More

    ಪರೀಕ್ಷಾ ಕೇಂದ್ರಗಳಿಗೆ ವೈದ್ಯ ಸಿಬ್ಬಂದಿ ನೇಮಿಸಿ; ಶಾಸಕ ಡಾ.ಶಿವರಾಜ ಪಾಟೀಲ್ ಸೂಚನೆ

    ಎಸ್ಸೆಸ್ಸೆಲ್ಸಿ ಎಕ್ಸಾಂನ ಪೂರ್ವ ಸಿದ್ಧತಾ ಸಭೆ | ಕೋವಿಡ್ ಇರುವ ಕಾರಣ ಹೆಚ್ಚಿನ ಕಾಳಜಿ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ

    ರಾಯಚೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರ ಜತೆಗೆ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ನುರಿತ ವೈದ್ಯ, ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಸೂಚನೆ ನೀಡಿದರು.

    ವಿದ್ಯಾಭಾರತಿ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಪೂರ್ವ ಸಿದ್ಧತೆ ಪರಿಶೀಲನಾ ಸಭೆಗೆ ಚಾಲನೆ ನೀಡಿ ಮಾತನಾಡಿ, ಕರೊನಾ ಸಂಕಷ್ಟದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗಿಂತ ಪಿಯು ದ್ವಿತೀಯ ವರ್ಷದ ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಉನ್ನತ ಶಿಕ್ಷಣಕ್ಕೆ ಹೋಗಲು ಪ್ರಮುಖ ಘಟ್ಟವಾಗಿವೆ. ಆದರೆ, ಸರ್ಕಾರ ಪಿಯು ಪರೀಕ್ಷೆಗಳನ್ನು ರದ್ದುಗೊಳಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಕೈಗೊಂಡಿದೆ. ಈ ನಿರ್ಧಾರದ ಹಿಂದೆ ಸೂಕ್ತ ಕಾರಣ ಇರುತ್ತದೆ ಎಂದರು.

    ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಸೂಕ್ತ ಸಾರಿಗೆ ಸೌಲಭ್ಯಗಳ ಕೊರತೆಯಿದೆ. ಪರೀಕ್ಷೆ ನಡೆಯುವ ಎರಡು ದಿನ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಬೇಕು. ಪರೀಕ್ಷೆಯಲ್ಲಿ ಎಲ್ಲರನ್ನೂ ತೇರ್ಗಡೆ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ನಿರ್ಲಕ್ಷೃ ತೋರಬಾರದು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ವಿದ್ಯಾರ್ಥಿಗಳು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.

    ಬಿಇಒ ಚಂದ್ರಶೇಖರ ದೊಡ್ಡಮನಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 60 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 9,617 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ 28 ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಲಾಗುವುದು. ವಸ್ತು ನಿಷ್ಠ ಪ್ರಶ್ನೆ ಪತ್ರಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.

    ಸಾರಿಗೆ ಸಂಸ್ಥೆ ಡಿಪೋ ವ್ಯವಸ್ಥಾಪಕ ಪ್ರದೀಪ, ತಾಲೂಕು ವೈದ್ಯಾಧಿಕಾರಿ ಶಾಕೀರ್, ಆಗ್ನಿಶಾಮಕ ಠಾಣೆ ಅಧಿಕಾರಿ ರವೀಂದ್ರ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಜೀಜಾ ಸುಲ್ತಾನಾ ಇತರರು ಇದ್ದರು.

    ಕರೊನಾದಿಂದ ಎಲ್ಲರೂ ಸಂಕಷ್ಟದ ದಿನಗಳನ್ನು ಕಂಡಿದ್ದೇವೆ. ಜನರಿಗೆ ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಜನಪ್ರತಿನಿಧಿಗಳಾದ ನಾವು ಕೂಡ ಶಕ್ತಿ ಮೀರಿ ಜನರಿಗೆ ನೆರವು ಕಲ್ಪಿಸಿದ್ದೇವೆ. ಆದರೂ, ಅದು ತೃಪ್ತಿದಾಯಕವಾಗಿಲ್ಲ.
    | ಡಾ.ಶಿವರಾಜ ಪಾಟೀಲ್ ರಾಯಚೂರು ನಗರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts