More

    ಕೆಲವೇ ಕ್ಷಣಗಳಲ್ಲಿ ಇಮ್ರಾನ್​ ಸರ್ಕಾರದ ಭವಿಷ್ಯ ನಿರ್ಧಾರ:​ ನ್ಯಾಷನಲ್​ ಅಸೆಂಬ್ಲಿಯಲ್ಲಿ ರಾಜಕೀಯ ಹೈಡ್ರಾಮ

    ಇಸ್ಲಾಮಾಬಾದ್: ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟಿಗೆ ಅಲ್ಲಿನ ಸುಪ್ರೀಂ ಕೋರ್ಟ್ ಮಹತ್ವದ ತಿರುವನ್ನು ನೀಡಿದ ಬೆನ್ನಲ್ಲೇ ಇಂದು ಪಾಕ್​ನ ರಾಷ್ಟ್ರೀಯ ಅಸೆಂಬ್ಲಿ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗಿದೆ. ಡೆಪ್ಯೂಟಿ ಸ್ಪೀಕರ್ ನಡೆಯ ಮೂಲಕ ವಿಶ್ವಾಸ ಮತ ಎದುರಿಸುವುದರಿಂದ ತಪ್ಪಿಸಿಕೊಂಡ ಇಮ್ರಾನ್ ಖಾನ್​ಗೆ ಗುರುವಾರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹಿನ್ನಡೆ ಆಗಿದೆ. ಕೋರ್ಟ್​ ಆದೇಶದಂತೆ ಇಂದು ಇಮ್ರಾನ್​ ಖಾನ್​ ಅವರು ಅವಿಶ್ವಾಸ ನಿರ್ಣಯವನ್ನು ಎದುರಿಸಲೇಬೇಕಿದೆ. ಇಂದೇ ಇಮ್ರಾನ್​ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.

    ಒಂದೆಡೆ ವಿಶ್ವಾಸ ಮತ ಸಾಬೀತಿಗೆ ಇಮ್ರಾನ್​ ಖಾನ್​ ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷಗಳು ಇಮ್ರಾನ್ ಖಾನ್​​ರನ್ನು ಕಟ್ಟಿಹಾಕಲು ರಣತಂತ್ರ ರೂಪಿಸುತ್ತಲೇ ಇವೆ. ಸುಪ್ರೀಂಕೊರ್ಟ್​ನಲ್ಲಿ ತಮ್ಮ ಪರವಾಗಿ ತೀರ್ಪು ಬಂದ ಬಳಿಕ ಪ್ರತಿಪಕ್ಷಗಳು ಉತ್ಸಾಹ ಇನ್ನು ಹೆಚ್ಚಾಗಿದೆ. ಇಂದು ಅವಿಶ್ವಾಸ ನಿರ್ಣಯಕ್ಕೆ ಪ್ರತಿಪಕ್ಷಗಳು ಸಿದ್ಧವಾಗಿದ್ದು, ಪಾಕ್​ ರಾಷ್ಟ್ರೀಯ ಅಸೆಂಬ್ಲಿಗೆ ಆಗಮಿಸಿದ್ದಾರೆ.

    ಆದರೆ, ಆರಂಭದಲ್ಲಿ ಇಮ್ರಾನ್​ ಖಾನ್​ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಯಾವೊಬ್ಬ ಸದಸ್ಯರ ಸಹ ನ್ಯಾಷನಲ್​ ಅಸೆಂಬ್ಲಿಗೆ ಆಗಮಿಸಲಿಲ್ಲ. ಬೇಕಂತಲೇ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಇದೀಗ ಕೇವಲ 22 ಸದಸ್ಯರು ಮಾತ್ರ ಅಸೆಂಬ್ಲಿಗೆ ಆಗಮಿಸಿರುವುದು ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವಿಶ್ವಾಸ ನಿರ್ಣಯದ ಮತಯಾಚನೆ ಶುರುವಾಗಲಿದೆ.

    ಗುರುವಾರ​ ತೀರ್ಪು ನೀಡಿದ ಸುಪ್ರೀಂಕೊರ್ಟ್, ಡೆಪ್ಯೂಟಿ ಸ್ಪೀಕರ್ ಕ್ರಮ ಸರಿಯಲ್ಲದ ಕಾರಣ ಮುಂದಿನ ನಡೆ ಏನು? ದೇಶದ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಎಲ್ಲರೂ ನಡೆಯಬೇಕು. ಇಮ್ರಾನ್ ಖಾನ್ ಸರ್ಕಾರ ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತವನ್ನು ಎದುರಿಸಬೇಕು. ಏ.9ರಂದು ಬೆಳಗ್ಗೆ 10ಗಂಟೆಗೆ ವಿಶೇಷ ಅಧಿವೇಶನ ನಡೆಯಬೇಕು. ಅಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಬೇಕು ಎಂದು ಕೋರ್ಟ್ ಹೇಳಿದೆ.

    ಡೆಪ್ಯೂಟಿ ಸ್ಪೀಕರ್ ಖಾಸಿ ಸುರಿ ಇಮ್ರಾನ್ ಖಾನ್ ಅವರ ತೆಹ್ರೀಕ್ ಏ ಇನ್ಸಾಫ್ ಪಾರ್ಟಿಯವರಾಗಿದ್ದು, ವಿದೇಶಿ ಪಿತೂರಿ ನೆಪವೊಡ್ಡಿ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕದೆ ತಿರಸ್ಕರಿಸಿದ್ದರು. ಇದಾಗಿ ಕೆಲವೇ ಹೊತ್ತಿನ ಬಳಿಕ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ನ್ಯಾಷನಲ್ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ಪ್ರೆಸಿಡೆಂಟ್ ಆರಿಫ್ ಆಲ್ವಿಗೆ ಶಿಫಾರಸು ಮಾಡಿದ್ದರು. ಇದಕ್ಕೆ ಅನುಗುಣವಾಗಿ ಅಸೆಂಬ್ಲಿಯನ್ನು ಅವರು ವಿಸರ್ಜಿಸಿದ್ದರು. ಇದರಿಂದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದ ಕಾರಣ, ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ದಾವೆ ದಾಖಲಿಸಿಕೊಂಡು ಐದು ದಿನಗಳ ವಿಚಾರಣೆ ನಡೆಸಿ, ಗುರುವಾರ ಅಂತಿಮ ತೀರ್ಪು ನೀಡಿತು.

    ಡೆಪ್ಯೂಟಿ ಸ್ಪೀಕರ್ ನಡೆ ಸರಿಯಲ್ಲ
    ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ಡೆಪ್ಯೂಟಿ ಸ್ಪೀಕರ್ ಖಾಸಿಂ ಸುರಿ ಅವರ ಆದೇಶ ಸಂವಿಧಾನದ ಅನುಚ್ಛೇದ 95ರ ಸ್ಪಷ್ಟ ಉಲ್ಲಂಘನೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರಧಾನಿ ಇಮ್ರಾನ್ ಖಾನ್ ನಾಯಕತ್ವದ ವಿರುದ್ಧ ವಿಪಕ್ಷಗಳು ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕದೆ ತಿರಸ್ಕರಿಸಿದ ಡೆಪ್ಯೂಟಿ ಸ್ಪೀಕರ್ ಕ್ರಮ ಸರಿಯಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಬಂಡಿಯಾಲ್ ನೇತೃತ್ವದ ಪಂಚ ಸದಸ್ಯ ಪೀಠ ಹೇಳಿದೆ.

    ಸಾಂವಿಧಾನಿಕ ಬೆಂಬಲ
    ಅವಿಶ್ವಾಸ ಗೊತ್ತುವಳಿಗೆ ಪಾಕಿಸ್ತಾನದ ಸಂವಿಧಾನದ ಅನುಚ್ಛೇದ 69ರ ಬೆಂಬಲವಿದೆ. ಇದರ ಪ್ರಕಾರ, ಸಂಸದೀಯ ಕಲಾಪಗಳಲ್ಲಿ ಯಾವುದೇ ಹಸ್ತಕ್ಷೇಪ ಅಥವಾ ಅಡ್ಡಿಗೆ ಅವಕಾಶವಿಲ್ಲ. ಇದರ ಪ್ರಕಾರವೂ ಏಪ್ರಿಲ್ 3ರಂದು ಡೆಪ್ಯೂಟಿ ಸ್ಪೀಕರ್ ಖಾಸಿಂಗ್ ಸುರಿ ಆದೇಶ ಊರ್ಜಿತವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್ ಹೇಳಿದ್ದಾರೆ.

    ಚುನಾವಣೆಗೆ ಏಳು ತಿಂಗಳು
    ಚುನಾವಣೆ ನಡೆಸುವುದಕ್ಕೆ ಕನಿಷ್ಠ 4 ತಿಂಗಳ ಸಿದ್ಧತೆ ಅವಶ್ಯಕತೆ ಇದೆ. ಏಳು ತಿಂಗಳ ಕಾಲಾವಕಾಶವಿಲ್ಲದೆ ಸಾರ್ವತ್ರಿಕ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಪ್ರೆಸಿಡೆಂಟ್ ಆರಿಫ್ ಅಲ್ವಿ ಮತ್ತು ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. 90 ದಿನಗಳ ಅವಧಿಯಲ್ಲಿ ಕ್ಷಿಪ್ರವಾಗಿ ಸಾರ್ವತ್ರಿಕ ಚುನಾವಣೆ ನಡೆಸುವುದು ಸಾಧ್ಯವೇ ಇಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಚುನಾವಣೆ ದಿನಾಂಕ ನಿಗದಿ ಪಡಿಸುವ ಸಂಪೂರ್ಣ ಹೊಣೆಗಾರಿಕೆ ಚುನಾವಣಾ ಆಯೋಗದ್ದು. ಅದು ಯಾವಾಗ ಬೇಕಾದರೂ ಚುನಾವಣಾ ದಿನಾಂಕ ನಿಗದಿಪಡಿಸಬಹುದು ಎಂದು ಹೇಳಿದೆ.

    ಇಲ್ಲಿಯವರೆಗೆ ಏನೇನು ನಡೆದಿದೆ?
    ಮಾರ್ಚ್​ 8: ರಾಷ್ಟ್ರದ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ಹೆಚ್ಚಳಕ್ಕೆ ಪ್ರಧಾನಿ ಇಮ್ರಾನ್​ ಖಾನ್​ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವೇ ಕಾರಣ ಎಂದು ಆರೋಪಿಸಿ, ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಸೆಕ್ರೆಟರಿಯೇಟ್​ಗೆ ಮಾರ್ಚ್​ 8ರಂದು ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿವೆ.

    ಮಾರ್ಚ್ 25: ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ನಿರ್ಣಾಯಕ ಅಧಿವೇಶನವು ಪ್ರತಿಪಕ್ಷದ ಶಾಸಕರ ಗದ್ದಲದ ಪ್ರತಿಭಟನೆಯ ನಡುವೆ ನಿರ್ಣಯವನ್ನು ಮಂಡಿಸದೆ ಮುಂದೂಡಲ್ಪಟ್ಟಿತು.

    ಮಾರ್ಚ್​ 27: ಇಸ್ಲಾಮಾಬಾದ್‌ನ ಪರೇಡ್ ಮೈದಾನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.

    ಮಾರ್ಚ್​ 28: ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಅಂತಿಮವಾಗಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಲಾಯಿತು. ಅವಿಶ್ವಾಸ ಮತ ಮಂಡನೆಯಾದ ತಕ್ಷಣ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

    ಮಾರ್ಚ್​ 30: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರದ ಪ್ರಮುಖ ಮೈತ್ರಿ ಪಕ್ಷ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ (ಎಂಕ್ಯೂಎಂ-ಪಿ) ಪ್ರತಿಪಕ್ಷಕ್ಕೆ ಬೆಂಬಲ ನೀಡಿದ ನಂತರ ಇಮ್ರಾನ್ ಖಾನ್ ಅವರ ಪಕ್ಷವು ಸಂಸತ್ತಿನ ಕೆಳಮನೆಯಲ್ಲಿ ಬಹುಮತವನ್ನು ಕಳೆದುಕೊಂಡಿತು.

    ಏಪ್ರಿಲ್​ 2: ಅವಿಶ್ವಾಸ ನಿರ್ಣಯದ ಹಿಂದೆ ವಿದೇಶದ ಪಿತೂರಿ ಇದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಲಾಯಿತು. ಡೆಪ್ಯೂಟಿ ಸ್ಪೀಕರ್ ಖಾಸಿ ಸುರಿ ಇಮ್ರಾನ್ ಖಾನ್ ಅವರ ತೆಹ್ರೀಕ್ ಏ ಇನ್ಸಾಫ್ ಪಾರ್ಟಿಯವರಾಗಿದ್ದು, ವಿದೇಶಿ ಪಿತೂರಿ ನೆಪವೊಡ್ಡಿ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕದೆ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಪ್ರತಿಪಕ್ಷಗಳು ಸುಪ್ರೀಂಕೋರ್ಟ್​ ಮೊರೆ ಹೋಗುವುದಾಗಿ ತಿಳಿಸಿದ್ದವು.

    ಇನ್ನು ಪಾಕ್​ ರಾಷ್ಟ್ರೀಯ ಅಸೆಂಬ್ಲಿ 342 ಸದಸ್ಯರ ಬಲವನ್ನು ಹೊಂದಿದೆ. ಇಮ್ರಾನ್​​ ಖಾನ್​ ಸರ್ಕಾರ ಕೆಡವಲು ಪ್ರತಿಪಕ್ಷಗಳಿಗೆ 172 ಮತಗಳ ಅವಶ್ಯಕತೆ ಇದೆ. (ಏಜೆನ್ಸೀಸ್​)

    ರಷ್ಯಾ ಯೋಧರ ರೇಪ್​ನಿಂದ ತಪ್ಪಿಸಿಕೊಳ್ಳಲು ಯೂಕ್ರೇನ್​ ಯುವತಿಯರ ಈ ನಿರ್ಧಾರ ಮನಕಲಕುವಂತಿದೆ!

    BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

    ತರಗತಿ ಒಳಗೆ ಯುವತಿಯರ ಎಣ್ಣೆ ಪಾರ್ಟಿ: ವಿಡಿಯೋ ವೈರಲ್​ ಆದ ಬೆನ್ನಲ್ಲೇ ಐವರಿಗೆ ಬಿಗ್​ ಶಾಕ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts