ಕೊಚ್ಚಿ: ಎಷ್ಟೇ ಶ್ರೀಮಂತಿಕೆ ಇದ್ದರೂ ಅಥವಾ ಕೆಲವೊಮ್ಮೆ ಅದೃಷ್ಟ ಖುಲಾಯಿಸಿ ದಿಢೀರ್ ಶ್ರೀಮಂತನಾದರೂ ನಾವು ನಡೆದುಬಂದ ಹಾದಿಯನ್ನು ಮರೆಯಬಾರದು ಎಂದು ತಿಳಿದವರು ಹೇಳುತ್ತಾರೆ. ಆದರೆ, ಬಹುತೇಕರು ಇದಕ್ಕೆ ತದ್ವಿರುದ್ಧವಾಗಿಯೇ ನಡೆದುಕೊಂಡರೆ, ಬೆರಳಣಿಕೆಯಷ್ಟು ಮಂದಿ ಇದನ್ನು ಅನುಸರಿಸುತ್ತಾರೆ. ಆ ಸಾಲಿಗೆ ನೀವು ಮೇಲಿನ ಫೋಟೋದಲ್ಲಿ ನೋಡುತ್ತಿರುವ ವ್ಯಕ್ತಿ ತಾಜಾ ಉದಾಹರಣೆಯಾಗಿದ್ದಾರೆ.
ಕೇರಳದ ಅತಿ ದೊಡ್ಡ ಹಬ್ಬ ಓಣಂ ವಿಶೇಷವಾಗಿ ಪ್ರತಿ ವರ್ಷ ಸರ್ಕಾರ ಬಂಪರ್ ಲಾಟರಿಯನ್ನು ಆಯೋಜಿಸುತ್ತದೆ. ಈ ಬಾರಿ ಬಂಪರ್ ಲಾಟರಿಯ ಬಹುಮಾನ ಮೊತ್ತವಾಗಿ 25 ಕೋಟಿ ರೂಪಾಯಿಯನ್ನು ಸರ್ಕಾರ ನಿಗದಿ ಮಾಡಿದೆ. ಈ ವಿಚಾರ ಕೇರಳದಲ್ಲಿ ಭಾರೀ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಕಳೆದ ವರ್ಷದ ಓಣಂ ಬಂಪರ್ ಲಾಟರಿ ವಿಜೇತ ಪಿ.ಆರ್. ಜಯಪಲಾನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇವರ ಕುರಿತಾದ ಈ ಒಂದು ಸ್ಟೋರಿ ಒಳ್ಳೆಯ ಸಂದೇಶವನ್ನೂ ಸಾರುತ್ತದೆ.
ಕಳೆದ ವರ್ಷ ಓಣಂ ಬಂಪರ್ ಲಾಟರಿಯಲ್ಲಿ 12 ಕೋಟಿ ರೂ. ಗೆದ್ದಿರುವ ಪಿ. ಆರ್. ಜಯಪಾಲನ್, ಓರ್ವ ಸಾಮಾನ್ಯ ಆಟೋ ಚಾಲಕ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವ ಈ ಕಾಲದಲ್ಲಿ ಜಯಪಾಲನ್ ಇಂದಿಗೂ ಮೊದಲಿನಂತೆಯೇ ಆಟೋ ಚಲಾಯಿಸುತ್ತಿದ್ದಾರೆ ಅಂದರೆ, ಅಚ್ಚರಿಯ ವಿಷಯವೇ ಸರಿ. ಜಯಪಾಲನ್ ಪತ್ನಿ ಮಿನಿ ಅವರು ಛೋಟನಿಕರಾದಲ್ಲಿರುವ ಡಾ. ಪಡಿಯ್ಯಾರ್ ಮೊಮೆರಿಯಲ್ ಮೆಡಿಕಲ್ ಕಾಲೇಜಿನಲ್ಲಿ ಸ್ವೀಪರ್ (ಕಸ ಗುಡಿಸುವ) ಆಗಿ ಕೆಲಸ ಮಾಡುತ್ತಿದ್ದಾರೆ. ಓಣಂ ಲಾಟರಿಯಲ್ಲಿ ಅದೃಷ್ಟ ಕೈಹಿಡಿದರೂ ಜಯಪಾಲನ್ ಅವರ ಹವ್ಯಾಸದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಈಗಾಗಲೂ ಎಂದಿನಂತೆಯೇ ತಮ್ಮ ಸರಳ ಜೀವನವನ್ನು ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜಯಪಾಲನ್, ಲಾಟರಿಯಲ್ಲಿ ಬಂದ ಹಣದಿಂದ ಒಂದು ಕಾರು ಮತ್ತು ತ್ರಿಪುಣಿತುರಾ ಹಾಗೂ ಪಚಲತ್ನಲ್ಲಿ 11 ಸೆಂಟ್ ಜಮೀನು ಖರೀದಿಸಿದ್ದೇನೆ. ಕೆಲವೊಂದಿಷ್ಟು ಸಾಲ ಇತ್ತು. ಅದನ್ನು ತೀರಿಸಿದ್ದೇನೆ. ಒಂದಿಷ್ಟು ಹಣವನ್ನು ಒಡಹುಟ್ಟಿದವರು ಮತ್ತು ಆಪ್ತ ಸಂಬಂಧಿಕರಿಗೆ ನೀಡಿದ್ದೇನೆ. ಒಂದು ಭಾಗದ ಹಣದಲ್ಲಿ ಬಡವರಿಗೆ ಸಹಾಯ ಮಾಡಿದ್ದೇನೆ. ಉಳಿದ ಹಣವನ್ನು ನನ್ನ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೇನೆ. ಆ ಹಣವನ್ನು ಕುಟುಂಬದ ವೆಚ್ಚಕ್ಕಾಗಿ ಬಳಸುತ್ತಿಲ್ಲ ಎಂದು ಜಯಪಾಲನ್ ಹೇಳಿದ್ದಾರೆ.
ಜಯಪಾಲನ್ ಅವರ ಹಿರಿಯ ಮಗ ವೈಶಾಕ್ ಎಲೆಕ್ಟ್ರಿಷಿಯನ್. ಸೊಸೆ ಕಾರ್ತಿಕಾ ಪೋಸ್ಟ್ವುಮನ್. ಕಿರಿಯ ಮಗ ವಿಷ್ಣು ಹೋಮಿಯೋ ಡಾಕ್ಟರ್. ಈಗ ಎಂಬಿಬಿಎಸ್ಗೆ ಸೇರಿದ್ದಾನೆ. ಆಟೋಗಾಗಿ ತೆಗೆದುಕೊಂಡಿದ್ದ ಸಾಲವನ್ನು ಜಯಪಾಲನ್ ಇನ್ನೂ ಪಾವತಿಸಬೇಕಿದೆ.
ಇದೀಗ ಕೇರಳ ಸರ್ಕಾರ ಓಣಂ ಬಂಪರ್ ಲಾಟರಿ ಬಹುಮಾನವಾಗಿ 25 ಕೋಟಿ ರೂಪಾಯಿ ಹಣವನ್ನು ನಿಗದಿ ಮಾಡಿದೆ. ದ್ವಿತೀಯ ಬಹುಮಾನ 5 ಕೋಟಿ ಹಾಗೂ 10 ತೃತೀಯ ಬಹುಮಾನ ತಲಾ 1 ಕೋಟಿ ರೂಪಾಯಿಗಳ ಲಾಟರಿ ಯೋಜನೆ ಇದಾಗಿದೆ. ಇದರಲ್ಲಿ ವಿಜೇತರಾಗುವವರಿಗೆ ಜಯಪಾಲನ್ ಅವರು ಸಂದೇಶವನ್ನು ರವಾನಿಸಿದ್ದು, ಹಣ ವ್ಯರ್ಥ ಮಾಡಬೇಡಿ ಎಂದು ಹೇಳಿದ್ದಾರೆ. ಎಲ್ಲವೂ ಕೂಡ ವಿಷ್ಣುವಿನ ಮಹಿಮೆ. ನಾನು ಒಂದು ತೋಟವನ್ನು ಖರೀದಿ ಮಾಡಿ 10 ಮಂದಿಗೆ ಉದ್ಯೋಗ ನೀಡಲು ಬಯಸಿದ್ದೇನೆ ಎಂದು ಜಯಪಾಲನ್ ಹೇಳಿದ್ದಾರೆ. (ಏಜೆನ್ಸೀಸ್)
ಯಾರಿಗುಂಟು, ಯಾರಿಗಿಲ್ಲ 25 ಕೋಟಿ ರೂಪಾಯಿ ಗೆಲ್ಲುವ ಅದೃಷ್ಟ: ಓಣಂ ನಿಮಿತ್ತ ಹಣದ ಹೊಳೆ
ವಿಜಯ್-ರಶ್ಮಿಕಾ ನಡುವಿನ ಲವ್ ಲೈಫ್ ಬಗ್ಗೆ ಬಹಿರಂಗವಾಗಿ ಮಾತನಾಡಿದ ಸಾರಾ ಅಲಿ ಖಾನ್!
ಉನ್ನತ ಹುದ್ದೆ ಆಸೆ ತೋರಿಸಿ ಕೋಟಿ ಕೋಟಿ ಹಣ ಗುಳುಂ: ಸ್ಯಾಂಡಲ್ವುಡ್ ನಟ ಅರೆಸ್ಟ್- ಕೇಸ್ಗಳು ಒಂದಲ್ಲಾ… ಎರಡಲ್ಲಾ…