More

    ಪದ್ಮಶ್ರೀ ಪುರಸ್ಕೃತ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದರ ಬದುಕಿನ ಸ್ಫೂರ್ತಿದಾಯಕ ಪಯಣವಿದು!

    ನವದೆಹಲಿ: ಪದ್ಮ ಪುರಸ್ಕಾರಗಳಿಗೆ ಭಾಜನರಾದವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸೋಮವಾರ (ಮಾ.21) ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ವೇಳೆ ವಿಶೇಷ ಗಮನ ಸೆಳೆದಿದ್ದು 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಅವರು. ರಾಷ್ಟ್ರಪತಿ ಭವನದ ಪಲತಿಯಾಲ್​ ದರ್ಬಾರ್​ ಹಾಲ್​ಗೆ ಬರಿಗಾಲಲ್ಲಿ ಬಂದ ಶಿವಾನಂದ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುವಾಗ ದರ್ಬಾರ್​ ಹಾಲ್​ನಲ್ಲಿ ನೆರೆದಿದ್ದ ಗಣ್ಯರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದ್ದು ಅವಿಸ್ಮರಣೀಯವಾಗಿತ್ತು.

    ಪ್ರಶಸ್ತಿಯನ್ನು ಸ್ವೀಕರಿಸುವ ಮುನ್ನ ಯೋಗ ಸಾಧಕ ಶಿವಾನಂದ ಅವರು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಂತರ ರಾಷ್ಟ್ರಪತಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಈ ವೇಳೆ ಅಲ್ಲಿದ್ದ ಗಣ್ಯರು ಯೋಗ ಗುರುವಿನ ಸರಳತೆ ಕಂಡು ಚಪ್ಪಾಳೆ ತಟ್ಟಿ ಗೌರವಿಸಿದರು. ಪ್ರಧಾನಿ ಮೋದಿ ಅವರು ಕೂಡ ಪ್ರತಿಯಾಗಿ ಶಿವಾನಂದ ಅವರ ಮುಂದೆ ಬಾಗಿ ನೆಲವನ್ನು ಮುಟ್ಟುವ ಮೂಲಕ ನಮಸ್ಕರಿಸಿದರು.

    ಶಿವಾನಂದ ಅವರು ಬಿಳಿಯ ಕುರ್ತಾ ಮತ್ತು ಧೋತಿ ಧರಿಸುವ ಮೂಲಕ ಸರಳತೆ ಮೆರೆದರು. ಪ್ರಶಸ್ತಿ ಸ್ವೀಕರಿಸಲು ರಾಷ್ಟ್ರಪತಿಗಳಿದ್ದ ವೇದಿಕೆ ಬಳಿ ನಡೆದು ಹೋಗಿ ವೇದಿಕೆ ಹತ್ತಿ ಮತ್ತೊಮ್ಮೆ ಸಾಷ್ಟಾಂಗ ನಮಸ್ಕರ ಮಾಡಿದರು. ಈ ವೇಳೆ ರಾಷ್ಟ್ರಪತಿಗಳೇ ಮುಂದೆ ಬಂದು ಶಿವಾನಂದ ಅವರ ಕೈಹಿಡಿದು ಮೇಲೆತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ರಾಷ್ಟ್ರಪತಿ ಅವರು ಶಿವಾನಂದ ಅವರ ಕುಶಲೋಪರಿಯನ್ನು ವಿಚಾರಿಸಿದರು. ಬಳಿಕ ಇಬ್ಬರು ಕ್ಯಾಮೆರಾಗೆ ಪೋಸ್​ ನೀಡಿದರು. ಈ ವೇಳೆ ಇಡೀ ದರ್ಬಾರ್​ ಹಾಲ್​ನಲ್ಲಿ ಚಪ್ಪಾಳೆಗಳ ಸುರಿಮಳೆಯೇ ಸುರಿಯಿತು.

    ಜೀವನದ ಉದ್ದಕ್ಕೂ ಮಾನವನ ಕಲ್ಯಾಣಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟ ಶಿವಾನಂದ ಅವರು ಕಳೆದ 50 ವರ್ಷಗಳಿಂದ ಪುರಿಯಲ್ಲಿ ಕುಷ್ಠರೋಗ ಪೀಡಿತ ಜನರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಮುಂಜಾನೆಯ ಯೋಗ, ಎಣ್ಣೆ ರಹಿತ ಬೇಯಿಸಿದ ಆಹಾರ ಸೇವನೆ ಮತ್ತು ಮನುಕುಲಕ್ಕೆ ತನ್ನದೇಯಾದ ನಿಸ್ವಾರ್ಥ ಸೇವೆಯೊಂದಿಗೆ ಶಿಸ್ತುಬದ್ಧ ಮತ್ತು ನಿಯಂತ್ರಿತ ಜೀವನದಂತಹ ಸರಳ ಮಾರ್ಗಗಳು ಅವರಿಗೆ ರೋಗ ಮುಕ್ತ ಮತ್ತು ಉದ್ವೇಗ ಮುಕ್ತ ದೀರ್ಘಾಯುಷ್ಯವನ್ನು ನೀಡಿದೆ. ಅವರು ತಮ್ಮ ಬೋಧನೆಗಿಂತ ಅನುಕರಣೀಯ ಪಾಠದ ಮೂಲಕ ತಮ್ಮ ಜೀವನವನ್ನು ಪ್ರದರ್ಶಿಸುತ್ತಿದ್ದಾರೆ.

    ಶಿವಾನಂದ ಅವರು ಅವಿಭಜಿತ ಭಾರತದ ಸಿಲ್ಹೆಟ್ ಜಿಲ್ಲೆ (ಸದ್ಯ ಬಾಂಗ್ಲಾದೇಶಕ್ಕೆ ಸೇರಿದೆ) ಯಲ್ಲಿ 1896 ಆಗಸ್ಟ್​ 8ರಂದು ಜನಿಸಿದರು. ತಮ್ಮ 6ನೇ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡರು. ಕಡು ಬಡತನದ ಕಾರಣ ಭಿಕ್ಷುಕ ತಂದೆ-ತಾಯಿಗಳು ಶಿವಾನಂದರ ಬಾಲ್ಯದ ದಿನಗಳಲ್ಲಿ ಮುಖ್ಯವಾಗಿ ಬೇಯಿಸಿದ ಅನ್ನದ ನೀರನ್ನು ಅವರಿಗೆ ನೀಡುತ್ತಿದ್ದರು.

    ತಂದೆ-ತಾಯಿ ತೀರಿಕೊಂಡ ಬಳಿಕ ಶಿವಾನಂದ ಅವರನ್ನು ಪಶ್ಚಿಮ ಬಂಗಾಳದ ನಬದ್ವಿಪ್​ನಲ್ಲಿರುವ ಗುರೂಜಿ ಆಶ್ರಮಕ್ಕೆ ಕರೆತರಲಾಯಿತು. ಗುರು ಓಂಕಾನಂದ ಗೋಸ್ವಾಮಿ ಅವರು ಶಿವಾನಂದ ಅವರನ್ನು ಬೆಳೆಸಿದರು. ಯಾವುದೇ ಶಾಲಾ ಶಿಕ್ಷಣವಿಲ್ಲದೆ, ಯೋಗ ಸೇರಿದಂತೆ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಶಿವಾನಂದ ಅವರು ಕಲಿತುಕೊಂಡರು. ಜೀವನದ ಉದ್ದಕ್ಕೂ ಧನಾತ್ಮಕ ಚಿಂತನೆಯನ್ನೇ ಮೈಗೂಡಿಸಿಕೊಂಡಿರುವ ಅವರು “ವಿಶ್ವವೇ ನನ್ನ ಮನೆ, ಅದರ ಜನರು ನನ್ನ ತಂದೆ-ತಾಯಿಗಳು, ಅವರನ್ನು ಪ್ರೀತಿಸುವುದು ಮತ್ತು ಸೇವೆ ಮಾಡುವುದು ನನ್ನ ಧರ್ಮ” ಎಂಬುದು ಅವರ ನಂಬಿಕೆಯಾಗಿದೆ.

    ಪದ್ಮ ಪ್ರಶಸ್ತಿ ಪುರಸ್ಕೃತರ ಕುರಿತು ರಾಷ್ಟ್ರಪತಿ ಭವನದಲ್ಲಿರುವ ದಾಖಲೆಯ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ಅದರಲ್ಲೂ ಈಶಾನ್ಯ ಭಾರತದ ವಾರಣಾಸಿ, ಪುರಿ, ಹರಿದ್ವಾರ, ನಬದ್ವೀಪ್ ಮತ್ತು ಮುಂತಾದ ಕಡೆಗಳಲ್ಲಿ ಹಿಂದುಳಿದವರಿಗೆ ಸೇವೆ ಸಲ್ಲಿಸಲು ಅವರು ಇಂದಿಗೂ ತಮ್ಮ ಮಿಷನ್ ಅನ್ನು ಬೆನ್ನಟ್ಟುತ್ತಿದ್ದಾರೆ. ಕಳೆದ 50 ವರ್ಷಗಳಿಂದ ಸ್ವಾಮಿ ಶಿವಾನಂದರು 400-600 ಕುಷ್ಠರೋಗ ಪೀಡಿತ ಭಿಕ್ಷುಕರನ್ನು ಅವರ ಗುಡಿಸಲುಗಳಲ್ಲಿ ವೈಯಕ್ತಿಕವಾಗಿ ಭೇಟಿ ಮಾಡುವ ಮೂಲಕ ಪುರಿಯಲ್ಲಿ ಘನತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

    ರೋಗ ಪೀಡಿತರನ್ನು ಜೀವಂತ ದೇವರೆಂದು ಗ್ರಹಿಸಿರುವ ಶಿವಾನಂದರು ಲಭ್ಯವಿರುವ ಅತ್ಯುತ್ತಮ ವಸ್ತುಗಳೊಂದಿಗೆ ಸೇವೆ ಸಲ್ಲಿಸುತ್ತಾರೆ. ಆಹಾರ ಪದಾರ್ಥಗಳು, ಹಣ್ಣುಗಳು, ಬಟ್ಟೆಗಳು, ಚಳಿಗಾಲದ ಉಡುಪುಗಳು, ಹೊದಿಕೆಗಳು, ಸೊಳ್ಳೆ ಪರದೆಗಳು, ಅಡುಗೆ ಪಾತ್ರೆಗಳು ಮುಂತಾದ ವಿವಿಧ ವಸ್ತುಗಳನ್ನು ಅವರ ವ್ಯಕ್ತಪಡಿಸಿದ ಅಗತ್ಯಕ್ಕೆ ಅನುಗುಣವಾಗಿ ಒದಗಿಸುತ್ತಾ ಬಂದಿದ್ದಾರೆ. ರೋಗ ಪೀಡಿತ ಜನರಿಗೆ ವಿವಿಧ ವಸ್ತುಗಳನ್ನು ಹಸ್ತಾಂತರಿಸಲು ಇತರರನ್ನು ಪ್ರೋತ್ಸಾಹಿಸುವ ಮೂಲಕ ಮಾನವೀಯ ಕೆಲಸ ಮಾಡಲು ಇತರರನ್ನು ಪ್ರೇರೇಪಿಸುತ್ತಾರೆ.

    ಇನ್ನು ಸ್ವಾಮಿ ಶಿವಾನಂದರ ಆರೋಗ್ಯಕರ ಜೀವನ ಮತ್ತು ದೀರ್ಘಾಯುಷ್ಯವು ಪ್ರಪಂಚದಾದ್ಯಂತ ಗಮನ ಸೆಳೆದಿದೆ. 125 ವರ್ಷ ವಯಸ್ಸಿನಲ್ಲಿ ಸ್ವತಃ ಕೋವಿಡ್​ ರೋಗ ನಿರೋಧಕವನ್ನು ಪಡೆದ ನಂತರ ಕೋವಿಡ್ ಲಸಿಕೆಗಾಗಿ ದೇಶವಾಸಿಗಳನ್ನು ಪ್ರೇರೇಪಿಸುವ ಅವರ ಬದ್ಧತೆಯೂ ಇದರಲ್ಲಿ ಸೇರಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು 2014 ರಿಂದ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಸಮಾಜಕ್ಕೆ ವಿಭಿನ್ನ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಇಂತಹ ಅನೇಕ ನಾಯಕರನ್ನು ಗುರುತಿಸಿ ಪದ್ಮ ಪ್ರಶಸ್ತಿಗಳ ನೀಡುವ ಮೂಲಕ ಗೌರವಿಸುತ್ತಿದೆ.

    2019ರಲ್ಲಿ ಬೆಂಗಳೂರಿನಲ್ಲಿ ಕೊಡಮಾಡಲಾದ ಯೋಗ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಸ್ವಾಮಿ ಶಿವಾನಂದರು ಸ್ವೀಕರಿಸಿದ್ದಾರೆ. 2019, ಜೂನ್​ 21ರ ವಿಶ್ವ ಯೋಗ ದಿನದಂದು ನಡೆದ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ ದೇಶದ ಅತ್ಯಂತ ಹಿರಿಯರಾಗಿದ್ದಾರೆ. 2019 ನವೆಂಬರ್​ 30ರಂದು ಸಮಾಜಕ್ಕೆ ಅವರ ಕೊಡುಗೆಗಾಗಿ ರೆಸ್ಪೆಕ್ಟ್ ಏಜ್ ಇಂಟರ್‌ನ್ಯಾಶನಲ್‌ನಿಂದ ಬಸುಂಧರ ರತನ್ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. (ಏಜೆನ್ಸೀಸ್​)

    ಸಾಧಕರಿಗೆ ಪದ್ಮಪುರಸ್ಕಾರ ಪ್ರದಾನ

    ದಕ್ಷಿಣ ಚೀನಾದಲ್ಲಿ ವಿಮಾನ ಪತನ: 132 ಪ್ರಯಾಣಿಕರ ದುರಂತ ಸಾವು, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

    ಸವಿನಿದ್ದೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​ ಕೊಟ್ಟ ಎಸಿಬಿ: ಏಕಕಾಲದಲ್ಲಿ 9 ಕಡೆ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts