More

    ಮಳೆ ನಿಂತರೂ ನಿಲ್ಲದ ಪ್ರವಾಹ ಭೀತಿ

    ಹಾವೇರಿ: ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆ ಶನಿವಾರ ಸಂಪೂರ್ಣ ನಿಂತಿದೆ. ಆದರೆ, ನದಿಗಳಲ್ಲಿ ಪ್ರವಾಹ ಇನ್ನೂಮುಂದುವರಿದಿದ್ದು, 18 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

    ಕೆಲವು ಕೆರೆಗಳ ಒಡ್ಡು ಒಡೆದು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಜಿಲ್ಲೆಯಾದ್ಯಂತ 12 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 428 ಕುಟುಂಬಗಳ 1,497 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ 3 ದಿನಗಳಿಂದ ಮಳೆಗೆ ಜಿಲ್ಲೆಯಲ್ಲಿ 575 ಮನೆಗಳು ಬಿದ್ದಿವೆ. 2,653 ಹೆಕ್ಟೇರ್ ಕೃಷಿ ಬೆಳೆ ಹಾಗೂ 151 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 2,804 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

    ಜಿಲ್ಲೆಯ 18 ಗ್ರಾಮಗಳಿಗೆ ಹೋಗುವ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ರಟ್ಟಿಹಳ್ಳಿ-ಹಿರೇಮೊರಬ, ಸತಗಿಹಳ್ಳಿ-ಶಿರಗಂಬಿ, ತಿಪ್ಪಾಯಿಕೊಪ್ಪ-ಶಿಕಾರಿಪುರ, ರಟ್ಟಿಹಳ್ಳಿ-ಮಾಸೂರು, ಹಾವೇರಿಯಿಂದ-ಕಳಸೂರು, ರಾಣೆಬೆನ್ನೂರ ತಾಲೂಕಿನ ಚಿಕ್ಕಕುರವತ್ತಿ ಚಂದಾಪುರ, ಚಿಕ್ಕಮಾಗನೂರು ಹಿರೇಮಾಗನೂರು, ಕುಪ್ಪೇಲೂರು ಲಿಂಗದಹಳ್ಳಿ ನಡುವಿನ ಸಂಪರ್ಕ ಕಡಿತಗೊಂಡಿದೆ.

    ಹಿರೇಕೆರೂರ-ತಾವರಗಿ, ಸವಣೂರ ತಾಲೂಕಿನ ಹಳೇಹಲಸೂರು ಹರವಿ, ಹಾನಗಲ್ಲ ತಾಲೂಕಿನ ಯತ್ತಿನಹಳ್ಳಿ-ಕಿರವಾಡಿ, ಕಂಚಿನೆಗಳೂರ-ಬೆಳಗಾಲಪೇಟೆ, ಕುಂಟನಹೊಸಳ್ಳಿ-ಅಕ್ಕಿವಳ್ಳಿ, ಹರವಿ-ಕೂಡಲ, ಮಂತಗಿ-ಕ್ಯಾಸನೂರು, ಬಾಳಂಬೀಡ-ಹಿರೇಹುಲ್ಯಾಳ, ನಾಗನೂರ-ಕೂಡಲ ನಡುವಿನ ಸಂಪರ್ಕ ರಸ್ತೆಗಳು ಕಡಿತಗೊಂಡಿವೆ.

    ಗ್ರಾಮಗಳು ಜಲಾವೃತ

    ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ, ವರದಾ, ಧರ್ವ ಮತ್ತು ಕುಮದ್ವತಿ ನದಿಗಳಲ್ಲಿ ಪ್ರವಾಹ ಮುಂದುವರಿದಿದೆ. ಕುಮದ್ವತಿ ನದಿ ಉಕ್ಕೇರಿ ಹರಿಯುತ್ತಿದ್ದು, ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮ ಅರ್ಧದಷ್ಟು ಜಲಾವೃತವಾಗಿದೆ. ಅಲ್ಲಿಯ ಸುಮಾರು 200 ಮನೆಗಳು ಜಲಾವೃತಗೊಂಡು, ಮನೆಯೊಳಗೆ ನೀರು ನುಗ್ಗಿದೆ. ಗ್ರಾಮದ 300ಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತಿಪ್ಪಾಯಿಕೊಪ್ಪ, ಹಿರೇಮೊರಬ, ಹಿರೇಮಾದಾಪುರ ಗ್ರಾಮಗಳಲ್ಲೂ ಕುಮದ್ವತಿ ನದಿ ಅವಾಂತರ ಸೃಷ್ಟಿಸಿದೆ.

    ವರದಾ ನದಿಯಿಂದ ವರದಾಹಳ್ಳಿ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಹಿರೇಕೆರೂರು ತಾಲೂಕಿನ ಡಮ್ಮಳ್ಳಿ ಗ್ರಾಮದ ದೊಡ್ಡಕೆರೆ ಒಡೆದು ಹೊಲಗದ್ದೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ. ಸುಮಾರು 500ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಮುಳುಗಿದೆ. ಶಿಗ್ಗಾಂವಿ ತಾಲೂಕಿನ ಶ್ಯಾಬಳ ಕ್ಯಾಸನಕೆರೆ ಒಡ್ಡು ಒಡೆದು ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿವೆ.

    ತಿಂಗಳ ಹಿಂದಷ್ಟೇ ಬಿತ್ತನೆ ಮಾಡಿ ಬೆಳೆ ಮೇಲೇಳುತ್ತಿದ್ದ ಸಂದರ್ಭದಲ್ಲಿ ಹೊಲಗದ್ದೆಗಳು ಜಲಾವೃತಗೊಂಡು ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 2,653 ಹೆಕ್ಟೇರ್ ಕೃಷಿ ಬೆಳೆ ಹಾಗೂ 151 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿದಂತೆ 2,804 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ, ಶೇಂಗಾ, ಸೋಯಾಬೀನ್, ಹತ್ತಿ ಸೇರಿದಂತೆ ಜಿಲ್ಲೆಯ ಪ್ರಮುಖ ಬೆಳೆಗಳು ಮಳೆಯಿಂದ ಹಾನಿಯಾಗಿವೆ.

    3 ದಿನಗಳಲ್ಲಿ 575 ಮನೆ ಹಾನಿ

    3 ದಿನಗಳಲ್ಲಿ ಜಿಲ್ಲೆಯಲ್ಲಿ ಅನೇಕರು ಮನೆ ಕಳೆದುಕೊಂಡಿದ್ದಾರೆ. ಹಿಂದಿನ ಎರಡು ವರ್ಷ ನೆರೆಯಿಂದ ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಈ ಬಾರಿ ಜು. 22ರಿಂದ 24ರವರೆಗಿನ 3 ದಿನಗಳ ಅವಧಿಯಲ್ಲಿ 575 ಮನೆಗಳು ಬಿದ್ದಿವೆ. ಶುಕ್ರವಾರ ಒಂದೇ ದಿನ 477 ಮನೆಗಳಿಗೆ ಹಾನಿಯಾಗಿದೆ. ಶಿಗ್ಗಾಂವಿ ತಾಲೂಕಿನಲ್ಲಿ 132, ಹಾನಗಲ್ಲ 114, ಹಾವೇರಿ 35, ರಾಣೆಬೆನ್ನೂರ 14, ಬ್ಯಾಡಗಿ 60, ಹಿರೇಕೆರೂರ 15, ರಟ್ಟಿಹಳ್ಳಿ 93, ಸವಣೂರ ತಾಲೂಕಿನಲ್ಲಿ 14 ಮನೆಗಳಿಗೆ ಹಾನಿಯಾಗಿದೆ.

    12 ಪರಿಹಾರ ಕೇಂದ್ರ ಆರಂಭ

    ಜಿಲ್ಲೆಯಾದ್ಯಂತ 12 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ರಾಣೆಬೆನ್ನೂರ ತಾಲೂಕಿನ ಕುಪ್ಪೇಲೂರು, ಚಿಕ್ಕಮಾಗನೂರು, ಬ್ಯಾಡಗಿ ತಾಲೂಕಿನ ಮತ್ತೂರು, ಹಿರೇಕೆರೂರ ತಾಲೂಕಿನ ಹಂಸಬಾವಿ, ರಟ್ಟಿಹಳ್ಳಿ ತಾಲೂಕಿನ ಮಾಸೂರು, ಹಿರೇಮೊರಬ, ಮಾಳಗಿ, ತಿಪ್ಪಾಯಿಕೊಪ್ಪ, ಹಿರೇಮಾದಾಪುರ, ಶಿಗ್ಗಾಂವಿ ತಾಲೂಕಿನ ಶ್ಯಾಬಳ, ಹಾನಗಲ್ಲ ತಾಲೂಕಿನ ಚಿಕ್ಕೇರಿಹೊಸಳ್ಳಿ, ಹಿರೇಕಣಗಿ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಒಟ್ಟು 428 ಕುಟುಂಬಗಳ 1,497 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. 20 ಜಾನುವಾರುಗಳನ್ನು ರಕ್ಷಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts