More

    ರಾಣೆಬೆನ್ನೂರಲ್ಲಿ ಬೌ ಬೌ ಹಾವಳಿ

    ರಾಣೆಬೆನ್ನೂರ: ನಗರದಲ್ಲಿ ದಿನೇ ದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ. ನಿತ್ಯವೂ ರಾತ್ರಿ ಸಮಯದಲ್ಲಿ ನೀಡುತ್ತಿರುವ ಉಪಟಳ ಅಷ್ಟಿಷ್ಟಲ್ಲ. ಮಕ್ಕಳು, ಮಹಿಳೆಯರು ಸೇರಿ ನಾಗರಿಕರು ನೆಮ್ಮದಿಯಾಗಿ ತಿರುಗಾಡದ ಸ್ಥಿತಿ ನಿರ್ವಣವಾಗಿದೆ.

    ನಗರಸಭೆಯವರು ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವ ಕಾರಣ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ನಗರದ ಬಸ್ ನಿಲ್ದಾಣ, ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ಕೋರ್ಟ್ ವೃತ್ತ, ಹಲಗೇರಿ ಕ್ರಾಸ್, ಕುರುಬಗೇರಿ, ಸಂಗಮ್ ವೃತ್ತ ಸೇರಿ ವಿವಿಧೆಡೆ ತಡರಾತ್ರಿ ನಾಯಿಗಳ ಹಿಂಡು ಓಡಾಡುತ್ತಿವೆ. ಕತಿಬಗಲ್ಲಿ ಸೇರಿ ಕೆಲ ಬಡಾವಣೆಗಳಲ್ಲಿ ಮನೆ ಮುಂದೆ ಆಟವಾಡುತ್ತಿರುವ ಮಕ್ಕಳ ಮೇಲೂ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ ಉದಾಹರಣೆಗಳಿವೆ. ರಾತ್ರಿ ಸಮಯದಲ್ಲಿ ಬೈಕ್ ಹಾಗೂ ಪಾದಚಾರಿಗಳ ಮೇಲೆ ದಾಳಿ ಮಾಡುತ್ತಿದ್ದು, ಬೆಚ್ಚಿ ಬೀಳುವಂತೆ ಮಾಡುತ್ತಿವೆ.

    ಕಾರುಗಳಲ್ಲಿ ಬರುವವರನ್ನೂ ನಾಯಿಗಳು ಬಿಡುತ್ತಿಲ್ಲ. ಒಂದೊಮ್ಮೆ ಗಾಜು ಮೇಲೇರಿಸದಿದ್ದರೆ ಕಿಟಕಿ ಮಟ್ಟಕ್ಕೆ ಹಾರಿ, ದಾಳಿ ನಡೆಸುತ್ತಿವೆ. ಪರಿಸ್ಥಿತಿ ಹೀಗಿರುವಾಗ ಪಾದಚಾರಿಗಳ ಪಾಡು ಹೇಳುವಂತಿಲ್ಲ. ಮನೆ ಸೇರಲು ತರಾತುರಿಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಎರಗಿ ನಾಯಿಗಳು ಗಾಯಗೊಳಿಸುತ್ತಿವೆ.

    ಬೀದಿ ನಾಯಿಗಳ ಉಪಟಳಕ್ಕೆ ಹಗಲಿನಲ್ಲೂ ಮಕ್ಕಳನ್ನು ಬೀದಿ ಬದಿ ಬಿಡಲು ಜನ ಹೆದರುವ ಪರಿಸ್ಥಿತಿ ನಿರ್ವಣವಾಗಿದೆ. ಆದ್ದರಿಂದ ನಾಗರಿಕರ ನೆಮ್ಮದಿಯನ್ನು ಕಸಿದುಕೊಂಡಿರುವ ಬೀದಿ ನಾಯಿಗಳನ್ನು ಹತೋಟಿಗೆ ತರಬೇಕು. ನಾಯಿಗಳ ಹಾವಳಿ ತಡೆಗಟ್ಟುವ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ, ಸರಿ ಪಡಿಸುತ್ತೇವೆ ಎನ್ನುವ ಭರವಸೆ ನೀಡುತ್ತ ಬಂದಿದ್ದಾರೆ ಹೊರತು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ತಿಂಗಳಿಗೆ 10-12 ಪ್ರಕರಣ: ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ತಿಂಗಳಿಗೆ 10ರಿಂದ 12 ಕೇಸ್​ಗಳು ದಾಖಲಾಗುತ್ತಿವೆ. ಆಸ್ಪತ್ರೆಯಲ್ಲಿ ನಾಯಿ ಕಚ್ಚಿದ ರೋಗಿಗಳಿಗೆ ನೀಡುವ ರ್ಯಾಬಿಪುರ್ ಔಷಧವನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಪರಮೇಶ್ವರಪ್ಪ ಅವರು ‘ವಿಜಯವಾಣಿ’ಗೆ ತಿಳಿಸಿದರು.

    ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸಿಬ್ಬಂದಿಯೊಂದಿಗೆ ರ್ಚಚಿಸಿ ಸೂಕ್ತ ಕಾರ್ಯಾಚರಣೆ ನಡೆಸಲಾಗುವುದು.

    | ಡಾ. ಎನ್. ಮಹಾಂತೇಶ ನಗರಸಭೆ ಆಯುಕ್ತ

    ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿ, ನಸುಕಿನ ಜಾವವಂತೂ ಜನರನ್ನು ಓಡಾಡಲು ಬಿಡುತ್ತಿಲ್ಲ. ಬೆಳಗಿನ ಜಾವ ಪತ್ರಿಕೆ ಹಾಗೂ ಹಾಲು ಹಾಕಲು ಹುಡುಗರು ಬರಲು ಭಯಪಡುತ್ತಿದ್ದಾರೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು.

    | ಪರಶು ಕಾಳೇರ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts