More

    ಗುತ್ತಿಗೆ ಪದ್ಧತಿಯ ಅಗ್ನಿಪಥ ಯೋಜನೆ ಕೈಬಿಡಿ

    ರಾಯಚೂರು: ದೇಶದ ರಕ್ಷಣೆ ಹೊಣೆಗಾರಿಕೆ ಹೊತ್ತಿರುವ ಸೈನ್ಯದಲ್ಲಿಯೂ ಗುತ್ತಿಗೆ ಪದ್ಧತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಜಾರಿಗೊಳಿಸುತ್ತಿರುವುದನ್ನು ಖಂಡಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಅಗ್ನಿಪಥ ಯೋಜನೆಯಿಂದ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳವಾಗಲಿದ್ದು, ನಾಲ್ಕು ವರ್ಷಗಳು ಸೇನೆಯಲ್ಲಿ ಕಾರ್ಯನಿರ್ವಹಿಸಿ ಬರುವ ಯುವಕರು ಯಾವುದೇ ಕೆಲಸ ಸಿಗದೆ ಸಮಸ್ಯೆ ಎದುರಿಸುವಂತಾಗಲಿದೆ. ಸೈನಿಕರಿಗೆ ಉದ್ಯೋಗ ಭದ್ರತೆಯಿಲ್ಲದ ಕಾರಣ ಸೇನೆ ದುರ್ಬಲವಾಗಲಿದೆ ಎಂದು ಪ್ರತಿಭಟನಾಕಾರರು ದೂರಿದರು.
    ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಅಗ್ನಿಪಥ ಹೆಸರಿನಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಯುವಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವೈಜ್ಞಾನಿಕ ಅಗ್ನಿಪಥ ಯೋಜನೆಯನ್ನು ಕೈಬಿಟ್ಟು ಹಿಂದಿನ ಪದ್ಧತಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

    ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಮಾತನಾಡಿ, ನಾಲ್ಕು ವರ್ಷಗಳ ನಂತರ ಸೈನಿಕರು ಮುಂದೇನು ಮಾಡಬೇಕು. ಯುವಕರನ್ನು ಶಾಶ್ವತವಾಗಿ ನಿರುದ್ಯೋಗಿಗಳನ್ನಾಗಿ ಹುನ್ನಾರ ಅಗ್ನಿಪಥ ಯೋಜನೆಯಲ್ಲಿ ಅಡಗಿದೆ. ಎಂಟು ವರ್ಷಗಳಲ್ಲಿ ದೇಶದ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದ್ದು, ಈಗ ಸೈನ್ಯವನ್ನು ದುರ್ಬಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೋರೇಟ್ ಶಕ್ತಿಗಳ ಅಡಿಯಾಳಾಗಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡುತ್ತಿದೆ. ಇಂಧನ, ಅಗತ್ಯವಸ್ತುಗಳ ಬೆಲೆ ಏರಿಕೆಯಿಮದ ಜನರು ಕಂಗೆಟ್ಟಿದ್ದು, ಅಗ್ನಿಪಥ ಯೋಜನೆ ಮೂಲಕ ಯುವಕರನ್ನು ಬೀದಿಗೆ ತಳ್ಳುತ್ತಿದೆ ಎಂದು ದೂರಿದರು.

    ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ ಮುಖಂಡರಾದ ಜಿ.ಬಸವರಾಜರೆಡ್ಡಿ, ಜಯಣ್ಣ, ಅಮರೇಗೌಡ ಹಂಚಿನಾಳ, ಕೆ.ಶಾಂತಪ್ಪ, ಅಸ್ಲಾಂ ಪಾಷಾ, ಸಾಜೀದ್ ಸಮೀರ್, ಎನ್.ಶ್ರೀನಿವಾಸರೆಡ್ಡಿ, ಅರುಣ ದೋತರಬಂಡಿ, ಶರಣಪ್ಪ ಕಡಗೋಲ, ನರಸಿಂಹಲು ಮಾಡಗಿರಿ, ನಿರ್ಮಲಾ ಬೆಣ್ಣಿ, ನವನೀತಾ ಆದೋನಿ, ಶಶಿಕಲಾ ಭೀಮರಾಯ, ವಂದನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts