More

    ಕಾಂಗರೂ ನಾಡಿನಲ್ಲಿ ಟಿ20 ಮಹಾ ಕಾಳಗ: ಇಂದಿನಿಂದ ಟಿ20 ವಿಶ್ವಕಪ್​ನ ಅಸಲಿ ಹೋರಾಟ ಶುರು

    ನವದೆಹಲಿ: ಭಾರತದಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದರೆ, ಅತ್ತ ಕಾಂಗರೂಗಳ ನಾಡು ಆಸ್ಟ್ರೇಲಿಯಾದಲ್ಲಿ ಟಿ20 ಪಟಾಕಿ ಸಿಡಿಯಲು ವೇದಿಕೆ ಸಜ್ಜಾಗಿದೆ. ಟಿ20 ವಿಶ್ವಕಪ್​ನಲ್ಲಿ ಅಸಲಿ ಹೋರಾಟ ಶುರುವಾಗುವ ಸೂಪರ್-12 ಹಂತದ ಕಾದಾಟಕ್ಕೆ ಶನಿವಾರ ಚಾಲನೆ ಸಿಗಲಿದೆ.

    ಕಳೆದ ವರ್ಷದ ಫೈನಲಿಸ್ಟ್ ತಂಡಗಳ ಮರುಮುಖಾಮುಖಿ ಎನಿಸಿರುವ ಸೂಪರ್-12 ಹಂತದ ಮೊದಲ ಕಾದಾಟದಲ್ಲಿ ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಆಸ್ಟ್ರೇಲಿಯಾ ಮತ್ತು ಹಾಲಿ ರನ್ನರ್​ಅಪ್ ನ್ಯೂಜಿಲೆಂಡ್ ತಂಡಗಳು ಸಿಡ್ನಿಯಲ್ಲಿ ಸೆಣಸಲಿವೆ. ಕಳೆದ ವರ್ಷದ ನಿರಾಸೆಯನ್ನು ಬದಿಗೊತ್ತಿ ರೋಹಿತ್ ಶರ್ಮ ಸಾರಥ್ಯದಲ್ಲಿ ಹೊಸ ಉತ್ಸಾಹದಿಂದ ಕಣಕ್ಕಿಳಿಯಲಿರುವ ಭಾರತ ತಂಡ, ಐಸಿಸಿ ಟೂರ್ನಿಗಳ ಇತ್ತೀಚಿನ ಸಂಪ್ರದಾಯದಂತೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಭಾನುವಾರ ಅಭಿಯಾನ ಆರಂಭಿಸಲಿದೆ. ಆಸೀಸ್ ನೆಲದಲ್ಲಿ 2020ರಲ್ಲೇ ನಡೆಯಬೇಕಾಗಿದ್ದ ಈ ವಿಶ್ವಕಪ್ ಕರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಕರೊನಾ ಮಹಾಮಾರಿಯ ಯಾವುದೇ ಭಯವಿಲ್ಲದೆ ಟಿ20 ಮಹಾಸಮರ ನಡೆಯುತ್ತಿದೆ. ಎರಡು ಬಾರಿಯ ರನ್ನರ್​ಅಪ್ ವೆಸ್ಟ್ ಇಂಡೀಸ್ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿರುವುದು ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಎಷ್ಟು ಪೈಪೋಟಿಯ ಹಣಾಹಣಿಗಳು ಏರ್ಪಡಬಹುದು ಎಂಬ ಸೂಚನೆ ರವಾನಿಸಿದೆ.

    ಕಾಂಗರೂ ನಾಡಿನಲ್ಲಿ ಟಿ20 ಮಹಾ ಕಾಳಗ: ಇಂದಿನಿಂದ ಟಿ20 ವಿಶ್ವಕಪ್​ನ ಅಸಲಿ ಹೋರಾಟ ಶುರು

    ಅರಬ್ ನಾಡಿನಲ್ಲಿ ಕಳೆದ ವರ್ಷ ನಡೆದ ವಿಶ್ವಕಪ್​ನಲ್ಲಿ ಟಾಸ್ ಗೆದ್ದ ತಂಡವೇ ಪಂದ್ಯ ಗೆಲ್ಲುವ ದಾಖಲೆ ಕಂಡುಬಂದಿತ್ತು. ಆದರೆ ಕಾಂಗರೂ ನಾಡಿನಲ್ಲಿ ಈ ಬಾರಿ ಚಳಿ ವಾತಾವರಣದಲ್ಲಿ ಬೌಲರ್​ಗಳೇ ಹೆಚ್ಚಿನ ಪ್ರಾಬಲ್ಯ ಸಾಧಿಸುವ ನಿರೀಕ್ಷೆ ಇದೆ. ಆತಿಥೇಯ ಆಸೀಸ್​ಗೆ ತವರು ವಾತಾವರಣದ ಲಾಭವಿದ್ದರೂ, ಇದುವರೆಗೆ ಯಾವುದೇ ತಂಡ ಸತತ 2 ಬಾರಿ ಟಿ20 ವಿಶ್ವಕಪ್ ಗೆಲ್ಲದ ಅಪವಾದದ ಹಿನ್ನಡೆ ಹೊಂದಿದೆ. ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಫೇವರಿಟ್ ಪಟ್ಟಿಯಲ್ಲಿರುವ ಇತರ ತಂಡಗಳು. ಕಳೆದ ಬಾರಿ ನಾಕೌಟ್​ಗೇರದೆ ಆಘಾತ ಎದುರಿಸಿದ್ದ ಟೀಮ್ ಇಂಡಿಯಾ ಈ ಬಾರಿ 15 ವರ್ಷಗಳ ಮತ್ತೆ ಪ್ರಶಸ್ತಿ ಎತ್ತುವ ಜೋಶ್ ಹೊಂದಿದೆ. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಐಸಿಸಿ ಟೂರ್ನಿಗಳ ಚೋಕರ್ಸ್ ಪಟ್ಟಿ ಕಳಚುವ ತವಕದಲ್ಲಿವೆ. ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳೂ ಟೂರ್ನಿಯಲ್ಲಿ ಲೆಕ್ಕಾಚಾರ ಬುಡಮೇಲಾಗಿಸುವ ತಾಕತ್ತು ಹೊಂದಿವೆ. ಹೀಗಾಗಿ ನವೆಂಬರ್ 13ರಂದು ಮೆಲ್ಬೋರ್ನ್ ಅಂಗಳದಲ್ಲಿ 8ನೇ ಆವೃತ್ತಿಯ ಚುಟುಕು ಕ್ರಿಕೆಟ್ ವಿಶ್ವಕಪ್​ಗೆ ಯಾರು ಮುತ್ತಿಕ್ಕುವರು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

    ಟೂರ್ನಿ ಸ್ವರೂಪ
    ಸೂಪರ್-12 ಮಾದರಿಯಲ್ಲಿ ಪ್ರಧಾನ ಸುತ್ತು ನಡೆಯಲಿದೆ. 2021ರ ನವೆಂಬರ್ 15ಕ್ಕೆ ಅನ್ವಯಿಸುವ ಐಸಿಸಿ ರ್ಯಾಂಕಿಂಗ್​ನ ಅಗ್ರ 8 ತಂಡಗಳು ನೇರ ಅರ್ಹತೆ ಸಂಪಾದಿಸಿದ್ದರೆ, ಮೊದಲ ಸುತ್ತಿನಿಂದ 4 ತಂಡಗಳು ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿವೆ. 12 ತಂಡಗಳನ್ನು ತಲಾ 6 ತಂಡಗಳಂತೆ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ರೌಂಡ್ ರಾಬಿನ್ ಸೆಣಸಾಟದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಟೂರ್ನಿಯಲ್ಲಿ ಆಡುವ ಒಟ್ಟು ತಂಡಗಳು 16.

    ಚಾಂಪಿಯನ್ಸ್
    2007: ಭಾರತ
    2009: ಪಾಕಿಸ್ತಾನ
    2010: ಇಂಗ್ಲೆಂಡ್
    2012: ವೆಸ್ಟ್ ಇಂಡೀಸ್
    2014: ಶ್ರೀಲಂಕಾ
    2016: ವೆಸ್ಟ್ ಇಂಡೀಸ್
    2021: ಆಸ್ಟ್ರೇಲಿಯಾ

    ಒಂದೇ ವರ್ಷ ಚಾಂಪಿಯನ್!
    ವೆಸ್ಟ್ ಇಂಡೀಸ್ ತಂಡ 2016ರಿಂದ 5 ವರ್ಷಗಳ ಕಾಲ ಟಿ20 ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಬೀಗಿದ್ದರೆ, 2021ರ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಇದೀಗ ಒಂದೇ ವರ್ಷದಲ್ಲಿ ತನ್ನ ಪಟ್ಟವನ್ನು ಪಣಕ್ಕಿಡುತ್ತಿದೆ. ಆದರೆ ಈ ವರ್ಷವೂ ಗೆದ್ದರೆ ಇನ್ನೆರಡು ವರ್ಷ ಚಾಂಪಿಯನ್ ಪಟ್ಟ ಭದ್ರವಾಗಿರಲಿದೆ.

    ಮತ್ತೊಮ್ಮೆ 7ರ ಅದೃಷ್ಟ ಒಲಿಯುವುದೇ?
    ಭಾರತ ತಂಡ 1983ರಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ನಂತರದ 6 ಆವೃತ್ತಿಗಳ (1987, 1992, 1996, 1999, 2003, 2007) ಬಳಿಕ 7ನೇ ಪ್ರಯತ್ನದಲ್ಲಿ ಅಂದರೆ 2011ರಲ್ಲಿ 2ನೇ ಬಾರಿಗೆ ಏಕದಿನ ವಿಶ್ವಕಪ್ ಪ್ರಶಸ್ತಿ ಒಲಿಸಿಕೊಂಡಿತ್ತು. ಇದೇ ಲೆಕ್ಕಾಚಾರದಲ್ಲಿ ನೋಡಿದರೆ ಭಾರತ ತಂಡ ಈ ಬಾರಿ ಟಿ20 ವಿಶ್ವಕಪ್ ಕೂಡ ಗೆಲ್ಲಬೇಕು! ಯಾಕೆಂದರೆ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ಕಳೆದ 6 ಆವೃತ್ತಿಗಳಲ್ಲಿ (2009, 2010, 2012, 2014, 2016, 2021) ವೈಫಲ್ಯ ಕಂಡಿದ್ದು, ಈ ಬಾರಿ 7 ಯತ್ನದಲ್ಲಿ ಮತ್ತೆ ಟಿ20 ವಿಶ್ವಕಪ್ ಗೆಲ್ಲಬಹುದೆಂಬ ಕನಸು ಅಭಿಮಾನಿಗಳದ್ದಾಗಿದೆ.

    ಆತಿಥೇಯರು, ಹಾಲಿ ಚಾಂಪಿಯನ್ಸ್ ಗೆದ್ದಿಲ್ಲ!
    ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಇದುವರೆಗೆ ಒಮ್ಮೆಯೂ ಆತಿಥೇಯ ತಂಡ ಪ್ರಶಸ್ತಿ ಗೆದ್ದಿಲ್ಲ. ಅಲ್ಲದೆ ಯಾವುದೇ ತಂಡವೂ ಸತತ 2 ಬಾರಿ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಆಸ್ಟ್ರೇಲಿಯಾ ತಂಡ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ತಂಡವಾಗಿ ಕಣಕ್ಕಿಳಿಯುತ್ತಿದ್ದು, ಇತಿಹಾಸ ಬದಲಾಯಿಸುವುದೇ ಎಂಬುದನ್ನು ಕಾದುನೋಡಬೇಕಿದೆ.

    ಕಾಂಗರೂ ನಾಡಿನಲ್ಲಿ ಟಿ20 ಮಹಾ ಕಾಳಗ: ಇಂದಿನಿಂದ ಟಿ20 ವಿಶ್ವಕಪ್​ನ ಅಸಲಿ ಹೋರಾಟ ಶುರು

    ಕಾಂಗರೂ ನಾಡಿನಲ್ಲಿ ಟಿ20 ಮಹಾ ಕಾಳಗ: ಇಂದಿನಿಂದ ಟಿ20 ವಿಶ್ವಕಪ್​ನ ಅಸಲಿ ಹೋರಾಟ ಶುರು

    ನಿಂತಿದ್ದ ಟ್ರಕ್​ಗೆ ಬಸ್​ ಡಿಕ್ಕಿ: ದೀಪಾವಳಿ ಆಚರಿಸಲು ಊರಿಗೆ ಬರ್ತಿದ್ದ 15 ಕಾರ್ಮಿಕರು ದುರ್ಮರಣ

    ದೀಪಾವಳಿ ಗಿಫ್ಟ್​: ಈ ರಾಜ್ಯದಲ್ಲಿ ಅ.27ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ್ರು ಯಾವುದೇ ದಂಡ ವಿಧಿಸಲ್ಲ!

    ಹಿಂದು ಹುಡುಗಿಯನ್ನು ಅಪಹರಿಸಿದ ಆರೋಪಿ ಪರ ತೀರ್ಪು ನೀಡಿದ ಪಾಕ್​ ಕೋರ್ಟ್! ಕಣ್ಣೀರಿಟ್ಟ ಸಂತ್ರಸ್ತೆಯ ಪಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts