More

    ಬಿಜೆಪಿ ಶಾಸಕರ ಅಮಾನತಿಗೆ ಜಿಲ್ಲಾ ಘಟಕ ಖಂಡನೆ

    ರಾಯಚೂರು: ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಹತ್ತು ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ ಸದನದಿಂದ ಅಮಾನತು ಮಾಡಿರುವುದನ್ನು ಖಂಡಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಸ್ಪೀಕರ್ ಹುದ್ದೆಗೆ ತನ್ನದೆಯಾದ ಗೌರವವಿದೆ ಆದರೆ, ಯು.ಟಿ. ಖಾದರ್ ಒಂದು ಪಕ್ಷದ ಪರವಾಗಿದ್ದು, ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜಕೀಯ ಪಕ್ಷಗಳ ಸಮಾವೇಶಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಇದರ ವಿರುದ್ಧ ಸದನದಲ್ಲಿ ಹೋರಾಟ ಮಾಡ್ತಿದ್ದೇವೆ ಎಂದು ಪ್ರಶ್ನೆ ಮಾಡಿರುವ ಶಾಸಕರನ್ನು ಅಮಾನತು ಮಾಡಿರುವುದು ಖಂಡನಾರ್ಹ.

    ಶಾಸಕ ಶಿವರಾಜ ಪಾಟೀಲ್ ಮಾತನಾಡಿ, ಸದನದಲ್ಲಿ ಸ್ಪೀಕರ್ 10 ಶಾಸಕರನ್ನು ಹೊರ ಹಾಕಿ ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಸಭಾಧ್ಯಕ್ಷರು ಪಕ್ಷಾತೀತವಾಗಿ ಆಡಳಿತ ಪಕ್ಷದ ಜತೆಗಿರದೆ ತಟಸ್ಥರಾಗಿರಬೇಕು. ಯು.ಟಿ.ಖಾದರ್, ಕಾಂಗ್ರೆಸ್ ನಲ್ಲಿ ಬೆಳೆದಿದ್ದು ಆ ಪಕ್ಷಕ್ಕೆ ನಿಷ್ಟೆ ತೋರುವ ಕೆಲಸ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು, ರಾಜ್ಯ ಸರ್ಕಾರದ ದಬ್ಬಾಳಿಕೆ ನೀತಿಯಾಗಿದೆ. ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

    ಇದನ್ನೂ ಓದಿ: ಅಸಹಾಯಕತೆ ಮುಚ್ಚಿಕೊಳ್ಳಲು ಬಿಜೆಪಿ ಪ್ರತಿಭಟನೆ : ಶರಣು ಮೋದಿ ತಿರುಗೇಟು

    ಕೂಡಲೇ ರಾಜ್ಯಪಾಲಕರು ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ರಾಜ್ಯದ ಜನರಿಗೆ ಕೊಟ್ಟ ಐದು ಗ್ಯಾರಂಟಿ ಈಡೇರಿಸಬೇಕು. ರಾಜಕೀಯ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಕ್ಕೆ ಕಾಂಗ್ರೆಸ್ ಸರ್ಕಾರ ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಮುಖಂಡರಾದ ಅಮರೇಶ, ರವೀಂದ್ರ ಜಲ್ದಾರ್, ರಾಜಕುಮಾರ, ಕಡಗೋಲ್ ಆಂಜನೇಯ, ಶಶಿರಾಜ, ಬೆಲ್ಲಂ ನರಸರೆಡ್ಡಿ, ಶಿವಬಸಪ್ಪ ಮಾಪಾ, ಶಂಕರ್ ರೆಡ್ಡಿ, ಶ್ರೀನಿವಾಸ ರೆಡ್ಡಿ, ರಾಘವೇಂದ್ರ, ಮುಕ್ತಿಯಾರ್, ಬಂಡೇಶ ವಲ್ಕಂದಿನ್ನಿ, ಸುಮತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts