More

    ರೈಲ್ವೆ ವರ್ಕ್‌ಶಾಪ್ ಯೋಜನೆಗೆ ಗ್ರಹಣ ; ತನ್ನ ಪಾಲಿನ ಶೇ.50 ಹಣ ನೀಡದ ರಾಜ್ಯ ಸರ್ಕಾರ

    | ವಿ.ಮುನಿವೆಂಕಟೇಗೌಡ ಶ್ರೀನಿವಾಸಪುರ

    ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಯದರೂರು ಬಳಿ ನಿರ್ಮಿಸಲು ಉದ್ದೇಶಿರುವ ರೈಲ್ವೆ ವರ್ಕ್‌ಶಾಪ್ ಯೋಜನೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿರುವ ಕಾರಣ ತನ್ನ ಪಾಲಿನ ಶೇ.50 ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡದೆ ತಟಸ್ಥ ನಿಲುವು ತಾಳಿರುವುದರಿಂದ ಯೋಜನೆಗೆ ಗ್ರಹಣ ಹಿಡಿದಿದೆ.

    ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಅವರು ಕೋಲಾರದಲ್ಲಿ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. 2012-13ನೇ ಸಾಲಿನ ಬಜೆಟ್‌ನಲ್ಲಿ ಯೋಜನೆ ಘೋಷಣೆ ಮಾಡಿ, ಅದರಂತೆ 2014ರಲ್ಲಿ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಫ್ಯಾಕ್ಟರಿಯಿಂದ 5000 ಜನರಿಗೆ ಉದ್ಯೋಗ ದೊರೆಯಲಿದೆ ಎನ್ನಲಾಗಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ಮುನಿಸ್ವಾಮಿ ಸಂಸದರಾದ ನಂತರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೋಚ್ ಫ್ಯಾಕ್ಟರಿ ಯೋಜನೆ ಕೈ ಬಿಟ್ಟು ವರ್ಕ್‌ಶಾಪ್ ಯೋಜನೆ ಜಾರಿಗೊಳಿಸಿ 2020-21ರ ಬಜೆಟ್‌ನಲ್ಲಿ 495.3 ಕೋಟಿ ರೂಪಾಯಿ ಮೀಸಲಿಡಲಾಗಿದೆ.

    ಜಿಲ್ಲೆಯಲ್ಲಿ ರೈಲ್ವೆ ವರ್ಕ್‌ಶಾಪ್ ನಿರ್ಮಿಸಲು ಕೇಂದ್ರ ಸರ್ಕಾರ ಅನುದಾನ ಒದಗಿಸಿದ್ದರೂ ಕಾರ್ಖಾನೆ ನಿರ್ಮಾಣಕ್ಕೆ ಜಾಗ ಮತ್ತು ತನ್ನ ಪಾಲಿನ ಶೇ.50 ಅನುದಾನವನ್ನು ರಾಜ್ಯ ಸರ್ಕಾರ ನೀಡಲು ಮುಂದಾಗಿಲ್ಲ. ಸಂಸದರು ಲೋಕಸಭೆಯಲ್ಲಿ ಈ ವಿಚಾರವನ್ನು ರೈಲ್ವೆ ಮಂತ್ರಿ ಬಳಿ ಪ್ರಸ್ತಾಪ ಮಾಡಿದಾಗ ರಾಜ್ಯ ಸರ್ಕಾರ ಶೇ.50 ಹಣ ಭರಿಸಲು ಸಿದ್ಧವಿದೆಯೇ ಎಂದು ಪ್ರಶ್ನಿಸಿದರಲ್ಲದೆ, ಕಾರ್ಖಾನೆಗೆ 560 ಎಕರೆ ಜಾಗ ಬೇಕಾಗಿದೆ. ರಾಜ್ಯ ಸರ್ಕಾರ ಕೇವಲ 315 ಎಕರೆ ಜಾಗ ಲಭ್ಯವಿದೆ ಎಂದು ಖಚಿತಪಡಿಸಿದೆ. ಉಳಿದ ಜಾಗವನ್ನು ಒದಗಿಸಿಲ್ಲ ಎಂದು ಉತ್ತರ ನೀಡುವ ಮೂಲಕ ಜಿಲ್ಲೆಯ ಮಹತ್ವದ ಯೋಜನೆಗೆ ಪರೋಕ್ಷವಾಗಿ ಹಿನ್ನಡೆ ಆಗಿದೆ.

    ಸಂಸದರಿಂದ ಏಕಾಂಗಿ ಹೋರಾಟ: ಎಸ್.ಮುನಿಸ್ವಾಮಿ ಅವರು ರೈಲ್ವೆ ವರ್ಕ್‌ಶಾಪ್‌ಗಾಗಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ಪಾಲು ಕೇಳಲು ಜಿಲ್ಲೆಯ ಜನಪ್ರತಿನಿಧಿಗಳು ಅವರಿಗೆ ಸಾಥ್ ನೀಡಬೇಕಾಗಿದೆ. ಶ್ರೀನಿವಾಸಪುರ ಮುಳಬಾಗಿಲು ರಸ್ತೆಯಲ್ಲಿ ಈ ಕಾರ್ಖಾನೆ ಪ್ರಾರಂಭವಾಗುವುದರಿಂದ ಈ ಎರಡು ತಾಲೂಕುಗಳಲ್ಲಿ ಹೆಚ್ಚು ಅನುಕೂಲವಾಗಲಿದೆ. ಶ್ರೀನಿವಾಸಪುರ ಹಾಗೂ ಮುಳಬಾಗಿಲು ಶಾಸಕರು ಜಂಟಿಯಾಗಿ ಹೋರಾಟ ನಡೆಸುವುದರ ಜತೆಗೆ ಜಿಲ್ಲೆಯ ಜನಪ್ರತಿನಿಧಿಗಳು ಕೈ ಜೋಡಿಸಿದರೆ ಈ ಜಿಲ್ಲೆಗೆ ವರದಾನವಾಗಲಿದೆ.

    ರೈಲ್ವೆ ವರ್ಕ್‌ಶಾಪ್ ಪ್ರಾರಂಭಕ್ಕೆ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರಮೇಶ್‌ಕುಮಾರ್ ಅವರು ನೀರಾವರಿಗಾಗಿ ಪಟ್ಟ ಪ್ರಯತ್ನವನ್ನು ರೈಲ್ವೆ ವರ್ಕ್‌ಶಾಪ್ ಕಾರ್ಖಾನೆ ಸ್ಥಾಪನೆಗೂ ಮಾಡಬೇಕಾಗಿದೆ. ರೈಲ್ವೆ ವರ್ಕ್‌ಶಾಪ್ ಪ್ರಾರಂಭವಾದರೆ ರೈತರ ಮಕ್ಕಳಿಗೂ ಉದ್ಯೋಗ ದೊರಕಿದರೆ ವ್ಯವಸಾಯದ ಜತೆಗೆ ಮಕ್ಕಳ ಭವಿಷ್ಯಕ್ಕೆ ಹಣ ಸರಿದೂಗಿಸಿಕೊಳ್ಳಲು ಅನುಕೂಲವಾಗುತ್ತದೆ.
    ಎನ್.ಜಿ. ಬ್ಯಾಟಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ

    ರೈಲ್ವೆ ವರ್ಕ್‌ಶಾಪ್‌ಗೆ ಬೇಕಾದ 560 ಎಕರೆ ಜಾಗ ಯದರೂರು ಬಳಿ ಲಭ್ಯವಿದೆ. ಸರ್ಕಾರಿ ಜಮೀನನ್ನು ಕೆಲವರು ಕಬಳಿಸಿಕೊಂಡಿದ್ದಾರೆ. ಜಿಲ್ಲಾಡಳಿತ ತೆರವು ಮಾಡಬೇಕು. ಆದರೆ ಇದರಲ್ಲಿ ಜಿಲ್ಲಾಡಳಿತದ ನಿರ್ಲಕ್ಷವೂ ಎದ್ದು ಕಾಣುತ್ತಿದೆ. ರೈಲ್ವೆ ವರ್ಕ್‌ಶಾಪ್ ಕಾರ್ಖಾನೆಯಿಂದ ರೈತರ ಬೆಳೆಗಳಿಗೆ ವಾರ್ಕೆಟಿಂಗ್ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ, ಜತೆಗೆ ನಿರುದ್ಯೋಗದ ಸಮಸ್ಯೆ ನೀಗಿಸಿದಂತಾಗುತ್ತದೆ.
    ರಾಮಚಂದ್ರ, ಸ್ಥಳೀಯ ನಿವಾಸಿ

    ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ಹಿಂದಿನವರು ಸಿದ್ಧತೆಯಿಲ್ಲದೆ ಶಂಕುಸ್ಥಾಪನೆ ಮಾಡಿದ್ದರು. ಆ ಕ್ಷಣವೇ ಚುನಾವಣೆ  ಘೋಷಣೆಯಾದ್ದರಿಂದ ಬಂದವರು ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರುಗಳಲ್ಲಿ ಓಡಿ ಹೋಗಿದ್ದು ನೆನಪಿದೆ. ರೈಲ್ವೆ ಕೋಚ್ ಫ್ಯಾಕ್ಟರಿ ಬದಲು ಕಾರ್ಯಾಗಾರ ಸ್ಥಾಪಿಸಲು ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿ ಅವಶ್ಯವಿರುವ 450 ಎಕರೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನಡೆಸಿದ್ದು ಪ್ರಕ್ರಿಯೆ ಪ್ರಗತಿಯಲ್ಲಿದೆ.
    ಎಸ್.ಮುನಿಸ್ವಾಮಿ, ಸಂಸದರು, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts