More

    ರಾಜೀವ್ ಗಾಂಧಿ ಖೇಲ್​​​ರತ್ನ ಮರುನಾಮಕರಣ: ಒಂದೇ ಏಟಿಗೆ ಮೂರು ಹಕ್ಕಿ ಹೊಡೆದ ಪ್ರಧಾನಿ ಮೋದಿ..!

    ಅತ್ಯುನ್ನತ ಕ್ರೀಡಾ ಪ್ರಶಸ್ತಿ ಅಂತಾ ಇದ್ದಿದ್ದು ರಾಜೀವ್ ಗಾಂಧಿ ಖೇಲ್​ರತ್ನ ಪುರಸ್ಕಾರ. ಆದ್ರೆ, ಇದೀಗ ಈ ಹೆಸರು ಬದಲಾಗಿದೆ. ಇನ್ಮುಂದೆ ಈ ಪ್ರಶಸ್ತಿ ಮೇಜರ್ ಧ್ಯಾನ್​ ಚಂದ್ ಖೇಲ್​ರತ್ನ ಪ್ರಶಸ್ತಿ ಅಂತಾ ಮರುನಾಮಕರಣವಾಗಿದೆ. ಅಷ್ಟಕ್ಕೂ ಮೋದಿ ಈ ಮೇಜರ್ ಆಟ ಆಡೋಕೆ ಕಾರಣ ಇದೆ. ನಮೋ ಗೋಲ್​ ಹಿಂದೆ ಆ ಧ್ಯಾನ ಇದೆ.!

    ಈಗ ಮೇಜರ್ ಧ್ಯಾನ್​ಚಂದ್ ಖೇಲ್​ರತ್ನ ಪ್ರಶಸ್ತಿ !
    ಯಾವಾಗ ಭಾರತೀಯ ಕ್ರೀಡಾಪಟುಗಳ ತಂಡ ಟೋಕಿಯೋ ಒಲಿಂಪಿಕ್ಸ್​ಗೆ ಉತ್ಸಾಹದಿಂದ ತೆರಳಿತೋ, ಎಲ್ಲರಿಗೂ ಪದಕ ಗೆಲ್ಲೋ ಆಸೆಯೇನೋ ಇತ್ತು. ಆದ್ರೆ, ಯಾರೂ ದೊಡ್ಡ ನಿರೀಕ್ಷೆಯನ್ನೇನೂ ಹೊಂದಿರಲಿಲ್ಲ. ಇಂಥಾ ಸಮಯದಲ್ಲಿ ದೂರದ ಜಪಾನ್ ನೆಲದಲ್ಲಿ ಭಾರತದ ವಿಜಯಪತಾಕೆ ಅನುರಣಿಸುವಂತೆ ಮಾಡಿದರು ಮೀರಾಭಾಯಿ ಚಾನು, ರವಿಕುಮಾರ್ ದಾಹಿಯಾ, ಪಿವಿ ಸಿಂಧೂ, ಲವ್ಲೀನಾ ಬರ್ಗಾಯಿನ್ ಹಾಗೂ ಅಥ್ಲೆಟಿಕ್ಸ್​ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಟ್ಟ ನೀರಜ್​ ಚೋಪ್ರಾ ಮುಂತಾದ ತಾರೆಗಳು.

    ಇದನ್ನ ಬಿಟ್ರೆ, ಬೇರೆ ಸ್ಪೋರ್ಟ್ಸ್​ಮನ್​ಗಳು ಅತ್ಯುತ್ತಮ ಸಂಪನ್ಮೂಲಗಳ ಜತೆ ಟ್ರೈನ್ ಆಗಿಬಂದಿದ್ದ ಇತರೆ ದೇಶಗಳ ಬಲಾಢ್ಯ ಎದುರಾಳಿಗಳ ಎದುರು ಮಂಡಿಯೂರಬೇಕಾಯಿತು. ಈ ಸಲ ಹೆಚ್ಚು ಪದಕ ಗೆಲ್ಲಲೇ ಬೇಕು ಅನ್ನೋ ಆಸೆಯಲ್ಲಿದ್ದ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಕಾರ್ಮೋಡ ಆವರಿಸಿದಾಗ ಮಿನುಗೋ ನಕ್ಷತ್ರದಂತೆ ಹೊಳೆದಿದ್ದು ಭಾರತೀಯ ಹಾಕಿ ಟೀಂ. ಒಂದು ಕಾಲದಲ್ಲಿ ಹಾಕಿಯಲ್ಲಿ ಅಜೇಯ ಎಂಬಂತಿದ್ದ ಭಾರತ ಹಾಕಿ, ಇತ್ತೀಚೆಗಿನ ದಶಕಗಳ ಒಲಿಂಪಿಕ್ಸ್​​ ನಲ್ಲಿ ಪದಕದ ಹೊಸ್ತಿಲಿಗೂ ಸಾಗಲು ಸಾಧ್ಯವಾಗದ ಮಟ್ಟಿಗೆ ಕಳೆಗುಂದಿದ್ದು ನಿಜ. ಈ ಸಲವೂ ಹತ್ತರಲ್ಲಿ ಹನ್ನೊಂದು ಅಂತಾ ಅನ್ಕೊಂಡ ವೇಳೆಯಲ್ಲೇ ಪುಟಿದೆದ್ದು ನಿಂತವು ಭಾರತೀಯ ಹಾಕಿ ಸಿಂಹಗಳು.! ಒಂದರ್ಥದಲ್ಲಿ ಭಾರತೀಯ ಹಾಕಿ ಡಬಲ್ ಧಮಾಕಾ. ಪುರುಷರಷ್ಟೇ ಅಲ್ಲ..ಮಹಿಳಾಮಣಿಯರೂ ಈ ಸಲ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಭಾರತ, ಮಹಿಳಾ ಹಾಕಿಯಲ್ಲಿ ಸೆಮಿ ಫೈನಲ್ ಪ್ರವೇಶಿಸಿತು. ಸೆಮೀಸ್​​ನಲ್ಲಿ ಸೋತರೂ, ಭಾರತ ಹೆಮ್ಮೆಪಡುವಂತೆ ಮಾಡಿದರು ಹಾಕಿ ನಾರಿಯರು.

    ಇನ್ನು ಪುರುಷರ ಹಾಕಿಯಲ್ಲೂ 4 ದಶಕಗಳ ಬಳಿಕ ಭಾರತ ಅತ್ಯುತ್ತಮ ಅಚೀವ್​ಮೆಂಟ್ ಮಾಡಿದೆ. ಟೋಕಿಯೋ ಒಲಿಂಪಕ್ಸ್​​ನಲ್ಲಿ ಭಾರತದ ಹುಲಿಗಳು ಜರ್ಮನಿಯನ್ನು ಸೋಲಿಸೋ ಮೂಲಕ ಕಂಚಿನ ಪದಕ ಗೆದ್ದಿವೆ. 1980ರ ಮಾಸ್ಕೋ ಒಲಿಂಪಿಕ್ಸ್​ ನಂತರ ಅಂದ್ರೆ 41 ವರ್ಷಗಳ ಒಲಿಂಪಿಕ್ಸ್ ಹಾಕಿ ಬರವನ್ನ ಭಾರತೀಯ ಪುರುಷರ ಹಾಕಿ ಟೀಂ ನೀಗಿಸಿದೆ. ಆಗ ಭಾರತ ಚಿನ್ನದ ಪದಕ ಗೆದ್ದಿದ್ದೇ ಲಾಸ್ಟ್..ಆ ಬಳಿಕ ಪದಕ ಅನ್ನೋದು ಭಾರತಕ್ಕೆ ಮರೀಚಿಕೆಯಾಗುಳಿದಿತ್ತು. ಯಾವಾಗ ಭಾರತ ಮತ್ತೆ ಪದಕ ಬೇಟೆ ಆರಂಭಿಸಿತೋ ಈ ಮೂಲಕ ಗತಕಾಲದ ಹಾಕಿ ವೈಭವ ಮರುಕಳಿಸೋ ಕನಸು ಮತ್ತೆ ಚಿಗುರೊಡೆದಿದೆ. ಇದರಿಂದ ಉಲ್ಲಾಸಗೊಂಡ ಇಡೀ ಭಾರತ, ಹಾಕಿತಂಡಕ್ಕೆ ಭೇಷ್ ಎಂದಿದೆ. ಇದೇ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಾಕಿ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

    ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್​ರತ್ನ ಪುರಸ್ಕಾರಕ್ಕೆ ಈಗ ಹಾಕಿ ದಿಗ್ಗಜ ಧ್ಯಾನ್​ಚಂದ್ ಹೆಸರನ್ನು ಇಡಲಾಗಿದೆ. ಅಂದ್ರೆ, ಭಾರತದ ಅತಿ ದೊಡ್ಡ ಕ್ರೀಡಾ ಪ್ರಶಸ್ತಿ ಇನ್ಮುಂದೆ ಆಗಲಿದೆ ಮೇಜರ್ ಧ್ಯಾನ್​ಚಂದ್ ಖೇಲ್​ರತ್ನ ಅವಾರ್ಡ್. ಖುದ್ದು ಪ್ರಧಾನಿ ನರೇಂದ್ರ ಮೋದಿ, ಮೇಜರ್ ಧ್ಯಾನ್​​ಚಂದ್ ಖೇಲ್​​ರತ್ನ ಆವಾರ್ಡ್ ಮರುನಾಮಕರಣ ಬಗ್ಗೆ ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಮೋದಿ, ದೇಶಾದ್ಯಂತ ನಾಗರಿಕರಿಂದ ಖೇಲ್​ರತ್ನ ಪ್ರಶಸ್ತಿಗೆ ಧ್ಯಾನ್​ಚಂದ್​​ ಹೆಸರಿಡುವಂತೆ ಮನವಿಗಳು ಬರುತ್ತಿವೆ. ಜನರ ಈ ದೃಷ್ಟಿಕೋನಕ್ಕೆ ಅನಿಸಿಕೆಗಳಿಗೆ ಧನ್ಯವಾದಗಳು. ಜನರ ಭಾವನೆಗಳಿಗೆ ಗೌರವಕೊಟ್ಟು ಇನ್ಮುಂದೆ ಖೇಲ್​ರತ್ನ ಅವಾರ್ಡ್​ ಅನ್ನು ಮೇಜರ್ ಧ್ಯಾನ್​ಚಂದ್ ಖೇಲ್​ರತ್ನ ಪ್ರಶಸ್ತಿ ಎಂಬ ಹೆಸರಿನಿಂದ ಕರೆಯಲಾಗುವುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

    ಯಾವಾಗ ಸ್ವತಃ ಮೋದಿಯವರೇ ಖೇಲ್​​ರತ್ನ ಅವಾರ್ಡ್​ಗೆ ಹೊಸ ನಾಮಕರಣ ಮಾಡಿದರೋ, ಇಲ್ಲೀವರೆಗೂ ರಾಜೀವ್ ಗಾಂಧಿ ಖೇಲ್​ ರತ್ನ ಅವಾರ್ಡ್​ ಆಗಿ ಗುರುತಿಸಲ್ಪಟ್ಟಿದ್ದ ಈ ಉನ್ನತ ಕ್ರೀಡಾಗೌರವ ಇನ್ಮುಂದೆ ಹಾಕಿ ನಕ್ಷತ್ರ ಧ್ಯಾನ್ ಚಂದ್ ಹೆಸರಿನಲ್ಲಿ ನೀಡಲಾಗುತ್ತದೆ. ​ ಹಾಕಿ ಕ್ಷೇತ್ರದ ಸರ್ವಕಾಲಿಕ ಹೀರೋ, ಕ್ರೀಡಾ ಲೆಜೆಂಡ್ ಧ್ಯಾನ್​ಚಂದ್​​ ಹೆಸರನ್ನ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಇಟ್ಟಿರೋದು ಹಾಕಿ ಪ್ರಿಯರಲ್ಲಿ ಸಂಚಲನ ಮೂಡಿಸಿದೆ. ಹೊಸ ಹೆಸರು ಪ್ರಕಟಣೆ ಬೆನ್ನಲ್ಲೇ ಈ ಬಗ್ಗೆ ಟ್ವೀಟ್ ಮಾಡಿರೋ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಅನೇಕ ತಲೆಮಾರುಗಳಿಗೆ ಸ್ಫೂರ್ತಿ ಚಿಲುಮೆಯಾದ ಧ್ಯಾನ್​ಚಂದ್ ಹೆಸರನ್ನ ಖೇಲ್​ರತ್ನ ಪ್ರಶಸ್ತಿಗೆ ಇಟ್ಟಿರೋ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರದ ನಿರ್ಧಾರ ಹಾಕಿ ಆಟಗಾರರಿಗೂ ಖುಷಿ ತಂದಿದೆ. ಧ್ಯಾನ್​ಚಂದ್​ಗೆ ಗೌರವ ಸಲ್ಲಿಸಿದ್ದು ವಿಳಂಬವಾದರೂ, ಇದು ಅತ್ಯುತ್ತಮ ನಿರ್ಣಯ ಅಂತಾ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಅಜಿತ್​ಪಾಲ್ ಸಿಂಗ್ ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಕೈಗೊಂಡ ತೀರ್ಮಾನ ಅತ್ಯುತ್ತಮವಾಗಿದೆ. ಯಾವಾಗಲೂ ಕ್ರೀಡಾ ಪ್ರಶಸ್ತಿಗಳು ಕ್ರೀಡಾಪಟುಗಳ ಹೆಸರಿನಲ್ಲೇ ಇರಬೇಕು. ಇಂತಹುದರಲ್ಲಿ ಭಾರತದಲ್ಲಿ ಧ್ಯಾನ್​ಚಂದ್​​ಗಿಂತ ದೊಡ್ಡ ಕ್ರೀಡಾಪಟು ಇಡೀ ದೇಶದಲ್ಲಿ ಇರಲಿಕ್ಕೆ ಸಾಧ್ಯವಿಲ್ಲ ಎಂದು ಸಿಂಗ್ ಪ್ರಶಂಸೆ ವ್ಯಕ್ತಪೊಡಿಸಿದ್ದಾರೆ.

    ಒಲಿಂಪಿಕ್ಸ್​​​ ಕಂಚಿನ ವಿಜೇತ ಬಾಕ್ಸರ್ ವಿಜಯೇಂದ್ರ ಸಿಂಗ್ ಕೂಡ ಧ್ಯಾನ್​ಚಂದ್​ ಸ್ಮರಣಾರ್ಥ ಅರ್ಪಿಸಿದ ಗೌರವ ಉತ್ತಮ ನಡೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆದ್ರೆ, ಶ್ರೇಷ್ಠ ಕ್ರೀಡಾಪಟು ಧ್ಯಾನ್​ಚಂದ್​ಗೆ ಇನ್ನೂ ಹೆಚ್ಚಿನ ಗೌರವ ಸಲ್ಲಬೇಕು. ಹಾಗೆಯೇ ಸರ್ಕಾರ, ಬೇಸಿಕ್ ಲೆವೆಲ್​​ನಲ್ಲಿ ಕ್ರೀಡಾ ಸೌಲಭ್ಯಗಳನ್ನ ಹೆಚ್ಚಿಸೋ ತನಕ, ಇಂಥಹ ಕ್ರಮಗಳು ಹೆಚ್ಚಿನ ವ್ಯತ್ಯಾಸವನ್ನೇನು ತರಲ್ಲ ಎಂದು ಸಿಂಗ್ ಅಭಿ ಪ್ರಾಯಪಟ್ಟರು. ಒಟ್ಟಾರೆ, ಭಾರತದಲ್ಲಿನ ಅತ್ಯಂತ ಶ್ರೇಷ್ಠ ಹಾಕಿ ಆಟಗಾರ ಧ್ಯಾನ್​ಚಂದ್​ಗೆ ಭಾರತ ಸರ್ಕಾರ ಕಡೆಗೂ ದೊಡ್ಡ ಮಟ್ಟದ ಗೌರವಾರ್ಪಣೆ ಮಾಡಿದೆ. ಈ ಹಿಂದೆಯೇ ಧ್ಯಾನ್​ಚಂದ್​ಗೆ ಭಾರತ ರತ್ನ ಪ್ರಶಸ್ತಿ ನೀಡೋ ಬಗ್ಗೆ ದೇಶಾದ್ಯಂತ ಆಗ್ರಹ ಕೇಳಿಬಂದಿತ್ತು. ಆದ್ರೆ, ಅತ್ಯುನ್ನತ ಪ್ರಶಸ್ತಿ ಧ್ಯಾನ್​ಚಂದ್​ಗೆ ಅನೌನ್ಸ್ ಆಗದಿದ್ರೂ, ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಧ್ಯಾನ್​ಚಂದ್ ಹೆಸರನ್ನಿಡೋ ಮೂಲಕ ಮೋದಿ ಸರ್ಕಾರ ಹಾಕಿ ಸಾಮ್ರಾಟನಿಗೆ ನಮನ ಸಲ್ಲಿಸಿದೆ.

    ಧ್ಯಾನ್​ಚಂದ್​ ಮ್ಯಾಜಿಕ್ ಹೇಗಿತ್ತು?
    ಭಾರತಕ್ಕೆ ಒಲಿಂಪಿಕ್ಸ್ ಸ್ವರ್ಣ ಪರ್ವಕ್ಕೆ ಮುನ್ನುಡಿ ಬರೆದಿದ್ದೇ ಧ್ಯಾನ್​ಚಂದ್. ಸೇನೆಯಲ್ಲಿ ಸಿಪಾಯಿಯಾಗಿದ್ದ ಧ್ಯಾನ್​ಚಂದ್, ತಮ್ಮ ಹಾಕಿ ಮ್ಯಾಜಿಕ್​ನಿಂದ ಇಡೀ ಜಗತ್ತೇ ಅವರ ಧ್ಯಾನ ಮಾಡುವಂತೆ ಮಾಡಿಬಿಟ್ಟರು. ಆಗಿನ ಕಠೋರ ಹೃದಯಿ ಹಿಟ್ಲರ್​ರಂತವರೇ ಧ್ಯಾನ್ ಆಟಕ್ಕೆ ಮನಸೋತು ನಮ್ಮ ದೇಶಕ್ಕೆ ಬನ್ಬಿಡಿ, ದೊಡ್ಡ ಹುದ್ದೆ ಕೊಡ್ತೀನಿ ಅಂತಾ ಆಫರ್ ಕೊಟ್ಟರು. ಹಾಗೆಯೇ ರಾಜೀವ್ ಗಾಂಧಿ ಹೆಸರು ಬದಲಿಸಲು ಮೋದಿ ಮುಂದಾಗಿದ್ದೇಕೆ ಅಂತಾ ನೋಡಿದ್ರೆ ಕಾಣಸಿಗುತ್ತಿವೆ ರೋಚಕ ಸಂಗತಿಗಳು.

    ಭಾರತೀಯ ಹಾಕಿರಂಗದಲ್ಲಿ ಸ್ವರ್ಣ ಅಧ್ಯಾಯ!
    ಮೇಜರ್ ಧ್ಯಾನ್ ಚಂದ್. ಈ ಹೆಸರು ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಾಕಿರಂಗದಲ್ಲೇ ಅಜರಾಮರ. ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆಯೂ ಇಡೀ ಜಗತ್ತೇ ಇವರತ್ತ ತಿರುಗಿನೋಡುವಂತೆ ಮಾಡಿದ ಮೇರು ಕ್ರೀಡಾಪಟು ಧ್ಯಾನ್​ಚಂದ್. 1905ರ ಆಗಸ್ಟ್ 29ರಂದು ಜನಿಸಿದ ಧ್ಯಾನ್​ಚಂದ್​​ಗೆ, ಚಿಕ್ಕ ವಯಸ್ಸಿನಿಂದಲೂ ಹಾಕಿಯತ್ತ ಧ್ಯಾನ. ಸಿಪಾಯಿಯಾಗಿ ಬ್ರಿಟಿಷ್ ಸೇನೆ ಸೇರಿದ ಧ್ಯಾನ್​ಚಂದ್, ಶೌರ್ಯದ ಜತೆಗೆ ಮೆರೆದಿದ್ದು ಕ್ರೀಡಾ ಸಾಧನೆ. ಅಪ್ರತಿಮ ಹಾಕಿ ಕೌಶಲ್ಯದಿಂದ ಭಾರತ ಹಾಕಿ ತಂಡಕ್ಕೆ ಆಯ್ಕೆಯಾದ ಸೈನಿಕ ಧ್ಯಾನ್​ಚಂದ್, ಹಾಕಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಚೆಂಡಿನ ಮೇಲೆ ಸಂಪುರ್ಣ ನಿಯಂತ್ರಣ ಹೊಂದಿರುತ್ತಿದ್ದ ಧ್ಯಾನ್​ಚಂದ್ ಮುಂದಿನ ದಿನಗಳಲ್ಲಿ ಭಾರತದ ಯಶಸ್ಸಿನ ಹಿಂದಿನ ದೈತ್ಯಶಕ್ತಿಯಾದರು. ಆನಂತರ ಬ್ರಿಟಿಷ್ ಭಾರತದ ಸೇನೆಯಲ್ಲೂ ಮೇಜರ್ ಆಗಿ ಕಾರ್ಯನಿರ್ವಹಿಸಿದರು.

    ಅತ್ಯದ್ಭುತ ಹಾಕಿ ಆಟಗಾರರಾಗಿದ್ದ ಧ್ಯಾನ್​ಚಂದ್ 1928, 1932 ಹಾಗೂ 1936 ಹೀಗೆ ಮೂರು ಒಲಿಂಪಿಕ್ಸ್​ಗಳಲ್ಲಿ ಭಾರತಕ್ಕೆ ಹಾಕಿಯಲ್ಲಿ ಚಿನ್ನದ ಪದಕ ಬಾಚಿಕೊಟ್ಟರು. ಫೀಲ್ಡ್ ಹಾಕಿಯಲ್ಲಿ ಭಾರತವನ್ನ ಮಣಿಸೋದಿರಲಿ, ಇಂಡಿಯಾ ವಿರುದ್ಧ ಗೋಲು​​​​ ಗಳಿಸೋದೇ ಎದುರಾಳಿಗಳಿಗೆ ಸಾಹಸ ಎಂಬುವಷ್ಟರ ಮಟ್ಟಿಗೆ ದೇಶದ ಹಾಕಿ ತಂಡಕ್ಕೆ ಆಧಾರವಾಗಿದ್ದರು ಧ್ಯಾನ್​ಚಂದ್. ಇವರು ಒಮ್ಮೆ ಮೈದಾನಕ್ಕೆ ಎಂಟ್ರಿ ಕೊಟ್ರೆ ಎದುರಾಳಿ ಟೀಂನಲ್ಲಿ ಢವಢವ. ದಿ ವಿಜರ್ಡ್​ ಅಥವಾ ಮ್ಯಾಜಿಷಿಯನ್ ಅಂತಾನೇ ಖ್ಯಾತಿಯಾಗಿದ್ದ ಧ್ಯಾನ್​ಚಂದ್​ಗೆ 1926ರಿಂದ 1949 ರವರೆಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನ ಅವಿಭಜಿತ ಭಾರತ ತಂಡದ ಪರ ಆಡಿದ್ದಾರೆ.

    185 ಪಂದ್ಯಗಳಲ್ಲಿ ಧ್ಯಾನ್​ಚಂದ್ ಬಾರಿಸಿದ ಗೋಲ್​ಗಳ ಸಂಖ್ಯೆ 570. ಸತತ ಮೂರು ಒಲಿಂಪಿಕ್ಸ್​ ಚಿನ್ನವಲ್ಲದೇ, ಧ್ಯಾನ್ ಚಂದ್ ಹಾಕಿ ಕೊಟ್ಟ ಮೇಲ್ಪಂಕ್ತಿ, ಸ್ಫೂರ್ತಿಯಿಂದ ಭಾರತ 1928ರಿಂದ 1964ರವರೆಗಿನ 8 ಒಲಿಂಪಿಕ್ಸ್​​ಗಳಲ್ಲಿ ಏಳು ಚಿನ್ನದ ಪದಕ ಗೆಲ್ಲುವ ಮಟ್ಟಿಗೆ ಸಾಧನೆ ಮೆರೆಯಿತು. ಇನ್ನ, ಆ ಕಾಲದಲ್ಲೇ ಧ್ಯಾನ್​ಚಂದ್ ಎಷ್ಟು ವಿಶ್ವ ಪ್ರಸಿದ್ಧರಾಗಿದ್ದರೆಂದ್ರೆ, ನಮ್ಮ ದೇಶಕ್ಕೆ ಬಂದ್ರೆ ದೊಡ್ಡ ಹುದ್ದೆ ಕೊಡೋದಾಗಿ ಖುದ್ದು ಹಿಟ್ಲರ್ ಆಫರ್ ಕೊಡೋ ಮಟ್ಟಿಗೆ ಇತ್ತು ಧ್ಯಾನ್​ಚಂದ್ ಹವಾ. ಧ್ಯಾನ್​ಚಂದ್​ ಅಪ್ರತಿಮ ಕ್ರೀಡಾ ಸಾಧನೆ ಗುರುತಿಸಿದ ಭಾರತ ಸರ್ಕಾರ 1956ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದಕ್ಕಿಂತ ಹೆಚ್ಚಾಗಿ ಹಾಕಿ ಮಾಂತ್ರಿಕ ಧ್ಯಾನ್​ಚಂದ್​ ಜನ್ಮದಿನ ಆಗಸ್ಟ್​ 29 ಅನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ.

    ಇದೇ ದಿನ ಕ್ರೀಡಾ ಕ್ಷೇತ್ರದ ಸಾಧಕರಿಗೆ ಅರ್ಜುನ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿ, ಪುರಸ್ಕಾರಗಳನ್ನ ರಾಷ್ಟ್ರಪತಿಗಳೇ ಪ್ರದಾನ ಮಾಡುತ್ತಾರೆ. ಇದಲ್ಲದೆ, 2002ರಿಂದ ಕ್ರೀಡಾ ಕ್ಷೇತ್ರದ ಜೀವಮಾನ ಸಾಧನೆಗಾಗಿ ಧ್ಯಾನ್​ಚಂದ್ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಇನ್ನ, ನವದೆಹಲಿಯಲ್ಲಿನ ನ್ಯಾಷನಲ್ ಸ್ಟೇಡಿಯಂಗೆ 2002ರಲ್ಲಿ ಧ್ಯಾನ್​ಚಂದ್ ನ್ಯಾಷನಲ್ ಸ್ಟೇಡಿಯಂ ಅಂತಾ ಮರುನಾಮಕಾರಣ ಮಾಡಲಾಗಿದೆ.

    ಇದೀಗ ಧ್ಯಾನ್​ಚಂದ್​ ಹೆಸರನ್ನ ಖೇಲ್​ರತ್ನ ಪ್ರಶಸ್ತಿಗೆ ನಾಮಕರಣ ಮೂಲಕ ಮೋದಿ ಸರ್ಕಾರ, ಹಾಕಿ ದಿಗ್ಗಜನಿಗೆ ಗೌರವ ಅರ್ಪಿಸಿದೆ. ಈ ಮುಖಾಂತರ ಇಲ್ಲೀವರೆಗೂ ಈ ಪ್ರಶಸ್ತಿಗಿದ್ದ ರಾಜೀವ್ ಗಾಂಧಿ ಖೇಲ್​ರತ್ನ ಹೆಸರು ಬದಲಾಗಿದೆ. ಅಷ್ಟಕ್ಕೂ ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿ ಪ್ರದಾನ ಶುರುವಾಗಿದ್ದು 1990ರ ದಶಕದ ಆರಂಭದಲ್ಲಿ. ಆಗಿನ ಕಾಲದಲ್ಲಿ ಎಲ್ಲದಕ್ಕೂ ರಾಜಕಾರಣಿಗಳ ಹೆಸರನ್ನ. ಅದರಲ್ಲೂ ನೆಹರೂ-ಗಾಂದಿ ಕುಟುಂಬಸ್ಥರ ಹೆಸರು ನಾಮಕರಣ ಸರ್ವೇ ಸಾಮಾನ್ಯವೆನಿಸಿತ್ತು. ಹಾಗೆಯೇ ದೇಶದಲ್ಲಿ ಅತ್ಯುನ್ನತ ಸಾಧನೆಗೈದ ಕ್ರೀಡಾ ಪಟುಗಳಿಗೆ ನೀಡೋ ಪುರಸ್ಕಾರಕ್ಕೆ ಎಲ್​​ಟಿಟಿಇ ಉಗ್ರರ ಆತ್ಮಹತ್ಯಾ ದಾಳಿಗೆ ಬಲಿಯಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರನ್ನ ಇಡಲಾಗಿತ್ತು.

    1991ರಲ್ಲಿ ಈ ಪ್ರಶಸ್ತಿಗೆ ಭಾಜನರಾದ ಮೊದಲ ಕ್ರೀಡಾಪಟು ವಿಶ್ವವಿಖ್ಯಾತ ಚೆಸ್ ಪಟು ವಿಶ್ವನಾಥನ್ ಆನಂದ್. ಹಾಗೆಯೇ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬ್ಯಾಡ್ಮಿಂಟನ್​​ನ ಗೋಪಿಚಂದ್, ಪಿವಿ ಸಿಂಧೂ, ಟೆನಿಸ್​ನ ಲಿಯಾಂಡರ್ ಪೇಸ್, ಹಾಕಿಯ ಧನ್​ರಾಜ್ ಪಿಳ್ಳೈ, ಬಾಕ್ಸರ್ ಮೇರಿ ಕೋಂ,ವಿಜಯೇಂದ್ರ ಸಿಂಗ್, ವೇಟ್ ಲಿಫ್ಟರ್​​ ಕುಂಜೂರಾಣಿ, ಕರ್ಣಂ ಮಲ್ಲೇಶ್ವರಿ, ಮುಂತಾದ 40ಕ್ಕೂ ಹೆಚ್ಚು ಶ್ರೇಷ್ಠ ಕ್ರೀಡಾಳುಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೊದಲು ವರ್ಷಕ್ಕೆ ಒಬ್ಬರಿಗೆ ಎಂಬಂತಿದ್ದ ಈ ಪ್ರಶಸ್ತಿ, ಆ ಬಳಿಕ ವರ್ಷಕ್ಕೆ 2ರಿಂದ 5ರ ತನಕ ಕ್ರೀಡಾ ಸಾಧಕರಿಗೆ ನೀಡಲಾಗಿದೆ.

    ಸರಿಸುಮಾರು 40 ವರ್ಷಗಳ ಬಳಿಕ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರದ ಹೆಸರು ಬದಲಾಗಿದೆ. ಇಲ್ಲೀತನಕ ರಾಜಕಾರಣಿ ಹೆಸರಿನಲ್ಲಿದ್ದ ಕ್ರೀಡಾ ಕ್ಷೇತ್ರದ ಪುರಸ್ಕಾರಕ್ಕೆ ಇದೀಗ ದೇಶ ಕಂಡ ಉನ್ನತ ಕ್ರೀಡಾಪಟು ಮೇಜರ್ ಧ್ಯಾನ್​ಚಂದ್​ ಹೆಸರು ಬಂದಿದೆ. ಈ ಮುಖಾಂತರ ಕ್ರೀಡಾ ಕ್ಷೇತ್ರದ ಪ್ರಶಸ್ತಿಗೆ ಕ್ರೀಡಾಪಟುವ ಹೆಸರನ್ನಿಡೋ ಮೂಲಕ ಮೋದಿ ಸರ್ಕಾರ, ಹೊಸ ಹೆಜ್ಜೆ ಮುಂದಿಟ್ಟಿದೆ. ಮೋದಿ ಕ್ರಮಕ್ಕೆ ಧ್ಯಾನ್ ಚಂದ್ ಕುಟುಂಬ ಕೊಟ್ಟ ರಿಯಾಕ್ಷನ್ ನೋಡಿದ್ರೆ ಅಬ್ಬಾ ಅನಿಸದೇ ಇರದು

    ಕ್ರೀಡೆಯಿಂದ ರಾಜಕಾರಣವನ್ನ ಹೊರತಗೆಯೋದಕ್ಕೆ ಮೋದಿ ಪ್ಲಾನ್ ಮಾಡಿದರ ಫಲವೇ ರಾಜೀವ್ ಗಾಂಧಿ ಇದ್ದ ಹೆಸರು ಧ್ಯಾನ್​ಚಂದ್ ಅಂತಾ ಆಗಿದೆ. ಆದ್ರೆ ಪ್ರತಿಪಕ್ಷಗಳು ಮಾತ್ರ ಮತ್ತೆ ಕ್ರೀಡೆಯಲ್ಲಿ ರಾಜಕಾರಣ ಬೆರಸೋದನ್ನ ಬಿಡುವಂತೆ ಕಾಣ್ತಿಲ್ಲ. ಯಾವಾಗ ರಾಜೀವ್ ಗಾಂಧಿ ಹೆಸರು ಖೇಲ್​ರತ್ನ ಪ್ರಶಸ್ತಿ ಫಲಕದಿಂದ ಔಟ್ ಆಯ್ತೋ..ಕಾಂಗ್ರಸ್ ಪೆನಾಲ್ಟಿ ಶೂಟ್ ಗೆ ಮುಂದಾಗಿದೆ. ದೇಶದಲ್ಲಿ ರಾಜಕೀಯದಲ್ಲಿ ಕ್ರೀಡೆ ಬೆರೆಯುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಕ್ರೀಡೆಯಲ್ಲಂತೂ ರಾಜಕಾರಣ ನುಸುಳೋದು ಹೊಸದೇನಲ್ಲ. ಆಗಿನ ಕಾಲದಿಂದಲೂ ಸ್ಪೋರ್ಟ್ಸ್​​ನಲ್ಲಿ ಪೊಲಿಟಿಕ್ಸ್ ಎಂಟ್ರಿ ಇದ್ದೇ ಇದೆ. ಈ ಹಿಂದೆ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರಕ್ಕೆ ಇಟ್ಟಿದ್ದು ಯಾವುದೇ ಕ್ರೀಡಾಪಟು ಹೆಸರನ್ನಲ್ಲ. ಬದಲಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರನ್ನ. ಇದೀಗ ದೇಶದ ನಂಬರ್ ಒನ್ ಕ್ರೀಡಾ ಪುರಸ್ಕಾರದ ಹೆಸರನ್ನ ಮೋದಿ ಬದಲಿಸಿದ ಕ್ರಮ ಮತ್ತದೇ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿದೆ.

    ಇಲ್ಲೂ ಎಂಥಾ ವಿಪರ್ಯಾಸ ನೋಡಿ, ಖೇಲ್​ರತ್ನ ಪ್ರಶಸ್ತಿಗೆ ಧ್ಯಾನ್​ಚಂದ್​ ಹೆಸರಿಟ್ಟ ಕ್ರಮವನ್ನ ಕ್ರೀಡಾವಲಯ ಸ್ವಾಗತಿಸಿದ್ರೆ, ರಾಜಕೀಯ ವಲಯದಲ್ಲಿ ಮಿಕ್ಸಡ್ ರಿಯಾಕ್ಷನ್ ವ್ಯಕ್ತವಾಗಿದೆ. ಮೋದಿ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿರೋ ಧ್ಯಾನ್​ಚಂದ್ ಪುತ್ರ ಅಶೋಕ್ ಕುಮಾರ್, ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾಪಟುಗಳ ಹೆಸರನ್ನೇ ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರವನ್ನ ಆಗ್ರಹಿಸಿದ್ದಾರೆ. ಹಾಕಿ ತಂಡದ ಮಾಜಿ ನಾಯಕ ಮನ್​ಪ್ರೀತ್ ಸಿಂಗ್ ಕೂಡ ಕೇಂದ್ರದ ಕ್ರಮವನ್ನ ಮೆಚ್ಚಿದ್ದಾರೆ. ರಾಜೀವ್ ಗಾಂಧಿ ಹೆಸರನ್ನ ಬದಲಿಸಿದ ಮೋದಿ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್, ಟಿಎಂಸಿ, ಶಿವಸೇನೆ ಸೇರಿದಂತೆ ವಿವಿಧ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದೊಂದು ರಾಜಕೀಯ ಸೇಡಿನ ಕ್ರಮ ಎಂದು ವಾಗ್ದಾಳಿ ನಡೆಸಿರೋ ಕೈಪಕ್ಷ, ರಾಷ್ಟ್ರೀಯ ಪ್ರಶಸ್ತಿಗಳನ್ನ ಬಿಜೆಪಿ ಕೇಸರೀಕರಣ ಗೊಳಿಸುತ್ತಿದೆ ಎಂದು ಕಿಡಿಕಾರಿದೆ.

    ಜತೆಗೆ ಮೋದಿ ಹೆಸರಿನಲ್ಲಿರೋ ಸ್ಟೇಡಿಯಂಗೆ ಧ್ಯಾನ್​ಚಂದ್ ಹೆಸರಿಟ್ಟರೆ ಸೂಕ್ತ ಎಂದು ಪ್ರತಿಪಕ್ಷ ನಾಯಕರು ಕುಟುಕಿದ್ದಾರೆ. ಹುತಾತ್ಮ ರಾಜೀವ್ ಗಾಂಧಿ ಹೆಸರನ್ನ ಬದಲಿಸಿದ್ದು ಡರ್ಟಿ ಟ್ರಿಕ್ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುಖೇಂದು ಶೇಖರ್ ರೇ ಟೀಕಿಸಿದ್ದಾರೆ. ಹೆಸರು ಬದಲಾವಣೆ ಕ್ರಮವನ್ನ ಬಿಜೆಪಿ ಸಮರ್ಥಿಸಿಕೊಂಡಿದೆ. ಇದರ ಜತೆಗೇ ರಾಜೀವ್ ಗಾಂಧಿ ಹೆಸರನ್ನ ಬದಲಿಸಿದ ಬೆನ್ನಲ್ಲೇ ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿರೋ 19ಕ್ಕೂ ಹೆಚ್ಚು ಸ್ಟೇಡಿಯಂಗಳ ಹೆಸರನ್ನ ಕೂಡ ಬದಲಿಸಬೇಕೆಂಬ ಕೂಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಮೋದಿ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ರೆ, ಕಾಂಗ್ರೆಸ್ ವಿರುದ್ಧ ನೆಟ್ಟಿಗರು ಕೆಂಡಕಾರಿದ್ದಾರೆ.

    ಕ್ರೀಡಾಕ್ಷೇತ್ರದಿಂದ ರಾಜಕೀಯ ದೂರವಿಡಬೇಕಾದ ಟೈಂನಲ್ಲಿ, ಪ್ರಧಾನಿ ಮೋದಿ ಕ್ರೀಡಾಪಟುಗಳ ಹೆಸರನ್ನ ಸ್ಮರಿಸೋ ಕಾರ್ಯ ಮಾಡಿದ್ದಾರೆ. ಧ್ಯಾನ್ ಚಂದ್ ಮರೆಯಾಗಿ 41 ವರ್ಷಗಳೇ ಕಳೆದರೂ, ಅವರ ಕ್ರೀಡಾಸಾಧನೆ ಹಸಿರಾಗೇ ಉಳಿದಿದೆ.. ಇಂತಹ ಸಂದರ್ಭ ದಲ್ಲಿ ದೇಶದ ಉನ್ನತ ಕ್ರೀಡಾ ಪುರಸ್ಕಾರಕ್ಕೆ ಧ್ಯಾನ್ ಚಂದ್ ಹೆಸರನ್ನ ನಾಮಕರಣ ಮೂಲಕ ಹಾಕಿ ಸವ್ಯಸಾಚಿಯ ಹೆಸರು ಚಿರಸ್ಥಾಯಿ ಗೊಳಿಸೋ ನಿಟ್ಟಿನಲ್ಲಿ ಮೋದಿ ಸರ್ಕಾರ ಮುಂದಡಿ ಇಟ್ಟಿದೆ. ಭಾರತೀಯರ ಹೃದಯದಲ್ಲಿ ಶಾಶ್ವತ ಸ್ಥಾನಗಳಿಸಿರೋ ಧ್ಯಾನ್​ಚಂದ್ ಗೆ ಸ್ವಲ್ಪ ಮಟ್ಟಿನ ನ್ಯಾಯವಂತೂ ಸಿಕ್ಕಿದೆ. ಕ್ರೀಡೆ ರಾಜಕೀಯದ ಗೋಲ್ ಆಗದಂತಿದ್ರೆ ಸಾಕು.!

    ಮೋದಿ ಇಲ್ಲಿ ಒಂದೇ ಏಟಿಗೆ ಮೂರು ಹಕ್ಕಿ ಹೊಡೆದಿದ್ದಾರೆ. ಕ್ರೀಡಾ ಕ್ಷೇತ್ರದ ಪ್ರಶಸ್ತಿಗೆ ಕ್ರೀಡಾಪಟುವಿನ ಹೆಸರಿಡೋ ಮೂಲಕ ಪ್ರಶಸ್ತಿ ತೂಕ ಹೆಚ್ಚಿಸಿದ್ದಾರೆ. ಇದರ ಜತೆಗೆ ಕ್ರೀಡಾ ಕ್ಷೇತ್ರಕ್ಕೆ ರಾಜಕಾರಣ, ರಾಜಕಾರಣಿ ಹೆಸರು ಸಲ್ಲ ಅನ್ನೋ ಸಂದೇಶವನ್ನ ಮೋದಿ ರವಾನಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್​​ನಲ್ಲಿ ಮಹಿಳಾ ಹಾಘೂ ಪುರುಷ ಹಾಕಿ ಟೀಂಗಳು ಸಾಧನೆ ತೋರಿದ ಬೆನ್ನಲ್ಲೇ ಹಾಕಿ ದಿಗ್ಗಜನ ಹೆಸರನ್ನ ನಾಮಕರಣ ಮಾಡೋ ಮೂಲಕ ಆಟಗಾರರಿಗೆ ಗಿಫ್ಟ್ ಕೊಟ್ಟಿದ್ದಾರೆ. ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ ತುಂಬಿದ್ದಾರೆ.

    ಇತಿಹಾಸ ನಿರ್ಮಿಸಿದ ನೀರಜ್​ಗೆ ಬಹುಮಾನಗಳ ಸುರಿಮಳೆ… ಇಲ್ಲಿದೆ ಅದರ ಲಿಸ್ಟ್

    ನನ್ನ ನಗ್ನ, ಕಾಮಪ್ರಚೋದಕ ವಿಡಿಯೋ ನೋಡಿ ಶಿಲ್ಪಾ ಖುಷಿ ಪಟ್ಟಿದ್ರು: ತನಿಖೆಯಲ್ಲಿ ನಟಿಯ ಸ್ಫೋಟಕ ಹೇಳಿಕೆ

    ಅಂತಿಮ ಹಂತಕ್ಕೆ ಬಂದ ಕೂಡಲೇ ಬದಲಾಯ್ತ ನಿಮ್ಮ ವರಸೆ?! ಸುದೀಪ್​ ವಿರುದ್ಧ ಅರವಿಯಾ ಅಭಿಮಾನಿಗಳು ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts