ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಭಾರೀ ಶಬ್ದ ಕೇಳಿ ಮನೆಯಿಂದ ಹೊರಗಡೆ ಓಡಿ ಬಂದ ಜನ

Madikeri
Published on

ಕೊಡಗು: ದಕ್ಷಿಣ ಭಾರತದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಪದೇಪದೆ ಭೂಮಿ ಕಂಪಿಸುತ್ತಿರುವುದು ಅಲ್ಲಿನ ಜನರನ್ನು ಆತಂಕಕ್ಕೆ ದೂಡಿದೆ. ಮೊದಲೇ ಭೂಕುಸಿತಗಳು ಕೊಡಗಿನಲ್ಲಿ ಸಾಮಾನ್ಯವಾಗಿರುವಾಗ ಆಗಾಗ ಭೂಕಂಪನ ಆಗುತ್ತಿರುವುದು ಜನರ ಭಯಕ್ಕೆ ಕಾರಣವಾಗಿದೆ.

ಕೊಡಗಿನ ಗಡಿಭಾಗದಲ್ಲಿ ಭೂಮಿ ಮತ್ತೆ ಕಂಪಿಸಿದೆ. ಭಾರಿ ಶಬ್ದದೊಂದಿಗೆ ಭೂಮಿ ನಡುಗಿದೆ. ಮಡಿಕೇರಿ ತಾಲ್ಲೂಕಿನ ಚೆಂಬು, ಸಂಪಾಜೆ ಹಾಗೂ ಪೆರಾಜೆಯಲ್ಲಿ ಮುಂಜಾನೆ 6.23ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.

ಭಾರೀ ಶಬ್ದವನ್ನು ಕೇಳಿ ಜನರು ಭಯಭೀತಿಯಿಂದ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಭಾರಿ ಶಬ್ದಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಚೆಂಬು, ಪೆರಾಜೆ ಹಾಗೂ ಸಂಪಾಜೆಯಲ್ಲಿ ಇಲ್ಲಿಯವರೆಗೆ ಒಟ್ಟು 9 ಭಾರಿ ಕಂಪನದ ಅನುಭವವಾಗಿದೆ.

ಒಂದೆಡೆ ಜಿಟಿಜಿಟಿ ಮಳೆಯಿಂದಾಗಿ ಮನೆಯಿಂದ ಹೊರಗಡೆ ಕಾಲು ಇಡಲು ಆಗುತ್ತಿಲ್ಲ. ಇದರ ನಡುವೆ ಆಗಾಗ ಭೂಕಂಪನ ಆಗುತ್ತಿರುವುದು ಕೊಡಗಿನ ಜನತೆಯನ್ನು ಚಿಂತಿಸುವಂತೆ ಮಾಡಿದೆ. ನಿದ್ರೆ ಮಾಡಲು ಯೋಚಿಸುವಂತಾಗಿದೆ. ಭೂಕಂಪನ ದೃಶ್ಯಗಳು ಸಹ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಸದ್ಯ ಯಾವುದೇ ಅಪಾಯ ಉಂಟಾಗದಿದ್ದರೂ ಪದೇಪದೆ ಭೂಕಂಪನ ಆಗುತ್ತಿರುವುದು ಜನರ ನಿದ್ದೆಯನ್ನು ಕೆಡಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net