More

    ಮಳೆ-ಗಾಳಿಗೆ ಮನೆ ಮೇಲೆ ಬಿದ್ದ ಮರ

    ಕನಕಗಿರಿ: ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನ ಗಾಳಿ ಸಹಿತ ಸುರಿದ ಮಳೆಗೆ ತಿಪ್ಪನಾಳ ಗ್ರಾಮದಲ್ಲಿ ಒಂದೂವರೆ ಶತಮಾನದಷ್ಟು ಹಳೆಯ ಬೇವಿನಮರದ ಅರ್ಧಭಾಗದಷ್ಟು ಕೊಂಬೆಗಳು ಅಂಗಡಿ, ಮನೆಗಳ ಮೇಲೆ ಮುರಿದು ಬಿದ್ದಿದ್ದು, ಗುರುವಾರ ತೆರವುಗೊಳಿಸಲಾಯಿತು.


    ಗ್ರಾಮದ ಮಧ್ಯಭಾಗದಲ್ಲಿರುವ ದುರ್ಗಾದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಬೃಹತ್ ಬೇವಿನಮರ ಬುಧವಾರ ಸಂಜೆ ಸುರಿದ ಗಾಳಿ-ಮಳೆಗೆ ಮರದ ಕೊಂಬೆಗಳು ಮುರಿದು ಮನೆ, ಅಂಗಡಿ ಮೇಲೆ ಬಿದ್ದಿದ್ದು, ಅಂಗಡಿಯಲ್ಲಿದ್ದ ವೃದ್ಧೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವು ಮನೆಗಳ ಹೆಂಚು ಮುರಿದಿವೆ.ಸ್ಥಳಕ್ಕೆ ತಹಸೀಲ್ದಾರ್ ಸಂಜಯ್ ಕಾಂಬ್ಳೆ, ಕಂದಾಯ ನೀರಿಕ್ಷಕ ಬಸ್ರುದ್ದೀನ್, ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಸೇರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಜೆಸ್ಕಾಂ ಸಿಬ್ಬಂದಿಯನ್ನು ಕರೆಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.

    ಇದನ್ನೂ ಓದಿ: ಮಳೆ, ಬೆಳೆಗಾಗಿ ಕೋಟಿ ಜಪ ಯಜ್ಞ

    ಮರದ ಕೊಂಬೆ ಉರುಳಿದ್ದರಿಂದ ಗೂಡಂಗಡಿ ನಜ್ಜುಗುಜ್ಜಾಗಿದ್ದು, ಹನುಮಂತಪ್ಪ ಗೌರಿಪುರ, ವೀರಭದ್ರಪ್ಪ ಹುಲಿಯಾಪುರ ಎಂಬುವರ ಮನೆಯ ಮೇಲ್ಛಾವಣಿಗೆ ಧಕ್ಕೆಯಾಗಿದೆ.ಮತ್ತೆ ಗಾಳಿ ಬೀಸಿದರೆ ಮರದ ಮತ್ತೊಂದು ಭಾಗ ಉರುಳುವ ಸಾಧ್ಯತೆಯಿದ್ದುದರಿಂದ ಸುತ್ತಲಿನವರನ್ನು ಸ್ಥಳಾಂತರಿಸಲಾಯಿತು.ಆಕ್ರೋಶದ ಬಳಿಕ ತೆರವು: ಬುಧವಾರ ತಡರಾತ್ರಿವರೆಗೂ ಗ್ರಾಮದಲ್ಲಿದ್ದುಕೊಂಡು ಭರವಸೆ ಹೇಳಿ ತೆರಳಿದ್ದ ಅಧಿಕಾರಿಗಳು ಗುರುವಾರ ಮಧ್ಯಾಹ್ನವಾದರೂ, ಕೊಂಬೆ ತೆರವಿಗೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ಅರಣ್ಯ ಇಲಾಖೆಯ ಸಿಬ್ಬಂದಿ, ಕಂದಾಯ ಇಲಾಖೆ, ಗ್ರಾಪಂ ಪಿಡಿಒ ಮರ ಕಟಾವು ಮಾಡುವವರನ್ನು ಕರೆಯಿಸಿ ಕೊಂಬೆಗಳನ್ನು ತೆರವುಗೊಳಿಸಿದರು.ಅರಣ್ಯ ರಕ್ಷಕ ಶಿವಕುಮಾರ ವಾಲಿ, ಹನುಮಂತಪ್ಪ, ಪಿಡಿಒ ಸಂಶೀರ್ ಅಲಿ, ಗ್ರಾಮ ಲೆಕ್ಕಾಧಿಕಾರಿ ಶಿವರಾಜ, ಕಂದಾಯ ನೀರಿಕ್ಷಕ ಬಸ್ರುದ್ದೀನ್ ಇತರರಿದ್ದರು.


    ದೇವರ ಗಿಡವಾಗಿದ್ದಕ್ಕೆ ಕಟಾವಿಗೆ ಹಿಂದೇಟು

    ಬುಧವಾರದಂದು ಮುರಿದು ಬಿದ್ದ ಮರದ ಕೊಂಬೆ ತೆರವು ಸಹಿತ ಉಳಿದ ಮರವನ್ನು ಕಡಿಯಲಿಕ್ಕೆ ಅಧಿಕಾರಿಗಳು ಗುರುವಾರ ಹರಸಾಹಸಪಟ್ಟಿದ್ದಾರೆ. ಗಿಡ ಕಡಿಯುವರೆಂದು ನಾಲ್ಕೈದು ತಂಡಗಳು ಬಂದಿದ್ದು, ದೇವಸ್ಥಾನ ಗಿಡವೆಂದ ಕೂಡಲೇ ಹಲವರು ಹಿಂದೇಟು ಹಾಕಿ ವಾಪಾಸ್ ತೆರಳಿದ್ದಾರೆ. ಕೊನೆಗೆ ಮತ್ತೊಂದು ತಂಡವನ್ನು ಕರೆಯಿಸಿ ಗ್ರಾಮಸ್ಥರೆದುರೇ ಅಧಿಕಾರಿಗಳು ಆ ತಂಡಕ್ಕೆ ವಿನಂತಿಸಿ ಗಿಡವನ್ನು ತೆರವುಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts