More

    ರಷ್ಯಾದ ಮಿಲಿಟರಿ ವಾಹನಗಳ ಮೇಲಿರುವ Z ಸಂಕೇತವು ಏನನ್ನು ಸೂಚಿಸುತ್ತದೆ? ಇಲ್ಲಿದೆ ರೋಚಕ ಉತ್ತರ

    ಕೀಯೆವ್​/ಮಾಸ್ಕೋ: ಯುದ್ಧ ಪೀಡಿತ ಯೂಕ್ರೇನ್​ನಲ್ಲಿ ರಷ್ಯಾದ ಮಿಲಿಟರಿ ವಾಹನಗಳು ಮತ್ತು ಟ್ಯಾಂಕ್​ಗಳು ಸಾಮಾನ್ಯವಾಗಿವೆ. ಯುದ್ಧ ಶುರುವಾಗಿ 13 ದಿನಗಳ ಕಳೆದಿದ್ದು, ಈ ವಾಹನಗಳು ಯೂಕ್ರೇನ್​ ರಾಜಧಾನಿ ಕೀಯೆವ್​ ಮತ್ತು ಯೂಕ್ರೇನ್​ನ ಇತರೆ ನಗರಗಳಲ್ಲಿ ಸುತ್ತಾಡುತ್ತಿವೆ. ಬಹುತೇಕ ರಷ್ಯಾ ಮಿಲಿಟರಿ ವಾಹನಗಳಲ್ಲಿ ಬಣ್ಣದಲ್ಲಿ ಗುರುತು ಮಾಡಲಾದ ಝಡ್​ (Z) ಎಂಬ ಪದವಿದೆ.

    ಸಾಮಾಜಿಕ ಜಾಲತಾಣದಲ್ಲಿ ಯೂಕ್ರೇನ್​-ರಷ್ಯಾ ಯುದ್ಧದ ಕುರಿತು ಸಾಕಷ್ಟು ಫೋಟೋಗಳು ಹರಿದಾಡುತ್ತಿದ್ದು, ಅದರಲ್ಲಿ ರಷ್ಯಾ ಮಿಲಿಟರಿ ವಾಹನಗಳ ಮೇಲೆ ಬರೆದಿರುವ Z ಪದದ ಬಗ್ಗೆ ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದಾರೆ. ಇನ್ನು ಯುದ್ಧದಲ್ಲಿ ರಷ್ಯಾ ಬೆಂಬಲಿಸುವ ಅನೇಕ ಮಂದಿಯು ಕೂಡ ತಮ್ಮ ಟೀ-ಶರ್ಟ್​ಗಳ ಮೇಲೆ ಇದೇ ಸಂಕೇತವನ್ನು ಬಳಸಿದ್ದಾರೆ.

    ಹಾಗಾದರೆ, ಈ Z ಸಂಕೇತ ಏನು ಸೂಚಿಸುತ್ತದೆ ಎಂದು ನೋಡುವುದಾದರೆ, ಈ ಬಗ್ಗೆ ಮಾಸ್ಕೋದ ಸ್ವತಂತ್ರ ಸಂಶೋಧಕ ಮತ್ತು ಪತ್ರಕರ್ತ ಕಮಿಲ್ ಗಲೀವ್ ಒಂದು ಟ್ವೀಟ್​ ಮಾಡಿದ್ದಾರೆ. ರಷ್ಯಾದ ಮಿಲಿಟರಿಯು ಯೂಕ್ರೇನ್‌ಗೆ ಹೊರಡುವಾಗ ತಮ್ಮ ವಾಹನಗಳ ಮೇಲೆ ಹಾಕಿರುವ ಪದವಾಗಿದ್ದು, Z ಎಂದರೆ, ಝ ಪೊಬೆದಿ (Za pobedy) ಅಂದರೆ “ವಿಜಯಕ್ಕಾಗಿ” ಎಂಬರ್ಥ ಬರುತ್ತದೆ. ಕೆಲವರ ಪ್ರಕಾರ Z ಅಂದರೆ ಝಪಾದ್​ ಅಂದರೆ ಪಶ್ಚಿಮ ಎಂದರ್ಥ ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

    ಕೆಲವೇ ದಿನಗಳ ಹಿಂದೆ ಕಂಡುಹಿಡಿದ ಈ ಚಿಹ್ನೆಯು ರಷ್ಯಾದ ಹೊಸ ಸಿದ್ಧಾಂತ ಮತ್ತು ರಾಷ್ಟ್ರೀಯ ಗುರುತಿನ ಸಂಕೇತವಾಯಿತು ಎಂದು ಕಮಿಲ್ ಗಲೀವ್ ಅವರು ಹೇಳಿದ್ದಾರೆ.

    ರಷ್ಯಾದ ಅನೇಕ ಬೆಂಬಲಿಗರು ಮತ್ತು ಅನೇಕ ರಷ್ಯಾ ನಾಗರಿಕರು ಹಾಗೂ ಬಿಜಿನೆಸ್​ ಮಾಲೀಕರು ಕೂಡ ತಮ್ಮ ಕಾರುಗಳ ಮೇಲೆ ಈ ಸಂಕೇತವನ್ನು ಅಳವಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಹೇಳುವ ಪ್ರಕಾರ ಯುದ್ಧ ಭೂಮಿಯಲ್ಲಿ ಗೊಂದಲಕ್ಕೀಡಾಗಿ ತಮ್ಮ ಸೈನಿಕರನ್ನು ಯೂಕ್ರೇನ್​ ಯೋಧರೆಂದು ಭಾವಿಸಿ ಪರಸ್ಪರ ಫೈರಿಂಗ್​ ಮಾಡುವುದನ್ನು ತಪ್ಪಿಸಲು ಈ ಸಂಕೇತವನ್ನು ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

    ಈ ಚಿಹ್ನೆಗಳು ಘಟಕ ಅಥವಾ ವಾಹನಗಳ ಸ್ಥಳವನ್ನು ತಿಳಿಸುತ್ತವೆ ಎಂದು ಕಳೆದ ತಿಂಗಳು ರಷ್ಯಾದ ರಕ್ಷಣಾ ಥಿಂಕ್ ಟ್ಯಾಂಕ್ ಆರ್​ಯುಎಸ್​ಐನ ಮಾಜಿ ನಿರ್ದೇಶಕ ಪ್ರೊಫೆಸರ್ ಮೈಕೆಲ್ ಕ್ಲಾರ್ಕ್ ಸ್ಕೈ ನ್ಯೂಸ್‌ಗೆ ತಿಳಿಸಿದ್ದರು. ಫೆ.22ರಂದು ಡೊನೆಟ್ಸ್ಕ್​ ಪ್ರಾಂತ್ಯಕ್ಕೆ ರಷ್ಯಾ ಮಿಲಿಟರಿ ವಾಹನಗಳು ಬಂದಾಗ ಮೊದಲ ಬಾರಿಗೆ ಈ ಸಂಕೇತವು ಕಣ್ಣಿಗೆ ಬಿತ್ತು. ದಿ ಇಂಡಿಪೆಂಡೆಂಟ್ ನ್ಯೂಸ್​ ಪ್ರಕಾರ 2014 ರಲ್ಲಿ ರಷ್ಯಾದಿಂದ ಸ್ವಾಧೀನಪಡಿಸಿಕೊಂಡಾಗ ಕ್ರೈಮಿಯಾದಲ್ಲಿನ ವಾಹನಗಳ ಮೇಲೆ “Z” ಚಿಹ್ನೆ ಕಾಣಿಸಿಕೊಂಡಿದೆ. “Z” ಅನ್ನು ಹೊರತುಪಡಿಸಿ, ರಷ್ಯಾದ ಮಿಲಿಟರಿ ವಾಹನಗಳ ಮೇಲೆ ಎರಡೂ ಬದಿಗಳಲ್ಲಿ ಎರಡು ಗೆರೆಗಳನ್ನು ಹೊಂದಿರುವ ತ್ರಿಕೋನ, ಒಳಗೆ ಮೂರು ಚುಕ್ಕೆಗಳನ್ನು ಹೊಂದಿರುವ ವೃತ್ತ ಮತ್ತು ಒಳಗೆ ಸಣ್ಣ ತ್ರಿಕೋನವನ್ನು ಹೊಂದಿರುವ ದೊಡ್ಡ ತ್ರಿಕೋನ ಚಿಹ್ನೆಗಳು ಕಾಣಬಹುದಾಗಿದೆ. ಆದರೆ, ರಷ್ಯಾದ ಮಿಲಿಟರಿ ಅಧಿಕಾರಿಗಳು ಅಧಿಕೃತವಾಗಿ ಚಿಹ್ನೆಗಳ ಬಗ್ಗೆ ಏನನ್ನೂ ಹೇಳಿಲ್ಲ. ಸದ್ಯ Z ಸಂಕೇತ ಇರುವ ಮಿಲಿಟರಿ ವಾಹನಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. (ಏಜೆನ್ಸೀಸ್​)

    ತಮಿಳುನಾಡು ಬಿಟ್ಟು ಬೇರೆ ರಾಜ್ಯಕ್ಕೆ ಶಿಫ್ಟ್​ ಆದ ನಟಿ ವರಲಕ್ಷ್ಮೀ ಶರತ್​ಕುಮಾರ್: ಕಾರಣ ಹೀಗಿದೆ…​

    ಈ ವಿಚಾರದಲ್ಲಿ ಇರಾನ್​, ಉ. ಕೊರಿಯಾ ಹಿಂದಿಕ್ಕಿ ಮೊದಲ ಸ್ಥಾನ ಪಡೆಯುವ ಮೂಲಕ ಕುಖ್ಯಾತಿಯಾದ ರಷ್ಯಾ..!

    ದುಬೈನಲ್ಲಿ ಕೇರಳದ ಸೋಶಿಯಲ್​ ಮೀಡಿಯಾ ಸ್ಟಾರ್ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಆಡಿಯೋ ಕ್ಲಿಪ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts