More

    ಯಶಿಕಾ ಕಾರು ಅಪಘಾತ ಪ್ರಕರಣ: ಮೃತ ಭವಾನಿ ಧರಿಸಿದ್ದ ಉಡುಗೆಯೇ ದುರಂತಕ್ಕೆ ಕಾರಣವಾಯ್ತಾ?

    ಚೆನ್ನೈ: ಶನಿವಾರ ಮಧ್ಯರಾತ್ರಿ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಕಾಲಿವುಡ್​ ನಟಿ ಯಶಿಕಾ ಆನಂದ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡಾದರೆ, ಕಾರಿನಲ್ಲಿದ್ದ ಸ್ನೇಹಿತರಾದ ಸೈಯದ್​ ಮತ್ತು ಆಮೀರ್​ ಸಣ್ಣಪುಟ್ಟ ಗಾಯಗಳಿಂದ ಬಚಾವ್​ ಆಗಿದ್ದಾರೆ. ನಟಿಯ ಅಪಘಾತ ಪ್ರಕರಣವೂ ತಮಿಳುನಾಡಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಇದೀಗ ಅಪಘಾತಕ್ಕೆ ಕಾರಣ ಏನೆಂಬ ಸ್ಫೋಟಕ ಮಾಹಿತಿ ಬಯಲಾಗಿದೆ.

    ಬೇಜವಬ್ದಾರಿ ಚಾಲನೆಯಿಂದ ಸಾವಿಗೆ ಕಾರಣವಾಗಿದ್ದು ಸೇರಿದಂತೆ ಮೂರು ಐಪಿಸಿ ಸೆಕ್ಷನ್​ ಅಡಿಯಲ್ಲಿ ನಟಿ ಯಶಿಕಾ ವಿರುದ್ಧ ದೂರು ದಾಖಲಾಗಿದೆ. ಅಲ್ಲದೆ, ಯಶಿಕಾ ಅವರ ಡ್ರೈವಿಂಗ್​ ಲೈಸೆನ್ಸ್​ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಸಿಸಿಟಿವಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಚರ್ಚೆಯ ನಡುವೆಯೇ ಚೆನ್ನೈ ಪೊಲೀಸರು ಸಿಸಿಟಿವಿ ವಿಡಿಯೋಗಳನ್ನು ಮರುಪಡೆದಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

    ಪೊಲೀಸ್​ ವರದಿಗಳ ಪ್ರಕಾರ ಮಿಡ್​ನೈಟ್​ ಪಾರ್ಟಿಯ ಬಳಿಕ ಯಶಿಕಾ, ಭವಾನಿ ಮತ್ತು ಇಬ್ಬರು ಪುರುಷ ಸ್ನೇಹಿತರು ಮಹಾಬಲಿಪುರ ಏರಿಯಾದಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಈ ವೇಳೆ ಯಶಿಕಾ, ಸೀಟ್​ ಬೆಲ್ಟ್​ ಧರಿಸದೇ ವೇಗವಾಗಿ ಕಾರು ಚಲಾಯಿಸುತ್ತಿದ್ದರಂತೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಭವಾನಿ ಸಹ ಸೀಟ್​ ಬೆಲ್ಟ್​ ಧರಿಸಿರಲಿಲ್ಲ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಸೈಯದ್​ ಮತ್ತು ಆಮೀರ್​ ಅದೃಷ್ಟವಶಾತ್​ ಸೀಟ್​ ಬೆಲ್ಟ್​ ಧರಿಸಿದ್ದರು ಎನ್ನಲಾಗಿದೆ.

    ವರದಿಯ ಪ್ರಕಾರ ಕಾರು ಚಲಾಯಿಸುವಾಗ ಏರು ಧ್ವನಿಯಲ್ಲಿ ಮ್ಯೂಸಿಕ್​ ಹಾಕಲಾಗಿತ್ತೆನ್ನಲಾಗಿದೆ. ಇದಲ್ಲದೆ, ಕಾರಿನ ಮೇಲಿನ ಸನ್​ರೂಫ್​ ತೆರೆದು ಅದರಲ್ಲಿ ಮೃತ ಭವಾನಿ ಸೀಟಿನ ಮೇಲೆಯೇ ನಿಂತು ತಲೆಯನ್ನು ಹೊರಗೆ ತೂರಿಸಿ ಹಾಡಿಗೆ ಡ್ಯಾನ್ಸ್​ ಮಾಡುತ್ತಿದ್ದಳು ಎನ್ನಲಾಗಿದೆ. ಈ ವೇಳೆ ಆಕೆಯ ಉಡುಗೆ ಗಾಳಿಗೆ ಬೀಸಿ ದುರಾದೃಷ್ಟವಶಾತ್​​ ಯಶಿಕಾ ಮುಖವನ್ನು ಮುಚ್ಚಿದೆ. ಮುಂದೆ ಏನೂ ಕಾಣದಿದ್ದಾಗ ಸಹಜವಾಗಿಯೇ ಯಶಿಕಾಗೆ ಗಾಬರಿ ಆಗಿ, ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದಾದ ಮರುಕ್ಷಣವೇ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

    ಗಂಟೆಗೆ ಸುಮಾರು 140 ಕಿ.ಮೀ ವೇಗದಲ್ಲಿದ್ದ ಕಾರು ರಸ್ತೆಯ ತಡೆಗೋಡೆಗೆ ಬಡಿದಿದೆ. ಬಳಿಕ ಸನ್​ರೂಫ್​ನಿಂದ ಭವಾನಿ ಹೊರಗೆ ಹಾರಿ, ರಸ್ತೆಗೆ ಬಿದ್ದಿದ್ದಾಳೆ. ಬಿದ್ದ ರಭಸಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಲ್ಲದೆ, ಅತಿವೇಗದಲ್ಲಿದ್ದ ವಾಹನ ಕೆಲ ಸಮಯದವರೆಗೆ ರಸ್ತೆಯಲ್ಲೇ ಉರುಳಾಡಿದೆ. ಇದರಿಂದಾಗಿ ಯಶಿಕಾ ಅವರ ಟಾಟಾ ಹ್ಯಾರಿಯರ್ಸ್​ ಕಾರು ಸಂಪೂರ್ಣ ಜಖಂಗೊಂಡಿದೆ ಎಂದು ಪೊಲೀಸ್​ ವರದಿಯಲ್ಲಿ ತಿಳಿದುಬಂದಿದೆ.

    ಆದರೆ, ಯಶಿಕಾ ತುಂಬಾ ಗಂಭೀರ ಸ್ಥಿತಿಯಲ್ಲಿದ್ದರಿಂದ ಭವಾನಿ ಸಾವಿನ ಬಗ್ಗೆ ತಿಳಿಸಿಲ್ಲ ಎನ್ನಲಾಗಿದೆ. ಯುವ ಜನಾಂಗದ ಅಪಾಯಕಾರಿ ನಡವಳಿಕೆಯಿಂದ ಒಬ್ಬರ ಜೀವನ ಅರ್ಧದಲ್ಲೇ ದುರಂತವಾಗಿ ಅಂತ್ಯವಾಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ ಮತ್ತು ಭವಾನಿ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಪೊಲೀಸರು ಹೆಚ್ಚಿನ ವಿಚಾರಣೆಗೆ ತನಿಖೆ ಮುಂದುವರಿಸಿದ್ದಾರೆ.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ಯಶಿಕಾ ಅವರು ಪ್ರಸ್ತುತ ಕಾಲಿವುಡ್ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮಾಡೆಲ್​ ಹಾಗೂ ಕಿರುತೆರೆ ಕಲಾವಿದೆಯಾಗಿ 2016ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶಿಕಾ, 2018ರಲ್ಲಿ ತೆರೆಕಂಡ ವಯಸ್ಕರ ಕಾಮಿಡಿ ಸಿನಿಮಾ ಡಾರ್ಕ್​ ರೂಮ್​ ಕ್ರಶ್​ ಮೂಲಕ ಹೆಸರುವಾಸಿಯಾದರು. ಇದರೊಂದಿಗೆ ವಿಜಯ್​ ದೇವರಕೊಂಡ ಅಭಿನಯದ ನೋಟಾ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಬಿಗ್​ಬಾಸ್​ ಸೀಸನ್​ 3ರಲ್ಲಿ ಸ್ಪರ್ಧಿಸಿದ್ದು ಯಶಿಕಾ ಖ್ಯಾತಿಗೆ ಮತ್ತಷ್ಟು ಬೂಸ್ಟ್​ ಸಿಕ್ಕಿತು. (ಏಜೆನ್ಸೀಸ್​)

    ಕರೊನಾ ವಿಚಾರದಲ್ಲಿ ದಾಖಲೆ ಬರೆದ ಕೇರಳ! ಒಂದೇ ದಿನ 22 ಸಾವಿರಕ್ಕೂ ಅಧಿಕ ಪ್ರಕರಣ ದೃಢ

    ಒಂದು ಪ್ಲೇಟ್​ಗೆ 15 ಸಾವಿರ ರೂಪಾಯಿ! ಇದು ಭೂಮಿಯ ಅತ್ಯಂತ ದುಬಾರಿ ಫ್ರೆಂಚ್​ ಫ್ರೈಸ್​!

    ವರುಣಾರ್ಭಟಕ್ಕೆ ‘ಮಹಾರಾಷ್ಟ್ರ’ ತತ್ತರ: 209 ಸಾವು, ಎಂಟು ಜನ ನಾಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts