More

    ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಶೀಲ ವಾತಾವರಣ ನಿರ್ಮಿಸಿ

    ಶಿವಮೊಗ್ಗ: ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಶೀಲ ವಾತಾವರಣ ನಿರ್ಮಾಣ ಮಾಡುವತ್ತ ಉಪನ್ಯಾಸಕ ಸಮೂಹ ಹೆಚ್ಚು ಒತ್ತು ನೀಡಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಸಚಿವ ಡಾ. ಬಿ.ಇ.ರಂಗಸ್ವಾಮಿ ಹೇಳಿದರು.

    ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಉಪನ್ಯಾಸಕರಿಗೆ ಸಂಶೋಧನಾ ಪ್ರಕ್ರಿಯೆಗೆ ಆರ್ಥಿಕ ಸಹಕಾರ-ಸಮಗ್ರ ಅರಿವು ಕಾರ್ಯಾಗಾರ ಉದ್ದೇಶಿಸಿ ಆನ್‌ಲೈನ್ ಮೂಲಕ ಮಾತನಾಡಿದರು.
    ಭಾರತ ಸರ್ಕಾರ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ನವೀನ ಪ್ರಯೋಗಗಳಿಗೆ ಪ್ರೇರಕ ವೇದಿಕೆಗಳನ್ನು ನೀಡುತ್ತಿದೆ. ಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ಐದು ವರ್ಷದಲ್ಲಿ 1.5 ದಶಲಕ್ಷ ಪ್ರಬಂಧಗಳು ಮಂಡನೆಯಾಗಿವೆ. ಅಂತಹ ನಾವೀನ್ಯ ಯೋಜನೆಗಳು ವಾಣಿಜ್ಯೀಕರಣವಾಗಬೇಕು ಎಂದು ತಿಳಿಸಿದರು.
    ಹೊಸತನದ ಚಿಂತನೆಗಳ ಮೂಲಕ ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ದೇಶದ ಆರ್ಥಿಕ ವೃದ್ಧಿಗೆ ಕೊಡುಗೆಗಳನ್ನು ನೀಡಬೇಕು. ಈ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಾತ್ಮಕ ವಾತಾವರಣ ನಿರ್ಮಿಸಬೇಕು ಎಂದರು.
    ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಾವು ನಡೆಸುವ ಪ್ರಯೋಗಗಳು ಹಾಗೂ ಆವಿಷ್ಕಾರಗಳು ಪರಿಸರಕ್ಕೆ ಹಾನಿ ಆಗದಂತಿರಬೇಕು. ನಾವೀನ್ಯತೆಯೊಂದಿಗೆ ಆರೋಗ್ಯಕರ ಪರಿಸರವನ್ನು ಮುಂದಿನ ತಲೆಮಾರಿಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.
    ವಿಟಿಯು ಗ್ಲೋಬಲ್ ಕ್ಯಾಂಪಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಕೆ.ಜಿ.ಬಸವಕುಮಾರ್, ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ ಇದ್ದರು. ವಿಟಿಯು ಮೈಸೂರು ವಿಭಾಗದ 23 ಇಂಜಿನಿಯರಿಂಗ್ ಕಾಲೇಜಿನ 110ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts