More

    ಒಣದ್ರಾಕ್ಷಿ ಆನ್‌ಲೈನ್ ಮಾರುಕಟ್ಟೆಗೆ ಶುಭಶಕುನ

    ವಿಜಯಪುರ: ಕಳೆದ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಒಣದ್ರಾಕ್ಷಿ ಆನ್‌ಲೈನ್ ಮಾರುಕಟ್ಟೆ ವಹಿವಾಟನ್ನು ಫೆ. 29ರಿಂದ ಆರಂಭಿಸಲಾಗುತ್ತಿದ್ದು, ತನ್ನಿಮಿತ್ತ 19ರಂದು ವರ್ತಕರಿಗೆ ತರಬೇತಿ ನೀಡಲಾಗುತ್ತದೆ ಎಂದು ಎಪಿಎಂಸಿ ಜಂಟಿ ನಿರ್ದೇಶಕ ಹಾಗೂ ಕಾರ್ಯದರ್ಶಿ ಆರ್.ಎಂ. ಕುಮಾರಸ್ವಾಮಿ ತಿಳಿಸಿದ್ದಾರೆ.
    19ರಂದು ನಡೆಯುವ ತರಬೇತಿಗಾಗಿ ಮಹಾರಾಷ್ಟ್ರದ ಸಾಂಗಲಿ ಹಾಗೂ ತಾಸಗಾಂವ ನಿಂದಲೂ ಸಹ ಒಣದ್ರಾಕ್ಷಿ ವರ್ತಕರಿಗೆ ಕರೆಯಿಸಿ ತರಬೇತಿ ನೀಡಲಾಗುವುದು. ಆನಲೈನ್ ಮಾರುಕಟ್ಟೆಗೆ ಉತ್ತೇಜನ ನೀಡುವ ಸಲುವಾಗಿ ವಹಿವಾಟಿನ ಮೇಲೆ 1.50 ರೂ. ಇದ್ದ ಸೆಸ್‌ಅನ್ನು ಕೇವಲ 10 ಪೈಸೆಗೆ ಇಳಿಕೆ ಮಾಡಲಾಗಿದೆ. ಹಾಗಾಗಿ ಇದು ದ್ರಾಕ್ಷಿ ಬೆಳೆಗಾರರಿಗೂ ಹಾಗೂ ವರ್ತಕನ್ನು ಸೆಳೆಯಲು ಅನುಕೂಲವಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
    ಜಿಲ್ಲೆಯ ದ್ರಾಕ್ಷಿ ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ಆನ್‌ಲೈನ್ ಮಾರ್ಕೆಟ್ ಆರಂಭಿಸಬೇಕು ಎಂದು ನಿರ್ಧರಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರೂ ಸಹ ಸಭೆ ನಡೆಸಿ ಒಂದು ತಿಂಗಳಿನಲ್ಲಿ ಆನ್‌ಲೈನ್ ವಹಿವಾಟು ಆರಂಭವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಅದಾದ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುರೇಶ ಬಿರಾದರ ನೇತೃತ್ವದಲ್ಲೂ ಸಭೆ ನಡೆಸಿ ಜಿಲ್ಲೆಯ ವರ್ತಕರಿಗೆ ಆನ್‌ಲೈನ್ ಬಗ್ಗೆ ಅರಿವು ಮಾಡಿಕೊಡಲಾಗಿದೆ. ಹೀಗಾಗಿ ಅವರೂ ಸಹ ಆನ್‌ಲೈನ್ ಮಾರುಕಟ್ಟೆ ವಹಿವಾಟಿಗೆ ಒಪ್ಪಿಕೊಂಡಿದ್ದು, ಇದೀಗ ಕಾಲ ಕೂಡಿಬಂದಿದೆ.
    ಆನ್‌ಲೈನ್ ಮಾರ್ಕೆಟ್‌ಗೆ ಬೇಕಾದ ಯಂತ್ರೋಪಕರಣ, ಸಲಕರಣೆಗಳು ಹಾಗೂ ತಾಂತ್ರಿಕ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದ್ದು, 29ರಂದು ಆರಂಭಿಸುವುದು ಪಕ್ಕಾ ಆಗಿದೆ. ಹತ್ತಾರು ವರ್ಷಗಳಿಂದ ಆರಂಭವಾಗದ ಒಣದ್ರಾಕ್ಷಿ ಆನ್‌ಲೈನ್ ಮಾರ್ಕೆಟ್‌ನಿಂದಾಗಿ ಜಿಲ್ಲೆಯ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈಗಲಾದರೂ ನಮಗೆ ಅನುಕೂಲವಾಗಲಿದೆ ಎಂದು ರೈತರು ಸಂತಸ ಹಂಚಿಕೊಂಡಿದ್ದಾರೆ.

    ವಿಜಯವಾಣಿ ಫಲಶೃತಿ

    ದಶಕದಿಂದ ನನೆಗುದಿಗೆ ಬಿದ್ದಿದ್ದ ಒಣದ್ರಾಕ್ಷಿ ಆನ್‌ಲೈನ್ ಮಾರುಕಟ್ಟೆ ಬಗ್ಗೆ ‘ವಿಜಯವಾಣಿ’ ಫೆ. 13ರಂದು ‘ಆರಂಭವಾಗದ ಆನ್‌ಲೈನ್ ಮಾರ್ಕೆಟ್’ ಎಂಬ ಶೀರ್ಷಿಕೆಯಲ್ಲಿ ವಿಸ್ತೃತ ವರದಿಯನ್ನು ಪ್ರಕಟಿಸಿದ್ದ ವರದಿಗೆ ಸ್ಪಂದಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಒಣದ್ರಾಕ್ಷಿ ಆನ್‌ಲೈನ್ ವಹಿವಾಟು ಪುನರಾರಂಭಿಸಲು ಕ್ರಮ ತೆಗೆದುಕೊಳ್ಳುತ್ತಿದ್ದು, ನನೆಗುದಿಗೆ ಬಿದ್ದಿದ್ದ ಇ-ಟ್ರೇಡಿಂಗ್‌ಗೆ ಫೆ. 29ರಂದು ಚಾಲನೆ ನೀಡಲಿರುವುದು ರೈತಾಪಿ ಬಾಂಧವರಲ್ಲಿ ಖುಷಿ ತರಿಸಿದೆ.

    ರೈತರಿಗೆ ಹಾಗೂ ವರ್ತಕರಿಗೆ ಒಣದ್ರಾಕ್ಷಿ ವಹಿವಾಟನ್ನು ಆನ್‌ಲೈನ್‌ನಲ್ಲಿ ಮಾಡಲು ಅನುಕೂಲವಾಗುವಂತೆ ಅವರಿಗೆ ತರಬೇತಿ ಕೊಟ್ಟು, ನಿರಂತರ ವಹಿವಾಟು ಮಾಡಲು ತಿಳಿವಳಿಕೆ ನೀಡಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಕಾಟವು ತಪ್ಪಿ ಯೋಗ್ಯ ದರವೂ ಅವರಿಗೆ ದೊರೆಯುತ್ತದೆ. ಫೆ. 29 ರಿಂದ ಆನ್‌ಲೈನ್ ವಹಿವಾಟು ಆರಂಭಿಸಲಾಗುತ್ತಿದೆ.
    ಆರ್.ಎಂ. ಕುಮಾರಸ್ವಾಮಿ, ಜಂಟಿ ನಿರ್ದೇಶಕ ಹಾಘೂ ಎಪಿಎಂಸಿ ಕಾರ್ಯದರ್ಶಿಗಳು.

    ಒಣದ್ರಾಕ್ಷಿ ಮಾರಾಟಕ್ಕೆ ಆನ್‌ಲೈನ್ ವ್ಯವಸ್ಥೆ ಜಾರಿಯಾದರೆ ಈ ಮೊದಲು ವಹಿವಾಟಿನ ವೇಳೆ ಹತ್ತಾರು ಕೆಜಿಗಟ್ಟಲೆ ವ್ಯರ್ಥವಾಗುತ್ತಿದ್ದ ಒಣದ್ರಾಕ್ಷಿಯಿಂದ ಮುಕ್ತಿ ಸಿಗಲಿದೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಆನಲೈನ್ ಮಾರುಕಟ್ಟೆಯಲ್ಲಿ ವಹಿವಾಟು ಮುಗಿದ ತಕ್ಷಣವೇ ರೈತರಿಗೆ ಹಣ ಸಿಗಲಿದೆ. ಈ ನಿಟ್ಟಿನಲ್ಲಿ ವರದಿ ಪ್ರಕಟಿಸಿದ ‘ವಿಜಯವಾಣಿ’ಗೆ ನಮ್ಮ ಅಭಿನಂದನೆ.
    ಸಾಹೇಬಗೌಡ ಬಿರಾದಾರ, ದ್ರಾಕ್ಷಿ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts