More

    ಸರ್ಕಾರಗಳಿಂದ ಅನ್ನದಾತರ ದನಿ ಅಡಗಿಸುವ ಹುನ್ನಾರ

    ಸೊರಬ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

    ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಕೇಂದ್ರ ಸರ್ಕಾರ ಸರ್ವಾಧಿಕಾರದಿಂದ ರೈತರ ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮಾಡುವ ಮೂಲಕ ಕೃಷಿಕರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಬಹುದೊಡ್ಡ ಕಾರ್ಪೊರೇಟ್ ಕಂಪನಿಯ ಹಿತ ಕಾಯುವ ನಿಟ್ಟಿನಲ್ಲಿ ನಮ್ಮನ್ನಾಳುವ ಸರ್ಕಾರಗಳು ಮುಂದಾಗಿದ್ದು, ದೇಶದ ಬೊಕ್ಕಸಕ್ಕೆ ಅನ್ಯಾಯ ಎಸಗುತ್ತಿದೆ. ರೈತರು ತಮಗಾದ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಮನವಿ ನೀಡಲು ದೆಹಲಿಯಲ್ಲಿ ಅವಕಾಶ ನೀಡದೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ತಕ್ಷಣವೇ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವಂತೆ ವಿನಂತಿಸಿದರು.
    ದೇಶದಲ್ಲಿ ಧಾರ್ಮಿಕ ಭಾವನೆಯಿಂದ ಜನರನ್ನು ಒಗ್ಗೂಡಿಸಿ ರಾಮನ ಜಪದಿಂದ ಶಿಕ್ಷಣ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಅನಾದಿ ಕಾಲದಿಂದಲೂ ಪ್ರಕೃತಿಯಲ್ಲಿ, ನೀರಿನಲ್ಲಿ ತಮ್ಮ ದೈವ ಪರಂಪರೆಯ ಭಕ್ತಿಯನ್ನು ಜನತೆ ಕಂಡುಕೊಂಡಿದ್ದಾರೆ. ಕೂಡಲೇ ರೈತರನ್ನು ರೈತತನದಿಂದ ಹೊರದಬ್ಬುವ ಕೆಲಸ ಮಾಡದೆ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿದರು.
    ರೈತರ ಪರವಾಗಿದ್ದೇವೆ ಎಂದು ಹೇಳಿ ರಾಜ್ಯದಲ್ಲಿ ಅಧಿಕಾರಿಕ್ಕೆ ಬಂದ ಕಾಂಗ್ರೆಸ್, ಇದೀಗ ರೈತರ ವಿರುದ್ಧವಾಗಿ ವಿದ್ಯುತ್ ನೀತಿ ಬದಲಾಯಿಸಿದೆ. ಬಗರ್ ಹುಕುಂ ರೈತರಿಗೆ ನೋಟಿಸ್ ನೀಡುತ್ತಿದೆ. ರೈತರಿಗೆ ಮಾರಕವಾಗಿರುವ ಮೂರು ಕಾಯ್ದೆ ವಾಪಸ್ ಪಡೆಯುತ್ತವೇ ಎಂದು ಹೇಳಿ ರೈತ ಸಮೂಹವನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
    ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ್ ಗೌಡ, ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಡಾ. ಜ್ಞಾನೇಶ್, ಮಂಜುನಾಥ ಅರೆಕೊಪ್ಪ, ಶಿವಣ್ಣ ಹುಣಸವಳ್ಳಿ, ಹುಚ್ಚಪ್ಪ ತಲೆಬೈಲು, ಪರಮೇಶಿ ಉಳವಿ, ಬಾಷಾ ಸಾಬ್, ಮೇಘರಾಜ್, ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts