More

    ನಾನೇನು ರೇಪ್​ ಮಾಡಿದ್ನಾ? ಲಿಂಬಾವಳಿ ವಿವಾದ, ಬಿಜೆಪಿ ವಿರುದ್ಧ ಸರಣಿ ಟ್ವೀಟ್​ ಮೂಲಕ ಹರಿಹಾಯ್ದ ಕಾಂಗ್ರೆಸ್​

    ಬೆಂಗಳೂರು: ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಮಹಿಳೆಯೊಬ್ಬರ ಮೇಲೆ ದರ್ಪ ತೋರಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ದಿಗ್ವಿಜಯ ನ್ಯೂಸ್​ ಪ್ರತಿಕ್ರಿಯೆ ಕೇಳಲು ಹೋದಾಗ ನಾನೇನು ಅವಳನ್ನು ರೇಪ್​ ಮಾಡಿದ್ದೀನಾ? ಎಂದು ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕಾಂಗ್ರೆಸ್​ ವಾಗ್ದಾಳಿ ಮಾಡಿದೆ. ಅಲ್ಲದೆ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಡಳಿತಾರೂಢ ಬಿಜೆಪಿಯನ್ನು ಆಗ್ರಹಿಸಿದೆ.

    ಸರಣಿ ಟ್ವೀಟ್​ ಮಾಡಿರುವ ಕಾಂಗ್ರೆಸ್​, ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿಯಾಗಿದೆ. ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ. ಸಿಎಂ ಬೊಮ್ಮಾಯಿ ಅವರೇ ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ? ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

    ಮಾಧುಸ್ವಾಮಿ ಮಹಿಳೆಗೆ ನಿಂದಿಸಿದ್ದರು, ಸಿದ್ದು ಸವದಿ ಮಹಿಳೆಗೆ ಹಲ್ಲೆ ಮಾಡಿದ್ದರು, ರಮೇಶ್​ ಜಾರಕಿಹೊಳಿ ಉದ್ಯೋಗ ಕೇಳಿದಾಕೆಯನ್ನು ಮಂಚ ಹತ್ತಿಸಿದ್ದರು ಮತ್ತು ಆರಗ ಜ್ಞಾನೇಂದ್ರ ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪು ಎಂದಿದ್ದರು. ಆದರೆ, ಇದೀಗ ಅರವಿಂದ ಲಿಂಬಾವಳಿ ಮಹಿಳೆಯ ಮೇಲೆ ದರ್ಪ ಮೆರೆದಿದ್ದಾರೆ. ಇದೇನಾ ಬಿಜೆಪಿಯ ಸ್ತ್ರೀಗೌರವದ ಸಂಸ್ಕೃತಿ? ಎಂದು ಕೈ ಟೀಕಿಸಿದೆ.

    ಬಿಜೆಪಿಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ, ಸಿಡಿ ಶೂರರೇ, ಕೋರ್ಟಿನಿಂದ ತಡೆಯಾಜ್ಞೆ ತಂದ ಧೀರರೇ, ನಿಮ್ಮ ಪಕ್ಷದ ಅರವಿಂದ ಲಿಂಬಾವಳಿಯ ಮಹಿಳೆ ಮೇಲಿನ ದೌರ್ಜನ್ಯಕ್ಕೆ ರೊಚ್ಚಿಗೇಳುವುದು ಯಾವಾಗ? ಸ್ತ್ರೀ ಕುಲದ ಗೌರವವನ್ನು ಎತ್ತಿ ಹಿಡಿಯುವುದು ಯಾವಾಗ? ನಳೀನ್​ ಕಟೀಲ್​ ಅವರೇ ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ? ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

    ಮಹಿಳೆಯ ಮೇಲೆ ದಬ್ಬಾಳಿಕೆ ಎಸಗಿದ್ದಲ್ಲದೆ “ನಾನೇನು ರೇಪ್ ಮಾಡಿದ್ನಾ” ಎಂದು ಉದ್ಧಟತನದಲ್ಲಿ ಕೇಳಿದ ಅರವಿಂದ್ ಲಿಂಬಾವಳಿ ಅವರ ಮಾತುಗಳು ಇಡೀ ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ. ಲಿಂಬಾವಳಿಯ ಈ ಮಾತುಗಳು ಇಡೀ ಸ್ತ್ರೀ ಕುಲಕ್ಕೆ ಮಾಡಿದ ಘೋರ ಅವಮಾನ. ಇಂತಹ ಕೊಳಕು ಮನಸ್ಥಿತಿಯ ಶಾಸಕನ ವಿರುದ್ಧ ಕ್ರಮ ಕೈಗೊಳ್ಳದೆ ಸಿಎಂ ಮೌನವಹಿಸಿರುವುದು ಏಕೆ? ತನ್ನದೇ ಮತಕ್ಷೇತ್ರದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದರೂ ಶಾಸಕ ಅರವಿಂದ್ ಲಿಂಬಾವಳಿ ವಿರುದ್ಧ ಕ್ರಮ ಜರುಗಿಸದೆ ನಾಲಿಗೆ ಉದ್ಧವಾಗಲು ಬಿಟ್ಟ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಡಿಯೂರಿ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ಬಿಜೆಪಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವ ಇದ್ದರೆ ಲಿಂಬಾವಳಿಯನ್ನು ವಜಾಗೊಳಿಸಿ ನಿರೂಪಿಸಲಿ ಎಂದು ಸವಾಲು ಹಾಕುವ ಮೂಲಕ #ಮಹಿಳಾವಿರೋಧಿಬಿಜೆಪಿ ಎಂಬ ಹ್ಯಾಶ್​ಟ್ಯಾಗ್​ ಮೂಲಕ ಕಾಂಗ್ರೆಸ್​ ಕಿಡಿಕಾರಿದೆ.

    ಬಿಜೆಪಿಯು ರೇಪ್ ಆರೋಪಿ ರಮೇಶ್ ಜಾರಕಿಹೊಳಿಯನ್ನೇ ಸಮರ್ಥಿಸಿಕೊಂಡಿದೆ. ಮೈಸೂರಿನ ರೇಪ್ ಸಂತ್ರಸ್ತೆಯನ್ನು ದೂಷಿಸಿದೆ. ಗುಜರಾತಿನಲ್ಲಿ ರೇಪಿಸ್ಟರನ್ನು ಸನ್ಮಾನಿಸಿದೆ ಮತ್ತು ಕಾಶ್ಮೀರದಲ್ಲಿ ರೇಪ್ ಆರೋಪಿಗಳ ಮೆರವಣಿಗೆಯನ್ನೇ ಮಾಡಿದೆ. ಇಂಥಾ #ಮಹಿಳಾವಿರೋಧಿಬಿಜೆಪಿಗೆ ಲಿಂಬಾವಳಿ ಮಾತು ಪ್ರಿಯವಾಗಬಹುದು, ಆದರೆ ರಾಜ್ಯದ ಮಹಿಳೆಯರಿಗೆ ಅದು ಅಸಹ್ಯವಾಗಿದೆ ಎಂದು ಕಾಂಗ್ರೆಸ್​ ಟೀಕಿಸಿದೆ.

    ನಾನೇನು ರೇಪ್​ ಮಾಡಿದ್ದೀನಾ?
    ಬೆಳಗ್ಗೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ಪಡೆಯಲು ಹೋದಾಗ ದಿಗ್ವಿಜಯ ನ್ಯೂಸ್​ ಪ್ರತಿನಿಧಿಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ ಲಿಂಬಾವಳಿ, ನಿಮ್ಮನ್ನು ಮಹಿಳೆಯರ ಪರ ಮಾತನಾಡುವುದಕ್ಕೆ ಕರೆಸಿರೋದಾ? ಜನರ ಪರ ಮಾತನಾಡಿ, ಅವರು ಒತ್ತುವರಿ ಮಾಡಿದ್ದಾರೆ. ಅದನ್ನು ಬಿಟ್ಟು ಮಹಿಳೆಗೆ ಹಾಗೆ ಮಾಡಿದ್ರಿ ಅಂತೀರಿ, ನಾನೇನು ರೇಪ್​ ಮಾಡಿದ್ದೀನಾ ಅವಳಿಗೆ? ಎನ್ನುವ ಮೂಲಕ ಶಾಸಕರು ಮತ್ತೆ ನಾಲಿಗೆ ಹರಿಬಿಟ್ಟರು.

    ಬೆಳಗ್ಗೆ ನಡೆದಿದ್ದು ಏನು?
    ಇತ್ತಿಚೀಗೆ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಗೆ ಹಲೆವಡೆ ಸಮಸ್ಯೆ ಉಂಟಾಗಿದೆ. ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಗುರುವಾರ ನಲ್ಲೂರಹಳ್ಳಿಯ ವೈಟ್​ಫೀಲ್ಡ್​​ ಕೋಡಿ ಸರ್ಕಲ್​ ಬಳಿ ರಾಜಕಾಲುವೆ ಒತ್ತುವರಿ ಆಗಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಕೈಯಲ್ಲಿ ಕೆಲ ಪತ್ರಗಳನ್ನು ಹಿಡಿದುಕೊಂಡು ಆಗಮಿಸಿ ಅಳಲು ತೋಡಿಕೊಳ್ಳಲು ಯತ್ನಿಸುತ್ತಿದ್ದರು. ‘ಸರ್..​ ಸರ್..’ ಎನ್ನುತ್ತಾ ಸಮಸ್ಯೆ ಹೇಳಿಕೊಳ್ಳಲು ಮುಂದಾದ ಮಹಿಳೆ ಅವಾಜ್​ ಹಾಕಿದ ಶಾಸಕರು, ಆಕೆಯ ಕೈಯಿಂದ ದಾಖಲೆ ಪತ್ರ ಕಸಿದುಕೊಳ್ಳಲು ಯತ್ನಿಸಿದ್ದಲ್ಲದೆ, ‘ಪೊಲೀಸ್​ ಸ್ಟೇಷನ್​ಗೆ ಕರೆದುಕೊಂಡು ಹೋಗಿ ಕೂರಿಸಿ’ ಎಂದಿದ್ದಾರೆ.

    ‘ಒತ್ತುವರಿ ಮಾಡ್ಕೊಂಡು ನ್ಯಾಯ ಕೇಳೋಕೆ ಬರ್ತೀಯಾ? ನಿಂಗೆ ಮಾನ ಮರ್ಯಾದೆ ಇದ್ಯಾ? ನಾಚಿಕೆ ಆಗಲ್ವಾ? ಒತ್ತುವರಿ ಮಾಡಿಕೊಳ್ವಾಗ ಚಂದೋ… ನನಗೂ ಬೇರೆ ಭಾಷೆ ಬರುತ್ತೆ…’ ಎಂದು ಜೋರು ಧ್ವನಿಯಲ್ಲೇ ಶಾಸಕರು ದರ್ಪದಿಂದ ವರ್ತಿಸಿದ್ದಾರೆ. ಅಷ್ಟೇ ಅಲ್ಲ ಮಹಿಳೆಯ ಕೈಯಲ್ಲಿ ಕಾಗದ ಪತ್ರಗಳನ್ನು ಕಿತ್ತುಕೊಳ್ಳೋಕು ಯತ್ನಿಸಿದ್ದಾರೆ. ‘ಸರ್​, ಮರ್ಯಾದೆಯಿಂದ ಮಾತಾಡಿ. ಹೆಣ್ಣುಮಕ್ಕಳು ಅನ್ನುವ ಗೌರವ ಇರಲಿ. ನೀವು ನನಗೂ ಎಂಎಲ್​ಎ. ಎಲ್ಲರಿಗೂ ಶಾಸಕರು. ನಾನು ಒತ್ತುವರಿ ಮಾಡಿಕೊಂಡಿಲ್ಲ. ದಾಖಲೆ ಇದೆ ನೋಡಿ’ ಎಂದು ಮಹಿಳೆ ಹೇಳಿದರೂ ‘ಇವಳಿಗೆ ಮರ್ಯಾದೆ ಬೇರೆ ಕೇಡು ಒಳಗೆ ಹಾಕಿ’ ಎಂದು ಪೊಲೀಸರಿಗೆ ಶಾಸಕರು ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಆ ಪತ್ರವನ್ನೂ ಮಹಿಳೆ ಕೈಯಿಂದ ಕಿತ್ತುಕೊಂಡಿದ್ದಾರೆ.

    ಈ ವಿಡಿಯೋ ವೈರಲ್​ ಆಗಿದ್ದು, ಸಾರ್ವಜನಿಕರು ಶಾಸಕರ ನಡೆಯನ್ನ ಖಂಡಿಸಿದ್ದಾರೆ. ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ಬಳಿ ಅರವಿಂದ್ ಲಿಂಬಾವಳಿ ತೋರಿದ ದರ್ಪವನ್ನು ಟೀಕಿಸಿದ್ದಾರೆ. ಇವ್ರೇನಾ ನಮ್ಮ ಜನಪತ್ರಿನಿಧಿಗಳು? ಅದ್ಹೇನೆ ಇರಲಿ ಮೊದಲು ಸಮಸ್ಯೆ ಆಲಿಸಿ ನಂತರ ತಪ್ಪಿದ್ದರೆ ಕಾನೂಕು ಕ್ರಮ ಕೈಗೊಳ್ಳಬಹುದು. ಆದರೆ ಅಧಿಕಾರ ಇದೆ ಎಂದು ಮನವಿ ಕೊಡಲು ಬಂದವರನ್ನೂ ಪೊಲೀಸ್​ ಸ್ಟೇಷನ್​ನಲ್ಲಿ ಕೂರಿಸ್ತಾರಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ನಾನೇನು ಅವಳಿಗೆ ರೇಪ್​ ಮಾಡಿದೀನಾ? ಮತ್ತೆ ನಾಲಿಗೆ ಹರಿಬಿಟ್ಟ ಶಾಸಕ ಅರವಿಂದ ಲಿಂಬಾವಳಿ

    ಮಹಿಳೆಯನ್ನು ಡ್ರೈವಿಂಗ್ ಟೆಸ್ಟ್​ಗೆ ಕರೆದೊಯ್ದ RTO ಅಧಿಕಾರಿಯಿಂದ ಮಾರ್ಗ ಮಧ್ಯೆ ನಡೆಯಿತು ನೀಚ ಕೃತ್ಯ

    ಹಳ್ಳಿಯಲ್ಲಿ ಫಾರ್ಮ್​ಹೌಸ್​ ಖರೀದಿಸಿದ ವಿರುಷ್ಕಾ ದಂಪತಿ: 8 ಎಕರೆ ಫಾರ್ಮ್​ಹೌಸ್​ನ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts