಕ್ಷ ಮಹತ್ವದ ಸಭೆ ನಡೆಸಲಿದೆ. ಪಸ್ತುತ ವಿಧಾನಸಭೆ ಬಲಾಬಲದಂತೆ ಕಾಂಗ್ರೆಸ್ ಸ್ಥಾನವನ್ನು ಮಾತ್ರವನ್ನು ಗೆಲ್ಲಲು ಸಾಧ್ಯವಿದೆ. ಹೆಚ್ಚೆಂದರೆ ತನ್ನಲ್ಲಿ ಉಳಿಯುವ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಅಥವಾ ಮೈತ್ರಿ ಅಭ್ಯರ್ಥಿಗೆ ವರ್ಗಾಯಿಸಬಹುಷ್ಟೆ. ಹೀಗಾಗಿ ತಾನು ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರಕ್ಕೆ ಯಾರ ಹೆಸರನ್ನು ಅಂತಿಮಗೊಳಿಸಬೇಕೆಂಬುದು ಪಕ್ಷದ ಮುಂದಿರುವ ಸವಾಲಾಗಿದೆ.

    ಪಕ್ಷದ ಹೈಕಮಾಂಡ್ ಅಭಿಪ್ರಾಯ ಸಂಗ್ರಹಕ್ಕಿಳಿದು, ಪ್ರಮುಖ ನಾಯಕರ ಮನದಿಂಗಿತವನ್ನು ಗ್ರಹಿಸಲಾರಂಭಿಸಿದೆ. ಲೋಕಸಭೆಯಲ್ಲಿ ಸೋಲುಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಕೊಡಬೇಕೆಂಬ ವಾದವೊಂದಿದೆ. ಇದೇ ವೇಳೆ, ಖರ್ಗೆ ನಿರಂತರವಾಗಿ ಅವಕಾಶ ಪಡೆದುಕೊಂಡು ಬಂದವರು, ಪುನಃ ಅವರಿಗೆ ಬೇಡ ಎಂಬುವರೂ ಗುಸುಗುಸು ಮಾತನಾಡಿಕೊಳ್ಳುವವರೂ ಇದ್ದಾರೆ.

    ಇದನ್ನೂ ಓದಿ: ಆಯುಷ್ಮಾನ್​ ಭಾರತ್​ ಯೋಜನೆಯಡಿ ಉದ್ಯೋಗ: ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ ಎಚ್ಚರ…!

    ಖರ್ಗೆ ಹೊರತುಪಡಿಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂದಿನ ಮೈತ್ರಿ ಪಕ್ಷಕ್ಕೆ ತಮ್ಮ ಸ್ಥಾನ ಬಿಟ್ಟುಕೊಟ್ಟ ಮುದ್ದಹನುಮೇಗೌಡ, ಈ ಹಿಂದೆ ರಾಜ್ಯಸಭೆ ಸದಸ್ಯರಾಗಿದ್ದ ಬಿ.ಕೆ.ಹರಿಪ್ರಸಾದ್, ರಾಜೀವ್ ಗೌಡ ಅವರ ಪುನರಾಯ್ಕೆ ಬಯಸಿದ್ದಾರೆ. ಇದೀಗ ಹೈಕಮಾಂಡ್ ಅಭಿಪ್ರಾಯ ಆಲಿಸಿ ಒಂದು ತೀರ್ಮಾನಕ್ಕೆ ಬರಲಿದೆ. ಅಂದಹಾಗೆ ನಾಮಪತ್ರ ಸಲ್ಲಿಸಲು ಜೂನ್ 9 ಕಡೆಯ ದಿನವಾಗಿದ್ದು, ಒಮ್ಮತದ ನಿರ್ಧಾರ ಕೈಗೊಳ್ಳಲು ಒಂದು ವಾರ ಮಾತ್ರ ಬಾಕಿ ಇದೆ.

    ಇತ್ತ ಬಿಜೆಪಿ ಪಾಳಯದಲ್ಲಿ ರಾಜ್ಯಸಭೆಗೆ ಇಬ್ಬರ ಆಯ್ಕೆಗೆ ಹಾದಿ ಸುಗಮವಾಗಿದೆ. ಆದರೆ, ಟಿಕೆಟ್ ವಿಚಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಯಾರಿಗೆ ಟಿಕೆಟ್ ಕೊಡಿಸುವುದು ಎನ್ನುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಕಠಿಣ ಸವಾಲಾಗಿದೆ. ಒಂದು ಕಡೆ ತಮ್ಮ ಮೇಲೆ ವಿಶ್ವಾಸ ಇಟ್ಟಿರುವ ಉಮೇಶ್ ಕತ್ತಿ ಮತ್ತೊಂದು ಕಡೆ ಪ್ರಭಾಕರ ಕೋರೆ ಅವರಿದ್ದಾರೆ. ಇಬ್ಬರೂ ಬೆಳಗಾವಿ ಜಿಲ್ಲೆಗೆ ಸೇರಿದವರಾದ ಕಾರಣ ಒಬ್ಬರಿಗೆ ಮಾತ್ರವೇ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ. ಜೊತೆಗೆ ಸಮುದಾಯಕ್ಕೆ ಒಂದು ಟಿಕೆಟ್ ಎನ್ನುವುದು ಇನ್ನಷ್ಟು ಕಷ್ಟ ತಂದಿದೆ.

    ಇದನ್ನೂ ಓದಿ: ಉಡುಪಿ ಈಗ ನಂ.1; ರಾಜ್ಯದಲ್ಲಿ ಒಟ್ಟು 388 ಹೊಸ COVID19 ಪ್ರಕರಣಗಳು

    ಉಮೇಶ್ ಕತ್ತಿ ಅವರನ್ನು ಮುಂದೆ ಸಚಿವರನ್ನಾಗಿ ಮಾಡಲು ಒಪ್ಪಿಗೆ ನೀಡಿದರೆ, ಅವರನ್ನು ಮನವೊಲಿಕೆ ಮಾಡಿ ರಾಜ್ಯಸಭೆ ಟಿಕೆಟ್‌ನ್ನು ಪ್ರಭಾಕರ ಕೋರೆಗೆ ಕೊಡಿಸಬಹುದು. ಇಲ್ಲದಿದ್ದರೆ, ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿ, ಮುಂದೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ಷರಾ ಎಳೆದು ಬಿಡಬಹುದು ಎನ್ನುವುದು ಮುಖ್ಯಮಂತ್ರಿ ಬಿಎಸ್‌ವೈ ಲೆಕ್ಕಾಚಾರ. ಯಾವುದಕ್ಕೂ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿಯೇ ನಿರ್ಣಯಕ್ಕೆ ಬರಲು ತೀರ್ಮಾನಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ಮತ್ತೊಂದು ಟಿಕೆಟ್ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಕೊಡಿಸುವುದೋ ಅಥವಾ ಮುರುಳೀಧರರಾವ್ ಅವರಿಗೆ ಕೊಡಿಸುವುದೋ ಎನ್ನುವುದು ಕೂಡ ಸಿಎಂ ಬಿಎಸ್‌ವೈಗೆ ತಲೆನೋವು ತಂದಿದೆ. ಸಂಕಷ್ಟ ಸಂದರ್ಭದಲ್ಲಿ ತಮ್ಮ ಜೊತೆಗೆ ಪಕ್ಷದ ಸಾಥ್ ನೀಡಿರುವ ಮುರಳೀಧರರಾವ್ ಅವರಿಗೆ ಬೇರೆ ಎಲ್ಲಿಯೂ ಅವಕಾಶಗಳಿಲ್ಲ. ಆದ್ದರಿಂದ ರಾಜ್ಯಸಭೆಯಲ್ಲಿಯೇ ಟಿಕೆಟ್ ನೀಡಬೇಕು ಎನ್ನುವ ಒತ್ತಾಯಗಳಿವೆ. ಆದರೆ, ದೀರ್ಘ ಕಾಲದ ಗೆಳೆಯ, ಪಕ್ಷ ಸಂಘಟನೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಅನಂತಕುಮಾರ್ ಅವರ ಪತ್ನಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ಆಗಿಲ್ಲ. ಆದ್ದರಿಂದ ಈ ಮೂಲಕ ಅವರಿಗೆ ನ್ಯಾಯ ಒದಗಿಸಬೇಕು ಎನ್ನುವ ಲೆಕ್ಕಾಚಾರಗಳಿವೆ. ತೀರ್ಮಾನ ತೆಗೆದುಕೊಳ್ಳಲು ಸಂಕಷ್ಟದ ಸ್ಥಿತಿ ಇರುವ ಕಾರಣ, ಎಲ್ಲವನ್ನು ವರಿಷ್ಠರೊಂದಿಗೆ ಚರ್ಚೆ ಮಾಡಿ ನಿರ್ಧರಿಸಲು ಸಿಎಂ ತೀರ್ಮಾನಿಸಿದ್ದಾರೆ.

    ಜುಲೈ 1ರಿಂದಲೇ ಹಂತ ಹಂತವಾಗಿ ಶಾಲೆ ಶುರು? : ಸಂದೇಹ ಮೂಡಿಸಿದೆ ಶಿಕ್ಷಣ ಇಲಾಖೆ ಸುತ್ತೋಲೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts