More

    ರಾಜನಹಳ್ಳಿಯಲ್ಲಿ ಹೊರ ಬೀರಲಿಂಗೇಶ್ವರ ದೇಗುಲ ಉದ್ಘಾಟನೆ

    ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹೊರ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.

    ಎರಡು ದಿನಗಳ ಕಾಲ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಬೆಳಗ್ಗೆ 7 ಗಂಟೆಗೆ ಗಣಪತಿ ಪೂಜೆ, ಪುಣ್ಯಾಹವಾಚನ, ಮಹಾ ಸಂಕಲ್ಪ, ಸ್ಥಳಶುದ್ಧಿ, ಪಂಚಗವ್ಯ ಹೋಮ, ನವಗ್ರಹ ಹೋಮ ಸೇರಿ ಇತರೆ ಪೂಜೆಗಳನ್ನು ನಡೆಸಲಾಯಿತು.

    ಸಂಜೆ 5 ಗಂಟೆಗೆ ಗ್ರಾಮದ ಆಂಜನೇಯಸ್ವಾಮಿ, ಬೀರಲಿಂಗೇಶ್ವರ, ಜಿಗಳಿ ಬನ್ನಿಕೋಡು, ಭಾನುವಳ್ಳಿ, ಬೆಳ್ಳೂಡಿ, ಎಳೆಹೊಳೆ, ನಂದಿಗಾವಿ, ಉಕ್ಕಡಗಾತ್ರಿ, ಗುಡ್ಡದ ತುಮ್ಮಿನಕಟ್ಟೆ, ಕರೂರು, ಕಡೂರು, ಕಣವಿಸಿದ್ದಗೆರೆ, ಚೌಡನಾಯಕನಕೊಪ್ಪ ಗ್ರಾಮಗಳ ಬೀರಪ್ಪ ದೇವರ ಉತ್ಸವ ಮೂರ್ತಿಯನ್ನು ರಾಜನಹಳ್ಳಿ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬೀರಲಿಂಗೇಶ್ವರ ದೇಗುಲಕ್ಕೆ ಕರೆತರಲಾಯಿತು.

    ಸೋಮವಾರ ಬೆಳಗ್ಗೆ 6ಕ್ಕೆ ಪ್ರಾತಃಸೂಕ್ತ, ಬಿಂಬಶುದ್ಧಿ, ಪ್ರಾಣ ಪ್ರತಿಷ್ಠಾಪನಾ ತಯಾರಿ, ಅಕ್ಕಿ, ಕಾಯಿ, ಹಣ್ಣು, ಪಂಚಫಲ, ಕನ್ನಡಿ, ಎಳೆನೀರು, ದರ್ಶನ ಹಾಗೂ ಕಲಾವೃದ್ಧಿ ಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಪೂಜಾ ಕಾರ್ಯಗಳು ನಡೆದ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

    ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ, ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಬಿ.ಪಿ. ಹರೀಶ್, ಕಾಂಗ್ರೆಸ್ ಮುಖಂಡ ಎನ್.ಎಚ್. ಶ್ರೀನಿವಾಸ ನಂದಿಗಾವಿ, ಹನಗವಾಡಿ ಚಂದ್ರಶೇಖರ್ ಪೂಜಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts