More

    ಇಲ್ಲಿ ಎಲ್ಲರೂ ಒಂದೇ… ಯೂಟ್ಯೂಬರ್ಸ್​ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಸಮಂತಾಗೆ ಬಿಗ್​ ಶಾಕ್​!

    ಹೈದರಾಬಾದ್​: ಅಕ್ಟೋಬರ್​ 2ರಂದು ಸಮಂತಾ-ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ಬೆನ್ನಲ್ಲೇ ಅನೇಕ ವದಂತಿಗಳು ಹರಿದಾಡುತ್ತಿವೆ. ಎರಡು ಕುಟುಂಬಗಳ ಇತಿಹಾಸ ಕೆದಕ್ಕುತ್ತಿರುವುದಲ್ಲದೆ, ಡಿವೋರ್ಸ್​ ಹಿಂದಿನ ಕಾರಣಗಳನ್ನು ತಿಳಿಯಲು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಯತ್ನಿಸಲಾಗುತ್ತಿದೆ. ಅದರಲ್ಲೂ ಯೂಟ್ಯೂಬ್​​ನಲ್ಲಿ ಕೆಲ ಯೂಟ್ಯೂಬರ್ಸ್​ ತೀರಾ ವೈಯಕ್ತಿಕ ವಿಚಾರಗಳಿಗೆ ಊಹಾಪೋಹಗಳನ್ನು ಸೇರಿಸಿ ಹರಿಬಿಡುತ್ತಿರುವುದು ಸಮಂತಾ ಮನಸ್ಸನ್ನು ಕದಡಿದೆ. ಹೀಗಾಗಿಯೇ ಸ್ಯಾಮ್​ ನ್ಯಾಯಾಲಯದ ಮೆಟ್ಟಿಲೇರಿದ್ದು, ಕುಕ್ಕಟಪಲ್ಲಿ ಕೋರ್ಟ್​ನಲ್ಲಿ ಮೂರು ಯೂಟ್ಯೂಬರ್ಸ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಸಮಂತಾರಿಗೆ ಅಕ್ರಮ ಸಂಬಂಧ ಇದೆ. ಅವರು ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಸಮಂತಾರ ಈ ನಡೆ ನಾಗಚೈತನ್ಯ ಕುಟುಂಬದ ಇರುಸು-ಮುರುಸಿಗೆ ಕಾರಣವಾಗಿದ್ದು, ಡಿವೋರ್ಸ್​ನೊಂದಿಗೆ ಅಂತ್ಯವಾಗಿದೆ ಎಂದು ಸಿ.ಎಲ್​. ವೆಂಕಟರಾವ್ ಎಂಬುವರು ಯೂಟ್ಯೂಬ್​ನಲ್ಲಿ ವದಂತಿ ಹರಿಬಿಟ್ಟಿದ್ದಾರೆ ಎಂಬುದು ಸಮಂತಾರ ವಾದವಾಗಿದ್ದು, ವೆಂಕಟರಾವ್​ ಸೇರಿದಂತೆ ಸುಮನ್​ ಟಿವಿ, ತೆಲುಗು ಪಾಪ್ಯುಲರ್​ ಟಿವಿ ಹೆಸರಿನ ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಸಮಂತಾ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದಾರೆ.

    ತಮ್ಮ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಬೇಗ ವಿಚಾರಣೆ ನಡೆಸಬೇಕೆಂದು ನಿನ್ನೆ ಸಮಂತಾ ಪರ ವಕೀಲರು ನ್ಯಾಯಾಲಯವನ್ನು ಕೋರಿಕೊಂಡರು. ಇದರಿಂದ ಕೋಪಗೊಂಡ ನ್ಯಾಯಾಧೀಶರು, ಇಲ್ಲಿ ಸಾಮಾನ್ಯ ಜನ ಮತ್ತು ಸೆಲೆಬ್ರಿಟಿಗಳು ಎಲ್ಲರು ಒಂದೆ. ನ್ಯಾಯಾಲಯದ ಅಂತಿಮ ಸಮಯದಲ್ಲಿ ನಿಮ್ಮ ಅರ್ಜಿ ತೆಗೆದುಕೊಳ್ಳಲಾಗುವುದು ಎಂದರು.

    ವದಂತಿಗಳನ್ನು ಹರಿಬಿಟ್ಟು ನಮ್ಮ ಕಕ್ಷಿದಾರರ ಗೌರವಕ್ಕೆ ಧಕ್ಕೆ ತಂದಿರುವ ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಸಮಂತಾ ಪರ ವಕೀಲ ಬಾಲಾಜಿ ನ್ಯಾಯಾಲಯವನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ, ಏನಾದರೂ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ನೀವು ಮಾನನಷ್ಟ ಮೊಕದ್ದಮೆ ಹೂಡುವ ಬದಲು ಅವರಿಂದ ಕ್ಷಮೆ ಕೇಳುವಂತೆ ಕೋರಬಹುದಲ್ಲವೇ ಎಂದು ಪ್ರಶ್ನಿಸಿದ ನ್ಯಾಯಾಲಯ ಸೆಲೆಬ್ರಿಟಿಗಳ ವೈಯಕ್ತಿಕ ವಿವರಗಳನ್ನು ಸಾರ್ವಜನಿಕ ವಲಯದಲ್ಲಿ ಹಾಕುವುದು ಅವರ ಪ್ರತಿಷ್ಠೆಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

    ಸಮಂತಾ ಅವರು ಇನ್ನು ಅಧಿಕೃತವಾಗಿ ನ್ಯಾಯಾಲಯದಿಂದ ಡಿವೋರ್ಸ್​ ಪಡೆದುಕೊಂಡಿಲ್ಲ. ಆದಾಗ್ಯೂ ಆಕೆಯ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರ ಗೌರವವನ್ನು ಹಾಳು ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಆಕೆಯನ್ನು ಗುರಿಯಾಗಿಸಿದ್ದಾರೆ. ಅನೇಕ ಕಟ್ಟು ಕತೆಗಳನ್ನು ಕಟ್ಟಿದ್ದಾರೆ ಎಂದು ವಕೀಲ ಬಾಲಾಜಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಭವಿಷ್ಯದಲ್ಲಿ ಮತ್ತೆ ಸಮಂತಾರ ವೈಯಕ್ತಿಕ ವಿಚಾರಗಳನ್ನು ಕೆದಕುವ ನ್ಯೂಸ್​ಗಳನ್ನು ಮಾಡದಂತೆ ನ್ಯಾಯಾಲಯ ಆದೇಶಿಸಿದೆ. ಈ ಕೇಸ್​ ವಿಚಾರವಾಗಿ ಒಂದಿಷ್ಟು ಮಹತ್ವದ ಅಂಶಗಳನ್ನು ಹೇಳಿರುವ ಕೋರ್ಟ್​ ತನ್ನ ತೀರ್ಪನ್ನು ಇಂದಿಗೆ (ಅ.22) ಕಾಯ್ದಿರಿಸಿದೆ.

    ಅ.2ರಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್​ ಮಾಡುವ ಮೂಲಕ ಡಿವೋರ್ಸ್​ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದರು. “ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್​ ಆನ್​ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ವಿಘ್ನೇಶ್ ಶಿವನ್ ರೌಡಿ ಪಿಕ್ಚರ್ಸ್ ಸಹಯೋಗದೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋದಿಂದ ಬಂಡವಾಳ ಹೂಡುತ್ತಿರುವ ತಮಿಳು ಸಿನಿಮಾ ಕಾತು ವಾಕುಲಾ ರಂಡು ಕಾದಲ್​ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆ ಸಮಂತಾ ನಟಿಸುತ್ತಿದ್ದಾರೆ. ಇದರೊಂದಿಗೆ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ಬಣ್ಣ ಹಚ್ಚಿದ್ದು, ಶಾಕುಂತಲಂ ಚಿತ್ರದ ಚಿತ್ರೀಕರಣವನ್ನು ಸಮಂತಾ ಸಂಪೂರ್ಣ ಮುಗಿಸಿದ್ದಾರೆ. (ಏಜೆನ್ಸೀಸ್​​)

    ಈ 3 ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಕಾನೂನು ಸಮರ ಸಾರಿದ ಸಮಂತಾ! ದೂರಿನಲ್ಲಿ ಸ್ಯಾಮ್​ ಹೇಳಿದ್ದಿಷ್ಟು…

    ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಪ್ರಕರಣ: ಮರಣೋತ್ತರ ವರದಿ ಬಿಚ್ಚಿಟ್ಟ ರಹಸ್ಯವಿದು..!

    ನಿರ್ದೇಶಕನ ಜತೆ ಡೇಟಿಂಗ್‌ನಲ್ಲಿರೋ ನಟಿ ನಯನತಾರಾ ಮದ್ವೆ ಮರದ ಜತೆ ಫಿಕ್ಸ್‌!

    ನಾಡಿನಿಂದ ಕಾಡಿಗೆ…; ಪ್ಯಾನ್ ಇಂಡಿಯನ್ ಚಿತ್ರದಲ್ಲಿ ಮೇಘಾ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts