More

    ಈ ಬಾರಿ 2 ಗಂಟೆ ತಡವಾಗಿ ಆರಂಭವಾಗಲಿದೆ ಜಂಬೂ ಸವಾರಿ ಮೆರವಣಿಗೆ: ಮೈಸೂರಿನಲ್ಲಿ ಹೇಗಿದೆ ದಸರಾ ಭದ್ರತೆ?

    ಮೈಸೂರು: ಪ್ರತಿ ಬಾರಿಗಿಂತ ಈ ಬಾರಿ ಸುಮಾರು 2 ಗಂಟೆ ವಿಳಂಬವಾಗಿ ಜಂಬೂ ಸವಾರಿ ಮೆರವಣಿಗೆ ಆರಂಭವಾಗಲಿದೆ.

    ಈ ಹಿಂದೆ ಸಂಜೆ 5 ಗಂಟೆಯ ಒಳಗೆ ನಾಡಿನ ಅಧಿದೇವತೆ ಚಾಮುಂಡಿ ತಾಯಿ ವಿರಾಜಮಾನಳಾದ ಚಿನ್ನದ ಅಂಬಾರಿ ಅರಮನೆಯನ್ನು ಬಿಟ್ಟು ಮೆರವಣಿಗೆ ಅಂತ್ಯಗೊಳ್ಳುವ ಬನ್ನಿ ಮಂಟಪದ ಸಮೀಪಕ್ಕೆ ಸಾಗುತ್ತಿತ್ತು. ಆದರೆ, ಈ ಬಾರಿ ಚಾಮುಂಡಿ ದೇವಿಗೆ ಮಾಡುವ ಪುಷ್ಪಾರ್ಚನೆ ಸಮಯವೇ 5 ಗಂಟೆಯ ನಂತರ, ಅಂದರೆ ಸಂಜೆ 5.07 ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾರಿಗೆ ಪೂಜೆ ಸಲ್ಲಿಕೆಯಾಗುವುದರಿಂದ ಮೆರವಣಿಗೆ ತಡವಾಗಿ ಆರಂಭವಾಗಲಿದೆ. ಬನ್ನಿಮಂಟಪ ತಲುಪುವಷ್ಟರಲ್ಲಿ ರಾತ್ರಿಯಾಗಲಿದೆ.

    ಕರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಸರಳವಾಗಿ ನಡೆದಿದ್ದ ದಸರಾ ಈ ಬಾರಿ ಬಹಳ ಅದ್ಧೂರಿಯಾಗಿ ನಡೆಯುತ್ತಿದೆ. ಕರೊನಾ ಸಮಯದಲ್ಲಿ ಕೇವಲ ಅರಮನೆ ಒಳಗೆ ಸೀಮಿತವಾಗಿದ್ದ ಜಂಬೂ ಸವಾರಿ, ಈ ಬಾರಿ ರಾಜಬೀದಿಗಳಲ್ಲಿ ಸಾಗಲಿದೆ. ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಈ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

    ಸಂಜೆ 5.07ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಮೇಯರ್‌ ಶಿವಕುಮಾರ್‌, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಅವರು ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಈ ವೇಳೆ ಯದುವೀರ್ ಕೂಡ ಭಾಗಿಯಾಗಲಿದ್ದಾರೆ.

    ಸಂಜೆ ಹೊತ್ತಿಗೆ ಚಿನ್ನದ ಅಂಬಾರಿ ಅರಮನೆ ಅಂಗಳದಿಂದ ಬನ್ನಿಮಂಟಪದತ್ತ ಹೊರಡಲಿದೆ. ಈ ಬಾರಿ ಅಂದಾಜು ಎರಡು ಗಂಟೆ ವಿಳಂಬವಾಗಿ ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗಲಿದೆ. ವಿದ್ಯುತ್‌ ದೀಪಾಲಂಕಾರದ ನಡುವೆ ಜಂಬೂ ಸವಾರಿ ರಾಜಬೀದಿಗಳಲ್ಲಿ ಹೆಜ್ಜೆ ಹಾಕಲಿದೆ. ವಿಜಯದಶಮಿ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದ್ದು, 47 ಸ್ತಬ್ಧಚಿತ್ರಗಳು, 50 ಕಲಾತಂಡಗಳು ಸೇರಿ ಒಟ್ಟು 144 ಪ್ರಾಕಾರಗಳು ಭಾಗಿಯಾಗಲಿವೆ.

    ಹೇಗಿದೆ ಭದ್ರತೆ?
    ವಿಜಯದಶಮಿ ಮೆರವಣಿಗೆಯ ಭದ್ರತೆಗಾಗಿ ಮೈಸೂರು ನಗರದ 1255, ಹೊರ ಜಿಲ್ಲೆಯಿಂದ 3580, ಗೃಹ ರಕ್ಷಕ ದಳದ 650 ಸಿಬ್ಬಂದಿ ಸೇರಿ 5485 ಅಧಿಕಾರಿ ಮತ್ತು ಪೊಲೀಸ್​ ಸಿಬ್ಬಂದಿ ಬಂದೋಬಸ್ತ್‌ ಮಾಡಲಾಗಿದೆ. ಮನೆ, ಖಾಸಗಿ ಸಂಸ್ಥೆಗಳು ಸೇರಿ 13 ಸಾವಿರ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗಕ್ಕೆ ಪೊಲೀಸ್ ಇಲಾಖೆಯಿಂದ ಹೆಚ್ಚುವರಿ 110 ಸಿಸಿ ಕ್ಯಾಮೆರಾ ಕಣ್ಗಾವಲು ಇಡಲಾಗಿದೆ. (ಏಜೆನ್ಸೀಸ್​)

    ಜಂಬೂ ಸವಾರಿಗೆ ಕ್ಷಣಗಣನೆ: ಅರಮನೆ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಹಳೇ ಕಟ್ಟಡಗಳ ಮೇಲೆ ನಿಂತು ವೀಕ್ಷಣೆ ನಿಷೇಧ

    ಒಂದೇ ಒಂದು ಕುರಿ ಇದ್ರೂ ಕೋಟ್ಯಧಿಪತಿಗಳಾಗ್ಬೋದು! ಮಿರ ಮಿರ ಮಿಂಚುತ್ತಿರೋ ಇದರ ಬೆಲೆ ಎಷ್ಟು ಗೊತ್ತಾ?

    VIDEO: ನಾಡಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಆಯುಧ ಪೂಜೆ ಮಾಡಿದ ಶಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts