More

    ಸಂಪಾದಕೀಯ | ಭರವಸೆಯ ಹೊಸ ಹಾದಿ; ಹಬ್ಬಗಳು ಆತ್ಮಾವಲೋಕನಕ್ಕೆ ನಾಂದಿಯಾಗಲಿ

    ವಸಂತಾಗಮನದ ಹಿನ್ನೆಲೆಯಲ್ಲಿ ಇಡೀ ಪ್ರಕೃತಿ ಸಡಗರಪಡುತ್ತಿರುವಾಗ ಇಂದು ಅಡಿಯಿಡುತ್ತಿರುವ ಶುಭಕೃತ್ ಸಂವತ್ಸರ ಬಹಳಷ್ಟು ನಿರೀಕ್ಷೆ, ಭರವಸೆ ಮೂಡಿಸಿದೆ. ಹೆಸರಿಗೆ ಅನ್ವರ್ಥವಾಗಿ ಶುಭದ ಹಾದಿಯನ್ನು ವಿಸ್ತಾರಗೊಳಿಸಿ, ಸಂಕಷ್ಟದ ಕಾಮೋಡ ಕರಗುವಂತಾಗಲಿ. ಕಳೆದ ಎರಡು ವರ್ಷಗಳಲ್ಲಿ ಕರೊನಾ ಸೃಷ್ಟಿಸಿದ ತಲ್ಲಣ ಅಷ್ಟಿಷ್ಟಲ್ಲ. ಅದು ಮನುಕುಲಕ್ಕೆ ಹಲವು ಪಾಠ ಕಲಿಸಿದೆ; ಜೀವನವನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡಿದೆ. ಆದರೆ, ಜನಸಾಮಾನ್ಯರು ಬೆಲೆಯೇರಿಕೆಯ ಭಾರ, ಆರ್ಥಿಕ ಸಂಕಷ್ಟದಿಂದ ಬಸವಳಿದಿದ್ದು, ಮುಂದಿನ ದಿನಗಳು ಒಳಿತನ್ನೇ ತರಲಿ ಎಂಬ ಆಶಾಭಾವನೆಯಿಂದ ಹೊಸವರ್ಷವನ್ನು ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ, ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ, ಸಹನೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.

    ಕಾಲದ ಓಟದಲ್ಲಿ ಸಾಗುವಾಗ ಸುಖ-ದುಃಖಗಳೆರಡನ್ನೂ ಸಮತೋಲಿತವಾಗಿ ಸ್ವೀಕರಿಸಿ, ಬದುಕಿನ ಹದವನ್ನು ಚೆಂದವಾಗಿಸಿಕೊಳ್ಳಬೇಕು, ಏನೇ ಬರಲಿ ಒಂದಷ್ಟು ಖುಷಿ ಇರಲಿ, ಸಂಭ್ರಮ ಇರಲಿ ಎಂದು ಸಂದೇಶ ನೀಡುವ ಯುಗಾದಿ ಹಬ್ಬ ಮನಸ್ಸುಗಳನ್ನು ಚೇತೋಹಾರಿಗೊಳಿಸುವಂಥದ್ದು. ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿಯಿಂದಲೇ ಹೊಸ ವರ್ಷದ ಆರಂಭ. ಹಾಗಾಗಿ, ಸ್ವಾಭಾವಿಕವಾಗಿಯೇ ವಿನೂತನ ಕನಸು, ಸಂಕಲ್ಪಗಳು ಒಡಮೂಡಿ ಜೀವನಪ್ರೀತಿ, ಚೈತನ್ಯವನ್ನು ಹೆಚ್ಚಿಸುತ್ತವೆ. ಹಳೆಯ ನೋವು, ದುಃಖವನ್ನು ಮರೆತು ಉಲ್ಲಸಿತವಾಗಲು, ಬದುಕೆಂಬ ಬಂಡಿಗೆ ಭರವಸೆಯ ಹೊಸ ಇಂಧನ ತುಂಬಿ ಮುಂದೆ ಸಾಗಲು ಇಂಥ ಉತ್ಸವ, ಹಬ್ಬಗಳು ನಿಜಕ್ಕೂ ಪ್ರೇರಣೆಯಾಗುತ್ತವೆ.

    ಬಾಹ್ಯ ತಾಕಲಾಟ, ಚಿಂತೆಗಳೇನೇ ಇರಲಿ ಆಂತರ್ಯದಿಂದಲೂ ನಮ್ಮನ್ನು ನಾವು ಅವಲೋಕಿಸಿ ಕೊಳ್ಳಲು, ತಪು್ಪಗಳನ್ನು ತಿದ್ದಿಕೊಂಡು ಒಳ್ಳೆಯದರತ್ತ ಸಾಗಲು, ಸತ್ ಸಂಕಲ್ಪಗಳ ಅನುಷ್ಠಾನಕ್ಕೆ ಮುಂದಾಗಲು ನವೀನ ಸಂವತ್ಸರ ಅನುವು ಮಾಡಿಕೊಡುತ್ತದೆ. ಹಾಗಾಗಿಯೇ, ಆತ್ಮವಿಮರ್ಶೆ, ಸಂಭ್ರಮ, ಸಂತಸಗಳ ಸಮ್ಮಿಶ್ರಣ ನಮ್ಮ ಹಬ್ಬಗಳು. ಮುಂದಿನ ಹಾದಿಯನ್ನು ವಿವೇಚನೆಯಿಂದ, ಯಾರಿಗೂ ನೋವಾಗದಂತೆ ಸಂವೇದನೆಯಿಂದ ಕ್ರಮಿಸುವ ಪಾಠವನ್ನೂ ಇದು ನೀಡುತ್ತ, ಹೊಸದನ್ನು ಸಾರ್ಥಕವಾಗಿ ಬರಮಾಡಿಕೊಳ್ಳುವಂತೆ ಮಾಡುತ್ತದೆ. ಇಂದಿನ ಧಾವಂತದ ಬದುಕಿನಲ್ಲಿ ಪ್ರಕೃತಿಯಿಂದ ವಿಮುಖರಾಗುತ್ತಿದ್ದೇವೆ, ಸಂಬಂಧ- ಭಾವನೆಗಳಿಂದ ದೂರವಾಗುತ್ತಿದ್ದೇವೆ, ಇವುಗಳ ನಡುವೆ ಜೀವನದ ನಿಜವಾದ ಸವಿ ಕಳೆದು ಹೋಗುತ್ತಿರುವುದು ಅದೆಷ್ಟೋ ಜನರ ಗಮನಕ್ಕೆ ಬರುತ್ತಿಲ್ಲ.

    ‘ಮಾನವ ಜನ್ಮ ದೊಡ್ಡದು ಕಣ್ರಪ್ಪಾ, ಇದನ್ನು ಹಾಳುಮಾಡಿಕೊಳ್ಳಬೇಡಿ’ ಅಂತ ಅನುಭಾವಿಗಳು ತುಂಬ ಹಿಂದೆಯೇ ಎಚ್ಚರಿಸಿ, ಸಾಗಬೇಕಾದ ಪಥವನ್ನು ದರ್ಶಿಸಿದ್ದಾರೆ. ಯುಗಾದಿ ನಮ್ಮನ್ನು ಪ್ರಕೃತಿಯ ಸನಿಹಕ್ಕೆ ಕರೆತರುವ ಪರ್ವವೂ ಹೌದು. ಕಳೆದುಹೋದ ನಮ್ಮ ಖುಷಿಗಳನ್ನು ಮತ್ತೆ ಪ್ರಕೃತಿಯ ಸಾಂಗತ್ಯದಲ್ಲಿ ಅರಸುತ್ತ ‘ಬೇಕು’ಗಳಿಗೆ ಕಡಿವಾಣ ಹಾಕುತ್ತ ಇರುವುದರಲ್ಲೇ ಸಂತೃಪ್ತ ಜೀವನ ಸಾಗಿಸುವ, ಹೃದಯದಿಂದ ಶ್ರೀಮಂತರಾಗುವ ಸಂಗತಿಗಳಿಗೆ ಮೊದಲ ಆದ್ಯತೆ ನೀಡೋಣ. ಒಳಿತನ್ನೇ ಸಾಧಿಸುವ, ಸುಖ-ದುಃಖದ ದಾರಿಯಲ್ಲಿ ಸಮಚಿತ್ತದಿಂದ ಸಾಗುವ ಉತ್ಸಾಹ, ಉಲ್ಲಾಸವನ್ನು ಈ ಸಂವತ್ಸರ ಎಲ್ಲರಿಗೂ ದಯಪಾಲಿಸಲಿ. ದುಷ್ಟಶಕ್ತಿಗಳ ಹಾವಳಿಗೆ ಕಡಿವಾಣ ಬಿದ್ದು, ನೈತಿಕ, ಸಾತ್ವಿಕ ಶಕ್ತಿಗಳಿಗೆ ಗೆಲುವಾಗಲಿ. ಕಷ್ಟಗಳು ಕರಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts