ರಸ್ತೆಗಳಲ್ಲಿ ಹೆಚ್ಚಿದ ವಾಹನ ಸಂಚಾರ | ಮಾರುಕಟ್ಟೆಯಲ್ಲಿ ಜನ ಜಂಗುಳಿ | ರಾಯಚೂರಿನಲ್ಲಿ ಕರೊನಾ ಭೀತಿ ಮರೆತ ಜನ
ರಾಯಚೂರು: ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ಸಂಪೂರ್ಣ ಲಾಕ್‌ಡೌನ್ ಸಡಿಲಿಕೆ ಮಾಡಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಹಾಗೂ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ನಗರದ ರಸ್ತೆಗಳಲ್ಲಿ ಸೋಮವಾರ ಹೆಚ್ಚಿನ ವಾಹನ ಸಂಚಾರ ಕಂಡು ಬಂತು.
ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದರೂ, ವೈರಾಣುವಿನ ಭೀತಿ ಸಂಪೂರ್ಣವಾಗಿ ತೊಲಗಿಲ್ಲ. ಆದರೆ, ಲಾಕ್‌ಡೌನ್ ಸಡಲಿಕೆಯಿಂದಾಗಿ ಕರೊನಾ ಭೀತಿಯನ್ನೇ ಮರೆತ ಜನ ಸಾಮಗ್ರಿ ಖರೀದಿಗೆ ಮಾರುಕಟ್ಟೆಗೆ ಧಾವಿಸಿದ್ದು, ಕರೊನಾ ಮಾರ್ಗಸೂಚಿ ಉಲ್ಲಂಘಿಸುತ್ತಿರುವುದು ಕಂಡು ಬಂತು. ಈ ಮೊಲದು ವಾರದಲ್ಲಿ ಎರಡು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡುತ್ತಿದ್ದರೂ ರಸ್ತೆಗಳಲ್ಲಿ ಇಷ್ಟೊಂದು ವಾಹನ ಸಂಚಾರ ಕಂಡು ಬರುತ್ತಿರಲಿಲ್ಲ. ಆದರೆ, ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಕಂಡು ಬಂದಿದ್ದು, ಮಾರುಕಟ್ಟೆಯ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುವಂತಾಗಿತ್ತು.
ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಪೊಲೀಸರು ವಾಹನಗಳ ತಪಾಸಣೆ ಕಾರ್ಯ ನಿಲ್ಲಿಸಿದ್ದರಿಂದ ವಾಹನ ಸವಾರರು ಆತಂಕವಿಲ್ಲದೆ ಅನಗತ್ಯವಾಗಿ ರಸ್ತೆಗಳಲ್ಲಿ ಸಂಚರಿಸಿದರು. ಮತ್ತೊಂದೆಡೆ ಮದ್ಯದ ಅಂಗಡಿಗಳ ಮುಂದೆಯೂ ಜನ ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದರು. ಕರೊನಾ ಮೂರನೇ ಅಲೆ ಬರುವ ಸಾಧ್ಯತೆಗಳ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದ್ದರೂ ಜನ ಭಯವಿಲ್ಲದೇ ಓಡಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಕದ್ದುಮುಚ್ಚಿ ವ್ಯಾಪಾರ : ಕಿರಾಣಿ, ತರಕಾರಿ, ಹಣ್ಣು, ಹಾಲಿನ ಅಂಗಡಿಗಳನ್ನು ಮಾತ್ರ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೂ, ರಾಯಚೂರಿನ ಬಟ್ಟೆ, ಚಪ್ಪಲಿ, ಆಟೋಮೊಬೈಲ್ ಸೇರಿ ವಿವಿಧ ಅಂಗಡಿಗಳಲ್ಲಿ ರಹಸ್ಯವಾಗಿ ವ್ಯಾಪಾರ ನಡೆಸಲಾಗುತ್ತಿದೆ. ಜನರನ್ನು ಒಳಗೆ ಸೇರಿಸಿ ಶಟರ್ ಹಾಕಿ ವ್ಯಾಪಾರ ನಡೆಸಲಾಗುತ್ತಿರುವುದು ಕಂಡು ಬಂದಿದೆ. ಈಗಾಗಲೇ ಹಲವು ಬಟ್ಟೆ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಆದರೂ, ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ ಎಂಬುದು ಕರೊನಾ ಸೇನಾನಿಗಳ ಅಂಬೋಣ.