More

    ಮಳೆಗೆ 759.22 ಕೋಟಿ ರೂ ನಷ್ಟ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾಹಿತಿ

    ಮಂಡ್ಯ: ಜಿಲ್ಲೆಯಲ್ಲಿ ಜೂ.1ರಿಂದ ಸೆ.1ರವರೆಗೆ ಬಿದ್ದಿರುವ ಮಳೆಯಿಂದ ಅಂದಾಜು 759.22 ಕೋಟಿ ರೂ ನಷ್ಟವಾಗಿದೆ. ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಹೇಳಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಮಳೆ ಹಾನಿ ಸಂಬಂಧ ಚರ್ಚಿಸಲು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಮಳೆಯಿಂದಾಗಿ ಬಹಳ ಹಾನಿ ಉಂಟಾಗಿದೆ. ಅಂತೆಯೇ ಕೆ.ಆರ್.ಪೇಟೆ ತಾಲೂಕಿನ ಅಘಲಯ ಕೆರೆ, ದೊಡ್ಡಕ್ಯಾತನಕೆರೆ, ಮಾವಿನ ಕಟ್ಟೆಕೊಪ್ಪಲು ಹಾಗೂ ಲೋಕನಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಹಾಗೂ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ಸರಿಯಾದ ಪರಿಹಾರ ಕ್ರಮವನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
    ಇನ್ನು ಚಿಕ್ಕ ಮಂಡ್ಯ ಬಿಡಿ ಲನಿಯಲ್ಲಿ ನೀರು ನುಗ್ಗಿರುವ ಹಾಗೂ ಕೆನಲ್ ರಸ್ತೆ ಹಾನಿಗಳನ್ನು ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸೂಚನೆ ನೀಡಲಾಯಿತು. ಜಿಲ್ಲೆಯಲ್ಲಿ 42 ಮನೆ ಸಂಪೂರ್ಣ ಹಾನಿ, 159 ತೀವ್ರ ಹಾನಿ, 70 ಭಾಗಶಃ ಸೇರಿದಂತೆ ಒಟ್ಟು 908 ಮನೆ ಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ 5,44,65,100 ರೂ ಪರಿಹಾರವಾಗಿ ನೀಡಲಾಗಿದೆ ಎಂದರು.
    295.80 ಹೆಕ್ಟೇರ್ ಕೃಷಿ ಹಾಗೂ 728.77 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ಪರಿಹಾರ ತಂತ್ರಾಂಶದ ಮೂಲಕ ಪರಿಹಾರ ಪಾವತಿಗೆ ಕ್ರಮ ವಹಿಸಲಾಗಿದೆ. ಹಳ್ಳಿಯಲ್ಲಿ 255.30 ಕಿ. ಮೀ ರಸ್ತೆ ಹಾನಿಯಾಗಿದೆ. ಇನ್ನು 260 ಶಾಲೆ, 1 ಅಂಗನವಾಡಿ, 28 ಪ್ರಾಥಮಿಕ ಆರೋಗ್ಯ ಕೇಂದ್ರ, 1129 ವಿದ್ಯುತ್ ಕಂಬ ಹಾಗೂ 35 ಟಿಸಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ದುರಸ್ತಿಗೆ 466 ಲಕ್ಷ ರೂ, ಅಂಗನವಾಡಿ ಕೇಂದ್ರಕ್ಕೆ 2 ಲಕ್ಷ ರೂ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 56 ಲಕ್ಷ ರೂ, ಲೋಕೋಪಯೋಗಿ ಇಲಾಖೆಯ ದುರಸ್ತಿ ಕಾಮಗಾರಿಗೆ 104 ಲಕ್ಷ ರೂ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದರು.
    ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts