More

    ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ರಾವಣನ ರಾಷ್ಟ್ರದ ಶೋಚನೀಯ ಪರಿಸ್ಥಿತಿ ಹೀಗಿದೆ ನೋಡಿ..

    ಕೊಲಂಬೋ: ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಜನರು ದಂಗೆ ಎದ್ದಿರುವ ಬೆನ್ನಲ್ಲೇ ಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಶುಕ್ರವಾರ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ.

    ಗುರುವಾರ ಗೋತಬಯ ರಾಜಪಕ್ಸೆ ಅವರು ನಿವಾಸದ ಎದುರು ನೂರಾರು ಮಂದಿ ಪ್ರತಿಭಟನೆ ನಡೆಸಿ, ನಿವಾಸವನ್ನು ಗೇಟ್​ ಮುರಿದು ಒಳಗೆ ನುಗ್ಗಲು ಯತ್ನಿಸಿದರು. ಇದರ ಬೆನ್ನಲ್ಲೇ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವ ಲಂಕಾ ಅಧ್ಯಕ್ಷ, ಅಧಿಕಾರವನ್ನು ರಕ್ಷಣಾ ಪಡೆಗಳಿಗೆ ನೀಡಿದ್ದಾರೆ.

    ಅಧ್ಯಕ್ಷ ಗೊತಬಯ ರಾಜಪಕ್ಸೆ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಅವರ ಪದಚ್ಯುತಿಗೆ ಸಾಕಷ್ಟು ಒತ್ತಾಯಗಳು ಕೇಳಿಬರುತ್ತಿವೆ. ಜನರು ದಂಗೆ ಎದ್ದಿರುವುದರಿಂದ ಹೆದರಿರುವ ಅಧ್ಯಕ್ಷರು ಯಾವುದೇ ವಿಚಾರಣೆಯಿಲ್ಲದೆ ದೀರ್ಘಾವಧಿಯವರೆಗೆ ಶಂಕಿತರನ್ನು ಬಂಧಿಸಲು ಮಿಲಿಟರಿಗೆ ಅವಕಾಶ ನೀಡುವ ಮೂಲಕ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ.

    ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆ ಮತ್ತು ಸಮುದಾಯದ ಜೀವನಕ್ಕೆ ಅಗತ್ಯವಾದ ಸರಬರಾಜು ಮತ್ತು ಸೇವೆಗಳ ನಿರ್ವಹಣೆಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಗೋತಬಯ ರಾಜಪಕ್ಸೆ ಅವರು ಘೋಷಣೆಯಲ್ಲಿ ತಿಳಿಸಿದ್ದಾರೆ. ಶ್ರೀಲಂಕಾ 1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರದ ಹಿಂದೆಂದೂ ಕಾಣದ ಆರ್ಥಿಕ ಕುಸಿತದಲ್ಲಿದೆ. ಸುಮಾರು 22 ಮಿಲಿಯನ್ ಜನರನ್ನು ಹೊಂದಿರುವ ರಾಷ್ಟ್ರವು ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿದೆ. ತೀವ್ರ ಬೆಲೆ ಏರಿಕೆ ಮತ್ತು ದುರ್ಬಲವಾದ ವಿದ್ಯುತ್ ಕಡಿತವನ್ನು ಅನುಭವಿಸುತ್ತಿದೆ.

    ರಾಜಧಾನಿ ಕೊಲಂಬೊವನ್ನು ಒಳಗೊಂಡಿರುವ ಪಶ್ಚಿಮ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ಕರ್ಫ್ಯೂ ಅನ್ನು ಪೊಲೀಸರು ಪುನಃ ವಿಧಿಸಿದ್ದಾರೆ. ಇದಕ್ಕೂ ಮುನ್ನ ಅಂದರೆ, ಗುರುವಾರ ಸಂಜೆ, ಹತ್ತಾರು ಮಂದಿ ರಾಜಧಾನಿಯಲ್ಲಿ ಕೈಬರಹದ ಫಲಕಗಳು ಮತ್ತು ಎಣ್ಣೆ ದೀಪಗಳನ್ನು ಹಿಡಿದು ಜನನಿಬಿಡ ಪ್ರದೇಶದಲ್ಲಿ ಪ್ರದರ್ಶಿಸಿದರು. ರಾಜಪಕ್ಸೆ ಅವರನ್ನು ತೊರೆಯುವ ಸಮಯವಿದು ಎಂದು ಒಂದು ಫಲಕದಲ್ಲಿ ಹೇಳಲಾಗಿದೆ. ಇನ್ನು ಮುಂದೆ ಭ್ರಷ್ಟಾಚಾರ ಬೇಡ, ಮನೆಗೆ ಹೋಗು ಗೋತಾ ಎಂದು ಜನರು ಭಿತ್ತಿ ಫಲಕಗಳನ್ನು ಪ್ರದರ್ಶನ ಮಾಡಿದ್ದಾರೆ.

    ಶುಕ್ರವಾರ ಬಿಡುಗಡೆಯಾದ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ ಕೊಲಂಬೊದಲ್ಲಿ ಹಣದುಬ್ಬರವು ಮಾರ್ಚ್‌ನಲ್ಲಿ ಶೇ. 18.7 ರಷ್ಟನ್ನು ಮುಟ್ಟಿದೆ, ಇದು ಸತತ ಆರನೇ ಮಾಸಿಕ ದಾಖಲೆಯಾಗಿದೆ. ಆಹಾರದ ಬೆಲೆಗಳು ದಾಖಲೆಯ 30.1 ಪ್ರತಿಶತದಷ್ಟು ಏರಿದೆ. ಕೊಲಂಬೊ ತನ್ನ ಮೇಲಿನ 51 ಶತಕೋಟಿ ಡಾಲರ್​ ಸಾಲವನ್ನು ಪೂರೈಸಲು ಈ ವರ್ಷ ಸುಮಾರು 7.0 ಶತಕೋಟಿ ಡಾಲರ್​ ಮರುಪಾವತಿ ಮಾಡಲು ಅಗತ್ಯವಿರುವ ವಿದೇಶಿ ಕರೆನ್ಸಿಯನ್ನು ಉಳಿಸುವ ಪ್ರಯತ್ನದಲ್ಲಿ ಮಾರ್ಚ್ 2020ರಲ್ಲಿ ಆಮದುಗಳ ಮೇಲೆ ನಿಷೇಧವನ್ನು ವಿಧಿಸಿತು. ಇದರಿಂದಾಗಿ ಗುರುವಾರದಿಂದ ಲಂಕಾದಲ್ಲಿ ಡೀಸೆಲ್ ಕೊರತೆ ಕಾಡುತ್ತಿದ್ದು, ಜನರು ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ರಾಜ್ಯದ ವಿದ್ಯುಚ್ಛಕ್ತಿ ಘಟಕವು ಗುರುವಾರದಿಂದ ದಿನಕ್ಕೆ 13 ಗಂಟೆಗಳ ವಿದ್ಯುತ್ ಕಡಿತಗೊಳಿಸುವುದಾಗಿ ಹೇಳಿದೆ. ಇದಂತೂ ನೋವಿನ ಸಂಗತಿಯಾಗಿದೆ. ಏಕೆಂದರೆ ಜನರೇಟರ್‌ಗಳನ್ನು ಬಳಸೋಣ ಅಂದರೆ ಡೀಸೆಲ್ ಕೂಡ ಇಲ್ಲ. ಜೀವರಕ್ಷಕ ಔಷಧಿಗಳ ಕೊರತೆಯನ್ನು ಎದುರಿಸುತ್ತಿರುವ ಹಲವಾರು ಸರ್ಕಾರಿ ಆಸ್ಪತ್ರೆಗಳು ದಿನನಿತ್ಯದ ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಿವೆ. (ಏಜೆನ್ಸೀಸ್​)

    ಏ.8ಕ್ಕೆ ಡೇಂಜರಸ್ ಬಿಡುಗಡೆ; ಕೋರ್ಟ್ ನೀಡಿದ ಆದೇಶವೇ ಸ್ಫೂರ್ತಿ

    ರಾಜ್ಯಸಭೆಯಲ್ಲಿ ಶತಕ ಬಾರಿಸಿದ ಬಿಜೆಪಿ!; 1988ರ ನಂತರ ಈ ಸಾಧನೆ ಮಾಡಿದ ಮೊದಲ ಪಕ್ಷ

    ಸಂಪಾದಕೀಯ | ಭರವಸೆಯ ಹೊಸ ಹಾದಿ; ಹಬ್ಬಗಳು ಆತ್ಮಾವಲೋಕನಕ್ಕೆ ನಾಂದಿಯಾಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts