ರಾಯಚೂರು: ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ರೈತರು ಮಾರುಕಟ್ಟೆ ಸಮಸ್ಯೆ ಎದುರಿಸುವಂತಾಗಿದ್ದು, ಕಾಯ್ದೆ ಮೂಲಕ ಸರ್ಕಾರ ಎಪಿಎಂಸಿ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ ಕಮ್ಮರಡಿ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ರೈತರು ಬಿತ್ತನೆಗಾಗಿ ಖರ್ಚು ಮಾಡಿದ ಹಣವೂ ಬಾರದ ಸ್ಥಿತಿಯಿದ್ದು, ಶೇ.70 ರೈತರಿಗೆ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಸಾಧಾರಣ ಬೆಲೆಯೂ ಸಿಗಲಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಪಿಎಂಸಿ ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಟ್ಟಿದ್ದು, ನಿಯಂತ್ರಣ ವಲಯಕ್ಕೆ ಸೇರಿದೆ. ಆದರೆ ಮುಕ್ತ ವಲಯದಲ್ಲಿ ರೈತರ ಉತ್ಪನ್ನಗಳನ್ನು ಮಾರಾಟ, ಖರೀದಿ ಮಾಡಿದರೆ ಯಾವುದೇ ಸೆಸ್ ಇಲ್ಲ. ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟ ಮಾಡಿದರೆ ಮಾತ್ರ ಸೆಸ್ ನೀಡುವಂತಾಗಿದೆ ಎಂದರು.
ಸರ್ಕಾರದ ಈ ನಿರ್ಧಾರದಿಂದ ಶೇ.40 ಭತ್ತದ ವಹಿವಾಟು ಕುಸಿದಿದ್ದು, ಕಡಲೆ, ಎಣ್ಣೆಕಾಳು ಸೇರಿದಂತೆ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಮಾರಾಟದ ಪ್ರಮಾಣ ಕುಸಿಯುವಂತಾಗಿದೆ. ರೈತರು ಹೂಡಿಕೆ ಮಾಡಿದ ಹಣವೂ ವಾಪಸ್ ಬರದಂತಾಗಿದ್ದು, ಶೇ.18 ಉತ್ಪನ್ನಕ್ಕೆ ಮಾತ್ರ ಬೆಂಬಲ ಬೆಲೆ ದೊರೆತಿದೆ ಎಂದು ಹೇಳಿದರು.
ರಾಜ್ಯದಲ್ಲಿ ರೈತರು ಕೃಷಿಯಿಂದ 11,300 ಕೋಟಿ ರೂ.ಗಳನ್ನು ಉತ್ಪಾದನೆಯಲ್ಲಿ ತೊಡಗಿಸಿ ನಷ್ಟ ಹೊಂದಿದ್ದಾರೆ. ಬೀಜಕ್ಕಾಗಿಯೇ 2,285 ಕೋಟಿ ರೂ., ರಸಗೊಬ್ಬರಕ್ಕಾಗಿ 6,821 ಕೋಟಿ ರೂ., ಕ್ರಿಮಿನಾಶಕಕ್ಕಾಗಿ 4,107 ಕೋಟಿ ರೂ.ಗಳನ್ನು ರೈತರು ವ್ಯಯಿಸಿದ್ದಾರೆ ಎಂದು ಮಾಹಿತಿ ನೀಡಿದರು.