ಭೋಪಾಲ್: ಒಂದೇ ಸಿರಿಂಜ್ನಲ್ಲಿ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಏಕ ಬಳಕೆ ಸಿರಿಂಜ್ ಕಾರ್ಯವಿಧಾನವನ್ನು ಉಲ್ಲಂಘಿಸಿದ್ದಲ್ಲದೆ, ಚುಚ್ಚುಮದ್ದುಗಾರ ಉಡಾಫೆ ಉತ್ತರನ್ನು ನೀಡಿದ್ದಾನೆ.
ಅಧಿಕಾರಿಗಳು ಒಂದೇ ಒಂದು ಸಿರಿಂಜ್ ಕಳುಹಿಸಿಕೊಟ್ಟಿದ್ದರು ಮತ್ತು ಅದರಲ್ಲೇ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವಂತೆ ವಿಭಾಗದ ಮುಖ್ಯಸ್ಥರು ಆದೇಶಿಸಿದ್ದರು ಎಂದು ಈ ಚುಚ್ಚುಮದ್ದುಗಾರ ಜೀತೇಂದ್ರ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳ ಪಾಲಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಬಿಸಾಡಬಹುದಾದ ಸಿರಿಂಜ್‌ಗಳು, ಏಕ ಬಳಕೆಗಾಗಿ ಮಾತ್ರ ಇದೆ. ಅದನ್ನು ಮತ್ತೊಬ್ಬರಿಗೆ ಬಳಸುವಂತಿಲ್ಲ. ಇದು ಕಾನೂನು ಉಲ್ಲಂಘನೆಯು ಹೌದು. ಆದರೆ, ಸಾಮಾಗ್ರಿಗಳನ್ನು ತಲುಪಿಸಿದ ವ್ಯಕ್ತಿ, ಒಂದೇ ಒಂದು ಸಿರಿಂಜ್ ನೀಡಿದ್ದಾನೆ ಎಂದು ಜೀತೇಂದ್ರ, ಪಾಲಕರ ಮುಂದೆಯೇ ಹೇಳಿದ್ದು, ಆತಂಕಗೊಂಡ ಪಾಲಕರು ಅದನ್ನು ರೆಕಾರ್ಡ್ ಮಾಡಿದ್ದಾರೆ.
ಒಂದು ಸಿರಿಂಜ್ ಅನ್ನು ಹಲವಾರು ಜನರಿಗೆ ಚುಚ್ಚುಮದ್ದು ಮಾಡಲು ಬಳಸಬಾರದು ಎಂದು ನಿಮಗೆ ತಿಳಿದಿದೆಯೇ ಎಂದು ಜೀತೇಂದ್ರನನ್ನು ಪ್ರಶ್ನಿಸಿದಾಗ, ಆತ ನನಗೆ ಅದು ತಿಳಿದಿದೆ. ಕೇವಲ ಒಂದು ಸಿರಿಂಜ್ ಅನ್ನು ಬಳಸಬೇಕೇ ಎಂದು ಅಧಿಕಾರಿಗಳನ್ನು ಕೇಳಿದೆ. ಅದಕ್ಕೆ ಅವರು ‘ಹೌದು’ ಎಂದು ಹೇಳಿದರು. ಹೀಗಿರುವಾಗ ಇದು ನನ್ನ ತಪ್ಪು ಹೇಗಾಗುತ್ತದೆ? ನಾನು ಏನು ಮಾಡಬೇಕೆಂದು ಕೇಳಿಕೊಂಡೆನೋ ಅದನ್ನು ಮಾಡಿದ್ದೇನೆ ಎಂದು ಉಡಾಫೆಯ ಉತ್ತರ ನೀಡಿದ್ದಾನೆ.
Shocking violation of “One needle, one syringe, only one time” protocol in #COVID19 #vaccination, in Sagar a vaccinator vaccinated 30 school children with a single syringe at Jain Public Higher Secondary School @ndtv @ndtvindia pic.twitter.com/d6xekYQSfX
— Anurag Dwary (@Anurag_Dwary) July 27, 2022
ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಸಾಗರ್ ಜಿಲ್ಲಾಡಳಿತ ಜಿತೇಂದ್ರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್)ಯನ್ನು ದಾಖಲಿಸಿದೆ. ಕೇಂದ್ರ ಸರ್ಕಾರದ “ಒಂದು ಸೂಜಿ, ಒಂದು ಸಿರಿಂಜ್, ಒಂದು ಬಾರಿ” ಪ್ರತಿಜ್ಞೆಯನ್ನು ನಿರ್ಲಕ್ಷ ಮತ್ತು ನಿರ್ದಾಕ್ಷಿಣ್ಯವಾಗಿ ಉಲ್ಲಂಘಿಸಿದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಲಸಿಕೆ ಮತ್ತು ಅಗತ್ಯವಿರುವ ಇತರ ವಸ್ತುಗಳನ್ನು ಕಳುಹಿಸುವ ಉಸ್ತುವಾರಿ ವಹಿಸಿದ್ದ ಜಿಲ್ಲಾ ಲಸಿಕೆ ಅಧಿಕಾರಿ ಡಾ.ರಾಕೇಶ್ ರೋಷನ್ ವಿರುದ್ಧವೂ ಇಲಾಖೆಯ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ.
ಸಾಗರ್ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶಿಬಿರದ ವೇಳೆ ಈ ಘಟನೆ ನಡೆದಿದೆ. ಒಂದೇ ಸಿರಿಂಜ್‌ನಿಂದ ಮಕ್ಕಳಿಗೆ ಲಸಿಕೆ ಹಾಕುತ್ತಿರುವುದನ್ನು ಗಮನಿಸಿದ ಪೋಷಕರು ಆತಂಕ ವ್ಯಕ್ತಪಡಿಸಿದರು.
ಪ್ರಭಾರಿ ಜಿಲ್ಲಾಧಿಕಾರಿ ಕ್ಷಿತಿಜ್ ಸಿಂಘಾಲ್ ಅವರು ತಕ್ಷಣ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ ತಪಾಸಣೆ ವೇಳೆ ಚುಚ್ಚುಮದ್ದುಗಾರ ಜಿತೇಂದ್ರ ಹಾಜರಿರಲಿಲ್ಲ. ಘಟನೆ ಬೆಳಕಿಗೆ ಬಂದಾಗಿನಿಂದ ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ 2021ರ ಜನವರಿಯಲ್ಲಿ ಕೋವಿಡ್ ಲಸಿಕೀಕರಣ ಪ್ರಾರಂಭವಾಗುವ ಒಂದು ತಿಂಗಳ ಮೊದಲು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಟ್ಟುನಿಟ್ಟಾದ “ಒಂದು ಸೂಜಿ, ಒಂದು ಸಿರಿಂಜ್, ಒಂದೇ ಬಾರಿ” ಶಿಷ್ಟಾಚಾರವನ್ನು ಜಾರಿ ಮಾಡಿದೆ. ಇದೇ ರೀತಿಯ ಶಿಷ್ಟಾಚಾರವನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಹ ಜಾರಿ ಮಾಡಿದೆ. (ಏಜೆನ್ಸೀಸ್)
ಬೆಳ್ಳಾರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ
ಒಂದು ಚಪಾತಿ ಕೊಟ್ಟ ಮೇಲೂ ಇನ್ನೊಂದು ಕೇಳಿದ, ಕೊಡದಿದ್ದಕ್ಕೆ ನಡೆಯಿತು ಭೀಕರ ಹತ್ಯೆ!
ದಾಳಿ ಮಾಡಿದಷ್ಟು ದುಡ್ಡಿನ ರಾಶಿ! ನಟಿ ಅರ್ಪಿತಾಳ ಮತ್ತೊಂದು ಫ್ಲ್ಯಾಟ್ನಲ್ಲಿ 20 ಕೋಟಿ ನಗದು, 3 ಕೆಜಿ ಚಿನ್ನ ಪತ್ತೆ