More

    ಚೀನಾದಲ್ಲಿ ಪತ್ತೆಯಾದ ದೈತ್ಯ ಸಿಂಕ್​ಹೋಲ್​ ಕೆಳಗೆ ದಟ್ಟಾರಣ್ಯ! ಹಿಂದೆಂದೂ ಕಂಡಿರದ ಜೀವರಾಶಿಗಳಿರೋ ಸಾಧ್ಯತೆ

    ಬೀಜಿಂಗ್​: ಇಡೀ ಜಗತ್ತು ವಿಸ್ಮಯಗಳ ಆಗರ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಭೂಮಿಯ ಮೇಲೆ ಮನುಷ್ಯ ಸಂಶೋಧನೆ ಮಾಡಿರುವುದು ಕೆಲವೊಂದಿಷ್ಟು ಮಾತ್ರ, ಈ ನಿಗೂಢ ಜಗತ್ತಿನಲ್ಲಿ ಯಾರ ಕೈಗೂ ಎಟುಕದ ವಿಸ್ಮಯಗಳು ಇನ್ನು ಸಾಕಷ್ಟಿವೆ. ಆಗಾಗ ವಿಸ್ಮಯಗಳು ಜಗತ್ತಿಗೆ ತೆರೆದುಕೊಳ್ಳುವ ಮೂಲಕ ಜನರ ಹುಬ್ಬೇರಿಸುತ್ತಿದೆ. ಇದೀಗ ಮತ್ತೊಂದು ವಿಸ್ಮಯ ಚೀನಾದಲ್ಲಿ ನಡೆದಿದೆ.

    ದಕ್ಷಿಣ ಚೀನಾದ ಸ್ವಾಯತ್ತ ಪ್ರದೇಶ ಗುವಾಂಗ್ಕ್ಸಿ ಝುವಾಂಗ್​ನಲ್ಲಿ ದೈತ್ಯಾಕಾರದ ಬತ್ತುಕುಳಿ (ಸಿಂಕ್​ಹೋಲ್​) ಪತ್ತೆಯಾಗಿದೆ. ಇದಿಷ್ಟೇ ಆಗಿದ್ದರೆ ಅಚ್ಚರಿಯೇನಿರುತ್ತಿರಲಿಲ್ಲ. ಏಕೆಂದರೆ, ಬೃಹತ್​ ಬತ್ತುಕುಳಿ ಹಿಂದಿನಿಂದಲೂ ಪತ್ತೆಯಾಗುತ್ತಿವೆ. ಆದರೆ, ಎಲ್ಲರ ಅಚ್ಚರಿಗೆ ಕಾರಣವಾಗಿರುವ ಅಂಶವೇನೆಂದರೆ, ಪ್ರಸ್ತುತ ಪತ್ತೆಯಾಗಿರುವ ಸಿಂಕ್​ಹೋಲ್​ ಕೆಳಗೆ ಪ್ರಾಚೀನ ಅರಣ್ಯ ಶ್ರೇಣಿಯು ಆಶ್ರಯಿಸಿದೆ.

    ಸಿಂಕ್​ಹೋಲ್​ ಕೆಳಗಿರುವ ಅರಣ್ಯದಲ್ಲಿ 131 ಅಡಿಯ ಮರಗಳಿವೆ ಮತ್ತು ಇದುವರೆಗೂ ಕಂಡಿರದ ಜೀವರಾಶಿಗಳು ಇರುವ ಸಾಧ್ಯತೆಯು ಇದೆ ಎಂದು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಅಂದಹಾಗೆ ಸಿಂಕ್​ಹೋಲ್​ 630 ಅಡಿ ಆಳವಿದ್ದು, 1000 ಅಡಿಗಳಷ್ಟು ಉದ್ದ ಮತ್ತು 490 ಅಡಿಗಳಷ್ಟು ಎತ್ತರವಿದೆ. ಸ್ವಾಯತ್ತ ಪ್ರದೇಶದ ಲೇಯೆ ಕೌಂಟಿಯಲ್ಲಿರುವ ಎಲ್ಲರಿಗೂ ತಿಳಿದಿರುವ 30 ಸಿಂಕ್‌ಹೋಲ್‌ಗಳಲ್ಲಿ ಇದು ಒಂದಾಗಿದೆ. ಗುಹೆ ಅನ್ವೇಷಕರು ಸಿಂಕ್‌ಹೋಲ್‌ನ ಕೆಳಭಾಗವನ್ನು ತಲುಪುವ ಮೊದಲು ಹಲವಾರು ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಯಿತು. ಸಿಂಕ್​ಹೋಲ್​ನಲ್ಲಿ ಮೂರು ಪ್ರವೇಶದ್ವಾರಗಳನ್ನು ಗುಹೆ ಅನ್ವೇಷಕರು ಕಂಡುಕೊಂಡಿದ್ದು, ಕೆಳಭಾಗದಲ್ಲಿ “ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಪ್ರಾಚೀನ ಅರಣ್ಯ” ದಿಂದ ಕೂಡಿದೆ.

    ಗುವಾಂಗ್ಕ್ಸಿಯ 702 ಗುಹೆ ದಂಡಯಾತ್ರೆ ತಂಡದ ನಾಯಕ ಚೆನ್​ ಲೆಕ್ಷಿನ್​ ಮಾತನಾಡಿ, ಸಿಂಕ್​ಹೋಲ್​ನ ಕೆಳಭಾಗದಲ್ಲಿರುವ ಪುರಾತನ ಮರಗಳು ಸುಮಾರು 40 ಮೀಟರ್ (131 ಅಡಿ) ಎತ್ತರವಿದೆ ಮತ್ತು ದಟ್ಟವಾದ ಸಸ್ಯಗಳು ಒಬ್ಬ ವ್ಯಕ್ತಿಯ ಭುಜದವರೆಗೂ ಇವೆ ಎಂದು ಹೇಳಿದ್ದಾರೆ. ಈ ಸಿಂಕ್​ಹೋಲ್​ನಲ್ಲಿ ಇಲ್ಲಿಯವರೆಗೆ ವಿಜ್ಞಾನ ಲೋಕ ವರದಿ ಮಾಡದ ಅಥವಾ ವಿವರಿಸದ ಸಸ್ಯ ಹಾಗೂ ಪ್ರಾಣಿ ವರ್ಗಗಳು ಕಂಡುಬಂದರೆ ಆಶ್ಚರ್ಯಪಡಬೇಕಿಲ್ಲ ಎಂದಿದ್ದಾರೆ.

    ನಿಜಕ್ಕೂ ಇದೊಂದು ಒಳ್ಳೆಯ ಸುದ್ದಿ ಎಂದು ಯುಎಸ್‌ನ ರಾಷ್ಟ್ರೀಯ ಗುಹೆ ಮತ್ತು ಕಾರ್ಸ್ಟ್ ಸಂಶೋಧನಾ ಸಂಸ್ಥೆಯ (ಎನ್‌ಸಿಕೆಆರ್‌ಐ) ಕಾರ್ಯನಿರ್ವಾಹಕ ನಿರ್ದೇಶಕ ಜಾರ್ಜ್ ವೇನಿ ಹೇಳಿದ್ದಾರೆ. ಪ್ರಪಂಚದ ಇತರೆ ಭಾಗಗಳಲ್ಲಿರುವ ಸಿಂಕ್‌ಹೋಲ್‌ಗಳು ಕೇವಲ ಒಂದು ಮೀಟರ್ ಅಥವಾ ಎರಡರಷ್ಟು ವ್ಯಾಸವನ್ನು ಮಾತ್ರ ಹೊಂದಿರುತ್ತವೆ ಎಂದು ಹೇಳಿದ್ದಾರೆ. ವಿಶ್ವಾದ್ಯಂತ 700 ಮಿಲಿಯನ್ ಜನರಿಗೆ ಕಾರ್ಸ್ಟ್ ಜಲಚರಗಳು ಪ್ರಾಥಮಿಕ ನೀರಿನ ಮೂಲವನ್ನು ಒದಗಿಸುತ್ತವೆ. ಆದರೆ, ಅವು ಸುಲಭವಾಗಿ ಕಲುಷಿತಗೊಳ್ಳುತ್ತವೆ ಎಂದು ಶ್ರೀ ವೇನಿ ತಿಳಿಸಿದ್ದಾರೆ.

    ಅಂದಹಾಗೆ ಗುವಾಂಗ್ಕ್ಸಿ ಪ್ರದೇಶವು ಅದರ ಸುಂದರವಾದ ಕಾರ್ಸ್ಟ್ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ದಕ್ಷಿಣ ಚೀನಾವು ಕಾರ್ಸ್ಟ್ ರಚನೆಗಳನ್ನು ಹೇರಳವಾಗಿ ಹೊಂದಿದ್ದು, ಈ ಪ್ರದೇಶವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. (ಏಜೆನ್ಸೀಸ್​)

    ಅಸ್ಸಾಂನಲ್ಲಿ ಭಾರೀ ಪ್ರವಾಹ: ರೈಲು ಹಳಿಗಳ ಮೇಲೆ ಜೀವನ ಸಾಗಿಸುತ್ತಿವೆ 500 ಕ್ಕೂ ಹೆಚ್ಚು ಕುಟುಂಬಗಳು

    ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ… ಕಾನ್​ ಚಿತ್ರೋತ್ಸವದಲ್ಲಿ ಇದ್ದಕ್ಕಿದ್ದಂತೆ ಬೆತ್ತಲಾದ ಯೂಕ್ರೇನಿಯನ್​ ಮಹಿಳೆ!

    ಬೆಳ್ತಂಗಡಿಯಲ್ಲಿ ಗೋಡಂಬಿ ಆಕಾರದಲ್ಲಿ ಮೊಟ್ಟೆ ಇಡುತ್ತಿರುವ ಕೋಳಿ! ಮೊಟ್ಟೆ ನೋಡಿ ಬೆರಗಾದ ಮಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts