More

    ರಾಷ್ಟ್ರಧ್ವಜಕ್ಕೆ ಅಗೌರವಾಗದಂತೆ ಎಚ್ಚರಿಕೆ ವಹಿಸಿ, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ ಸಲಹೆ

    ರಾಯಚೂರು: ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ನಿಮಿತ್ತ ಜಿಲ್ಲೆಯಲ್ಲಿ ಆ.13 ರಿಂದ 15ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗುವುದು. ರಾಷ್ಟ್ರಧ್ವಜಕ್ಕೆ ಅಗೌರವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರಗೇಶ ಸೂಚಿಸಿದರು.

    ಸ್ಥಳೀಯ ಜಿಪಂ ಸಭಾಂಗಣದಲ್ಲಿ ಶನಿವಾರ ಹರ್ ಘರ್ ತಿರಂಗಾ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದೇಶಾದ್ಯಂತ ಮೂರು ದಿನ ಹಗಲು-ರಾತ್ರಿ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗುತ್ತಿದೆ. ಅಭಿಯಾನಕ್ಕೆ ಎಲ್ಲರೂ ಸ್ಪಂದನೆ ನೀಡಬೇಕು. ಸಾರ್ವಜನಿಕರು ಕೈಮಗ್ಗ, ಪಾಲಿಸ್ಟರ್, ಉಣ್ಣೆಯಲ್ಲಿ ತಯಾರಿಸಿದ ರಾಷ್ಟ್ರಧ್ವಜವನ್ನು ಬಳಸಬಹುದಾಗಿದೆ. ರಾಷ್ಟ್ರಧ್ವಜಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಲ್ ಅಧಿಕಾರಿಗಳು ನೋಡಿಕೊಳ್ಳಬೇಕು. ಗ್ರಾಪಂ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ರಾಷ್ಟ್ರಧ್ವಜ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.

    ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು, ವಾಣಿಜ್ಯ, ಕೈಗಾರಿಕೆ, ವಸತಿ ಸಮುಚ್ಛಯ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಎಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಸಾರ್ವಜನಿಕ ವಿತರಣೆಗಾಗಿ ಸರ್ಕಾರದಿಂದ 76 ಸಾವಿರ ರಾಷ್ಟ್ರಧ್ವಜ ಪೂರೈಕೆಯಾಗಿದ್ದು, ಅಗತ್ಯಕ್ಕೆ ತಕ್ಕಂತೆ ತಾಲೂಕುಗಳಿಗೆ ನೀಡಲಾಗುವುದು. ಜಿಲ್ಲೆಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವಾತಂತ್ರೃದ ಮಹತ್ವ ಸಾರುವ ಗೀತೆ ಗಾಯನ, ಭಾಷಣ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸುವಂತೆ ಡಾ.ಕೆ.ಆರ್.ದುರಗೇಶ ಸೂಚಿಸಿದರು.

    ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪೂರೈಕೆಯಾದ ರಾಷ್ಟ್ರಧ್ವಜಗಳನ್ನು ಪ್ರದರ್ಶಿಸಿದರು. ಸಹಾಯಕ ಆಯುಕ್ತ ರಜನಿಕಾಂತ ಚವ್ಹಾಣ್, ಡಿಡಿಪಿಐ ವೃಷಭೇಂದ್ರಯ್ಯಸ್ವಾಮಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಗಳಾ ನಾಯಕ, ತಹಸೀಲ್ದಾರ್ ರಾಜಶೇಖರ ಪಾಟೀಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts