More

    ಕರೊನಾ ರೋಗಿಗಳ ಚಿಕಿತ್ಸೆಗಾಗಿ 3 ಐಷಾರಾಮಿ ಕಾರುಗಳನ್ನೇ ಆಸ್ಪತ್ರೆಯನ್ನಾಗಿಸಿದ ಐವರು ಸ್ನೇಹಿತರು!

    ಜೈಪುರ: ಮಹಾಮಾರಿ ಕರೊನಾದಂತಹ ಬಿಕ್ಕಟ್ಟಿನ ಸಮಯದಲ್ಲಿ ವೈದ್ಯಕೀಯ ಅಗತ್ಯದ ಜತೆಗೆ ಮಾನವೀಯತೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ರಾಜಸ್ಥಾನದ ಐವರು ಸ್ನೇಹಿತರು ಎಲ್ಲರಿಗೂ ಮಾದರಿಯಾಗಿದ್ದಾರೆ.

    ರಾಜಸ್ಥಾನದ ಕೋಟಾ ನಗರದ ಐವರು ಸ್ನೇಹಿತರು ಮೂರು ಐಷಾರಾಮಿ ಕಾರುಗಳನ್ನೇ ತುರ್ತು ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿ ಗಂಭೀರ ಕರೊನಾ ರೋಗಿಗಳಿಗೆ ವಾಹನದಲ್ಲೇ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆಗೆ ಹೊಸ ಭಾಷ್ಯ ಬರೆದಿದ್ದಾರೆ.

    ಇದು ಕೋಟಾದ ಕಾರು ಸರ್ವೀಸ್​ ಸೆಂಟರ್​ ನಡೆಸುವ ಚಂದೇಶ್​ ಗುಹಿಜಾ (44) ಅವರ ಪರಿಕಲ್ಪನೆಯಾಗಿದೆ. ಜನರು ಆಕ್ಸಿಜನ್​ ಮತ್ತು ಔಷಧಕ್ಕಾಗಿ ಅಲೆದಾಡುವುದನ್ನು ನೋಡಿ ಜನರ ಕಷ್ಟ ಪರಿಹಾರಕ್ಕೆಂದು ಈ ದಾರಿ ಕಂಡುಕೊಂಡಿದ್ದಾರೆ. ತನ್ನ ನಾಲ್ವರು ಸ್ನೇಹಿತರಾದ ಆಶಿಷ್​ ಸಿಂಗ್​, ಭರತ್​ ಸಮ್ನಾನಿ, ರವಿ ಕುಮಾರ್​ ಮತ್ತು ಆಶು ಕುಮಾರ್​ ಜತೆಗೂಡಿ ಈ ಮಹತ್ಕಾರ್ಯವನ್ನು ಚಂದೇಶ್​ ನಡೆಸುತ್ತಿದ್ದಾರೆ.

    ತಮ್ಮ ಮೂರು ಐಷಾರಾಮಿ ಕಾರುಗಳನ್ನು ತುರ್ತು ಆಸ್ಪತ್ರೆಯಾಗಿ ಮಾರ್ಪಾಡು ಮಾಡಿ, ಆಕ್ಸಿಜನ್​ ಮತ್ತು ಬೆಡ್​ ದೊರೆಯದೇ ಗಂಭೀರವಾಗಿರುವ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಮೂರು ಕಾರುಗಳನ್ನು ಉಪಯೋಗಿಸುತ್ತಿದ್ದೇವೆ. ಇನ್ನು ಹೆಚ್ಚಿನ ಅವಶ್ಯಕತೆ ಇದ್ದರೆ, ಖಂಡಿತ ಇಂತಹ ಮತ್ತಷ್ಟು ಕಾರುಗಳನ್ನು ಬಳಸಿಕೊಳ್ಳುತ್ತೇವೆ ಎಂದು ಚಂದೇಶ್​ ಹೇಳಿದ್ದಾರೆ.

    ಒಂದು ಕಾರು ಚಂದೇಶ್​ ಅವರಿಗೆ ಸೇರಿದ್ದು, ಇನ್ನೊಂ ಅವರ ಸಹೋದರನದ್ದು, ಮತ್ತೊಂದು ಕಾರು ಅವರ ಅಂಕಲ್​ಗೆ ಸೇರಿದ್ದಾಗಿದೆ. ಎರಡು ಕಾರು ಆಂಬ್ಯುಲೆನ್ಸ್​ ಆಗಿ ಕಾರ್ಯ ನಿರ್ವಹಿಸುತ್ತಿದೆ. ಕಾರಿನಲ್ಲಿ ಗ್ಯಾಸ್​ ಕಿಟ್​ಗಳನ್ನು ಅಳವಡಿಸಲಾಗಿದೆ. ರೋಗಿಗೆ ಆಮ್ಲಜನಕವನ್ನು ಪೂರೈಸುವ ಸಮಯದವರೆಗೆ ಕಾರಿನ ಎಸಿಯನ್ನು ಆನ್​ ಮಾಡುವ ಅವಶ್ಯಕತೆಯಿದೆ ಎಂದು ಚಂದೇಶ್ ಹೇಳಿದರು.

    ಈ ಸೇವೆಗಾಗಿ ಪ್ರತಿದಿನ 5000 ದಿಂದ 7000 ರೂ. ಖರ್ಚಾಗುತ್ತಿದೆ. ಇದರಲ್ಲಿ ಆಮ್ಲಜನಕ ಸಿಲಿಂಡರ್ ವೆಚ್ಚವು ಒಳಗೊಂಡಿದೆ. ಕಾರಿನಲ್ಲಿರುವ ಒಂದು ಸಿಲಿಂಡರ್​ನಿಂದ ಮೂವರು ರೋಗಿಗಳಿಗೆ ಆಕ್ಸಿಜನ್​ ಒದಗಿಸಬಹುದಾಗಿದೆ. ಗಂಟೆಗಟ್ಟಲೇ ಕ್ಯೂ ನಿಂತು ಮೂರು ಆಕ್ಸಿಜನ್​ ವ್ಯವಸ್ಥೆ ಮಾಡುತ್ತಿದ್ದೇವೆ. ಅವಶ್ಯಕತೆ ಇರುವ ಜನರು ನಿರಂತರವಾಗಿ ನಮಗೆ ಕರೆ ಮಾಡುತ್ತಿದ್ದಾರೆ. ಆದರೆ, ಎಲ್ಲರಿಗೂ ಚಿಕಿತ್ಸೆ ನೀಡುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ.

    ಕಳೆದ 10-12 ದಿನಗಳಿಂದ ರೋಗಿಗಳ ಕುಟುಂಬಗಳಿಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಉಚಿತವಾಗಿ ಪೂರೈಸುತ್ತಿದ್ದೇವೆ. ಆದಾಗ್ಯೂ ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಮತ್ತು ಕಡಿಮೆ ರೋಗಿಗಳನ್ನು ತಲುಪುತ್ತಿದ್ದೇವೆ. ಆದ್ದರಿಂದ ನಾವು ಕಾರುಗಳನ್ನು ಆಮ್ಲಜನಕವನ್ನು ಪೂರೈಸುವ ವಾಹನಗಳಾಗಿ ಪರಿವರ್ತಿಸಿದ್ದೇವೆ ಎಂದು ಚಂದೇಶ್​ ಹೇಳಿದರು.

    ಈ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಉಚಿತವಾಗಿ ಸೇವೆ ಸಲ್ಲಿಸಲು ಚಂದೇಶ್​ ಅವರು ತಮ್ಮ ಫೋನ್ ನಂಬರ್​ ಅನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದಾರೆ. (ಏಜೆನ್ಸೀಸ್​)

    ಭಾನುವಾರ ರಾತ್ರಿ ಚಾ.ನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದೇನು? ಭಯಬಿದ್ದು ಓಡಿ ಹೋದ ರೋಗಿ ಬಿಚ್ಚಿಟ್ಟ ವಾಸ್ತವ ಇದು!

    Web Exclusive | ಕರೊನಾ ಕಾಲದಲ್ಲಿ ರಕ್ತ ಸಂಗ್ರಹದ ಮಹತ್ಕಾರ್ಯ: ವಿಶ್ವ ಹಿಂದು ಪರಿಷತ್ ಕರೆಗೆ ಸ್ಪಂದಿಸಿದ ಯುವಜನ

    Web Exclusive | ಕರೊನಾ ಕಾಲದಲ್ಲಿ ರಕ್ತ ಸಂಗ್ರಹದ ಮಹತ್ಕಾರ್ಯ: ವಿಶ್ವ ಹಿಂದು ಪರಿಷತ್ ಕರೆಗೆ ಸ್ಪಂದಿಸಿದ ಯುವಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts