More

    ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಗೇಮ್: ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಾಗ್ದಾಳಿ

    ಬೆಂಗಳೂರು: ‘ಡಬಲ್ ಎಂಜಿನ್ ಸರ್ಕಾರ ಡಬಲ್ ಗೇಮ’ ಆಡುತ್ತಿದೆ. ಬಿಜೆಪಿ ತನಗೆ ಅಧಿಕಾರ ತಂದುಕೊಟ್ಟ ಯುವಕರ ಜೀವಗಳಿಗೇ ಗ್ಯಾರಂಟಿ ಕೊಡದಷ್ಟು ದುರ್ಬಲವಾಗಿದೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಛೇಡಿಸಿದ್ದಾರೆ.

    ನಾಡಿನ ಜನರನ್ನಷ್ಟೇ ಅಲ್ಲ, ತನ್ನ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ, ಅಸಹಾಯಕ ಬಿಜೆಪಿ ಸರ್ಕಾರ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿದೆ. ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ ಎನ್ಐಎ ತನಿಖೆಗೆ ವಹಿಸಲು ಹಿಂಜರಿಯುತ್ತಿದೆ ಏಕೆ? ಎಂದು ಕೇಳಿದ್ದಾರೆ.

    ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರ್ಕಾರಕ್ಕೆ ಮಾಹಿತಿ ಇದೆ. ಆ ಕೊಲೆಗಳು ಏಕಾಗುತ್ತಿವೆ ಎನ್ನುವುದೂ ಗೊತ್ತಿದೆ. ಆದರೆ, ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿ ವೀರಾವೇಶ ಮೆರೆದ ಮುಖ್ಯಮಂತ್ರಿ ಬೊಮ್ಮಾಯಿ ಮಂಗಳೂರಿನಲ್ಲಿ ಜನರಿಗೆ ಕೊಟ್ಟ ಸಂದೇಶವೇನು? ಅವರ ನಾಲಿಗೆಯ ಮೇಲೆ ಒಮ್ಮೆಯಾದರೂ “ಶಾಂತಿ ಕಾಪಾಡಿ” ಎನ್ನುವ ಮಾತು ಬಂತಾ? ಬರಲಿಲ್ಲ!! ನೆಮ್ಮದಿಗಾಗಿ ಕಿಂಚಿತ್ ಕ್ರಮ ವಹಿಸಿದಿರಾ? ಅದೂ ಇಲ್ಲ. ಹಿಂಸೆಗೆ ಇನ್ನಷ್ಟು ತುಪ್ಪಾ ಸುರಿದು ಬಂದರು ಎಂದು ಕಿಡಿಕಾರಿದ್ದಾರೆ.

    ರಾಜ್ಯ ಪೊಲೀಸ್ ನೈತಿಕ ಶಕ್ತಿಗೆ ಧಕ್ಕೆ:
    ಎನ್ಐಎ ತನಿಖೆಗೆ ವಹಿಸಿದ ಎಷ್ಟು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ? ಒಂದೂ ಇಲ್ಲ. ಎನ್ಐಎಗೆ ಒಪ್ಪಿಸಿದ ಮೇಲೆ ತನಿಖೆಯಲ್ಲಿ ಮುಂದೆ ಸಾಗುತ್ತಿದ್ದ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿಗಳು ಕೊಟ್ಟ ಸಂದೇಶವೇನು? ಸ್ವತಃ ಗೃಹ ಸಚಿವರಾಗಿದ್ದ ಅವರು, ಸಿಎಂ ಆದ ಮೇಲೆ ತಮ್ಮ ಅಧೀನದ ಪೊಲೀಸ್ ವ್ಯವಸ್ಥೆಯನ್ನೇ ನಂಬುತ್ತಿಲ್ಲ!! ಇದಲ್ಲವೇ ವಿಪರ್ಯಾಸ!! ಎಂದು ಲೇವಡಿ ಮಾಡಿದ್ದಾರೆ.

    ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇಲ್ಲವೆ? ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಕರಾವಳಿ ಹಿಂಸಾಕಾಂಡವನ್ನು ಮೂಲೋತ್ಪಾಟನೆ ಮಾಡಬಲ್ಲರು. ಬಿಜೆಪಿ ಸರ್ಕಾರಕ್ಕೆ ಅದು ಬೇಕಿಲ್ಲ. ಸಮರ್ಥ ಅಧಿಕಾರಿಗಳನ್ನು ನಂಬದೆ ಎನ್ಐಎಗೆ ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ʼಸಮಾಧಿʼ ಕಟ್ಟಲು ಹೊರಟಿದೆ ಎಂದು ಟೀಕಿಸಿದ್ದಾರೆ.

    ಶಾಂತಿ, ರಕ್ಷಣೆ ಬಗ್ಗೆ ಮಾತಿಲ್ಲ:
    ಎರಡು ಕೊಲೆಗಳು ನಡೆದ ಬೆಳ್ಳಾರೆ ಗ್ರಾಮದಲ್ಲಾದರೂ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹೊಣೆಯ ಘನತೆಗೆ ತಕ್ಕಂತೆ ಶಾಂತಿ ರಕ್ಷಣೆ ಬಗ್ಗೆ ಒಂದು ಮಾತನ್ನಾದರೂ ಹೇಳಿದಿರಾ? ಇಲ್ಲ, ಚುನಾವಣೆ ವರ್ಷವಲ್ಲ.. ಕೊಲೆಗಳೇ ಹೆಚ್ಚೆಚ್ಚು ಆಗಬೇಕು, ಅವರ ಮತಪೆಟ್ಟಿಗೆ ಕೊಬ್ಬಬೇಕು. ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಬೆಳ್ಳಾರೆ ಬೇಗೆ ಇಡೀ ಕರಾವಳಿಯನ್ನು ವ್ಯಾಪಿಸಿದೆ. ಆದರೆ, ಜೀವ ಭಯದಲ್ಲಿರುವ ಎರಡು ಕೋಮುಗಳ ಜನರು ನೆಮ್ಮದಿಯಿಂದ ಬದುಕಲು ಏನು ಮಾಡಿದ್ದೀರಿ ಬೊಮ್ಮಾಯಿ ಅವರೇ? ಅವರ ಜೀವಕ್ಕೆ ಏನು ಖಾತರಿ ಕೊಟ್ಟಿದ್ದೀರಿ? ಪ್ರತಿ ಕೊಲೆ ಆದಾಗಲೂ ಈ ಕೊಲೆಪಾತಕ ರಾಜಕಾರಣ ನಮ್ಮ ಕುಟುಂಬಕ್ಕೇ ಕೊನೆಯಾಗಲಿ ಎನ್ನುವ ತಾಯಂದಿರ ಆರ್ತನಾದಕ್ಕೆ ನಿಮ್ಮ ಉತ್ತರವೇನು? ಎಂದು ಪ್ರಶ್ನಿಸಿದ್ದಾರೆ.

    ಹಿಂಸೆಗೆ ನಿಮ್ಮ ಸಾಮ್ರಾಜ್ಯವೂ ಬಲಿ:
    ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಸರ್ವಶನಾಶ ಮಾಡಿದ್ದೀರಿ. ಹಿಂಸೆಯ ಎಂಬ ವಿಷಸರ್ಪದ ಹೆಡೆಯಡಿ ಕಟ್ಟಿರುವ ನಿಮ್ಮ ಸಾಮ್ರಾಜ್ಯ ಹಿಂಸೆಗೇ ಬಲಿ ಆಗುವುದು ಖಚಿತ. ಕಾರ್ಯಕರ್ತರ ನೆತ್ತರಿನ ಮೇಲಿನ ಅಧಿಕಾರದ ಸುಖಕ್ಕೆ ಅದೇ ಕಾರ್ಯಕರ್ತರ ಆಕ್ರೋಶವೇ ಚರಮಗೀತೆ ಬರೆಯಲಿದೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

    ಚಿಕ್ಕ ವಯಸ್ಸಿನಲ್ಲೇ ಪ್ರೀತಿಸಿ 18 ವರ್ಷ ತುಂಬಿದ ಬಳಿಕ ಮದ್ವೆಯಾದ ಯುವತಿಯ ಬದುಕು ದುರಂತ ಅಂತ್ಯ!

    ಕೈ ತಪ್ಪಿ ಹೋಗುತ್ತಿರುವ ಮಂಡ್ಯವನ್ನು ಬಿಗಿ ಮಾಡಿಕೊಳ್ಳಲು ಮುಂದಾದ ಎಚ್​​ಡಿಕೆ!

    ಟಿವಿ ನೋಡುತ್ತಾ ಮ್ಯಾಗಿ ಮಾಡಿ ತಿಂದ ಮಹಿಳೆ ದುರಂತ ಸಾವು! ಇದರ ಮಧ್ಯೆ ನಡೆದಿದ್ದು ಮಹಾ ಎಡವಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts