ಮೈಸೂರು: ಪಾರಂಪರಿಕವಾಗಿ ಬಂದ ಪ್ರಾಚೀನ ಕಾವ್ಯ ಸಂವಹನ ಕಲೆಯಾದ ಗಮಕ ಕಲೆ ಭಾವ ಪ್ರಧಾನವಾದದ್ದು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ್ ಅಭಿಪ್ರಾಯಪಟ್ಟರು.
ಸುರಭಿ ಗಾನಕಲಾಮಂದಿರ ಚಾರಿಟಬಲ್ ಟ್ರಸ್ಟ್‌ನಿಂದ ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಅರಳು ಪ್ರತಿಭೆ ಕಾರ್ಯಕ್ರಮದಲ್ಲಿ ‘ಕುಮಾರ ವ್ಯಾಸ ಗಮಕ ಪ್ರಶಸ್ತಿ ಪುರಸ್ಕೃತ ಗಮಕ ವಿದ್ವಾನ್ ಕೃ.ರಾಮಚಂದ್ರ ಅವರನ್ನು ಅಭಿನಂದಿಸಿ ಮಾತನಾಡಿದರು. ಸಂಗೀತ ಹಾಗೂ ಗಮಕ ಎರಡೂ ಬೇರೆ ಪ್ರಕಾರವಾದರೂ ಒಂದನೊಂದು ಪೋಷಿಸಿ, ಬೆಳೆಸಿಕೊಂಡು ಬಂದಿವೆ. ಸಂಗೀತ ನಾದ ಪ್ರಧಾನವಾದರೆ, ಗಮಕ ಭಾವ ಪ್ರಧಾನವಾಗಿದ್ದು, ಇಲ್ಲಿ ಪಠ್ಯವೇ ಮುಖ್ಯ. ಮೂಲ ಕಾವ್ಯದ ಮರುಸೃಷ್ಟಿಗೂ ಅವಕಾಶವಿದೆ ಎಂದು ಹೇಳಿದರು.
ಗಮಕಿಯು ಮೂಲ ಕವಿಯ ಪಾತ್ರಧಾರಿಯಂತೆ ರೂಪುಗೊಂಡಾಗ ಆತನ ವ್ಯಾಖ್ಯಾನ, ವಾಚನಗಳು ಮೌಲ್ಯ ಪಡೆಯುತ್ತವೆ. ಗಮಕದಲ್ಲಿ ಸಂಗೀತ ಮತ್ತು ಸಾಹಿತ್ಯವು, ಹಾಲು ಮತ್ತು ಸಕ್ಕರೆಯಂತೆ ಬೆರೆತಿರುವ ಮಿಶ್ರ ಕಲೆ. ಇದಕ್ಕೆ ಹರಿಕಥೆಯೂ ಸೇರಿದರೆ ಏಲಕ್ಕಿಯ ಪರಿಮಳ ದೊರೆತಂತಾಗುತ್ತದೆ ಎಂದು ಬಣ್ಣಿಸಿದರು.
ಗಮಕ ಕಲೆ ಪಂಪನ ಕಾಲದಿಂದಲೂ ಈ ನಾಡಿನಲ್ಲಿ ಸಾಗಿಬಂದಿದ್ದು, ಕಾವ್ಯಗಳನ್ನು ಪ್ರಸ್ತುತಪಡಿಸುವಲ್ಲಿ ಈ ಕಲೆ ಉತ್ತಮ ಸ್ಥಾನದಲ್ಲಿ ನಿಲ್ಲುತ್ತದೆ. ಸಂಗೀತ, ಸಾಹಿತ್ಯ, ವ್ಯಾಖ್ಯಾನದ ಸಮ್ಮಿಶ್ರ ಸಮ್ಮಿಲನ ಸಮಪ್ರಮಾಣದಲ್ಲಿ ಇರಬೇಕು. ಒಂದು ಮಿತಿ ಮೀರಿದರೂ ಅಭಾಸವಾಗುತ್ತದೆ. ಎಲ್ಲವನ್ನು ಸರಿದೂಗಿಸಿಕೊಂಡು ಗಮಕ ಕಲೆಯನ್ನು ವಿಸ್ತರಿಸಿಕೊಂಡು ಬರುತ್ತಿರುವ ಕೃ.ರಾಮಚಂದ್ರ ಅವರ ಕಾರ್ಯ ಶ್ಲಾಘನೀಯ ಎಂದರು.
ಸನ್ಮಾನ ಸ್ವೀಕರಿಸಿದ ಕೃ.ರಾಮಚಂದ್ರ ಮಾತನಾಡಿ, ಸಂಗೀತ ಪರಂಪರೆಯ ಕುಟುಂಬದಲ್ಲಿ ಹುಟ್ಟಿನ ನನಗೆ ಗಮಕ ಆಕರ್ಷಿಸಿತು. ಇಂಜಿನಿಯರಿಂಗ್ ವೃತ್ತಿ ಮಾಡುವಾಗಲೂ ಪ್ರವೃತ್ತಿಯಾಗಿ ಗಮಕವನ್ನು ಮೈಗೂಡಿಸಿಕೊಂಡಿದ್ದೆ. ನಿವೃತ್ತಿಯಾದ ಬಳಿಕ ಗಮಕವೇ ಈಗ ಎಲ್ಲ ಎನ್ನುವಂತಾಗಿದೆ. ಇದರಲ್ಲಿ ಈಗ ನಮ್ಮ ಪರಂಪರೆಯ ಸೇವೆ ಮುಂದುವರಿಸಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃ.ರಾಮಚಂದ್ರ. ವಿದುಷಿ ತುಳಸೀರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ವಿದುಷಿ ಡಾ.ಜ್ಯೋತಿ ಶಂಕರ್, ಸುರಭಿ ಗಾನಕಲಾಮಂದಿರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಸುಕನ್ಯಾ ಪ್ರಭಾಕರ್ ಇದ್ದರು.
ಪ್ರತಿಭಾಂಕುರ ಸಂಗೀತ ಮಾಲಿಕೆಯಲ್ಲಿ ಮಾನ್ಯ ಮಂಜುನಾಥ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ತೊರವೆ ರಾಮಾಯಣದಲ್ಲಿ ಸುಂದರ ಕಾಂಡ ಭಾಗದ ಗಮಕ ವಾಚನ-ವ್ಯಾಖ್ಯಾನ ಪ್ರಸ್ತುತ ಪಡಿಸಲಾಯಿತು. ವಿದುಷಿ ಜ್ಯೋತಿ ಶಂಕರ್ ವ್ಯಾಖ್ಯಾನ ಮಾಡಿದರೆ, ಸ್ವಾತಿ ನರಸಿಂಹಮೂರ್ತಿ ವಾಚನ ಮಾಡಿದರು.
ಗಮಕ ಕಲೆ ಭಾವ ಪ್ರಧಾನವಾದದ್ದು: ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ್ ಅಭಿಮತ
You Might Also Like
ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test
Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…
ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti
ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…
ಹರಳೆಣ್ಣೆ ನೀರಿನಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?; ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ| Health Tips
ಹರಳೆಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ ಎಂಬುದು ತಿಳಿದಿದೆಯೇ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮ…