More

    ತಮಿಳುನಾಡಿನಿಂದ ಉತ್ತರ ಭಾರತೀಯರಿಗೆ ಗೇಟ್​ ಪಾಸ್​! ಡಿಜಿಪಿ ಶೈಲೆಂದ್ರ ಬಾಬು ಕೊಟ್ಟ ಸ್ಪಷ್ಟನೆ ಹೀಗಿದೆ…

    ಚೆನ್ನೈ: ರಾಜ್ಯದಲ್ಲಿರುವ ಉತ್ತರ ಭಾರತೀಯರನ್ನು ಗುರುತಿಸುವಂತೆ ತಮಿಳುನಾಡು ಪೊಲೀಸ್​ ಇಲಾಖೆ ಆದೇಶಿಸಿದೆ ಎನ್ನಲಾದ ವಾಟ್ಸ್​ಆ್ಯಪ್​ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಉತ್ತರ ಭಾರತ ಮೂಲದ ಬೀದಿ ಬದಿ ವ್ಯಾಪಾರಿಗಳು ಮತ್ತು ಕಾರ್ಮಿಕರ ಆಧಾರ್​ ಕಾರ್ಡ್​ ಸೇರಿದಂತೆ ಅನೇಕ ಮಾಹಿತಿಗಳನ್ನು ಸಂಗ್ರಹಿಸಿ ಎಂದು ಡಿಜಿಪಿ ಶೈಲೇಂದ್ರ ಬಾಬು ಅವರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ ಎಂದು ವೈರಲ್​ ಆಗಿರುವ ವಾಟ್ಸ್​ಆ್ಯಪ್ ಸಂದೇಶದಲ್ಲಿ ಬರೆಯಲಾಗಿದೆ.

    ಆದರೆ, ಈ ವಿಚಾರವನ್ನು ತಮಿಳುನಾಡು ಪೊಲೀಸ್​ ಇಲಾಖೆ ಅಲ್ಲಗೆಳೆದಿದೆ. ಈ ಬಗ್ಗೆ ಶೈಲೇಂದ್ರ ಬಾಬು ಮಾಧ್ಯಮದ ಜತೆ ಮಾತನಾಡಿದ್ದು, ಇತ್ತೀಚೆಗೆ ರಾಮೇಶ್ವರಂನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಿಸಿ, ಉದ್ಯೋಗದಾತರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಉದ್ಯೋಗದಾತರು ತಾವು ಕೆಲಸ ನೀಡುವ ಕಾರ್ಮಿಕರ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

    ಇತ್ತೀಚಿಗೆ 45 ವರ್ಷದ ಮೀನುಗಾರ ಮಹಿಳೆಯ ಮೇಲೆ ಒಡಿಶಾ ಮೂಲದ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಆರೋಪಿಗಳು ಆ ವಲಯದಲ್ಲಿ ಸಿಗಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ವಲಸೆ ಕಾರ್ಮಿಕರು ಕೃತ್ಯದಲ್ಲಿ ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ಕಾರ್ಮಿಕರ ಮಾಹಿತಿ ಸಂಗ್ರಹಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಶೈಲೇಂದ್ರ ಬಾಬು ತಿಳಿಸಿದರು.

    ವೈರಲ್ ಆಗಿರುವ ವಾಟ್ಸ್​ಆ್ಯಪ್​ ಸಂದೇಶ ನೋಡಿ ನೀವು ಅಂದುಕೊಂಡಿರುವಂತೆ​ ಅಂಥದ್ದೇನೂ ಇಲ್ಲ. ಕಾರ್ಮಿಕರ ಇತಿಹಾಸ ಅಥವಾ ಹಿನ್ನೆಲೆಯನ್ನು ತಿಳಿದುಕೊಳ್ಳಲು ಉದ್ಯೋಗದಾತರಿಗೆ ವ್ಯಕ್ತಿತ್ವ ಪರಿಶೀಲನಾ ಸೌಲಭ್ಯ ಅಥವಾ ಕಾವಲನ್ ಆ್ಯಪ್ ಬಳಸಲು ನಾವು ವಿನಂತಿಸಿದ್ದೇವೆ. ಉದಾಹರಣೆಗೆ ಉದ್ಯೋಗ ಮಾಡಲು ಬಯಸಿರುವ ವ್ಯಕ್ತಿಗೆ ಉದ್ಯೋಗ ನೀಡುವ ಮುನ್ನ ಆತನ ಕೇಸ್ ಹಿಸ್ಟರಿಯನ್ನು ತಿಳಿದುಕೊಳ್ಳಲು ಹೇಳಲಾಗಿದೆ ಎಂದು ಡಿಜಿಪಿ ಬಾಬು ಮಾಹಿತಿ ನೀಡಿದರು.

    ಅತ್ಯಾಚಾರ ಮತ್ತು ಕೊಲೆ ಘಟನೆಯ ನಂತರ ರಾಮನಾಥಪುರಂ ಜಿಲ್ಲೆಯ 18 ಪಂಚಾಯಿತಿಗಳಿಗೆ ಪೊಲೀಸ್​ ಇಲಾಖೆ ಸುತ್ತೋಲೆ ಹೊರಡಿಸಿರುವುದು ವರದಿಯಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರು, ಇಂಜಿನಿಯರಿಂಗ್, ಹೋಟೆಲ್‌ಗಳು, ಹಾಸ್ಟೆಲ್‌ಗಳು ಹಾಗೂ ಸಿಗಡಿ ಉದ್ಯಮದಲ್ಲಿ ಕೆಲಸ ಮಾಡುವ ಇತರ ರಾಜ್ಯಗಳ ಜನರು ಮತ್ತು ಪಾನಿ ಪುರಿ ಮತ್ತು ಕುಲ್ಫಿ ಮಾರಾಟಗಾರರಾಗಿ ಕೆಲಸ ಮಾಡುವವರು ಈ ಕೆಳಗಿನ ವಿವರಗಳನ್ನು ಜೂನ್ 15 ರ ಒಳಗೆ ಪಂಚಾಯತ್ ಕಚೇರಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಆದೇಶದ ಪ್ರಕಾರ ಹೆಸರು, ವಯಸ್ಸು, ಫೋಟೋ, ಆಧಾರ್​ ಕಾರ್ಡ್​, ಫೋನ್​ ನಂಬರ್​, ಪ್ರಸ್ತುತ ಉದ್ಯೋಗದಾತ ಮತ್ತು ಪ್ರಸ್ತುತ ವಿಳಾಸದ ಮಾಹಿತಿಯನ್ನು ನೀಡಬೇಕು. ಇಂತಹ ಸುತ್ತೋಲೆಗಳನ್ನು ರಾಮೇಶ್ವರಂ, ತಂಗಚಿಮಾಡಂ, ಪಾಂಬನ್, ಪನೈಕುಡಂ, ಪುದುಮಡಂ ಮತ್ತು ಕಿಜಕರೈ ಪಂಚಾಯತ್‌ಗಳು ಹೊರಡಿಸಿವೆ. (ಏಜೆನ್ಸೀಸ್​)

    8 ಬಾಟಲ್​ ಮದ್ಯ ಸೇವಿಸಿ ಆತ್ಮಹತ್ಯೆಗೆ ಯತ್ನ: ಕಣ್ಣೀರಾಕುತ್ತಾ ನಟಿ ಮೈಥಿಲಿ ಬಿಚ್ಚಿಟ್ಟ ನೋವಿದು…

    ರಾಜ್ಯಸಭಾ ಚುನಾವಣೆ: ಸಿದ್ದು ರಣತಂತ್ರದಿಂದ ಮತ್ತೆ ಇತಿಹಾಸ ಮರುಕಳಿಸುವ ಸಾಧ್ಯತೆ!

    ನಾನು ವಾಟ್ಸ್​ಆ್ಯಪ್​ನಲ್ಲೇ ಹೇಳಿದ್ದೆ…ಅನಂತರಾಜು ಸಾವಿನ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಆಡಿಯೋ ಲೀಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts