More

    ಚಿತ್ರ ವಿಮರ್ಶೆ: ದುಷ್ಟರ ವಿರುದ್ಧ ‘ರಾಣ’ನ ಹೋರಾಟ

    ಚಿತ್ರ: ರಾಣ
    ನಿರ್ಮಾಣ: ಪುರುಷೋತ್ತಮ್​ ಗುಜ್ಜಾಲ್​
    ನಿರ್ದೇಶನ: ನಂದಕಿಶೋರ್​
    ತಾರಾಗಣ: ಶ್ರೇಯಸ್​ ಮಂಜು, ರೀಷ್ಮಾ ನಾಣಯ್ಯ, ರಘು, ಕೋಟೆ ಪ್ರಭಾಕರ್​, ಗಿರಿ, ಅಶೋಕ್​, ಮುಂತಾದವರು
    – ಚೇತನ್​ ನಾಡಿಗೇರ್​

    ‘ನಾನು ಪೊಲೀಸ್​ ಆಗೋದು ಕನಸು ಮತ್ತು ಕೊನೆಯ ಆಸೆ ಕೂಡಾ. ಎಷ್ಟೇ ಕಷ್ಟ ಆದರೂ, ಗೆದ್ದೇ ಗೆಲ್ಲುತ್ತೀನಿ. ಪೊಲೀಸ್​ ಆಗೇ ಆಗ್ತೀನಿ …’
    ಚಿತ್ರದ ಆರಂಭದಲ್ಲೇ ಇಂಥದ್ದೊಂದು ಪ್ರತಿಜ್ನೆ ಮಾಡುತ್ತಾನೆ ನಾಯಕ. ಪೊಲೀಸ್​ ಟ್ರೈನಿಂಗ್​ ಸಹ ಮುಗಿಸುತ್ತಾನೆ. ಇನ್ನೇನು ಅವನು ಇಲಾಖೆ ಸೇರಬೇಕು ಮತ್ತು ಪೊಲೀಸ್ ಆಗಬೇಕು ಎನ್ನುವಷ್ಟರಲ್ಲಿ, ಕಪಾಲಿ ಎಂಬ ದೊಡ್ಡ ರೌಡಿಯನ್ನು ಎದುರು ಹಾಕಿಕೊಳ್ಳುತ್ತಾನೆ. ಒಂದು ದಿನ ಕಪಾಲಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಯಾಗುತ್ತದೆ. ರಾಣನ ಮೇಲೆ ಕಪಾಲಿಯ ಸಹೋದರ ಸೂರಿಯ ಕಣ್ಣು ಬೀಳುತ್ತದೆ. ಒಂದು ಕಡೆ ಅವನಿಂದ ತಪ್ಪಿಸಿಕೊಂಡು ಅವನನ್ನು ಮಟ್ಟ ಹಾಕುವುದರ ಜತೆಗೆ, ಯಾವುದೇ ಬ್ಲಾಕ್​ಮಾರ್ಕ್​ ಇಲ್ಲದೆ ಪೊಲೀಸ್​ ಇಲಾಖೆಗೆ ಸೇರಬೇಕು. ಇದನ್ನು ರಾಣ ತನ್ನ ದೈಹಿಕಬಲವಷ್ಟೇ ಅಲ್ಲ, ಚಾಣಾಕ್ಷತೆಯಿಂದ ಹೇಗೆ ಸಾಧಿಸುತ್ತಾನೆ ಎಂಬುದು ಚಿತ್ರದ ಕಥೆ.

    ಇದನ್ನೂ ಓದಿ: ಐ ಸೆಡ್ ಯೆಸ್! ನಾಚಿದ ಮಲೈಕಾ; ಮದುವೆಗೆ ಒಪ್ಪಿಕೊಂಡ್ರಾ?

    ಈ ತರಹದ ಕಥೆ ಕನ್ನಡಕ್ಕೆ ಹೊಸದಲ್ಲ. ಒಂದು ಕಡೆ ಗುರಿ, ಇನ್ನೊಂದು ಕಡೆ ಸಮಸ್ಯೆ. ಅದನ್ನು ಮೆಟ್ಟಿನಿಂತು ನಾಯಕ ಹೇಗೆ ತನ್ನ ಗುರಿ ತಲುಪುತ್ತಾನೆ ಎಂಬ ಕಥೆ ಇರುವ ಚಿತ್ರಗಳು ಈ ಮುನ್ನ ಬಂದಿವೆ. ಆ ಸಾಲಿಗೆ ಹೊಸ ಸೇರ್ಪಡೆ ರಾಣ. ತಮಿಳಿನ ‘ತಡಯಾರ ತಾಕ್ಕ’ ಎಂಬ ಚಿತ್ರದ ರೀಮೇಕ್​ ಇದು. ಅರುಣ್​ ವಿಜಯ್​ ಅಭಿನಯದ ಈ ಚಿತ್ರವನ್ನು ಒಂದಿಷ್ಟು ಬದಲಾವಣೆಗಳೊಂದಿಗೆ ಮಾಡಲಾಗಿದೆ. ಇಂದಿನ ಪ್ರೇಕ್ಷಕರ ಅಭಿರುಚಿ ಮತ್ತು ಟ್ರೆಂಡ್​ ಎರಡೂ ಸಾಕಷ್ಟು ಬದಲಾಗಿರುವ ಹಿನ್ನೆಲೆಯಲ್ಲಿ ಚಿತ್ರ ಸ್ವಲ್ಪ ಹಳತನೆಸಿಬಹುದು.

    ಚಿತ್ರದ ನಿರೂಪಣೆಯ ವಿಷಯದಲ್ಲಿ ನಿರ್ದೇಶಕ ನಂದಕಿಶೋರ್​ ಇನ್ನಷ್ಟು ಗಮನಹರಿಸಬೇಕಿತ್ತೇನೋ. ಚಿತ್ರ ನಿಧಾನವಾಗಿರುವುದಷ್ಟೇ ಅಲ್ಲ, ಯಾವುದು ಫ್ಲಾಶ್​ಬ್ಯಾಕ್​, ಯಾವುದು ವರ್ತಮಾನ, ಚಿತ್ರದ ಕಥೆ ನಡೆಯುತ್ತಿರುವುದು ಎಲ್ಲಿ ಎಂಬಂತಹ ಗೊಂದಲಗಳು ಪ್ರೇಕ್ಷಕರನ್ನು ಕಾಡುತ್ತದೆ. ಚಿತ್ರವನ್ನು ಇನ್ನಷ್ಟು ಚುರುಕುಗೊಳಿಸಿದ್ದರೆ, ಬೇಡದ ಹಾಡು, ದೃಶ್ಯಗಳನ್ನು ಕಡಿಮೆ ಮಾಡಿದ್ದರೆ ಇನ್ನಷ್ಟು ಖುಷಿ ಕೊಡುತ್ತಿತ್ತೋ ಏನೋ?

    ಇದನ್ನೂ ಓದಿ: ಥ್ಯಾಂಕ್ಯೂ ಮೈ ಲವ್ಸ್​​… ರಶ್ಮಿಕಾ ಹೀಗ್ಯಾಕೆ ಅಂದ್ರು?

    ಶ್ರೇಯಸ್​ ನಾಯಕನಾಗಿ ಅಭಿನಯಿಸಿರುವ ಎರಡನೇ ಚಿತ್ರ ಇದು. ಮೊದಲ ಚಿತ್ರಕ್ಕೆ ಹೋಲಿಸಿದರೆ ನೃತ್ಯ ಮತ್ತು ಫೈಟುಗಳಲ್ಲಿ ಇನ್ನಷ್ಟು ಮಿಂಚಿದ್ದಾರೆ ಶ್ರೇಯಸ್​. ರೀಷ್ಮಾ ಮುದ್ದಾಗಿ ಕಾಣಿಸುತ್ತಾರೆ. ರಘು. ಕೋಟೆ ಪ್ರಭಾಕರ್​ ಗಮನಸೆಳೆಯುತ್ತಾರೆ. ಸಾಹಸ ನಿರ್ದೇಶಕರ ಜವಾಬ್ದಾರಿ ಜಾಸ್ತಿ ಇದೆ. ಚಂದನ್​ ಶೆಟ್ಟಿ ಸಂಗೀತದಲ್ಲಿ ಒಂದು ಹಾಡು ಮತ್ತು ಅದನ್ನು ಚಿತ್ರೀಕರಿಸಿರುವ ರೀತಿ ಖುಷಿಕೊಡುತ್ತದೆ.

    ಚಿತ್ರ ವಿಮರ್ಶೆ: ‘ದಿಲ್​ ಪಸಂದ್​’ನಲ್ಲಿ ಸ್ವಲ್ಪ ನಗುವಿದೆ, ಸ್ವಲ್ಪ ಅಳುವಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts