More

    ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿಸಲು ನಡೆದಿತ್ತು ಭಾರೀ ಕಸರತ್ತು: ರಾಜ್​ಗಾಗಿ ಬೆಂಗ್ಳೂರನ್ನೇ ಜಾಲಾಡಿದ್ರು!

    ಬೆಂಗಳೂರು: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಕುರಿತಾದ ಸುದ್ದಿಯೊಂದು ಬೆಳಗ್ಗೆಯಿಂದ ಭಾರೀ ವೈರಲ್​ ಆಗುತ್ತಿದೆ. ಅಪ್ಪು ಅವರನ್ನು ರಾಜಕೀಯಕ್ಕೆ ತರಬೇಕೆಂದು ಈ ಹಿಂದೆ ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿಯು ಕೂಡ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನ ನೀಡಿದ್ದರಂತೆ. ಆದರೆ, ಪುನೀತ್​ ಅದನ್ನು ನಯವಾಗಿಯೇ ತಿರಸ್ಕರಿಸಿದ್ದರಂತೆ. ರಾಜ್​ ಕುಟುಂಬ ರಾಜಕೀಯದಿಂದ ದೂರ ಎಂಬ ಮಾತು ಬಹು ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಹಿಂದೆ ವರನಟ ಡಾ. ರಾಜ್​ಕುಮಾರ್​ ಅವರನ್ನು ಜನತಾ ಪಕ್ಷವು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿತ್ತು. ಅದರಲ್ಲೂ ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿಸಲು ಜನತಾ ಪಕ್ಷ ಶತಾಯಗತಾಯ ಯತ್ನ ನಡೆಸಿತ್ತು. ಎಷ್ಟರ ಮಟ್ಟಿಗೆ ಅಂದರೆ ರಾಜಕೀಯ ನಾಯಕರ ಕಾಟವನ್ನು ಸಹಿಸದೇ ರಾಜ್​ ತಿಂಗಳುಗಳ ಕಾಲ ಕಣ್ಮರೆ ಸಹ ಆಗಿದ್ದರೂ. ಆದರೆ, ಅವರಿಗಾಗಿ ಇಡೀ ಕರ್ನಾಟಕವನ್ನೇ ಹುಡುಕಾಡಿದ್ದ ರಾಜಕಾರಣಿಗಳು ಕೊನೆಗೂ ರಾಜ್​ರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಕುರಿತ ಒಂದು ಕುತೂಹಲಕಾರಿ ವರದಿ ಇಲ್ಲಿದೆ.

    ಪುನೀತ್​ರನ್ನು ರಾಜಕೀಯಕ್ಕೆ ತರಬೇಕೆಂದು ಸಾಕಷ್ಟು ಪ್ರಯತ್ನಗಳು ನಡೆದರೂ ಸಹ ಅದು ಎಂದಿಗೂ ಸಾಧ್ಯವಾಗಲಿಲ್ಲ. ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್​ನಿಂದಲೂ ಪ್ರಯತ್ನ ನಡೆದಿತ್ತು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕೂಡ ಹೇಳಿಕೊಂಡಿದ್ದಾರೆ. ರಾಜ್​ ಯಾವಾಗಲೂ ರಾಜಕೀಯಕ್ಕೆ ವಿರುದ್ಧವಾಗಿದ್ದರು. ಅದೇ ಹಾದಿಯನ್ನು ಪುನೀತ್​ ಕೂಡ ಅನುಸರಿಸಿದ್ದಾರೆ. ರಾಜ್​ಕುಮಾರ್​ ಅವರ ಬೆಂಬಲ ಪಡೆಯಲು ಸಾಕಷ್ಟು ರಾಜಕೀಯ ಪಕ್ಷಗಳು ಅವರ ಬೆನ್ನಬಿದ್ದರೂ, ರಾಜ್​ ಮಾತ್ರ ಎಂದಿಗೂ ತಮ್ಮ ನಿಲುವನ್ನು ಬದಲಿಸಲೇ ಇಲ್ಲ. 70 ಮತ್ತು 80ರ ದಶಕದಲ್ಲಿ ದಿಗ್ಗಜ ನಟರಾದ ತಮಿಳಿನ ಎಂ.ಜಿ. ರಾಮಚಂದ್ರನ್​ ಮತ್ತು ತೆಲುಗಿನ ನಂದಮುರಿ ತಾರಕ ರಾಮರಾವ್​ (ಎನ್​ಟಿಆರ್​) ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಬಾಲಿವುಡ್​ನ ಅಮಿತಾಬ್​ ಬಚ್ಚನ್​ಗೂ​ ಕೂಡ ರಾಜಕೀಯದ ನಂಟಿದೆ. ಆದರೆ, ರಾಜ್​ ಇವರೆಲ್ಲರಿಗಿಂತ ತುಂಬಾ ಭಿನ್ನ. ಅವರೆಂದೂ ರಾಜಕೀಯಕ್ಕೆ ಸೊಪ್ಪು ಹಾಕಲೇ ಇಲ್ಲ.

    1978ರ ಕರ್ನಾಟಕ ಲೋಕಸಭಾ ಉಪಚುನಾವಣೆಯಲ್ಲಿ ರಾಜ್​ರನ್ನು ಕಣಕ್ಕೆ ಇಳಿಸಲೇ ಬೇಕೆಂದು ರಾಜಕೀಯ ಪಕ್ಷವೊಂದು ಪಣ ತೊಟ್ಟಿದ್ದ ವೇಳೆ ರಾಜ್​ ಕೆಲ ಕಾಲ ರಾಜ್ಯದಿಂದಲೇ ಕಣ್ಮರೆ ಆಗಿದ್ದರು. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ರಾಜ್​ರನ್ನು ಕಣಕ್ಕಿಳಿಸಲು ಜನತಾ ಪಾರ್ಟಿ ಮುಂದಾಗಿತ್ತು. ಈ ವಿಚಾರವನ್ನು ಪ್ರಖ್ಯಾತ ನಿರ್ದೇಶಕ ಹಾಗೂ ರಾಜ್​ಕುಮಾರ್​ ಪರಮಾಪ್ತ ಎಸ್​.ಕೆ ಭಗವಾನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಂದು ಜನತಾ ಪಾರ್ಟಿ ರಾಜ್​ಕುಮಾರ್​ ಅವರ ಹುಡುಕಾಟಕ್ಕೆ ಇಳಿದಿತ್ತಂತೆ. ಎಸ್​.ಕೆ. ಭಗವಾನ್​ ಮನೆಯಲ್ಲೂ ರಾಜ್​ಗಾಗಿ ಶೋಧ ನಡೆಸಿದ್ದರಂತೆ. ರಾಜ್​ಗಾಗಿ ಇಡೀ ಕರ್ನಾಟಕವನ್ನೇ ಜನತಾ ಪಾರ್ಟಿ ಹುಡುಕಾಡಿದರೂ ರಾಜ್​ ಮಾತ್ರ ಯಾರ ಕಣ್ಣಿಗೂ ಬೀಳಲಿಲ್ಲ.

    ಅಸಲಿಗೆ ಅಂದು ರಾಜ್​ ಕರ್ನಾಟಕದಲ್ಲಿ ಇರಲೇ ಇಲ್ಲ. ತಮಿಳುನಾಡಿನ ರಾಣಿಪೇಟ್​ ಬಳಿಯಿರುವ ಫಾರ್ಮ್​ ಹೌಸ್​ ಒಂದರಲ್ಲಿ ರಾಜ್​ ಬಚ್ಚಿಟ್ಟುಕೊಂಡಿದ್ದರಂತೆ. ಫಾರ್ಮ್​ ಹೌಸ್​ ಚೆನ್ನೈನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಅದು ಖಾಲಿ ತೋಟದ ಮನೆಯಾಗಿತ್ತು. ರಾಣಿಪೇಟೆ ಪಟ್ಟಣದಿಂದ ಸ್ವಲ್ಪ ದೂರದಲ್ಲಿ ಇರುವುದರಿಂದ ಈ ವ್ಯಕ್ತಿ ಆಹಾರಕ್ಕಾಗಿ ಏನು ಮಾಡುತ್ತಾನೆ ಎಂದು ತೋಟದ ಮನೆಯ ಮಾಲೀಕರು ಆಶ್ಚರ್ಯ ಪಟ್ಟಿದ್ದರಂತೆ.

    ಪ್ರತಿದಿನ ರಾಣಿಪೇಟೆಯಿಂದ ಯಾರಾದರೂ ಬಸ್ಸಿನಲ್ಲಿ ಫಾರ್ಮ್‌ಹೌಸ್‌ಗೆ ಬ್ರೆಡ್ ಮತ್ತು ಆಹಾರದ ಪೊಟ್ಟಣಗಳನ್ನು ದಾರಿಯಲ್ಲಿ ತೆಗೆದುಕೊಂಡು ಹೋಗಿ ರಾಜ್‌ಕುಮಾರ್‌ಗೆ ತಲುಪಿಸುತ್ತಿದ್ದರು ಎಂದು ಭಗವಾನ್ ಹೇಳಿದ್ದಾರೆ. ನಾಮಪತ್ರ ಸಲ್ಲಿಸುವ ಗಡುವು ಮುಗಿದ ಬಳಿಕ ರಾಜ್‌ಕುಮಾರ್‌ ಫಾರ್ಮ್​ ಹೌಸ್​ನಿಂದ ಹೊರಬಂದರು ಎಂದು ತಿಳಿಸಿದ್ದಾರೆ.

    2014ರಲ್ಲಿ ಶಿವಮೊಗ್ಗ ಲೋಕಸಭಾ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ರಾಜ್​ ಹಿರಿಯ ಸೊಸೆ ಹಾಗೂ ನಟ ಶಿವರಾಜ್​ಕುಮಾರ್​ ಪತ್ನಿ ಗೀತಾ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದು ರಾಜ್​ ಕುಟುಂಬದ ಏಕೈಕ ರಾಜಕೀಯ ಸಮಯ. ಆದರೂ, ಗೀತಾ ಅವರ ರಾಜಕೀಯ ಆಕೆಯ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹಾದಿಯಲ್ಲೇ ಸಾಗಿತ್ತು ಹೊರತು ಅದರಲ್ಲಿ ರಾಜ್​ ಕುಟುಂಬದ ನಿರ್ಧಾರ ಆಗಿರಲಿಲ್ಲ.

    ಇನ್ನು ವರ್ಷಗಳ ನಂತರ, ರಾಜಕುಮಾರ್ ಅವರು 1978ರಲ್ಲಿ ತಾನೇಕೆ ತಲೆಮರೆಸಿಕೊಂಡೆ ಎಂಬುದನ್ನು ತಮ್ಮ ಮಗ ರಾಘವೇಂದ್ರಗೆ ಒಮ್ಮೆ ವಿವರಿಸಿದ್ದರಂತೆ. ರಾಜಕೀಯದಲ್ಲಿ ಸಕಾರಾತ್ಮಕ ಕೊಡುಗೆ ನೀಡಬಹುದು ಎಂಬ ಉದ್ದೇಶವಿದ್ದಿದ್ದರೆ ಸ್ಪರ್ಧಿಸುವ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ಅವರು ನನ್ನನ್ನು ಹುಡುಕುತ್ತಿದ್ದರ ಉದ್ದೇಶ ನನ್ನನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು. ಹೀಗಾಗಿ ನಾನು ತಲೆಮರೆಸಿಕೊಳ್ಳಬೇಕಾಯಿತು. ಆದರೆ, ಗೋಕಾಕ್ ಚಳವಳಿಗೆ ಸೇರಲು ಕೇಳಿದಾಗ, ಭಾಗವಹಿಸಲು ತುಂಬಾ ಸಂತೋಷವಾಯಿತು. ನನ್ನ ಭಾಗವಹಿಸುವಿಕೆ ಅಗತ್ಯವಾಗಿದೆ ಮತ್ತು ಸಕಾರಾತ್ಮಕ ಕೊಡುಗೆಯನ್ನು ನೀಡಬಹುದು ಎಂದು ಹೇಳಿದರು. ಹೀಗಾಗಿ ನಾನು ಭಾಗವಹಿಸಿದೆ ಎಂದು ಡಾ. ರಾಜ್​ ಅವರು ರಾಘವೇಂದ್ರ ರಾಜ್​ಕುಮಾರ್​ಗೆ ಹೇಳಿದ್ದರಂತೆ.

    ರಾಜಕೀಯಕ್ಕೆ ಕಾಲಿಡದೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಬೇಕೆಂದು ಒತ್ತಾಯಿಸಿದ ಗೋಕಾಕ್ ಚಳವಳಿಯನ್ನು ಸ್ವಯಂಪ್ರೇರಿತರಾಗಿ ರಾಜ್​ ಮುನ್ನಡೆಸಿದಾಗ ಕನ್ನಡ ಮತೀಯ ಮೂರ್ತಿ ಛಾಪು ಮೂಡಿಸಲು ಸಾಧ್ಯವಾಯಿತು. 1982ರಲ್ಲಿ ರಾಜ್‌ಕುಮಾರ್‌ ಅವರು ಭಾಗವಹಿಸಲು ಒಪ್ಪಿಕೊಂಡ ನಂತರ ಗೋಕಾಕ್‌ ಚಳವಳಿಗೆ ಚಾಲನೆ ದೊರೆಯಿತು. ಜ್ಞಾನಪೀಠ ಪುರಸ್ಕೃತ ವಿ.ಕೆ.ಗೋಕಾಕ್ ನೇತೃತ್ವದ ತಜ್ಞರ ಸಮಿತಿಯ ವರದಿಯನ್ನು ಅಂಗೀಕರಿಸಲು ಕಾಂಗ್ರೆಸ್ ಸರ್ಕಾರವು ಆರಂಭದಲ್ಲಿ ನಿರಾಕರಿಸಿತು. ಸಮಿತಿಯು ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಬೇಕೆಂದು ಶಿಫಾರಸು ಮಾಡಿತ್ತು. ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸಾಹಿತಿಗಳು, ರಾಜಕೀಯ ಪಕ್ಷಗಳು, ಕನ್ನಡಪರ ಹೋರಾಟಗಾರರು ಭಾಷಾವಾರು ಆಂದೋಲನ ಆರಂಭಿಸಿದ್ದರು. ಆದರೆ, ಆರಂಭದಲ್ಲಿ ಜನ ಸಾಮಾನ್ಯರಿಂದ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ. ಆದರೆ, ರಾಜ್‌ಕುಮಾರ್‌ ಚಳವಳಿಯ ಎಂಟ್ರಿಯೊಂದಿಗೆ ಇಡೀ ಚಳುವಳಿಯ ರೂಪುರೇಷೆಯೇ ಬದಲಾಯಿತು. ಇಡೀ ಕನ್ನಡ ಚಿತ್ರೋದ್ಯಮ ಅವರ ಬೆನ್ನಿಗೆ ನಿಂತಿತು ಮತ್ತು ಸಾರ್ವಜನಿಕರು ಸಹ ಸಾಕಷ್ಟು ಬೆಂಬಲ ನೀಡಿದರು ಮತ್ತು ವರದಿಯನ್ನು ಒಪ್ಪಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು. 1980ರಲ್ಲಿ ನರಗುಂದ ಮತ್ತು ನವಲಗುಂದದಲ್ಲಿ ಪೋಲಿಸ್ ಗೋಲಿಬಾರ್‌ನಿಂದ ಇಬ್ಬರು ರೈತರು ಚಳವಳಿಯ ಸಮಯದಲ್ಲಿ ಸತ್ತರೂ, ಗೋಕಾಕ್ ಆಂದೋಲನವನ್ನು ಹೆಚ್ಚಾಗಿ ಯಶಸ್ವಿ ಎಂದು ಪರಿಗಣಿಸಲಾಗಿದೆ ಮತ್ತು 1983ರಲ್ಲಿ ಗುಂಡೂರಾವ್ ಸರ್ಕಾರದ ಪತನಕ್ಕೆ ಇದು ಒಂದು ಕಾರಣ ಎಂದು ಹೇಳಲಾಗುತ್ತದೆ.

    ಚಳುವಳಿಯ ನಂತರ ರಾಜ್‌ಕುಮಾರ್ ಮತ್ತು ಕನ್ನಡ ರಾಷ್ಟ್ರೀಯತೆಯ ನಂಟು ಗಟ್ಟಿಯಾಯಿತು ಮತ್ತು ಪ್ರತಿ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಅಥವಾ ಯಾವುದೇ ಕನ್ನಡ ಸಮಾರಂಭದಲ್ಲಿ ರಾಜಕುಮಾರ್ ಅಭಿನಯದ ಆಕಸ್ಮಿಕ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡು ಯಾವಾಗಲೂ ಪ್ಲೇ ಆಗಲು ಆರಂಭವಾಯಿತು. ರಾಜಕೀಯವು ಅವರ ಆದ್ಯತೆ ಆಗದಿದ್ದರೂ ಅವರ ಪುತ್ರರು ತುಂಬಾ ಉದಾರರಾಗಿದ್ದರು ಮತ್ತು ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಸರ್ಕಾರಿ ಕಾರ್ಯಕ್ರಮಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಲು ಹೊರಟರು. ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ವಿಷಯದಲ್ಲಿ ಅವರು ತಮ್ಮ ಪಾತ್ರವನ್ನು ನಿರ್ವಹಿಸುವುದನ್ನು ಖಚಿತಪಡಿಸಿಕೊಂಡರು.

    ಭಗವಾನ್ ಪ್ರಕಾರ, ರಾಜ್‌ಕುಮಾರ್, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ದ ಜಾಹೀರಾತು ಮಾಡಲು ಒಂದು ಪೈಸೆಯನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಆದಾಗ್ಯೂ, ಸಂಸ್ಥೆಯು ಅವರಿಗೆ ಹಸುವನ್ನು ನೀಡುವ ಮೂಲಕ ಅವರನ್ನು ಗೌರವಿಸಿತು. ಪುನೀತ್ ಕೂಡ ಕೆಎಂಎಫ್​ ಜಾಹೀರಾತಿನಲ್ಲಿ ಒಂದು ಪೈಸೆಯನ್ನು ಪಡೆಯದೇ ತಂದೆಯ ಪರಂಪರೆಯನ್ನು ಮುಂದುವರೆಸಿದರು. ತಂದೆಯಂತೆಯೇ, ಪುನೀತ್ ಮತ್ತು ಅವರ ಸಹೋದರರು ರಾಜಕೀಯದಿಂದ ದೂರವಿರಲು ಇಚ್ಛಿಸಿದರು. ಆದಾಗ್ಯೂ, 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಸ್ವತಂತ್ರ ಅಭ್ಯರ್ಥಿ ಅಂಬರೀಷ್​ ಅವರ ಪತ್ನಿ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ, ನಾನು ಪ್ರಚಾರ ಮಾಡುವುದಿಲ್ಲ ಎಂದು ಪುನೀತ್​ ಸ್ಪಷ್ಟಪಡಿಸಿದರು.

    70ರ ದಶಕದಲ್ಲಿ ಜನತಾ ಪಕ್ಷದಲ್ಲಿ ಇದ್ದ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ರಾಜಕೀಯ ಎಂದಿಗೂ ರಾಜ್‌ಕುಮಾರ್ ಅವರ ಕೋಟೆಯಾಗಿರಲಿಲ್ಲ. ರಾಜಕೀಯದಲ್ಲಿ ನಿರ್ದಯ ಮತ್ತು ಸ್ವಾರ್ಥಿಗಳಾಗಿರಬೇಕು. ರಾಜ್‌ಕುಮಾರ್ ಅವರ ಸ್ವಭಾವವು ವಿಭಿನ್ನವಾಗಿತ್ತು, ಅವರು ವಿನಮ್ರರು, ಅಂತರ್ಮುಖಿ ಮತ್ತು ಅವರು ಎಂದಿಗೂ ಜಾತಿ ಆಧಾರಿತ ಕಾರ್ಯಕ್ರಮಗಳಿಗೆ ಹಾಜರಾಗಲಿಲ್ಲ ಎಂದು ಅವರು ಹೇಳಿದರು.

    ಕನ್ನಡಿಗರು ನನಗೆ ಸಿಂಹಾಸನವನ್ನು ನೀಡಿ ಅವರ ಹೃದಯದಲ್ಲಿ ನನ್ನನ್ನು ರಾಜನನ್ನಾಗಿ ಮಾಡಿದಾಗ, ನಾನು ಬೇರೆ ಯಾವುದೇ ಸ್ಥಾನವನ್ನು ತೆಗೆದುಕೊಳ್ಳಬೇಕೇ? ಎಂದು ಒಮ್ಮೆ ರಾಜ್​ಕುಮಾರ್​ ಅವರು ಕನ್ನಡದ ಮುಂಗಾರು ಮಳೆಯ ಕವಿ ಮತ್ತು ಸಾಹಿತಿ ಜಯಂತ್ ಕಾಯ್ಕಿಣಿ ಅವರಿಗೆ ಹೇಳಿದ್ದರಂತೆ. ಇದು ರಾಜ್​ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. (ಏಜೆನ್ಸೀಸ್​)

    ಒತ್ತಡ ಸಹಿಸದೆ ಪುಸ್ತಕ ಕೊಡುವ ನೆಪದಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದ ಪುನೀತ್​! ಮೋದಿ ಮಾತಿಗೆ ಮುಗುಳ್ನಕ್ಕ ಅಪ್ಪು…

    ಪೊಲೀಸ್​ ಠಾಣೆಯಿಂದ ಮನೆಗೆ ಬಂದು ಯುವತಿ ಆತ್ಮಹತ್ಯೆ: ಠಾಣೆಯಲ್ಲೇ ನಡೆಯಿತು ಮಹಾ ಪ್ರಮಾದ!

    ಅಪ್ಪು ಅಗಲಿಕೆ ನೋವು ಇನ್ನೂ ಮಾಸಿಲ್ಲ… ಈಗಲೇ ಇದೆಲ್ಲಾ ಬೇಕಿತ್ತಾ? ಸುಮಲತಾ ಅಂಬರೀಷ್​ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts