More

    ಪಾಕಿಸ್ತಾನದ ರೈವಿಂದ್​​​ನಲ್ಲಿ ನಡೆದಿತ್ತು ಸುನ್ನಿ ಸಂಘಟನೆಯ ವಾರ್ಷಿಕ ಸಭೆ, ಆ ಸ್ಥಳ ಈಗ ಕರೊನಾ ಹಾಟ್​ಸ್ಫಾಟ್; ಬೆಚ್ಚಿಬೀಳಿಸುವಂತಿದೆ ಪಾಲ್ಗೊಂಡವರ ಸಂಖ್ಯೆ​

    ಇಸ್ಲಮಾಬಾದ್​: ಭಾರತದಲ್ಲಿ ದೆಹಲಿಯ ನಿಜಾಮುದ್ದೀನ್​ ಮರ್ಖಜ್​ ಕರೊನಾ ಹಾಟ್​ಸ್ಫಾಟ್​ ಆಗಿದೆ. ಕರೊನಾ ವೈರಸ್​ ಹರಡುತ್ತಿದ್ದ ಸಂದರ್ಭದಲ್ಲಿ, ದೆಹಲಿ ಸರ್ಕಾರ ಸೆಕ್ಷನ್​ 144 ಜಾರಿಗೊಳಿಸಿ, ಗುಂಪುಗೂಡುವುದಕ್ಕೆ ನಿರ್ಬಂಧ ವಿಧಿಸಿದ್ದರೂ ತಬ್ಲಿಘಿ ಜಮಾತ್​ ಧಾರ್ಮಿಕ ಸಮಾವೇಶ ನಡೆಸಿತ್ತು. ಅದರಲ್ಲಿ ದೇಶದ ಎಲ್ಲ ರಾಜ್ಯಗಳಿಂದ ಅಲ್ಲದೆ, ವಿದೇಶಗಳ ಮುಸ್ಲಿಮರೂ ಪಾಲ್ಗೊಂಡಿದ್ದರು.

    ಅದಾದ ಬಳಿಕ ನಡೆದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಸದ್ಯ ಭಾರತದಲ್ಲಿ ಇರುವ ಕರೊನಾ ರೋಗಿಗಳಲ್ಲಿ ಶೇ.30ರಷ್ಟು ಮಂದಿ ಆ ಸಭೆಯಲ್ಲಿ ಪಾಲ್ಗೊಂಡವರೇ ಇರುವುದು ದುರಂತ.

    ಹೀಗೆ ಕರೊನಾ ಪ್ರಸರಣದ ನಡುವೆಯೂ ಭಾರತದಲ್ಲಿ ಧಾರ್ಮಿಕ ಸಭೆ ನಡೆಸಿದ್ದ ತಬ್ಲಿಘಿ ಜಮಾತ್​ಗೆ ಪಾಕಿಸ್ತಾನದಿಂದಲೂ ಟೀಕೆ ವ್ಯಕ್ತವಾಗಿತ್ತು. ಸೋಂಕು ಗಂಭೀರ ಪ್ರಮಾಣದಲ್ಲಿ ಹರಡುತ್ತಿದ್ದರೂ ಧಾರ್ಮಿಕ ಸಮಾವೇಶ ಅಗತ್ಯವಿತ್ತಾ ಎಂದು ಪಾಕ್​ ಸರ್ಕಾರವೂ ವ್ಯಂಗ್ಯವಾಡಿತ್ತು. ಆದರೆ ಈಗ ಪಾಕಿಸ್ತಾನದಿಂದಲೂ ಒಂದು ಅಂಥದ್ದೇ ಘಟನೆ ವರದಿಯಾಗಿದೆ.

    ಪಾಕಿಸ್ತಾನದ ಪಂಜಾಬ್ ವಲಯದಲ್ಲಿರುವ ರೈವಿಂದ್​ ಮಾರ್ಖಜ್​ನಲ್ಲಿ ಮಾ.10ರಂದು ಸುನ್ನಿ ಸಂಘಟನೆಯೊಂದು ತನ್ನ ವಾರ್ಷಿಕ ಸಭೆಯನ್ನು ನಡೆಸಿದೆ. ಸ್ಥಳೀಯ ಸರ್ಕಾರದಿಂದ ಅನುಮತಿ ದೊರೆಯದಿದ್ದರೂ ಅದನ್ನು ಲೆಕ್ಕಿಸದೆ ಸಭೆ ನಡೆಸಲಾಗಿದೆ. ಈ ಸಮಯದಲ್ಲಿ ಕರೊನಾ ವೈರಸ್​ ಆಗಲೇ ಪಾಕಿಸ್ತಾನವನ್ನು ಪ್ರವೇಶಿಸಿತ್ತು. ಅಷ್ಟೇ ಅಲ್ಲ ಜಗತ್ತಿನಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದರು. 84 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

    ಸುನ್ನಿ ಸಂಘಟನೆ ಆಯೋಜಿಸಿದ್ದ ಈ ಸಭೆಯಲ್ಲಿ 40 ವಿವಿಧ ರಾಷ್ಟ್ರಗಳಿಂದ 3000 ಮುಸ್ಲಿಮರು ಪಾಲ್ಗೊಂಡಿದ್ದರು. ಒಟ್ಟಾರೆ ಎಲ್ಲ ಸೇರಿ 70,000-80,000 ಜನರು ಭಾಗವಹಿಸಿದ್ದ ಸಭೆ ಇದಾಗಿತ್ತು.

    ಬಳಿಕ ಕರೊನಾ ವೈರಸ್​ ಹೆಚ್ಚಾಗುತ್ತಿದ್ದ ಕಾರಣ ಪಾಕಿಸ್ತಾನ ಸರ್ಕಾರ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸಿತ್ತು. ಇದರಿಂದಾಗಿ ವಿವಿಧ ದೇಶಗಳಿಂದ ಆಗಮಿಸಿದ್ದ 3000ಕ್ಕೂ ಅಧಿಕ ಮಂದಿ ಪಾಕ್​ನಲ್ಲಿಯೇ ಉಳಿಯುವಂತಾಯಿತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಸಭೆಯಲ್ಲಿ ಪಾಲ್ಗೊಂಡ ಹಲವರಿಗೆ ಕರೊನಾ ವೈರಸ್​ ತಗುಲಿದ್ದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. 2 ಲಕ್ಷಕ್ಕೂ ಹೆಚ್ಚು ಮಂದಿ ವಾಸವಾಗಿರುವ ರೈವಿಂದ್​ ಮರ್ಖಜ್​ ಪ್ರದೇಶವನ್ನು ಸದ್ಯ ಸಂಪೂರ್ಣ ಬಂದ್​ ಮಾಡಲಾಗಿದೆ. ಇದೂ ಒಂದು ಕರೊನಾ ಹಾಟ್​ಸ್ಫಾಟ್​ ಎನಿಸಿಕೊಂಡಿದೆ.

    ರೈವಿಂದ್ ಮಾರ್ಖಜ್​ನ ಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಒಟ್ಟು 36 ಜಿಲ್ಲೆಗಳ 10,200 ಮಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಪಾಕಿಸ್ತಾನದಲ್ಲಿ ಇದುವರೆಗೆ 4196 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಅದರಲ್ಲಿ ಹೆಚ್ಚಿನ ಜನ ರೈವಿಂದ್​ ಮಾರ್ಖಜ್​ ಸಭೆಯಲ್ಲಿ ಪಾಲ್ಗೊಂಡವರೇ ಇದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts