More

    ಹೊನ್ನಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ದಾಖಲೆ ಮಳೆ

    ಚಾಮರಾಜನಗರ: ಜಿಲ್ಲಾದ್ಯಂತ ಗುರುವಾರ ರಾತ್ರಿ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 95 ಮಿ.ಮೀ. ಮಳೆಯಾಗುವ ಮೂಲಕ ದಾಖಲೆ ಬರೆದಿದೆ.

    ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಗಾಳಿ, ಗುಡುಗು ಹಾಗೂ ಮಿಂಚಿನೊಂದಿಗೆ ಪ್ರಾರಂಭವಾದ ಮಳೆ 30 ನಿಮಿಷಕ್ಕೂ ಹೆಚ್ಚು ಕಾಲ ಸುರಿದಿದೆ. ಜಿಲ್ಲಾ ಕೇಂದ್ರದಲ್ಲಿ 37.3 ಮಿ.ಮೀ., ಗುಂಡ್ಲುಪೇಟೆಯಲ್ಲಿ 23.4 ಮಿ.ಮೀ., ಕೊಳ್ಳೇಗಾಲದಲ್ಲಿ 19.6 ಮಿ.ಮೀ., ಯಳಂದೂರು 25.8 ಮಿ.ಮೀ. ಆಗಿದ್ದು, ಜಿಲ್ಲಾದ್ಯಂತ ಸರಾಸರಿ 24.7 ಮಿ.ಮೀ. ಮಳೆಯಾಗಿದೆ.

    ಅಂತೆಯೇ ಇರಸವಾಡಿಯಲ್ಲಿ 70 ಮಿ.ಮೀ, ಟಗರಪುರ, ಹೊಂಗನೂರಿನಲ್ಲಿ 58, ಮಸಣಪುರದಲ್ಲಿ 57, ಪುಣಜನೂರಿನಲ್ಲಿ 56, ಯರಗನಹಳ್ಳಿಯಲ್ಲಿ 50, ಗುಂಬಳ್ಳಿಯಲ್ಲಿ 46, ಯರಿಯೂರಿನಲ್ಲಿ 44 ಮಿ.ಮೀ ಮಳೆಯಾಗಿದೆ.

    ಮೇ ಆರಂಭದಲ್ಲಿ ಕಣ್ಣಾಮುಚ್ಚಾಲೆ ಆಟವಾಡಿ ರೈತರಿಗೆ ಆತಂಕ ಮೂಡಿಸಿದ್ದ ವರುಣ ಈಗ ಸಂತಸ ಮೂಡಿಸಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ಈ ತಿಂಗಳು 142.1ಮಿ.ಮೀ. ಮಳೆಯಾಗಬೇಕಿದೆ. 29ರವರೆಗೆ 133.8 ಮಳೆಯಾಗಿದ್ದು, ಇನ್ನೂ 3 ದಿನಗಳವರೆಗೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ರಭಸ ಗಾಳಿಗೆ ಹಾನಿ: ತಾಲೂಕಿನ ಹರದನಹಳ್ಳಿ ಹೋಬಳಿಯ ಭಾಗದಲ್ಲಿ ಗುರುವಾರ ಸುರಿದ ಗಾಳಿ ಸಹಿತ ಮಳೆಗೆ ಕೃಷಿ ಹೊಂಡಗಳು ತುಂಬಿದೆ. ವಿ.ಸಿ.ಹೊಸೂರು, ವೆಂಕಟಯ್ಯನಛತ್ರ, ಬಿಸಲವಾಡಿ ಸೇರಿ ಹಲವಾರು ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದೆ. 35ರಿಂದ 40ಕಿಮೀ ವೇಗದಲ್ಲಿ ಬೀಸಿದ ಗಾಳಿಗೆ ತೆಂಗಿನಮರ ಸೇರಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವು ಕಡೆ ಬಾಳೆ ಬೆಳೆಗೂ ಹಾನಿಯುಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts