More

    UPSC ಎಕ್ಸಾಂ ಪಾಸ್​ ಆಗಿದ್ದೇನೆಂದು ಸಂಭ್ರಮಿಸಿ, ಸನ್ಮಾನ ಮಾಡಿಸಿಕೊಂಡಾಕೆಗೆ ಬಿಗ್​ ಶಾಕ್​! ಯುವತಿಯ ಕಣ್ಣೀರು

    ರಾಮಗಢ: ಇತ್ತೀಚೆಗೆ ಪ್ರಕಟವಾದ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) ಪರೀಕ್ಷೆಯಲ್ಲಿ ನಮ್ಮ ಮಗಳು ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದ 24 ವರ್ಷದ ದಿವ್ಯಾ ಪಾಂಡೆ ಅವರ ಕುಟುಂಬ ಇದೀಗ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ದಿವ್ಯಾ ಪಾಂಡೆ ಅವರು ಯುಪಿಎಸ್​ಸಿಯಲ್ಲಿ ಆಯ್ಕೆ ಆಗಿಯೇ ಇಲ್ಲ. ಆದರೆ, ನಮ್ಮ ಮಗಳು 323ನೇ ರ್ಯಾಂಕ್​ ಪಡೆದುಕೊಂಡಿದ್ದಾಳೆ ಅಂತಾ ಸ್ವಲ್ಪವೂ ಪರಿಶೀಲಿಸದೇ ಅಥವಾ ಖಚಿತಪಡಿಸಿಕೊಳ್ಳದೇ ಕುಟುಂಬ ಸಂಭ್ರಮಾಚರಣೆ ಮಾಡಿತ್ತು. ಮಾಧ್ಯಮಗಳೂ ಕೂಡ ದಿವ್ಯಾ ಪಾಂಡೆ ಅವರನ್ನು ಮನಸಾರೆ ಕೊಂಡಾಡಿದ್ದವು. ಅಲ್ಲದೆ, ಜಾರ್ಖಂಡ್​ ಜಿಲ್ಲಾಡಳಿತ ಮತ್ತು ಸೆಂಟ್ರಲ್​ ಕೋಲ್​ಫೀಲ್ಡ್ಸ್​ ನಿಗಮ (ಸಿಸಿಎಲ್​) ಕೂಡ ದಿವ್ಯಾ ಅವರ ಯಶಸ್ಸಿಗೆ ತಲೆಬಾಗಿ ಸನ್ಮಾನ ಮಾಡಿತ್ತು. ಆದರೆ, ಎಡವಟ್ಟಾಗಿರುವುದು ದಿವ್ಯಾ ಕುಟುಂಬಕ್ಕೆ ಅರಿವಾಗಿದ್ದು, ಜಿಲ್ಲಾಡಳಿತ, ಸಿಸಿಎಲ್​ ಮತ್ತು ಮಾಧ್ಯಮಗಳ ಬಳಿ ಕುಟುಂಬದ ಸದಸ್ಯರು ಕ್ಷಮೆಯಾಚಿಸಿದ್ದಾರೆ.

    ಎಡವಟ್ಟು ಆಗಿದ್ಹೇಗೆ ಅಂತಾ ನೋಡುವುದಾದರೆ, ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್​ ಆಗಿದ್ದು ದಕ್ಷಿಣ ಭಾರತ ಮೂಲದ ದಿವ್ಯಾ.ಪಿ ಹೆಸರಿನ ಸ್ಪರ್ಧಾರ್ಥಿ. ಆದರೆ, ಫ್ರೆಂಡ್ಸ್​ ಮಾಡಿದ ಮಿಸ್ಟೇಕ್​ನಿಂದ ದಿವ್ಯಾ ಪಾಂಡೆ ಇದೀಗ ತಲೆತಗ್ಗಿಸುವಂತಾಗಿದೆ ಎಂದು ಆಕೆಯ ಸಹೋದರಿ ಪ್ರಿಯದರ್ಶಿನಿ ಪಾಂಡೆ ತಿಳಿಸಿದ್ದಾರೆ. ಯುಪಿಎಸ್​ಸಿ ಪರೀಕ್ಷೆಯಲ್ಲಿ 323ನೇ ರ್ಯಾಂಕ್​ನಲ್ಲಿ ಪಾಸ್​ ಆಗಿರುವ ಬಗ್ಗೆ ನನ್ನ ಅಕ್ಕನಿಗೆ ಉತ್ತರ ಪ್ರದೇಶ ಮೂಲದ ಫ್ರೆಂಡ್ಸ್​ ಫೋನ್​ ಮೂಲಕ ತಿಳಿಸಿದರು. ನಾವು ಯುಪಿಎಸ್​ಸಿ ಫಲಿತಾಂಶ ನೋಡಲು ವೆಬ್​ಸೈಟ್​ ಪರಿಶೀಲಿಸಿದೆವು. ಆದರೆ, ಇಂಟರ್ನೆಟ್​ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಇಷ್ಟೆಲ್ಲ ರಾದ್ಧಾಂತವಾಯಿತು. ನಮ್ಮಿಂದ ಎಡವಟ್ಟಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇದಕ್ಕೂ ಮುನ್ನ ಸಂಭ್ರಮಾಚರಣೆ ಮಾಡಿದ್ದ ದಿವ್ಯಾ ಪಾಂಡೆ ಕುಟುಂಬ, ನಮ್ಮ ಮಗಳು ಸ್ಮಾರ್ಟ್​ಫೋನ್​, ಇಂಟರ್ನೆಟ್​ ಹಾಗೂ ಯಾವುದೇ ವೃತ್ತಿಪರ ಕೋಚಿಂಗ್​ ಇಲ್ಲದೇ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಪಾಸ್​ ಮಾಡಿದ್ದಾಳೆ ಎಂದು ಎಲ್ಲರ ಮುಂದೆ ಹೇಳಿಕೊಂಡು ಖುಷಿ ಪಡುತ್ತಿದ್ದರು. ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ಈ ವಿಚಾರ ಮಾಧ್ಯಮಗಳಲ್ಲೂ ಪ್ರಸಾರವಾಗಿ ದಿವ್ಯಾ ಅವರನ್ನು ಕೊಂಡಾಡಲಾಗಿತ್ತು. ಈ ಸುದ್ದಿ ಸಿಸಿಎಲ್​ ಚೇರ್ಮನ್​ ಕಂ ಮ್ಯಾನೇಜಿಂಗ್​ ಡೈರೆಕ್ಟರ್​ ಪಿ.ಎಂ. ಪ್ರಸಾದ್​ ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ದಿವ್ಯಾ ಪಾಂಡೆ ಅವರನ್ನು ಸನ್ಮಾನಿಸಿದ್ದರು. ಅಂದಹಾಗೆ ದಿವ್ಯಾ ಅವರ ತಂದೆ ಸಿಸಿಎಲ್​ನಲ್ಲಿ ಕ್ರೇನ್​ ಆಪರೇಟರ್​ ಆಗಿ ಕೆಲಸ ಮಾಡಿ ಸದ್ಯ ನಿವೃತ್ತಿ ಹೊಂದಿದ್ದಾರೆ.

    ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿ ಎಲ್ಲೆಡೆ ವೈರಲ್​ ಆಗಿ, ದಿವ್ಯಾ ಅವರಿಗೆ ಭಾರೀ ಪ್ರಶಂಸೆ ವ್ಯಕ್ತವಾಗುವುದನ್ನು ಗಮನಿಸಿದ ರಾಮಗಢ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಕೂಡ ದಿವ್ಯಾರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಸನ್ಮಾನ ಮಾಡಿದ್ದರು. ಆದರೆ, ಇದೀಗ ಮಾಹಿತಿಯ ಅಸ್ಪಷ್ಟತೆಯಿಂದಾಗಿರುವ ಎಡವಟ್ಟು ಎಂಬುದು ತಿಳಿದಿದ್ದು, ಅವರಿಗೂ ಮುಜುಗರವಾಗಿದೆ. ಆದರೂ, ಇದು ಅರಿಯದೇ ಆದ ತಪ್ಪು ಎಂದು ಪರಿಗಣಿಸಿರುವ ಅಧಿಕಾರಿಗಳು ಈ ಸಂಬಂಧ ದಿವ್ಯಾ ಅಥವಾ ಆಕೆಯ ಕುಟುಂಬದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

    ಸುಳ್ಳು ಸುದ್ದಿಯನ್ನು ಹಬ್ಬಿಸುವ ಯಾವುದೇ ಉದ್ದೇಶ ನಮಗೆ ಇರಲಿಲ್ಲ ಎಂದು ದಿವ್ಯಾ ಕುಟುಂಬ ತಿಳಿಸಿದೆ. ಈ ಎಡವಟ್ಟಿಗೆ ನಾವು ಕ್ಷಮೆ ಕೇಳುತ್ತೇವೆ ಎಂದಿದ್ದಾರೆ. ಅಂದಹಾಗೆ ದಿವ್ಯಾ, ರಾಂಚಿ ವಿಶ್ವವಿದ್ಯಾನಿಲಯದಿಂದ 2017ರಲ್ಲಿ ಪದವಿ ಪಡೆದಿದ್ದಾರೆ. ನಾನು ಪ್ರತಿನಿತ್ಯ ಸುಮಾರು 18 ಗಂಟೆಗಳ ಅಧ್ಯಯನವನ್ನು ಮಾಡುತ್ತೇನೆ ಮತ್ತು ಬಹಳಷ್ಟು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮಂಡಳಿ (NCERT) ಪುಸ್ತಕಗಳನ್ನು ಓದುತ್ತೇನೆ ಎಂದು ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೀಗ ಎಡವಟ್ಟಾಗಿರುವುದು ಗೊತ್ತಾಗಿದ್ದು ಎಲ್ಲರ ಕ್ಷಮೆ ಕೋರಿದ್ದಾರೆ. (ಏಜೆನ್ಸೀಸ್​)

    ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೊದಲ ನಾಲ್ಕೂ ಸ್ಥಾನ ಮಹಿಳೆಯರದ್ದೇ: ಕರ್ನಾಟಕದ 25 ಮಂದಿ ಆಯ್ಕೆ

    ಶಾಪವಾದ ಮದುವೆ, ಅತ್ತೆ-ಗಂಡನ ಕಿರುಕುಳವೇ ನನಗೆ ಸ್ಫೂರ್ತಿ: ಯುಪಿಎಸ್​ಸಿ ಗೆದ್ದಾಕೆಯ ಮನದ ಮಾತು

    ಯುಪಿಎಸ್​ಸಿ ಪರೀಕ್ಷೆ: ಬೆಳಗಾವಿಯ ಸಾಹಿತ್ಯ ರಾಜ್ಯಕ್ಕೆ ಹತ್ತನೇ ರ‌್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts