More

    ರಷ್ಯಾ ಯೋಧರ ರೇಪ್​ನಿಂದ ತಪ್ಪಿಸಿಕೊಳ್ಳಲು ಯೂಕ್ರೇನ್​ ಯುವತಿಯರ ಈ ನಿರ್ಧಾರ ಮನಕಲಕುವಂತಿದೆ!

    ಕಿಯೇವ್​: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಕದನ ಕಾರ್ಮೋಡ ಇನ್ನು ತಿಳಿಯಾಗಿಲ್ಲ. ಅನಿಶ್ಚಿತತೆ ಮುಂದುವರಿದಿದ್ದು, ಯೂಕ್ರೇನ್​ನಲ್ಲಿ ಆರ್ಥನಾದ ಮುಂದುವರಿದಿದೆ. ಯುದ್ಧವನ್ನು ಮುಂದುವರಿಸಿರುವ ರಷ್ಯ, ಯೂಕ್ರೇನ್​ ಅನ್ನು ನಾಶ ಮಾಡುವ ಪಣ ತೊಟ್ಟಂತಿದೆ. ಇದರ ನಡುವೆ ಯೂಕ್ರೇನ್​ನ ಯುವತಿಯರು ತೆಗೆದುಕೊಂಡಿರುವ ನಡೆ ನಿಜಕ್ಕೂ ಮನಕಲಕುವಂತಿದೆ.

    ರಷ್ಯಾ ಯೋಧರಿಂದ ಅತ್ಯಾಚಾರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಯೂಕ್ರೇನ್​ ಯುವತಿಯರು ತಮ್ಮ ಸುಂದರವಾದ ತಲೆ ಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಈ ಪ್ರಸಂಗ ಯೂಕ್ರೇನ್​ನ ರಾಜಧಾನಿ ಕೀಯೆವ್​ನಿಂದ ಕೇವಲ 50 ಕಿ.ಮೀ ದೂರದಲ್ಲಿರುವ ಇವಾಂಕೀವ್​ ಪಟ್ಟಣದಲ್ಲಿ ಜರುಗಿದೆ. ರಷ್ಯಾ ಯೋಧರು ತಮ್ಮನ್ನು ನೋಡಿ ಆಕರ್ಷಣೆಗೊಳ್ಳದಿರಲಿ ಎಂದು ಯುವತಿಯರು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ನಿಜಕ್ಕೂ ಈ ಸಂಗತಿ ಮನಕಲಕುವಂತಿದೆ.

    ಮಾರ್ಚ್ 30 ರಂದು ರಷ್ಯಾದ ಪಡೆಗಳು ಒಂದು ತಿಂಗಳಿಗಿಂತ ಹೆಚ್ಚು ಕಾಲ ಆಕ್ರಮಿಸಿಕೊಂಡ ನಂತರ ಇವಾಂಕೀವ್​ ಪಟ್ಟಣವನ್ನು ಸ್ವತಂತ್ರಗೊಳಿಸಲಾಯಿತು. ಆಕ್ರಮಣದ ಅವಧಿಯಲ್ಲಿ ಅಂಡರ್​ಗ್ರೌಂಡ್​ನಲ್ಲಿ ರಕ್ಷಣೆ ಪಡೆದುಕೊಂಡಿದ್ದ ಮಹಿಳೆಯರನ್ನು ಕೂದಲನ್ನು ಹಿಡಿದು ರಷ್ಯಾ ಯೋಧರು ಅಮಾನವೀಯವಾಗಿ ಹೊರತೆಗೆದಿದ್ದಲ್ಲದೆ, ಅವರ ಮೇಲೆ ದೌರ್ಜನ್ಯವನ್ನು ನಡೆಸಿದರು ಎಂದು ಉಪ ಮೇಯರ್ ಮೇರಿನಾ ಬೆಸ್ಚಾಸ್ಟ್ನಾ ತಿಳಿಸಿದ್ದಾರೆ. ಕೂದಲು ನೋಡಿ ರಷ್ಯಾ ಯೋಧರು ಆಕರ್ಷಣೆಗೊಳ್ಳುವ ಸಾಧ್ಯತೆಯು ಇರುವುದರಿಂದ ಯೂಕ್ರೇನ್​ ಹುಡುಗಿಯರು ಕಡಿಮೆ ಆಕರ್ಷಕವಾಗಿ ಕಾಣಲು ತಮ್ಮ ಕೂದಲನ್ನು ಕತ್ತರಿಸಿಕೊಳ್ಳಲು ಆರಂಭಿಸಿರುವುದಾಗಿ ವರದಿಯಾಗಿದೆ.

    ಸ್ಥಳೀಯ ಐಟಿವಿ ನ್ಯೂಸ್‌ನೊಂದಿಗೆ ಮಾತನಾಡಿದ ಮೇರಿನಾ ಬೆಸ್ಚಾಸ್ಟ್ನಾ, ಸಮೀಪದ ಹಳ್ಳಿಯೊಂದರಲ್ಲಿ 15 ಮತ್ತು 16 ವರ್ಷ ವಯಸ್ಸಿನ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿರುವ ಘಟನೆಯನ್ನು ವಿವರಿಸಿದರು. ಕೇವಲ ಇವಾಂಕೀವ್​ನಲ್ಲಿ ಮಾತ್ರ ಅತ್ಯಾಚಾರಗಳು ವರದಿಯಾಗಿಲ್ಲ. ಯೂಕ್ರೇನ್​ನ ಅಲ್ಲಲ್ಲಿ ಈ ಅಮಾನವೀಯ ಘಟನೆ ನಡೆದಿವೆ. ನಿದರ್ಶನ ಒಂದರಲ್ಲಿ ಯೂಕ್ರೇನಿಯನ್ ಮಹಿಳೆಯೊಬ್ಬರ ಪತಿಯನ್ನು ರಷ್ಯಾ ಯೋಧರು ಗುಂಡಿಕ್ಕಿ ಕೊಂದ ಕೆಲವೇ ಕ್ಷಣಗಳಲ್ಲಿ ರಷ್ಯಾದ ಸೈನಿಕರು ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ವರದಿಯಾಗಿದೆ. ನಾಲ್ಕು ವರ್ಷದ ಮಗ ಕೋಣೆಯೊಂದರಲ್ಲಿ ಅಳುತ್ತಿದ್ದರೂ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾರೆ.

    ಯೂಕ್ರೇನ್​ ನ್ಯಾಟೋ ಪಡೆಯವನ್ನು ಸೇರುವುದರನ್ನು ವಿರೋಧಿಸಿ ಫೆ. 24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಯುದ್ಧ ಘೋಷಣೆ ಮಾಡಿದರು. ಅಂದಿನಿಂದ ಯುದ್ಧ ಮಂದುವರಿದುಕೊಂಡು ಬಂದಿದ್ದು, ಎರಡು ತಿಂಗಳು ಸಮೀಪಿಸುತ್ತಿದೆ. ಈಗಾಗಲೇ ಯೂಕ್ರೇನ್​ನ ಬಹುತೇಕ ಭಾಗವನ್ನು ರಷ್ಯಾ ನಾಶಮಾಡಿದೆ. ಅಲ್ಲಿನ, ಬಹುತೇಕ ನಾಗರಿಕರು ಸಮೀಪದ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ರಷ್ಯಾ ನಡೆಯನ್ನು ವಿರೋಧಿಸಿರುವ ಅನೇಕ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಯಾವಾಗ ಯುದ್ಧ ಮುಗಿಯುತ್ತದೆ ಎಂದು ಆಸೆಗಣ್ಣಿನಿಂದ ಜನರು ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

    BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

    ತರಗತಿ ಒಳಗೆ ಯುವತಿಯರ ಎಣ್ಣೆ ಪಾರ್ಟಿ: ವಿಡಿಯೋ ವೈರಲ್​ ಆದ ಬೆನ್ನಲ್ಲೇ ಐವರಿಗೆ ಬಿಗ್​ ಶಾಕ್!​

    ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಅದ್ಭುತ ಸ್ಪಂದನೆ; ವಿಜಯವಾಣಿ-ದಿಗ್ವಿಜಯ ನ್ಯೂಸ್ ಆಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts