More

    32ನೇ ವಯಸ್ಸಲ್ಲಿ ಪರೀಕ್ಷೆ ಬರೆದವನಿಗೆ 57ನೇ ವಯಸ್ಸಿಗೆ ಸಿಕ್ತು ಸರ್ಕಾರಿ ಕೆಲ್ಸ! ಬದಲಾಯ್ತು ಬಟ್ಟೆ ಮಾರುವವನ ಬದುಕು

    ವಿಜಯವಾಡ: ಒಂದು ಸರ್ಕಾರಿ ಕೆಲಸ ಸಿಗಲಿ ಅಂತಾ ಕಂಡ ಕಂಡ ದೇವರಿಗೆಲ್ಲ ಹರಕೆ ಮಾಡಿಕೊಳ್ಳುತ್ತಾರೆ. ಅಲ್ಲದೆ, ಹಗಲು-ಇರುಳೆನ್ನದೇ ನಿರಂತರವಾಗಿ ಕಷ್ಟಪಟ್ಟು ಓದಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಾರೆ. ಕೆಲವರಿಗೆ ಅದೃಷ್ಟ ಕೈ ಹಿಡಿದರೆ, ಇನ್ನು ಕೆಲವರಿಗೆ ಅದೃಷ್ಟ ಕೈಕೊಡುತ್ತದೆ. ಒಂದಿಷ್ಟು ಮಂದಿ ತಮ್ಮ ಪ್ರಯತ್ನವನ್ನು ಮುಂದುವರಿಸಿದರೆ, ಇನ್ನು ಕೆಲವರು ಸಾಕಪ್ಪ ಇದರ ಸಹವಾಸ ಏನಾದರೂ ಕೆಲಸ ಮಾಡಿಕೊಂಡು ಇರೋಣ ಅಂತಾ ಸುಮ್ಮನಾಗಿಬಿಡುತ್ತಾರೆ. ಆದರೆ, ಹಾಕಿದ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಈ ಒಂದು ಘಟನೆ ತಾಜಾ ನಿದರ್ಶನವಾಗಿದೆ.

    ಹೌದು. ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ 57 ವರ್ಷದ ಎ. ಕೇದಾರೇಶ್ವರ ರಾವ್ ಅವರಿಗೆ ಇದೀಗ ಸರ್ಕಾರಿ ಕೆಲಸ ಒಲಿದು ಬಂದಿದೆ. ಮೂಲತಃ ಪಥಪಟ್ಟಣ ಮಂಡಲದ ಸೀದಿ ಗ್ರಾಮದ ನಿವಾಸಿಯಾಗಿರುವ ಕೇದಾರೇಶ್ವರ ರಾವ್, ಶ್ರೀಕಾಕುಳಂನಲ್ಲಿ ಸೈಕಲ್​ ಮೇಲೆ ಬಟ್ಟೆ ಮಾರಾಟ ಮಾಡುವ ಸ್ವಂತ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 1998ರಲ್ಲಿ ತಾನು ಎದುರಿಸಿದ್ದ ಜಿಲ್ಲಾ ಆಯ್ಕೆ ಸಮಿತಿ (ಡಿಎಸ್​ಸಿ) ಪರೀಕ್ಷೆಯಲ್ಲಿ ಉತ್ತೀರ್ಣಾರಾಗಿದ್ದ ರಾವ್​, ಕಾರಣಾಂತರಗಳಿಂದ 24 ವರ್ಷದ ಬಳಿಕ ಸರ್ಕಾರಿ ಶಿಕ್ಷಕರಾಗಿ ನೇಮಕವಾಗಿದ್ದಾರೆ.

    ಇಂಗ್ಲಿಷ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಇಡಿಯನ್ನು ರಾವ್​ ಪೂರ್ಣಗೊಳಿಸಿದ್ದಾರೆ. 1994 ಮತ್ತು 1996ರ ಡಿಎಸ್​ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ರಾವ್​ 1998ರಲ್ಲಿ ಎದುರಿಸಿದ್ದ ಪರೀಕ್ಷೆಯಲ್ಲಿ ಪಾಸ್​ ಆಗಿದ್ದರು. ಆದರೆ, ಕಾರಣಾಂತರಗಳಿಂದ 1998ನೇ ಬ್ಯಾಚಿನ ಕೆಲವು ಅಭ್ಯರ್ಥಿಗಳ ನೇಮಕಾತಿಯನ್ನು ಡಿಎಸ್‌ಸಿ ಬಾಕಿ ಇರಿಸಿತ್ತು.

    ಅಂದಹಾಗೆ ಡಿಎಸ್​ಸಿ ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕರನ್ನು ನೇಮಕಾತಿಯನ್ನು ನಡೆಸುತ್ತದೆ. ರಾಜ್ಯ ಸರ್ಕಾರ ಇತ್ತೀಚೆಗಷ್ಟೇ 1998ರಲ್ಲಿ ಬಾಕಿ ಉಳಿದಿದ್ದ ಫೈಲ್​ಗಳನ್ನು ತೆರವುಗೊಳಿಸಿತು. ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ಲಾಭವಾಗಿದ್ದು, ಪರೀಕ್ಷೆ ಎದುರಿಸಿದ ಎರಡು ದಶಕಗಳ ಬಳಿಕ ಸರ್ಕಾರಿ ಉದ್ಯೋಗ ದೊರಕಿದೆ.

    ಈ ಬಗ್ಗೆ ಮಾತನಾಡಿರುವ ಕೇದಾರೇಶ್ವರ ರಾವ್, ನಾನು 1994 ಮತ್ತು 1996 ಎರಡರಲ್ಲೂ ಡಿಎಸ್‌ಸಿ ಪರೀಕ್ಷೆಗಳನ್ನು ಎದುರಿಸಿದ್ದೆ. ಆದರೆ, ನೇಮಕವಾಗಿರಲಿಲ್ಲ. 1998ರಲ್ಲಿ ಮತ್ತೆ ಪರೀಕ್ಷೆ ಎದುರಿಸಿದ್ದೆ. ಆದರೆ, ಡಿಎಸ್‌ಸಿ ಕಡತ ತಡೆಹಿಡಿದಿತ್ತು. ಇದೀಗ ರಾಜ್ಯ ಸರ್ಕಾರವು ಡಿಎಸ್​​ಸಿ ಕಡತ ತೆರವುಗೊಳಿಸಿರುವುದು ಸಂತಸ ತಂದಿದೆ. ಅವರು ನನಗೆ ಅಪಾಯಿಂಟ್‌ಮೆಂಟ್ ನೀಡಿದರೆ ನಾನು ಕರ್ತವ್ಯಕ್ಕೆ ಸೇರಲು ಸಿದ್ಧನಿದ್ದೇನೆ ಎಂದು ಕೇದಾರೇಶ್ವರ ರಾವ್ ಸಂತಸದಿಂದ ಹೇಳಿಕೊಂಡಿದ್ದಾರೆ.

    ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯವಿರುವ ರಾವ್ ಅವರು ಕಳೆದ ಎರಡು ದಶಕಗಳಿಂದ ಪಥಪಟ್ಟಣ, ಕೋರಸವಾಡ ಮತ್ತು ಕಾಗುವಾಡ ಗ್ರಾಮಗಳಲ್ಲಿ ತಮ್ಮ ಸೈಕಲ್‌ನಲ್ಲಿ ಒಳ ಉಡುಪು ಮತ್ತು ಶರ್ಟ್‌ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಾರಾಟವಿಲ್ಲದ ದಿನಗಳಲ್ಲಿ ರಾವ್, ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ತಂದೆ-ತಾಯಿಯ ಮರಣದ ನಂತರ ಅವರು ಒಂಟಿಯಾಗಿದ್ದಾರೆ. ಇದೀಗ ಸರ್ಕಾರಿ ಕೆಲಸ ಸಿಕ್ಕಿರುವುದು ಅವರ ಬದುಕಿನ ಹೊಸ ಆಯಾಮ ಸಿಕ್ಕಿದಂತಾಗಿದೆ. (ಏಜೆನ್ಸೀಸ್​)

    ‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

    ಒಟ್ಟಿಗೆ ಯುವತಿಯರಿಬ್ಬರನ್ನೂ ಮದ್ವೆಯಾದ ಯುವಕ: ಈತನ ಲವ್​ ಸ್ಟೋರಿ ಕೇಳಿದ್ರೆ ಹುಬ್ಬೇರಿಸ್ತೀರಾ!

    ಅಕ್ರಮ ಸಂಬಂಧಕ್ಕೆ ಬಿತ್ತು ಎರಡು ಹೆಣ: ಪ್ರೇಯಸಿ ಶವ ಹೂತಿಟ್ಟು ನೇಣಿಗೆ ಶರಣಾದ ಪ್ರಿಯಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts