More

    ಬ್ಲಾಕ್​ಬಾಕ್ಸ್​ ಅಂದ್ರೇನು? ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​ ಪತನಕ್ಕೆ ಕಾರಣ ಪತ್ತೆಹಚ್ಚಲು ಹೇಗೆ ನೆರವಾಗುತ್ತೆ?

    ಚೆನ್ನೈ: 2021 ಡಿಸೆಂಬರ್​​ 8 ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದು, ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಸುರಕ್ಷಿತವಾಗಿದ್ದ ರಷ್ಯಾ ನಿರ್ಮಿತ ಎಂಐ-17 ಚಾಪರ್ ಪತನವಾಗಿದ್ದು ಹೇಗೆ ಎಂಬ ನಿಗೂಢ ಪ್ರಶ್ನೆಯೊಂದು ಹಾಗೇ ಉಳಿದಿದೆ.

    ಘಟನೆ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಪತನಕ್ಕೆ ಕಾರಣ ಪತ್ತೆಹಚ್ಚುವ ಕಾರ್ಯ ಆರಂಭವಾಗಿದ್ದು, ಅದಕ್ಕೆ ಪೂರಕವಾಗಿ ಭಾರತೀಯ ವಾಯುಪಡೆಗೆ ಹೆಲಿಕಾಪ್ಟರ್​ನಲ್ಲಿದ್ದ ಬ್ಲಾಕ್​ ಬಾಕ್ಸ್​ ಸಿಕ್ಕಿದೆ. ಇದೊಂದು ಮಹತ್ವದ ಎಲೆಕ್ಟ್ರಾನಿಕ್​ ಸಾಧನ. ಇದನ್ನು ಫ್ಲೈಟ್​ ಡಾಟಾ ರೆಕಾರ್ಡರ್​ ಅಂತಲೂ ಕರೆಯುತ್ತಾರೆ. ವಿಮಾನ ಅಥವಾ ಹೆಲಿಕಾಪ್ಟರ್​, ಗಾಳಿಯ ವೇಗ,​ ಹಾರಾಟದ ಎತ್ತರ, ಕಾಕ್​ಪಿಟ್​ನಲ್ಲಿ ನಡೆಯುವ ಸಂಭಾಷಣೆ ಮತ್ತು ಗಾಳಿಯ ಒತ್ತಡ ಸೇರಿದಂತೆ 88 ಮಾನದಂಡಗಳನ್ನು ಬ್ಲಾಕ್​ಬಾಕ್ಸ್​ ರೆಕಾರ್ಡ್​ ಮಾಡುತ್ತದೆ. ವಿಮಾನ ಅಥವಾ ಹೆಲಿಕಾಪ್ಟರ್​ ಪತನ ಸಂಭವಿಸಿದಾಗ, ಅದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಬ್ಲಾಕ್​ ಬಾಕ್ಸ್​ ಪ್ರಮುಖವಾಗಿದ್ದು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ.

    ಬ್ಲಾಕ್​ಬಾಕ್ಸ್​ ಎಂದರೇನು?
    ಬ್ಲಾಕ್​ಬಾಕ್ಸ್​ ಹೆಸರಿ ತಕ್ಕಂತೆ ಅದು ಕಪ್ಪು ಬಣ್ಣದಲ್ಲಾಗಲಿ ಅಥವಾ ಬಾಕ್ಸ್​ ಆಕಾರದಲ್ಲಾಗಲಿ ಇರುವುದಿಲ್ಲ. ಇದು ಸಂಕೋಚಕ ಆಕಾರದ ಸಾಧನವಾಗಿದ್ದು, ಸ್ಪಷ್ಟವಾಗಿ ಗೋಚರಿಸಲು ಸುಲಭವಾಗುವಂತಹ ಕಿತ್ತಳೆ ಬಣ್ಣದಲ್ಲಿ ಇರುತ್ತದೆ. ಬ್ಲಾಕ್​ಬಾಕ್ಸ್​ ಎಂಬ ಹೆಸರು ಹೇಗೆ ಬಂತು ಎಂಬುದು ತಜ್ಞರಿಗೂ ಸಹ ಸರಿಯಾಗಿ ತಿಳಿದಿಲ್ಲ. ಆದರೆ, 1950ರಲ್ಲಿ ಆಸ್ಟ್ರೇಲಿಯಾದ ವಿಜ್ಞಾನಿ ಡೇವಿಡ್​ ವಾರೆನ್​ ಇದನ್ನು ಕಂಡುಹಿಡಿದರು. ಭವಿಷ್ಯದ ಅನಾಹುತಗಳನ್ನು ತಡೆಯಲು ಸಹಕಾರಿಯಾಗುವ ಡಾಟಾ ಮತ್ತು ಕಾಕ್​ಪಿಟ್​ನಲ್ಲಾದ ಧ್ವನಿಯಿಂದ ಸಿಗುವ ಸುಳಿವನ್ನು ಪಡೆದುಕೊಳ್ಳಲು ಎಲ್ಲ ವಾಣಿಜ್ಯಾತ್ಮಕ ವಿಮಾನ ಮತ್ತು ರಕ್ಷಣಾ ಪಡೆಗಳ ವಾಯುಯಾನದಲ್ಲಿ ಬ್ಲಾಕ್​ಬಾಕ್ಸ್​ ಅನ್ನು ಕಡ್ಡಾಯ ಮಾಡಲಾಗಿದೆ.

    ಬ್ಲಾಕ್​ಬಾಕ್ಸ್​ ಒಳಗಡೆ ಏನಿದೆ?
    ಒಂದು ಮಾದರಿಯ ಬ್ಲಾಕ್​​ಬಾಕ್ಸ್​ 10 ಪೌಂಡ್​ (4.5 ಕೆಜಿ) ತೂಕವಿರುತ್ತದೆ ಮತ್ತು ನಾಲ್ಕು ಪ್ರಮುಖ ಭಾಗಗಳನ್ನು ಹೊಂದಿರುತ್ತದೆ. ಮೊದಲನೇಯದಾಗಿ ಸಾಧನವನ್ನು ಸರಿಪಡಿಸಲು ಮತ್ತು ರೆಕಾರ್ಡಿಂಗ್ ಮತ್ತು ಪ್ಲೇಬ್ಯಾಕ್ ಅನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾದ ಚಾಸಿಸ್ ಅಥವಾ ಇಂಟರ್ಫೇಸ್ ಇರುತ್ತದೆ. ಎರಡನೆಯದಾಗಿ ನೀರೊಳಗಿನ ಲೊಕೇಟರ್ ಬೀಕನ್ ಅಳವಡಿಸಲಾಗಿರುತ್ತದೆ. ಮೂರನೇಯದಾಗಿ ಸಂಪೂರ್ಣ ಉಕ್ಕು ಅಥವಾ ಟೈಟಾನಿಯಂನಿಂದ ಮಾಡಿದ ಕೋರ್ ಹೌಸಿಂಗ್ ಅಥವಾ ‘ಕ್ರ್ಯಾಶ್ ಸರ್ವೈವಬಲ್ ಮೆಮೊರಿ ಯುನಿಟ್’ ಇರುತ್ತದೆ. ನಾಲ್ಕನೆಯದಾಗಿ ಬ್ಲಾಕ್​ಬಾಕ್ಸ್​ ಒಳಗೆ ಸರ್ಕ್ಯೂಟ್ ಬೋರ್ಡ್‌ಗಳಲ್ಲಿ ಬೆರಳು-ಉಗುರು ಗಾತ್ರದ ಮಹತ್ವದ ರೆಕಾರ್ಡಿಂಗ್ ಚಿಪ್‌ಗಳು ಇರುತ್ತದೆ. ಅದಲ್ಲದೆ, ಬ್ಲಾಕ್​ಬಾಕ್ಸ್​ನಲ್ಲಿ ಎರಡು ರೆಕಾರ್ಡರ್​ಗಳಿರುತ್ತದೆ. ಒಂದು ಪೈಲಟ್​ ಧ್ವನಿ ಅಥವಾ ಕಾಕ್​ಪಿಟ್​ ಶಬ್ದವನ್ನು ರೆಕಾರ್ಡ್​ ಮಾಡುವ ಕಾಕ್​ಪಿಟ್​ ವಾಯ್ಸ್​ ರೆಕಾರ್ಡರ್​ (ಸಿವಿಆರ್​) ಮತ್ತು ಒಂದು ಫ್ಲೈಟ್​ ಡಾಟಾ ರೆಕಾರ್ಡರ್​ (ಎಫ್​ಡಿಆರ್​) ಇರುತ್ತದೆ.

    ರೆಕಾರ್ಡಿಂಗ್​ ಹೇಗೆ ಆಧಾರವಾಗುತ್ತದೆ?
    ತಂತ್ರಜ್ಞರು ಮೊದಲಿಗೆ ಬ್ಲಾಕ್​ಬಾಕ್ಸ್​ನ ರಕ್ಷಣಾತ್ಮಕ ವಸ್ತುಗಳನ್ನು ತೆಗೆಯುತ್ತಾರೆ ಮತ್ತು ಆಕಸ್ಮಿಕವಾಗಿ ಡಾಟಾ ಅಳಿಸಿ ಹೋಗದಂತೆ ಖಚಿತಪಡಿಸಿಕೊಳ್ಳಲು ಸಂಪರ್ಕ ಕೊಂಡಿಗಳನ್ನು ಶುಚಿಗೊಳಿಸುತ್ತಾರೆ. ಆಡಿಯೋ ಅಥವಾ ಡಾಟಾವನ್ನು ಡೌನ್​ಲೋಡ್​ ಅಥವಾ ಕಾಪಿ ಮಾಡಿಕೊಳ್ಳುತ್ತಾರೆ. ಮೊದಲಿಗೆ ಆ ಡಾಟಾ ಯಾವುದೇ ಅರ್ಥವನ್ನು ನೀಡುವುದಿಲ್ಲ. ಹೀಗಾಗಿ ಡಾಟಾವನ್ನು ಗ್ರಾಫ್‌ಗಳಾಗಿ ಪರಿವರ್ತಿಸುವ ಮೊದಲು ಕಚ್ಚಾ ಫೈಲ್‌ಗಳಿಂದ ಡಿಕೋಡ್ ಮಾಡಬೇಕು. ತನಿಖಾಧಿಕಾರಿಗಳು ಕೆಲವೊಮ್ಮೆ ಸ್ಪೆಕ್ಟ್ರಲ್​ ವಿಶ್ಲೇಷಣೆಯನ್ನು ಬಳಸಿಕೊಳ್ಳುತ್ತಾರೆ. ಅಂದರೆ, ಬೆಳಕು, ಧ್ವನಿ ಅಥವಾ ಇತರ ಕಂಪನಗಳ ವಿಶ್ಲೇಷಣೆ ಮಾಡುತ್ತಾರೆ.

    ಡಾಟಾವನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ?
    ಸಿಂಕ್ರೊನೈಸ್ ಮಾಡಿದ ಡಾಟಾವನ್ನು ಸ್ಕ್ರೀನ್ ಮೇಲೆ ತೋರಲು ಲಿಂಕ್​ ಆಗಿರುವ ಆಡಿಯೋ ಮಿಕ್ಸಿಂಗ್​ ಮತ್ತು ಪ್ಲೇಬ್ಯಾಕ್​ ರೆಕಾರ್ಡಿಂಗ್​ ಸಾಧನಗಳನ್ನು ಹೊಂದಿರುವ ರೆಕಾರ್ಡಿಂಗ್​ ಸ್ಟುಡಿಯೋವನ್ನು ಬಳಸಿಕೊಳ್ಳಲಾಗುತ್ತದೆ. ನಾಲ್ಕು ಚಾನೆಲ್​ಗಳು ಧ್ವನಿಗಳು ಮತ್ತು ಸುತ್ತವರಿದ ಇನ್ನಿತರ ಶಬ್ದಗಳನ್ನು ಮೊದಲು ಪ್ರತ್ಯೇಕಿಸುತ್ತವೆ. ಈ ವೇಳೆ ಮುಖ್ಯ ತನಿಖಾಧಿಕಾರಿ ಮತ್ತು ಬೆರಳೆಣಿಕೆಯಷ್ಟು ಜನರು ಮಾತ್ರ ಟೇಪ್‌ಗಳನ್ನು ಕೇಳುತ್ತಾರೆ, ನಂತರ ಅದನ್ನು ಮುಚ್ಚಲಾಗುತ್ತದೆ.

    ಫಲಿತಾಂಶ ಯಾವಾಗ ಬರಲಿದೆ?
    ತನಿಖಾಧಿಕಾರಿಗಳು ತಮ್ಮ ಕೆಲಸವನ್ನು ಕ್ರಮಬದ್ಧವಾಗಿ ಮಾಡಲು ಇಚ್ಛಿಸುತ್ತಾರೆ. ಆದರೆ, ಸಾರ್ವಜನಿಕರು ಮತ್ತು ಮಾಧ್ಯಮಗಳ ಒತ್ತಡ ಈ ಸಂದರ್ಭದಲ್ಲಿ ತೀವ್ರವಾಗಿರುತ್ತದೆ. ಬ್ಲಾಕ್​ಬಾಕ್​ ಮೇಲಾದ ಹಾನಿ ಮತ್ತು ಅಪಘಾತದ ತೀವ್ರತೆಯ ಆಧಾರದ ಮೇಲೆ ಫಲಿತಾಂಶ ನಿರ್ಧಾರವಾಗಿರುತ್ತದೆ. ತನಿಖಾಧಿಕಾರಿಗಳು ಗಂಟೆಗಳಲ್ಲಿ ಅಥವಾ ಒಂದು ದಿನಗಳಲ್ಲಿ ಅಪಘಾತದ ಸುಳಿವನ್ನು ಕಂಡುಕೊಳ್ಳಬಹುದು. ಆದರೆ, ಇದು ಯಾವಾಗಲೂ ಸಾಧ್ಯವಿಲ್ಲ ಎಂಬುದನ್ನು ಸಹ ಅವರು ಒತ್ತಿ ಹೇಳುತ್ತಾರೆ. ಬ್ಲಾಕ್​ಬಾಕ್ಸ್​ ಪತ್ತೆಯಾದ ಒಂದು ತಿಂಗಳ ಬಳಿಕ ಮಧ್ಯಂತರ ವರದಿಯನ್ನು ಪ್ರಕಟಿಸಲಾಗುತ್ತದೆ. ಆದರೆ, ಅದು ಕೂಡ ವಿರಳವಾಗಿರುತ್ತದೆ. ಆಳವಾದ ತನಿಖೆಗೆ ಒಂದು ವರ್ಷ ತೆಗೆದುಕೊಳ್ಳುತ್ತದೆ. 2010ರಲ್ಲಿ ಇಥೋಪಿಯನ್​ ಏರ್​ಲೈನ್ಸ್​ ಪತನದ ತನಿಖೆ ಎರಡು ವರ್ಷ ತೆಗೆದುಕೊಂಡಿತು.

    ಡಿ. 8ರಂದು ನಡೆದಿದ್ದೇನು?
    ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ಬುಧವಾರ (ಡಿ.8) ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್​ ಬಿಪಿನ್​ ರಾವತ್​ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ. (ಏಜೆನ್ಸೀಸ್​)

    ಹೆಲಿಕಾಪ್ಟರ್​​ ಪತನದ ವೈರಲ್​ ವಿಡಿಯೋಗೂ ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​​ ಪತನಕ್ಕೂ ಸಂಬಂಧವಿಲ್ಲ: ನಿಜಾಂಶ ಇಲ್ಲಿದೆ!

    ಸೇನಾ ಹೆಲಿಕಾಪ್ಟರ್​ ಪತನ: ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​ ಪತನಕ್ಕೂ ಮುನ್ನ ಕೊನೇ ದೃಶ್ಯ ಲಭ್ಯ

    ಜನರಲ್​​ ಬಿಪಿನ್​ ರಾವತ್​ ಅವರ ಕೊನೇ ಆಸೆ ಏನಿತ್ತು? ತಮ್ಮ ಗ್ರಾಮದ ಜನರ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts