More

    ಭತ್ತ ಬೆಳೆಗೆ ಮಳೆ ಕಾಟ, ಹಾನಿ ಆತಂಕದಲ್ಲಿ ರೈತರು

    -ಅವಿನ್ ಶೆಟ್ಟಿ, ಉಡುಪಿ
    ಈ ಬಾರಿ ಉತ್ತಮ ಮಳೆಯಾಗಿದ್ದು, ಹೀಗೆಯೇ ಮುಂದುವರಿದರೆ ಭತ್ತ ಬೆಳೆಗೆ ಹಾನಿಯಾಗುವ ಆತಂಕ ಎದುರಾಗಿದೆ. ಫಸಲಿಗೆ ಬಂದಿರುವ ಸಸಿಗಳು ಮಳೆಯಿಂದ ಕೊಳೆಯುವ ಆತಂಕ ಕಾಡುತ್ತಿದೆ.

    ತೆನೆ ಬಿಟ್ಟು ಕಾಯಿ ಕಟ್ಟುವ, ಗರ್ಭಾವಸ್ಥೆಯಲ್ಲಿರುವ ಭತ್ತದ ಫಸಲಿಗೆ ಈಗಿನ ಮಳೆ ಮಾರಕ ಎಂಬುದು ಕೃಷಿಕರು ಅಭಿಪ್ರಾಯ. ನಾಟಿ ಕಾರ್ಯವಾಗಿ ಎರಡೂವರೆ, ಮೂರು ತಿಂಗಳು ಕಳೆದಿರುವ ಭತ್ತದ ಬೆಳೆಗೆ ಈಗಿನ ಮಳೆ ಸಮಸ್ಯೆಯಾಗಲಿದೆ.

    ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆಯಿಂದ ಇಳುವರಿ ಕಡಿಮೆಯಾಗುವ ಭೀತಿ ಶುರುವಾಗಿದೆ. ಜೂನ್ ಆರಂಭದಲ್ಲಿ ನಾಟಿ ಮಾಡಿರುವ ರೈತರು (ಎಂಒ-4 ತಳಿ 110 ರಿಂದ 120 ದಿನ ಕಟಾವು ಸಮಯ) ತೊಂದರೆ ಅನುಭವಿಸುವಂತಾಗಿದೆ.

    ಜಿಲ್ಲೆಯಲ್ಲಿ ಸದ್ಯ ಕಟಾವಿಗೆ ಬರುವ ನೂರಾರು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಇಳುವರಿ, ಭತ್ತದ ತೂಕ ಕಡಿಮೆಯಾಗಿ ನಿರೀಕ್ಷೆ ಮಾಡಿರುವಷ್ಟು ಫಸಲು ಕೈಸೇರುವುದು ಅನುಮಾನ.

    35,756 ಹೆಕ್ಟೇರ್ ಭತ್ತ ಕೃಷಿ
    ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರಿಗೆ ಕೃಷಿ ಇಲಾಖೆ 36 ಸಾವಿರ ಹೆಕ್ಟೇರ್ ಗುರಿ ಇಟ್ಟುಕೊಂಡಿದ್ದು, 35,756 ಹೆಕ್ಟೇರ್ ಭತ್ತ ಕೃಷಿ ಮಾಡಲಾಗಿದೆ. ಎಂಒ-4, ಜ್ಯೋತಿ, ಜಯ ಸಹಿತ ಕರಾವಳಿಯ ಮಣ್ಣಿಗೆ ಪೂರಕವಾಗುವ ತಳಿ ನಾಟಿ ಮಾಡಿರುವ ರೈತರ ಮುಖದಲ್ಲಿ ಮುಂದಿನ ಮಳೆಯ ಆತಂಕ ಜತೆಗೆ, ಉತ್ತಮ ಫಸಲಿನ ಆಶಾಭಾವನೆಯೂ ಇದೆ. ಈ ಮಳೆ ಎಲ್ಲ ಭತ್ತ ಕೃಷಿಕರಿಗೂ ಮಾರಕವಾಗಿಲ್ಲ. ತೀರ ಇತ್ತೀಚೆಗೆ ನಾಟಿ ಮಾಡಿರುವ ಈಗಿನ ಮಳೆ ರೈತರಿಗೆ ವರದಾನವಾಗಲಿದೆ. ಬಿಸಿಲ ಧಗೆ ಹೆಚ್ಚಾದರೂ ಕೂಡ ಸಮಸ್ಯೆಯೇ ಎನ್ನುತ್ತಾರೆ ಕೃಷಿಕರು.

    ಸದ್ಯ ಭತ್ತದ ತೆನೆ ಹೂ ಕಟ್ಟುವ ಅವಧಿಯಲ್ಲಿ ಮಳೆ ಬರುತ್ತಿರುವುದರಿಂದ ನೀರಿಕ್ಷಿತ ಇಳುವರಿ ಅನುಮಾನ. ಆರಂಭದಲ್ಲಿ ನಾಟಿ ಮಾಡಿದ್ದ ಗದ್ದೆಗೆ ಸಮಸ್ಯೆ ಇಲ್ಲ. ಸರ್ಕಾರ ಕೊಡುವ ಬೆಂಬಲ ಬೆಲೆ ಕಟಾವು ಅವಧಿಯಲ್ಲೇ ಸಿಕ್ಕರೆ ರೈತರಿಗೆ ಅನುಕೂಲ.
    -ಶೇಖರ ಪೂಜಾರಿ, ನೈಲಾಡಿ, ಭತ್ತ ಕೃಷಿಕ

    ಕೆಲವು ಗದ್ದೆಗಳಿಗೆ ಸಣ್ಣ ಪ್ರಮಾಣದ ಮಳೆಯೂ ಅವಶ್ಯ. ಜೂನ್ ಎರಡು ಮತ್ತು ಮೂರನೇ ವಾರ ನಾಟಿ ಮಾಡಿರುವ ಗದ್ದೆಯಲ್ಲಿ ಭ ತ್ತ ತೆನೆ ಕಾಯಿ ಕಟ್ಟುವ ಅವಧಿ. ಇಂಥಲ್ಲಿ ಮಳೆಯಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಬಹುದು. ಜೂನ್ ಆರಂಭದಲ್ಲಿ ನಾಟಿ ಮಾಡಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಅಷ್ಟಾಗಿ ಸಮಸ್ಯೆ ಆಗುವುದಿಲ್ಲ.
    -ಎಚ್.ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕ, ಉಡುಪಿ

    ಶೇ.15ರಷ್ಟು ಭತ್ತ ಕಟಾವು
    ದ.ಕ. ಜಿಲ್ಲೆಯಲ್ಲಿ ಈ ಬಾರಿ 10,260 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇತ್ತು. ಹಡಿಲು ಗದ್ದೆಯಲ್ಲೂ ಬೆಳೆ ಬೆಳೆದ ಪರಿಣಾಮ 11,228.6 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಮೇ ಅಂತ್ಯ-ಜೂನ್ ಆರಂಭದಲ್ಲಿ ನಾಟಿ ಮಾಡಲಾದ ಬೆಳೆ ಪ್ರಸ್ತುತ ಕಟಾವಿಗೆ ಸಿದ್ಧವಾಗಿದ್ದು, ಜಿಲ್ಲೆಯಲ್ಲಿ ಶೇ.15ರಷ್ಟು ಕಟಾವು ಮಾಡಲಾಗಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ ಭತ್ತ ಬೆಳೆದ ರೈತರಿಗೆ ಸಮಸ್ಯೆ ಹೆಚ್ಚಾಗಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮಳೆಗೆ ಪೈರು ಅಡ್ಡ ಬಿದ್ದರೆ ತೊಂದರೆ ಹೆಚ್ಚು. ಕೆಲವು ಕಡೆ ಈಗಷ್ಟೇ ತೆನೆ ಹೂ ಬಿಡುತ್ತಿದ್ದು, ಮಳೆಯಿಂದ ಭತ್ತ ಜೊಳ್ಳಾಗುವ ಭೀತಿಯೂ ಇದೆ. ಬೆಳೆದ ಪೈರಿನ ಕಾಳು ಹಾಳಾಗುವ ಪ್ರಮಾಣವೂ ಜಾಸ್ತಿ. ಗದ್ದೆಯಿಂದ ಪೈರು ತರಲು, ಹೊಡೆದು ಭತ್ತ ಬೇರ್ಪಡಿಸಲೂ ಸಮಸ್ಯೆಯಾಗಿದೆ. ಇನ್ನೊಂದೆಡೆ, ಮಳೆಯಿಂದ ಒದ್ದೆಯಾದ ಬೈಹುಲ್ಲು ಕೂಡ ಉಪಯೋಗಕ್ಕೆ ಬರುವುದಿಲ್ಲ. ಪ್ರಾಣಿಗಳ ಹಾವಳಿಯೂ ಹೆಚ್ಚಾಗಿದ್ದು, ರಾತ್ರಿ ವೇಳೆ ಹಂದಿಗಳು ಗದ್ದೆಗೆ ದಾಳಿ ಮಾಡಿ, ಕೆಸರಲ್ಲಿ ಹೊರಳಾಡಿ ಬೆಳೆದು ನಿಂತ ಪೈರು ನಾಶಪಡಿಸುವ ಪ್ರಮಾಣವೂ ಹೆಚ್ಚಾಗಿದೆ ಎನ್ನುತ್ತಾರೆ ಬೆಳ್ತಂಗಡಿಯ ಪ್ರಗತಿಪರ ಕೃಷಿಕ ಪರಮೇಶ್ವರ ಭಟ್.

    ಮೂಲ್ಕಿಯಲ್ಲಿ ಹಾನಿ
    ಕಳೆದೆರಡು ದಿನಗಳ ಗಾಳಿ, ಮಳೆಗೆ ಭತ್ತದ ಬೆಳೆ ಮಗುಚಿ ಬಿದ್ದು ಕೃಷಿಕರಿಗೆ ನಷ್ಟವಾಗಿದೆ. ಕಕ್ವ, ಮಾನಂಪಾಡಿ, ಮೊಲೊಟ್ಟು, ಅತಿಕಾರಿಬೆಟ್ಟು, ಬಾನೊಟ್ಟು ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಯಾಗಿದೆ. ಮೂಲ್ಕಿ, ಕೊಳಚಿಕಂಬಳ, ಕಿಲ್ಪಾಡಿ, ಚಿತ್ರಾಪು ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೊಂದರೆಯಾಗಿದೆ. ಸುಮಾರು 100 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿರಬಹುದು ಕಂದಾಯ ಇಲಾಖೆ ಅಂದಾಜಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts