More

    ನಟ ಸಿದ್ಧಾರ್ಥ್ ಶುಕ್ಲಾರಿಗೆ ತಡರಾತ್ರಿಯೇ ಸಿಕ್ಕಿತ್ತು ಸಾವಿನ ಸುಳಿವು: ಎಚ್ಚೆತ್ತುಕೊಂಡಿದ್ರೆ ಜೀವ ಉಳಿಯುತ್ತಿತ್ತು

    ಮುಂಬೈ: ನಟ ಹಾಗೂ ಹಿಂದಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​-13ರ ವಿಜೇತ ಸಿದ್ಧಾರ್ಥ್ ಶುಕ್ಲಾ (40) ಅವರ ಸಾವು ಸ್ಯಾಂಡಲ್​ವುಡ್​ ಸ್ಟಾರ್​ ಚಿರಂಜೀವಿ ಸರ್ಜಾರನ್ನು ನೆನಪಿಸಿದೆ. ಇಬ್ಬರದ್ದು ಒಂದೇ ವಯಸ್ಸು ಮತ್ತು ಒಂದೇ ರೀತಿಯ ಸಾವು. ಹೃದಯಾಘಾತ ಇಬ್ಬರನ್ನು ಬಲಿಪಡೆದುಕೊಂಡಿದೆ. ಚಿತ್ರರಂಗದಲ್ಲಿ ಬೆಳೆಯಬೇಕೆಂಬುದು ಇಬ್ಬರ ಕನಸಾಗಿತ್ತು. ಆದರೆ ವಿಧಿಯಾಟದಲ್ಲಿ ಇಬ್ಬರ ಪಯಣ ಅರ್ಧದಲ್ಲೇ ಮುಗಿದಿದ್ದು ದುರಾದೃಷ್ಟಕರ.

    ಶುಕ್ಲಾ ಸೆಪ್ಟೆಂಬರ್​ 2ರಂದು ಭಾರೀ ಹೃದಯಾಘಾತದಿಂದ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸಾವಿಗೂ ಮುನ್ನ ಅವರನ್ನು ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಿಸಿದಾದರೂ ಬದುಕುಳಿಯಲಿಲ್ಲ. ಕೆಲವೊಂದು ವರದಿಗಳ ಪ್ರಕಾರ ರಾತ್ರಿ ಮಲಗುವ ಮುನ್ನ ಕೆಲವು ಔಷಧಿಗಳನ್ನು ತೆಗೆದುಕೊಂಡ ಶುಕ್ಲಾ ಬೆಳಗ್ಗೆ ಮತ್ತೆ ಏಳಲೇ ಇಲ್ಲ ಎಂಬ ಮಾಹಿತಿ ಇದೆ. ಹಾಗಾದ್ರೆ ರಾತ್ರಿ ನಿಜಕ್ಕೂ ಏನು ನಡೆದಿರಬಹದು?​

    ಪೊಲೀಸ್​ ಮೂಲಗಳ ಪ್ರಕಾರ ಮುಂಜಾನೆ 3 ರಿಂದ 3.30ರ ಸುಮಾರಿಗೆ ಶುಕ್ಲಾ ಎಚ್ಚರಗೊಂಡಿದ್ದು, ಅವರಿಗೆ ತುಂಬಾ ಅಹಿತಕರ ಅನಿಸತೊಡಗಿದೆ. ತಕ್ಷಣ ತಮ್ಮ ತಾಯಿಯ ಬಳಿ ಯಾಕೋ ಎದೆ ನೋವುತ್ತಿದೆ ಎಂದಿದ್ದಾರೆ. ನಂತರ ಅವರ ತಾಯಿ ಮಗನಿಗೆ ನೀರು ಕುಡಿಸಿ ಮತ್ತೆ ಮಲಗಿಸಿದ್ದಾರೆ. ಬಹುಶಃ ಈ ಸಮಯದಲ್ಲೇ ಎಚ್ಚೆತ್ತುಕೊಂಡಿದ್ದರೆ ಶುಕ್ಲಾ ಬದುಕುಳಿಯುತ್ತಿದ್ದರು ಅನ್ಸುತ್ತೆ. ಆದರೆ, ವಿಧಿಯಾಟ ಬೇರೆಯೇ ಇತ್ತು. ಬೆಳಗ್ಗೆ ನೋಡಿದರೆ ಶುಕ್ಲಾ ಮೇಲೆ ಏಳಲೇ ಇಲ್ಲ. ತಟ್ಟಿ ಏಳಿಸಲು ತಾಯಿ ಎಷ್ಟೇ ಪ್ರಯತ್ನ ಮಾಡಿದ್ರೂ ಸಹ ಸರಿ ಸ್ಪಂದನೆ ದೊರೆಯದಿದ್ದನ್ನು ನೋಡಿ ಗಾಬರಿಗೊಂಡು ಶುಕ್ಲಾ ಸಹೋದರಿಗೆ ಕರೆ ಮಾಡಿದ್ದಾರೆ. ಬಳಿಕ ಸಹೋದರಿಗೆ ವೈದ್ಯರಿಗೆ ಕರೆ ಮಾಡಿದ್ದಾರೆ.

    ಬೆಳಗ್ಗೆ 9.40ರ ಸುಮಾರಿಗೆ ಶುಕ್ಲಾರನ್ನು ಕೂಪರ್​ ಆಸ್ಪತ್ರೆಗೆ ಆಂಬ್ಯುಲೆನ್ಸ್​ ಮೂಲಕ ಕೊರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಅವರ ಬಾವ, ಸಹೋದರಿ ಮತ್ತು ಸೋದರ ಸಂಬಂಧಿ ಹಾಗೂ ಮೂವರು ಸ್ನೇಹಿತರು ಸ್ಥಳದಲ್ಲಿದ್ದರು. ಪರೀಕ್ಷಿಸಿದ ವೈದ್ಯರು 10.15ರ ಸುಮಾರಿಗೆ ಹೊರಬಂದು ಶುಕ್ಲಾ ಮೃತಪಟ್ಟಿರುವುದಾಗಿ ಘೋಷಿಸಿದರು. ಶುಕ್ಲಾ ಅವರ ಮೃತದೇಹವನ್ನು ಮೂರು ಬಾರಿ ಕ್ಯಾಶುವಲ್ಟಿ ವಾರ್ಡ್‌ನಲ್ಲಿ ಪರೀಕ್ಷಿಸಲಾಯಿತು. ಯಾವುದೇ ಬಾಹ್ಯ ಗಾಯ ಮತ್ತು ಯಾವುದೇ ಅನುಮಾನ ಮೂಡಿಸುವಂತಹ ಘಟನೆ ವರದಿಯಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ನಿನ್ನೆ ಮಧ್ಯಾಹ್ನ 3.45ರ ಸುಮಾರಿಗೆ ಶುಕ್ಲಾ ಶವಪರೀಕ್ಷೆ ಮಾಡಲಾಗಿದ್ದು, ಅದನ್ನು ವಿಡಿಯೋ ರೆಕಾರ್ಡ್​ ಸಹ ಮಾಡಲಾಗಿದೆ. ಮುಂಬೈ ಪೊಲೀಸರಿಂದ ಇಬ್ಬರು ಪೊಲೀಸರು ಸಾಕ್ಷಿಗಳಾಗಿ ಹಾಜರಾಗಿದ್ದರು. ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ. ಪ್ರಕರಣವು ಸೂಕ್ಷ್ಮವಾಗಿರುವುದರಿಂದ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಹಿಂದಿನ ಅನುಭವದ ಸುಳಿವುಗಳನ್ನು ತೆಗೆದುಕೊಂಡು ಪೊಲೀಸರು ಮತ್ತು ವೈದ್ಯರು ಎಲ್ಲವನ್ನೂ ಎರಡು ಬಾರಿ ಪರಿಶೀಲಿಸಿದ್ದಾರೆ.

    ಮರಣೋತ್ತರ ಪರೀಕ್ಷೆ ಸಂಜೆ 6ಕ್ಕೆ ಮುಗಿದಿದೆ. ಸದ್ಯಕ್ಕೆ, ಸಿದ್ಧಾರ್ಥ್ ಕುಟುಂಬವು ಯಾವುದೇ ಅನುಮಾನಗಳನ್ನು ಹುಟ್ಟುಹಾಕಿಲ್ಲ. ಆದರೆ, ಪೊಲೀಸರು ಶವವನ್ನು ಹಸ್ತಾಂತರಿಸಿದ ನಂತರ ಮತ್ತು ಅಂತಿಮ ವಿಧಿವಿಧಾನಗಳನ್ನು ಮುಗಿಸಿದ ನಂತರ ಕುಟುಂಬದ ಸದಸ್ಯರ ಹೇಳಿಕೆಗಳನ್ನು ದಾಖಲಿಸುತ್ತಾರೆ. ಆ ಸಮಯದಲ್ಲಿ, ಯಾವುದೇ ಕುಟುಂಬದ ಸದಸ್ಯರು ಅಥವಾ ಬೇರೆಯವರು ಏನೇ ಅನುಮಾನಗಳನ್ನು ವ್ಯಕ್ತಪಡಿಸಿದರೂ ಪೊಲೀಸರು ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದಾರೆ.

    ಸಿದ್ದಾರ್ಥ್ ಯಾವುದಾದರೂ ಔಷಧಿಗಳನ್ನು ಸೇವಿಸುತ್ತಿದ್ದಾನೆಯೇ ಮತ್ತು ಮಲಗುವ ಮುನ್ನ ಯಾವುದಾದರೂ ಔಷಧಿಗಳನ್ನು ತೆಗೆದುಕೊಂಡಿದ್ದರಾ? ಎಂದು ಪೊಲೀಸರು ತನಿಖೆ ನಡೆಸಲಿದ್ದಾರೆ. ಸಾವಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ. ತನಿಖೆಗಾಗಿ ಶುಕ್ಲಾ ನಿವಾಸದಲ್ಲಿ ಪೊಲೀಸರ ತಂಡವಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ. ಇಂದು ಅಂತಿಮ ವಿಧಿ-ವಿಧಾನ ನಡೆಯಲಿದೆ. (ಏಜೆನ್ಸೀಸ್​)

    ಬಿಗ್​ ಬಾಸ್​​ ವಿಜೇತ, ನಟ ಸಿದ್ಧಾರ್ಥ್ ಶುಕ್ಲಾ ನಿಧನ

    ಚಿತ್ರಮಂದಿರಕ್ಕೆ ತಲೈವಿ ಎಂಟ್ರಿ; 10ಕ್ಕೆ ಜಯಲಲಿತಾ ಬಯೋಪಿಕ್

    ಅಡಕತ್ತರಿಯಲ್ಲಿ ಚಿತ್ರರಂಗ; ಯಾವ ಧೈರ್ಯದ ಮೇಲೆ ಸಿನಿಮಾ ಬಿಡುಗಡೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts